Friday, August 31, 2012

ಅಂದು - ಇಂದು

ಆಟ, ಊಟ, ಓಟ, ಮರ,
ಅಂದಿನ ಒಂದನೆಯ ತರಗತಿಯ ಪಾಠ.
ಆಟ, ಊಟ, ನೋಟ, ಸುತ್ತಾಟ ಎಲ್ಲ,
ಮಾಲುಗಳಲಿ ಇಂದಿನ ಮಕ್ಕಳ ಪರಿಪಾಠ!

ಬಾಳೆಯ ತೋಟದ ಪಕ್ಕದ ಕಾಡೊಳು,
ಅಂದಿನ ಎರಡನೆಯ ತರಗತಿಯ ಪದ್ಯ.
ತೋಟವ ಕಾಣೆನು, ಕಾಡನು ಕಾಣೆನು,
ಬಾಳೆಹಣ್ಣುಗಳಾದರೂ ಕಾಣುತಿವೆ ಇಂದು, ಸಧ್ಯ!

ಬಣ್ಣದ ತಗಡಿನ ತುತ್ತೂರಿ,
ಅಂದು ಊದಿ ಕುಣಿಯುತ್ತಿದ್ದನು ಕಸ್ತೂರಿ,
ಚಿಣ್ಣರ ಪಾಲಿಗೆ ಬಣ್ಣದ ಲೋಕವು,
ಇಂದಿನ ಮೂರ್ಖರ ಪೆಟ್ಟಿಗೆಯ ದಿನಚರಿ!

ಗುಡಿಸುವ ಕೆಲಸ


ಕಾಸು ಬೇಕಾದಾಗ, ಕೈಚಾಚಿದೆ ಅಪ್ಪನ ಮುಂದೆ.
ನಿನ್ನ ಬುದ್ಧಿಯ ನಂಬು, ನಿನ್ನ ರಟ್ಟೆಯ ನಂಬು,
ಅಪ್ಪ ಎಂದರು, ಕಾಣುವುದು ಕಾಸು ನಿನ್ನ ಕಿಸೆಯಲ್ಲೇ!

ಕಣ್ಣೀರು ಜಿನುಗಿದಾಗ, ಹುಡುಕಿದೆ ಆಸೆರೆಯ ಹೆಗಲಿಗಾಗಿ.
ಎಂಥ ನಷ್ಟವೇ ಇರಲಿ, ಎಂಥ ಕಷ್ಟವೇ ಬರಲಿ, ಗೆಳೆಯನೆಂದ,
ನಿನ್ನ ಜೀವನವ ರೂಪಿಸುವ ಶಿಲ್ಪಿ ನೀನೆ ಎಂದ!

ದಾರಿ ಕಾಣದಾದಾಗ, ಹುಡುಕಿದೆ ಕಾಣದ ದೇವರಿಗಾಗಿ.
ಹುಡುಕಿ ಅಲೆಯುವೆಯೇಕೆ ಹುಚ್ಚ, ಗುರುಗಳೆಂದರು,
ದೇವನಿರುವನು ನಿನ್ನಲ್ಲ್ಲೇ, ಕಣ್ಣು ಮುಚ್ಚಿದರೆ ಕಾಣುವನು ಕುಳಿತಲ್ಲೇ!

ಹೇ ದೇವ, ನೀ ಎನಗೆ ಎಲ್ಲವನೂ ಕೊಟ್ಟೆ,
ಕಸವನೂ ಕೊಟ್ಟೆ, ಕಸಬರಿಕೆಯನೂ ಕೊಟ್ಟೆ,
ಗುಡಿಸುವ ಕೆಲಸ ಮಾತ್ರ ನನಗೆ ಬಿಟ್ಟೆ!

ಕನಸಿನ ಆಸೆ

ನಿನ್ನ ನೆನಪಿನ ಲೋಕದಲ್ಲಿ,
ಹೂವು, ಹಣ್ಣುಗಳ ತೋಟದಲ್ಲಿ,

ಕಣ್ಣು ಮುಚ್ಚಿ, ಮೈಯ ಮರೆತೆ,
ಕನಸಿಗಿಲ್ಲ ಏನೂ ಕೊರತೆ,

ಕಣ್ಣು ಬಿಟ್ಟರೆ ಸುತ್ತ ಕಾನು,
ದಟ್ಟ ಅಡವಿಯಲಿ ಒಂಟಿ ನಾನು,

ಹುಲಿ, ಕರಡಿಗಳ ಕಾಟವಿಲ್ಲಿ,
ಕಲ್ಲು ಮುಳ್ಳಿನ ದಾರಿಯಿಲ್ಲಿ,

ಕಣ್ಣು ಮುಚ್ಚಿದೆ ನೋವಿನಿಂದ,
ಮತ್ತೆ ಕನಸಿನ ಆಸೆಯಿಂದ!

