Monday, August 22, 2022

ಮುಕ್ತಕಗಳು - ೬೦

ಆಸೆಗಳ ಕೊಳದಲ್ಲಿ ಈಸುವುದು ಏತಕ್ಕೆ

ಹಾಸಿ ಮಲಗಿರುವ ಮೃಗವನೆಬ್ಬಿಸಿದ ಹಾಗೆ |

ಬೀಸೊ ಬಿರುಗಾಳಿಯಲಿ ಗಾಳಿಪಟ ಉಳಿಯುವುದೆ

ಆಸೆಗಳ ನಿಗ್ರಹಿಸು ~ ಪರಮಾತ್ಮನೆ ||೨೯೬||


ನಟ್ಟಿರುಳ ಕತ್ತಲಲಿ ಮಿಂಚೊಂದು ಸುಳಿದಂತೆ

ಥಟ್ಟೆಂದು ಹೊಳೆದರಾವಿಷ್ಕಾರ ವೊಂದು |

ಬಿಟ್ಟಿ ದೊರಕಿದದೃಷ್ಟವಿತ್ತ ವರವಲ್ಲವದು

ಗಟ್ಟಿ ತಪಸಿನ ಫಲವು ~ ಪರಮಾತ್ಮನೆ ||೨೯೭||


ಒಳಿತು ಕೆಡಕುಗಳ ಯುದ್ಧವು ನಡೆಯುತಿದೆ ನಿತ್ಯ

ಕಲಿ-ಕಲ್ಕಿಯರ ಯುದ್ಧವಿದು ಅಲ್ಲವೇನು? |

ಬಲಿಯಾಗುತಿರಬಹುದು ಪುಟ್ಟ ಕಲ್ಕಿಗಳಿಂದು

ಬೆಳೆದು ಬರುವನು ಕಲ್ಕಿ ಪರಮಾತ್ಮನೆ ||೨೯೮||


ನರಜನ್ಮ ಸಿಕ್ಕಿಹುದು ಪುಣ್ಯದಾ ಶುಭಘಳಿಗೆ

ಅರಸನಾಗಿಹೆ ವಿವೇಚನೆ ಬುದ್ಧಿಗಳಿಗೆ

ವಿರಮಿಸದೆ ನಡೆ ಮುಂದೆ ಸತ್ಯದಾ ದಾರಿಯಲಿ

ಸಿರಿಪತಿಯ ಧ್ಯಾನಿಸುತ ~ ಪರಮಾತ್ಮನೆ ||೨೯೯||


ದಿನಮಣಿಯು ಚಂದಿರಗೆ ಕೊಟ್ಟಿರುವ ಸುಡುಬಿಸಿಲ

ತನಿಯಾಗಿಸುತ ಜೊನ್ನವನು ಸುರಿದ ನಗುತ |

ನಿನಗೆ ನೋವೇ ಆಗಿರಲಿ ನಗುವ ಹಂಚುತಿರು      

ಘನತೆಪಡೆವುದು ಜನುಮ ~ ಪರಮಾತ್ಮನೆ ||೩೦೦||

ಮುಕ್ತಕಗಳು - ೫೮

ಎದೆಯಲ್ಲಿ ಹಲವಾರು ಭಾವಗಳು ತುಂಬಿರಲು

ನದಿಯನ್ನು ತಡೆಹಿಡಿದ ಅಣೆಕಟ್ಟಿನಂತೆ |

ಕದಗಳವು ಬೇಕಿರಲು ಒತ್ತಡವ ಹೊರ ಹಾಕೆ

ಬಳಿಯಲ್ಲಿ ಸಖನಿರಲಿ ಪರಮಾತ್ಮನೆ ||೨೮೬||


ಇರಲೇನು ಬದುಕಲ್ಲಿ ನವರಸದ ಸಮ್ಮಿಲನ

ಇರಬೇಕು ಸಮರಸವು ಬಹುಮುಖ್ಯವಾಗಿ |

ಕೊರತೆಯಾದರೆ ನೋಡು ಸಮರಸವು ನಮ್ಮಲ್ಲಿ

ಮರೆವೆ ಕೆಲ ರಸಗಳನು ~ ಪರಮಾತ್ಮನೆ ||೨೮೭||


ಮಣ್ಣಿನಿಂದಲೆ ಊಟ ಮಣ್ಣಿನಿಂದಲೆ ಬಟ್ಟೆ

ಮಣ್ಣಿನಿಂದಲೆ ಮಹಲು ತಲೆಮೇಲೆ ಸೂರು |

ಮಣ್ಣಿನಿಂದಲೆ ಕಾಯ ಮಣ್ಣ ಸೇರುವೆ ಕೊನೆಗೆ

ಕಣ್ಣಿಗೊತ್ತಿಕೊ ಮಣ್ಣ ~ ಪರಮಾತ್ಮನೆ ||೨೮೮||


