ನಿಮ್ಮ ವಯಸ್ಸೆಷ್ಟು? ನಿಮ್ಮ ವಯಸ್ಸೆಷ್ಟು?
ಕೇಳುವವರಿಗೆ ಬಹಳ ಇಂಟರೆಷ್ಟು!
ಈ ಪ್ರಶ್ನೆಯೇ ಸರಿಯಿಲ್ಲ ಇಂತು,
ಇನ್ನು ಅವರಿಗೆ ಉತ್ತರಿಸುವುದೆಂತು?
ಚಿಣ್ಣರ ಒಡನಾಡುತಿರೆ ಒಂದೇ ಒಂದು ವರುಷದವ!
ಕಾರ್ಟೂನು ನೋಡುತಿರೆ ಏಳೇ ಏಳರವ!
ಖುಶಿಯಿಂದ ಕುಣಿಯುತಿರೆ ಹದಿನಾರ ಹರೆಯದವ!
ಸ್ನೇಹಿತರ ಸಂಗವಿರೆ ಇಪ್ಪತ್ತು-ಮೂವತ್ತರ ಹವ!
ಹೂಬನದ ಹಕ್ಕಿ ಚಿಟ್ಟೆಗಳೊಡನಾಡುವಾಗ,
ವಯಸ್ಸಿರಬಹುದು ಅವುಗಳಷ್ಟೇ ಆಗ!
ತಾರಾಚಂದ್ರರ, ನದಿ ಬೆಟ್ಟಗಳ ನಡುವಿರಲು,
ನಾನು ಕಾಲಾತೀತ ಎನಿಸುವುದು, ಅದು ಅಮಲು!
ವಯಸ್ಸಿಗೆ, ಮನಸ್ಸಿಗೆ ಉಂಟೇನು ಸಂಬಂಧ?
ಪ್ರತಿ ಕ್ಷಣ ಬದಲಾಗುವ ಮನಸಿಗಾವ ಬಂಧ?
ದಿನಗಳೆಷ್ಟು ಉರುಳಿವೆ ಎನ್ನುವ ಪ್ರಶ್ನೆ ಅಸಂಗತ,
ಹೇಗೆ ಬದುಕಿದೆ ಎನ್ನುವುದು ಅನುದಿನವೂ ಪ್ರಸ್ತುತ!