ಕತ್ತಲ ಪಯಣ

ತಾತ ಕೊಟ್ಟ ಹಣತೆ ಕೈಯಲಿಹುದು,
ಎಣ್ಣೆ, ಬತ್ತಿಗಳಿಲ್ಲದೆ ಕತ್ತಲಿಹುದು.
ಅಪ್ಪ ಕೊಟ್ಟ ಗಂಟು ತಲೆಯ ಮೇಲೆ,
ಅದ ಮಕ್ಕಳಿಗೊಪ್ಪಿಸುವ ಭಾರ ಹೆಗಲ ಮೇಲೆ.

ಕತ್ತಲಲಿ ಎಡವೆಡವಿ ಬಿದ್ದರೂ ಕೂಡ,
ಹಣತೆಯ ಬೆಳಕಿದೆಯೆಂಬ ಭ್ರಮೆಯಿಹುದು ನೋಡ.
ಹೊಸ ಬೆಳಕ ಕಿರಣಗಳ ಸಹಿಸಲಾರದು ಕಣ್ಣು,
ರೂಢಿಯಾಗಿದೆ ನಮಗೆ ಕತ್ತಲಿನ ಹುಣ್ಣು.

ಕತ್ತಲಲ್ಲೇ ನಡೆದು, ಕತ್ತಲಲ್ಲೇ ಬೆಳೆದು,
ಎಡವಿದ ಕಾರಣಕೆ ಅವರಿವರ ಹಳಿದು,
ಕತ್ತಲಿನ ನೆರಳಲ್ಲೇ ಎಲ್ಲವನು ಹುಡುಕಿ,
ಸಿಗದಿದ್ದಕ್ಕೆ ಬೇಗ ಎಲ್ಲರಲೂ ಸಿಡುಕಿ,

ಸವೆದಿದ್ದೇವೆ ನಡೆನಡೆದು ಜೀವಮಾನದ ತನಕ,
ಹಣತೆ, ಗಂಟುಗಳ ಮಕ್ಕಳಿಗೊಪ್ಪಿಸುವ ತವಕ.
ಗಂಟೊಮ್ಮೆ ಬಿಚ್ಚಿದ್ದರೆ ತಿಳಿಯುತ್ತಿತ್ತೇನೋ,
ಎಣ್ಣೆ, ಬತ್ತಿಗಳ ಭರಣಿ ಕಾಣುತಿತ್ತೇನೋ!

ಬೇರೆ ದಾರಿ ಎಲ್ಲಿದೆ?

ಕಣ್ಣು ಅರಳಿದೆ, ಕನಸು ಕಂಡಿದೆ,
ಒಲವ ಸೂಸುತ ಮುಗುಳುನಕ್ಕಿದೆ,
ಏನು ತಾನೆ ಮಾಡಬಲ್ಲದು? ಅಳಿಸಲಾಗದು ನಿನ್ನ ಬಿಂಬ!

ಕಿವಿಯು ನಿಮಿರಿದೆ, ಕಾದು ಕುಳಿತಿದೆ
ಮತ್ತೆ ಮತ್ತಲಿ ಮುಳುಗಲು,
ಏನು ತಾನೆ ಮಾಡಬಲ್ಲದು? ನಿನ್ನ ಸ್ವರದ ಆಸೆ ತುಂಬ!

ಮೂಗು ಬೇಡಿದೆ ಮತ್ತೆ ಮತ್ತೆ,
ನಿನ್ನ ಉಸುರಿನ ಪರಿಮಳ,
ಏನು ತಾನೆ ಮಾಡಬಲ್ಲದು? ಹುಚ್ಚು ಹಿಡಿದ ತುಂಟ ಹುಂಬ!

ತುಟಿಯು ಬೇಡಿದೆ ಮಧುರ ಸ್ಪರ್ಷವ,
ಮತ್ತು ಹಿಡಿಸುವ ಓಷ್ಠಲಾಘವ,
ಏನು ತಾನೆ ಮಾಡಬಲ್ಲದು? ರುಚಿಯ ಕಂಡ ಕಳ್ಳ ಬೆಕ್ಕು!

ನನ್ನ ಹೃದಯವು ಕುಣಿದು ಹಾಡಿದೆ,
ಮಧುರ ತಾಳದಿ ಒಲವ ರಾಗದಿ,
ಏನು ತಾನೆ ಮಾಡಬಲ್ಲದು? ನೀನೆ ಇರಲು ಅದರ ತುಂಬ!

ರಾಜಮಾರ್ಗವೊ, ಅಡ್ಡದಾರಿಯೊ,
ಕಲ್ಲುಮುಳ್ಳಿನ ಕಠಿಣ ಪಥವೊ,
ನಿನ್ನ ಕಡೆಗೆ ನನ್ನ ನಡಿಗೆ, ಬೇರೆ ದಾರಿ ಎಲ್ಲಿದೆ?