ಮಿತ್ರರಲಿ ಇರಬೇಕು ಮುಚ್ಚುಮರೆ ಇಲ್ಲದೊಲು

ಪುತ್ರರಲಿ ಭೇದವನು ಮಾಡದಿರಬೇಕು |

ಶತ್ರುಗಳ ಕ್ಷಮಿಸುತ್ತ ಸ್ನೇಹಹಸ್ತವ ಚಾಚು

ಅತ್ರಾಸ ಬದುಕೆಲ್ಲ ~ ಪರಮಾತ್ಮನೆ ||೨೮೯||

ಅತ್ರಾಸ = ಕಜ್ಜಾಯ (ಅತಿರಸ)


ಕಳೆದುಕೊಂಡರೆ ಮಾನ ಪ್ರಾಣವೇ ಹೋದಂತೆ

ಕಳೆಯು ಬೆಳೆದೆತ್ತರಕೆ ನುಂಗಿದೊಲು ಪೈರ |

ಇಳೆಯ ಜೀವನ ನರಕವೆನಿಸುವುದು, ಹಣೆಪಟ್ಟಿ

ಉಳಿಯುವುದು ಕೊನೆತನಕ ~ ಪರಮಾತ್ಮನೆ ||೨೯೦||

ಮುಕ್ತಕಗಳು - ೫೯

ಸಮಯವದು ಉಚಿತವೇ, ಬೆಲೆಕಟ್ಟಲಾಗದ್ದು

ನಮಗೆ ಒಡೆತನವಿಲ್ಲ, ಬಳಸೆ ಸಿಕ್ಕುವುದು |

ಜಮೆ ಮಾಡಲಾಗದ್ದು, ವ್ಯಯಿಸಬಹುದಷ್ಟೆಯದು

ಗಮನವಿಡು ಲಾಭಪಡೆ ~ ಪರಮಾತ್ಮನೆ ||೨೯೧||


ಗೃಹಿಣಿಗಿದೆಯೇ ನಿವೃ ತ್ತಿಯ ಪಾರಿತೋಷಕವು

ದಹಿಸುತಿಹ ದಿನಿದಿನದ ಕೋಟಲೆಗಳಿಂದ |

ಇಹುದೆ ಹೃದಯಕ್ಕೆ ರಜೆ ಮನುಜ ಬದುಕಿರುವನಕ

ಗೃಹದ ಹೃದಯವು ಆಕೆ ~ ಪರಮಾತ್ಮನೆ ||೨೯೨||


ಮನ ಶುದ್ಧವಿಲ್ಲದಿರೆ ಮಂತ್ರವೀಯದು ಶಕ್ತಿ

ತನು ಶುದ್ಧವಿಲ್ಲದಿರೆ ಫಲಕೊಡದು ತೀರ್ಥ |

ಧನವಧಿಕವಿರಲೇನು ಕೊಳ್ಳಲಾಗದು ಭಕ್ತಿ

ತನುಮನವ ಶುದ್ಧವಿಡು ~ ಪರಮಾತ್ಮನೆ ||೨೯೩||


ಕಾಗದದ ದೋಣಿಯಲಿ ಸಾಗರವ ದಾಟುವೆಯ

ಬಾಗಿದಾ ಮರವನ್ನು ನೇರ ಮಾಡುವೆಯ |

ಸಾಗು ಭೂಮಿಯ ಮೇಲೆ ಹೆಜ್ಜೆಗಳನೂರುತಲಿ

ಸೋಗೇಕೆ ಮಾತಿನಲಿ ~ ಪರಮಾತ್ಮನೆ ||೨೯೪||


ಅಕ್ಕರೆಯು ದೊರೆತರದು ಬಾಯಾರಿದವಗೆ ಜಲ

ಸಕ್ಕರೆಯ ಸವಿನುಡೆಯು ಎದೆಯ ತುಂಬುವುದು |

ಅಕ್ಕಪಕ್ಕದಲಿ ಹಂಚುತ ಅಕ್ಕರೆಯ ಉಚಿತ

ಚೊಕ್ಕವಾಗಿಸು ಧರೆಯ ~ ಪರಮಾತ್ಮನೆ ||೨೯೫||

ಮುಕ್ತಕಗಳು - ೫೭

ಪರಿಹರಿಸಿ ವಿಘ್ನಗಳ ಹರಸು ನಮ್ಮೆಲ್ಲರನು

ವರದಹಸ್ತನೆ ನೀಡು ವರಗಳನು ಬೇಗ |

ದುರಿತನಾಶನೆ ಗೌರಿಪುತ್ರ ಜಯ ಗಣಪತಿಯೆ

ನಿರತ ಭಜಿಸುವೆ ಕಾಯೊ ~ ಪರಮಾತ್ಮನೆ ||೨೮೧||


ಹುಟ್ಟಿದ್ದು ಸಾಧನೆಯೆ? ಬೆಳೆದಿದ್ದು ಸಾಧನೆಯೆ?

ಹುಟ್ಟಿದಾ ದಿನದಂದು ಸಡಗರವು ಏಕೆ? |

ನೆಟ್ಟರೇ ಮರಗಳನು ಕೊಟ್ಟರೇ ದಾನವನು

ಉಟ್ಟು ಸಂಭ್ರಮಿಸೋಣ ~ ಪರಮಾತ್ಮನೆ ||೨೮೨||


ಅರೆಬೆಂದ ಜ್ಞಾನವದು ಅರಿಗೆ ಬಲ ನೀಡುವುದು

ಕುರಿಗಳಾಗುವೆವು ಸುಜ್ಞಾನವಿಲ್ಲದಿರೆ |

ಕುರುಡನಾ ಕಿಸೆಯ ಮಾಣಿಕ್ಯ ಬೆಲೆ ತರದಲ್ಲ

ಅರಿತಿರಲು ಬೆಲೆಯುಂಟು ~ ಪರಮಾತ್ಮನೆ ||೨೮೩||


ಹಣದಿಂದ ಸಿಗಬಹುದು ಆಹಾರ ಮಾತ್ರವೇ

ಹಣವು ತರಬಲ್ಲದೇ ಆರೋಗ್ಯ ವನ್ನು |

ಗುಣಶಾಂತಿ ಸುಖನಿದ್ದೆ ಸುಸ್ನೇಹ ನೆಮ್ಮದಿಯು

ಹಣಕೆ ದೊರೆಯುವುದಿಲ್ಲ ~ ಪರಮಾತ್ಮನೆ ||೨೮೪||


ನಿಗದಿಯಾಗಿದೆ ಬಹಳ ನಿಯಮಗಳು ವಿಶ್ವದಲಿ

ಜಗವು ಕೊಡು-ಪಡೆಯಧಿಕ ನಿಯಮಕ್ಕೆ ಬದ್ಧ |

ನಗುವ ಕೊಡೆ ಸುಖವ ಪಡೆವೆವು ಅಧಿಕ ನೆನಪಿರಲಿ

ಬಗೆಯದಿರು ದ್ರೋಹವನು ~ ಪರಮಾತ್ಮನೆ ||೨೮೫||


ಮುಕ್ತಕಗಳು - ೫೬

ಮೂಳೆ ಮಾಂಸಗಳಿರುವ ಜೀವಯಂತ್ರವು ಮನುಜ

ಬಾಳಿಕೆಗೆ ನೂರ್ವರುಷ ಸಂಕೀರ್ಣ ಸೃಷ್ಟಿ |

ಪೀಳಿಗೆಗಳೇ ನಶಿಸಿದವು ಲಕ್ಷ  ಸಂಖ್ಯೆಯಲಿ

ಆಳ ಉದ್ದಗಳರಿಯ ಪರಮಾತ್ಮನೆ ||೨೭೬||


ವೇದಗಳು ನೀಡುವವು ಬದುಕುವಾ ಜ್ಞಾನವನು

ಗಾದೆಗಳು ಬದುಕಿನಾ ಅನುಭವದ ಸಾರ |

ವಾದ ಮಾಡದೆ ರೂಢಿಸೆರಡು ಉಪಕರಣಗಳ

ಹಾದಿ ಸುಗಮವು ಮುಂದೆ ~ ಪರಮಾತ್ಮನೆ ||೨೭೭||


ಅಪರಂಜಿ ನಗವಾಗೆ ಎಲ್ಲರೂ ಮಣಿಸುವರು

ಕಪಿಚೇಷ್ಟೆಗೂ ಅಂಕು ಡೊಂಕಾಗಬಹುದು |

ಉಪಯೋಗವಾಗುವುದು ತುಸು ತಾಮ್ರ ಸೇರಿದರೆ

ಹಪಹಪಿಸು ತುಸು ಕೊರೆಗೆ ~ ಪರಮಾತ್ಮನೆ ||೨೭೮||

ಕೊರೆ = ನ್ಯೂನತೆ


ವಿಜ್ಞಾನ ಬೆಳೆಯುತಿದೆ ಸಿರಿಯು ಹೆಚ್ಚಾಗುತಿದೆ

ಅಜ್ಞಾನ ಹೆಚ್ಚಿಸಿದೆ ವ್ಯಾಪಾರಿ ಬುದ್ಧಿ |

ಸುಜ್ಞಾನ ವಿರಬೇಕು ವಿಜ್ಞಾನಿಗಳಿಗೆಲ್ಲ

ಅಜ್ಞರಾ ಸರಿಪಡಿಸು ಪರಮಾತ್ಮನೆ ||೨೭೯||


ಆರ್ಯೆ ಬಂದಿಹಳು ಮಾತಾಪಿತರ ತೊರೆಯುತ್ತ

ಭಾರ್ಯೆಯೊಳು ತೋರು ಅಕ್ಕರೆಯ ಅನವರತ |

ಧೈರ್ಯವನು ತುಂಬುವಳು ಹೆಗಲ ಆಸರೆ ನೀಡಿ

ಕಾರ್ಯಲಕ್ಷ್ಮಿಯವಳೇ ~ ಪರಮಾತ್ಮನೆ ||೨೮೦||

Thursday, August 18, 2022

ಮುಕ್ತಕಗಳು - ೫೦

ಸೀಬೆ ತಿನ್ನಬಹುದಾದರೆ ಮಾವು ತಿನಲಾಗದು

ಲಾಭವುಂಟೇನು ಮಧುಮೇಹಿಯಾಗಿರಲು |

ಜೇಬು ತುಂಬಿರೆ ಸಾಕೆ ಎಲ್ಲ ಅನುಭವಿಸಲಿಕೆ

ತೂಬು ಇದೆ ಬದುಕಿನಲಿ ~ ಪರಮಾತ್ಮನೆ ||೨೪೬||


ಇಬ್ಬನಿಯು ಕಾಣುವುದು ಮುತ್ತಿನಾ ಮಣಿಗಳೊಲು

ಹುಬ್ಬಿನಾ ಎಸಳುಗಳು ಇಂದ್ರಛಾಪದೊಲು |

ಕಬ್ಬಿಗನ ಕಣ್ಣುಗಳು ಮಾಯದಾ ದುರ್ಬೀನು

ಹೆಬ್ಬೆಟ್ಟೆ ಅವನಿರಲಿ ~ ಪರಮಾತ್ಮನೆ ||೨೪೭||


ಚಿನ್ನದಾ ತಲ್ಪದಲಿ ಮಾಳಿಗೆಯ ಮನೆಯಲ್ಲಿ

ರನ್ನದಾ ಕಂಬಳಿಯ ಹೊದ್ದು ಮಲಗುತಲಿ |

ಹೊನ್ನಿನಾ ತಟ್ಟೆಯಲಿ ಊಟ ಮಾಡಿದರೇನು

ಮಣ್ಣಾಗುವುದು ಸತ್ಯ ~ ಪರಮಾತ್ಮನೆ ||೨೪೮||


ಹಕ್ಕಿಯೊಲು ಹಾರಿದೆವು ಮೀನಿನೊಲು ಈಜಿದೆವು

ಸೊಕ್ಕಿನಲಿ ಬುವಿಯಲ್ಲೆ ಎಡವಿ ಬಿದ್ದಿಹೆವು |

ಮಿಕ್ಕ ಸಮಯದಲಿ ಎಚ್ಚರ ತಪ್ಪಿ ಹೆಜ್ಜೆಯಿಡೆ

ದಕ್ಕುವುದೆ ಅನ್ನವದು ~ ಪರಮಾತ್ಮನೆ ||೨೪೯||


ಹೊರದೂಡುವುದು ಎಂತು ಕಲಿಯನ್ನು ಮನದಿಂದ

ಬರುವನಕ ಕಲ್ಕಿ  ಕಾಯುತಿರಬೇಕೇನು |

ತೊರೆ ಹಿಂಸೆ ಪಣ ಪಾನ ಪರನೀರೆ ಸಂಗಗಳ

ಧರೆಗೆ ಉರುಳುವನು ಕಲಿ ಪರಮಾತ್ಮನೆ ||೨೫೦||

ಮುಕ್ತಕಗಳು - ೪೯

ಗೆಳೆತನವೆ ಸಂಬಂಧಗಳಲಿ ಅತಿ ಉತ್ತಮವು

ಎಳೆಗಳಿರದಿರೆ ಆಸ್ತಿ ಅಂತಸ್ತುಗಳದು |    

ಸೆಳೆಯುವವು ಬುದ್ಧಿಮನಗಳು ಈರ್ವರನು ಸನಿಹ

ಪುಳಕಗೊಳಿಸುತ ಮನವ  ಪರಮಾತ್ಮನೆ ||೨೪೧||


ಮರೆವೊಂದು ವರದಾನ ಮರೆಯಲಿಕೆ ನೋವುಗಳ

ಹೊರೆಯೆಲ್ಲ ಇಳಿದಾಗ ನಸುನಗುವು ಮೂಡೆ |

ಕರಗಿಹೋಗಲಿ ಹೆಪ್ಪುಗಟ್ಟಿರುವ ಹಿಮಪಾತ

ಮರೆಯಾಗಿ ಮೋಡಗಳು ~ ಪರಮಾತ್ಮನೆ ||೨೪೨||


ದುಡುಕದಿರು ಆತುರದಿ ಕೋಪದಾ ತಾಪದಲಿ

ಎಡವದಿರು ಸುರಿಯುವುದು ನಿನ್ನದೇ ರಕುತ |

ಅಡಿಯಿಡುವ ಮುನ್ನ ಯೋಚಿಸು ಒಂದೆರಡು ಘಳಿಗೆ

ಕೊಡೆ ಮಾಡು ಬುದ್ಧಿಯನು ~ ಪರಮಾತ್ಮನೆ ||೨೪೩||


ದಣಿಸಿದರೆ ಮನವನ್ನು ಸೋಲುವುದು ದೇಹವದು

ಮಣಿಸಿದರೆ ದೇಹವನು ಹೊಮ್ಮುವುದು ಹುರುಪು |

ಗಣಿಯಂಥ ಕಾಯವಿದು ದೇವನದ್ಭುತ ಸೃಷ್ಟಿ

ಚಣ ಸಾಕೆ ಅದನರಿಯೆ ~ ಪರಮಾತ್ಮನೆ ||೨೪೪||


ಮರೆಯೋಣ ತಪ್ಪುಗಳ ಬಂಧುಮಿತ್ರರ ನಡುವೆ

ಬೆರೆಯೋಣ ಸಂತಸದಿ ಬದುಕಿನಲಿ ನಲಿಯೆ |

ಮೆರೆಯೋಣ ಗೆಳೆತನದ ಸವಿಫಲದ ರುಚಿಯನ್ನು

ಮೆರೆವಂತೆ ಕಾಗೆಗಳು ~ ಪರಮಾತ್ಮನೆ ||೨೪೫||

ಮುಕ್ತಕಗಳು - ೪೮

ಪ್ರೀತಿಯೆಂದರೆ ಅದುವೆ ವ್ಯವಹಾರ ಅಲ್ಲಣ್ಣ

ಪಾತಕವು ಬದಲಿಗೇನಾದರೂ ಬಯಸೆ |

ಏತದಂತಿರಬೇಕು ಅಕ್ಕರೆಯ ಹಂಚಲಿಕೆ

ಜೋತುಬೀಳದೆ ಫಲಕೆ ~ ಪರಮಾತ್ಮನೆ ||೨೩೬||


ಮರೆಯದಿರು ನೇಹಿಗರ ತೊರೆಯದಿರು ಹಿರಿಯರನು

ತೊರೆದೆಯಾದರೆ ತೊರೆದೆ ಜೀವನದ ಸಿರಿಯ |

ಕೊರೆಯುವುದು ಮನವ ಜೀವನದ ಕೊನೆಗಾಲದಲಿ

ಬರಿದೆ ಹಲುಬುವೆ ನೀನು ~ ಪರಮಾತ್ಮನೆ ||೨೩೭||


ಉಚಿತದಲಿ ಸಿಕ್ಕಿರಲು ದೇಹವದು ನಮಗೆಲ್ಲ

ಉಚಿತವೇ ದೇಹವನು ಕಡೆಗಣಿಸೆ ನಾವು |

ರಚನೆಯಾಗಿದೆ ದೇಹ ಸೂಕ್ತದಲಿ ಸಾಧನೆಗೆ

ಶಚಿಪತಿಗೆ ಸುರಕರಿಯು ~ ಪರಮಾತ್ಮನೆ ||೨೩೮||


ಜಾಲತಾಣಗಳು ಜನಗಳ ದಾರಿ ತಪ್ಪಿಸಿವೆ

ಹೊಲಸನ್ನು ತುಂಬಿಸುತ ತಲೆಯ ತುಂಬೆಲ್ಲ |

ಕಲಿಸುತಿವೆ ಕೆಲವೊಮ್ಮೆ ಸುಜ್ಞಾನ ಪಾಠಗಳ

ಅಲಗು ಎರಡಿರೊ ಖಡ್ಗ ~ ಪರಮಾತ್ಮನೆ ||೨೩೯||


ಕಪಟ ನಾಟಕವನಾಡುವ ಚತುರರೇ ಕೇಳಿ

ಉಪದೇಶ ಠೀವಿಯಲಿ ನಾಟಕದ ವೇಷ |

ಜಪಮಾಲೆ ಹಿಡಿದವರು ಎಲ್ಲ ಸಾತ್ವಿಕರಲ್ಲ

ಅಪಜಯವು ನಿಮಗಿರಲಿ ~ ಪರಮಾತ್ಮನೆ  ||೨೪೦||

ಮುಕ್ತಕಗಳು - ೪೭

ಹಾಲು ಹಾಲಾಹಲಗಳೆರಡು ಬೆರತಿರುವಂತೆ

ಜಾಲತಾಣಗಳು ಗೊಂದಲದ ರಸಪಾಕ |

ಹಾಲು ಕುಡಿಯುವ ಜಾಣ್ಮೆಯಿರಬೇಕು ಹಂಸದೊಲು

ಜಾಲಿಮರ ನೆರಳಾಯ್ತು ಪರಮಾತ್ಮನೆ ||೨೩೧||


ಮದುವೆಯದು ಬಂಧನವೊ ಇಂಧನವೊ ಜೀವನಕೆ?

ಬದುಕಿನಾ ಪ್ರಶ್ನೆ ಕಾಡುತಿದೆ ಯುವಜನರ |

ಕದವ ತೆರೆಯುವುದು ಸಂಘಟಿತ ಬದುಕಿಗೆ ಮದುವೆ

ನದಿಯು ಸಾಗರದೆಡೆಗೆ ಪರಮಾತ್ಮನೆ ||೨೩೨||


ಆಗಸದೆಲ್ಲೆಯಲಿ ವಿಹರಿಸಲೇನು ಪಕ್ಷಿಗಳು

ಬಾಗಬೇಕಿದೆ ಬುವಿಯೆಡೆಗೆ ಉದರಕಾಗಿ |

ಹೋಗಿ ನಿಂತರು ಕೂಡ ಕನಸಿನಾ ಸಗ್ಗದಲಿ

ಸಾಗುವಳಿ ಬುವಿಯಲ್ಲೆ ~ ಪರಮಾತ್ಮನೆ ||೨೩೩|| 


ಬದುಕಿನಲಿ ಕಷ್ಟಗಳು ಬೆಂಬಿಡದೆ ಬರುತಿರಲು

ಕುದಿಯುತಿಹ ನೀರಿನಲಿ ಗುಳ್ಳೆಗಳ ಹಾಗೆ |

ಎದೆಗುಂದದಿರು ಕಾಲಚಕ್ರ ತಿರುಗುವುದು ತಾನ್

ಎದೆಯು ಹಗುರಾಗುವುದು ~ ಪರಮಾತ್ಮನೆ ||೨೩೪||


ಹಣದಾಸೆ ಮಣ್ಣಾಸೆ ಹೆಣ್ಣಾಸೆಗಳು ಮೂರು

ತೃಣವೆಂದು ತೊರೆದವರೆ ಸಾಧಕರು ನೋಡು |

ರಣರಂಗವಾಗೆ ಮನವೀ ರಕ್ಕಸರ ಮುಗಿಸೆ

ಗುಣವಂತರಾಗುವರು ~ ಪರಮಾತ್ಮನೆ ||೨೩೫||

ಮುಕ್ತಕಗಳು - ೪೬

ದಿನವೊಂದರಲೆ ಸಿದ್ಧವಾಗುವುದೆ ಸಿಹಿ ಹಣ್ಣು

ಕನಸು ನನಸಾಗುವುದೆ ಕಂಡ ಕ್ಷಣದಲೆ |

ಅನವರತ ಎಡೆಬಿಡದೆ ಸಾಧನೆಯ ಮಾಡಿದರೆ

ನಿನಗೆ ದೊರಕುವುದು ಫಲ ~ ಪರಮಾತ್ಮನೆ ||೨೨೬||


ತಿದ್ದುವರು ಇರಬೇಕು ತಪ್ಪುಗಳ ಮಾಡಿದೊಡೆ

ಕದ್ದವಗೆ ತಿಳಿಹೇಳಿ ತರಬೇಕು ಶಿಸ್ತು |

ಗೆದ್ದವಗೆ ಕೂಡ ಇರಬಹುದಲ್ಲ ದೋಷಗಳು

ಮದ್ದು ನೀಡುವನು ಗುರು ~ ಪರಮಾತ್ಮನೆ ||೨೨೭||


ಸತ್ಯನಾರಾಯಣನ ಪೂಜೆಯನು ಮಾಡುವರು

ನಿತ್ಯ ಸುಳ್ಳಿನ ಹಾರ ಪೋಣಿಸುತ ನಿಂದು

ಹತ್ಯೆಗಳ ಮಾಡಿ ತಬ್ಬಲಿಗಳನು ಸಾಕುವರು

ಕೃತ್ಯಗಳ ವೈರುಧ್ಯ ಪರಮಾತ್ಮನೆ ||೨೨೮||


ಬೆಣ್ಣೆಯನು ಕಾಯಿಸದೆ ತುಪ್ಪವಾಗದು ಕೇಳು

ಉಣ್ಣೆಯನು ಹೆಣೆಯದಿರೆ ಆಗುವುದೆ ಟೋಪಿ |

ಅಣ್ಣಯ್ಯ ಕಾಯಕವ ನೀನೆ ಮಾಡಲುಬೇಕು

ಕಣ್ಣಯ್ಯ ಫಲಕೊಡುವ ~ ಪರಮಾತ್ಮನೆ ||೨೨೯||


ಕರುಬದಿರು ನೆರೆಯವಗೆ ಕೋಟಿಗಳು ದೊರಕಿರಲು

ಪರರ ಖಾತೆಯ ಧನವು ಪರರಿಗೇ ಪ್ರಾಪ್ತಿ |

ಅರಿತಿರುವ ಚಿತ್ರಗುಪ್ತನು ಖಾತೆಗಳ ವಿವರ

ಮರೆತು ನೀಡನು ನಿನಗೆ ~ ಪರಮಾತ್ಮನೆ ||೨೩೦||


ಮುಕ್ತಕಗಳು - ೫೧

ಕತ್ತಲೆಯ ಕೂಪದಲಿ ಬೆಳಕು ಕಂಡರೆ ಹಬ್ಬ

ಎತ್ತಲಿಂದಲೆ ಬರಲಿ ಸುಜ್ಞಾನ ತಾನು |

ಸುತ್ತಲಿನ ದೀಪಗಳ ಭಕ್ತಿಯಲಿ ವಂದಿಸುವೆ

ಬೆತ್ತಲೆಯ ಮನದಿಂದ ಪರಮಾತ್ಮನೆ ||೨೫೧||


ಉರುಳುತಿದೆ ಕಾಲವದು ಹಿಂದಿರುಗಿ ನೋಡದೆಯೆ

ತಿರುಗುತಿದೆ ಮನಸು ನೆನಪುಗಳ ಸುಳಿಯಲ್ಲೆ |

ಬರುವ ನಾಳೆಗಳ ಭಯ-ಆಸೆಗಳ ಬಲೆಯಲ್ಲೆ 

ಕರಗುತಿದೆ ದಿನವೊಂದು ಪರಮಾತ್ಮನೆ ||೨೫೨||


ಪರಕೀಯ ದಾಸ್ಯದಲಿ ಬಳಲಿದ್ದ ಭಾರತಿಯೆ

ಅರಳಿರುವ ಸ್ವಾತಂತ್ರ್ಯ ಅಮೃತದಾ ಸ್ವಾದ |

ಕುರುಡಾಸೆ ಮಕ್ಕಳದು ಪಾತಕಿಗೆ ಮಣೆಹಾಕಿ

ತರದಿರಲಿ ಸಂಕೋಲೆ ಪರಮಾತ್ಮನೆ ||೨೫೩||


ಸಸಿಯು ಟಿಸಿಲೊಡೆಯುವುದು ಎಲ್ಲಿ ಬೆಳೆಯುತಲಿರಲು

ಹೊಸ ಮೋಡ ಮೂಡುವುದು ಎಲ್ಲಿ ಆಗಸದಿ

ಬಸಿರ ಸೇರುವುದೆಲ್ಲಿ ಮರುಜನ್ಮದಲಿ, ಅರಿತ

ಜಸವಂತರಾರಿಹರು ಪರಮಾತ್ಮನೆ ||೨೫೪||


ಭತ್ತದಲಿ ದೊರೆಯುವುದೆ ಬೇಳೆಯಾ ಕಾಳುಗಳು

ಹುತ್ತದಲಿ ಹಾವಿರದೆ ಹುಲಿಯಿರುವುದೇನು |

ಸುತ್ತಲಿನ ಜನ ತಪ್ಪು ಮಾಡುವುದು ಸಹಜ ಗುಣ

ಕತ್ತಿಯೆತ್ತದೆ ತಿದ್ದು ಪರಮಾತ್ಮನೆ ||೨೫೫||


ಮುಕ್ತಕಗಳು - ೫೨

ಆರು ರಿಪುಗಳು ಲಗ್ಗೆಯಿಟ್ಟಿಹವು ನರಪುರಿಗೆ

ಆರು ತಡೆವರು ಭೀಕರದ ರಕ್ಕಸರನು |

ಊರಿನೊಡೆಯನು ತಾನು ಹಿಡಿಯದಿರೆ ಖಡುಗವನು

ಗೋರಿಯಾಗ್ವುದು ಪುರವು ~ ಪರಮಾತ್ಮನೆ ||೨೫೬||


ಅವಳ ಮೆಲುನುಡಿಯ ಸಿಹಿಗಿಂತ ಸವಿಯೇನಿಲ್ಲ

ಕವಿಯು ಬಣ್ಣಿಸಲಾರ ಎದೆಯ ಅನುಭವವ |

ಸವಿಜೇನು ತುಳುಕುತಿರೆ ತುಟಿ ನೋಟ ತಾಕುತಿರೆ

ಅವನಿಯನು ಗೆದ್ದಂತೆ ~ ಪರಮಾತ್ಮನೆ ||೨೫೭||


ಕಲಿತಿರುವ ವಿದ್ಯೆಯನು ಹಂಚುತ್ತ ಬಾಳುತಿರು

ಉಳಿಯುವುದು ನಿನ್ನಲ್ಲೆ ಬೇರೂರಿ ಮರವಾಗಿ |

ಬಳಸಿದರೆ ಖಡ್ಗವದು ಹರಿತದಾ ಆಯುಧವು 

ಬಳಸದಿರೆ ಕಿಲುಬು ಕಲೆ ಪರಮಾತ್ಮನೆ  ||೨೫೮||


ಕಾಣಿಕೆಯು ಹುಂಡಿಯಲಿ ಕಾಣಿಕೆಯು ಹೆಚ್ಚುತಿದೆ

ದೇಣಿಗೆಯು ಕೇಳದೆಯೆ ಸೇರುತಿದೆ ನೋಡಿ |

ಕಾಣಿಕೆಯು ಲಾಭಕ್ಕೊ ತಪ್ಪಿಗೋ ಭಕ್ತಿಗೋ?

ಶಾಣೆಯಾದರು ಮಂದಿ ಪರಮಾತ್ಮನೆ ||೨೫೯||


ಕಳವಳದ ಘಳಿಗೆಗಳು ಬಾಳಿನಲಿ ಒರೆತಗಳು

ಕಳೆಯದಿರು ಸಂಯಮವ, ತೋರು ನೀ ಸ್ಥಿರತೆ |

ಉಳಿಬೇಕು ಪೈಪೋಟಿ ಓಟದಲಿ, ಬದುಕೆಲ್ಲ

ಮಳೆಯಲ್ಲೆ ಮೆರವಣಿಗೆ ~ ಪರಮಾತ್ಮನೆ ||೨೬೦||

ಮುಕ್ತಕಗಳು - ೫೩

ಅಕ್ಕರೆಯ ಭಾವಕ್ಕೆ ಪದಗಳೇ ಬೇಕೇನು

ಹಕ್ಕಿಗಳ ಚಿಲಿಪಿಲಿಯು ಮುದ ನೀಡದೇನು

ಉಕ್ಕಿ ಬಂದರೆ ಭಾವ ಎದೆಯ ತಾಕುವುದಲ್ಲ

ಅಕ್ಕರವು ಏಕಯ್ಯ ಪರಮಾತ್ಮನೆ ||೨೬೧||


ಪಂಚಭೂತಗಳಿಂದ ಹುಟ್ಟಿದಾ ದ್ರವ್ಯಕಣ

ಪಂಚಕೋಶಗಳಿರುವ ಬಂಡಿ ಈ ದೇಹ |

ಪಂಚೇಂದ್ರಿಯಗಳೆಂಬ ಪಂಚಾರಗಳಳೆದಿವೆ

ಪಂಚಿ ಆತ್ಮವಿರದಿರೆ ಪರಮಾತ್ಮನೆ ||೨೬೨||

ಪಂಚಾರ = ಕುದುರೆ, ಪಂಚಿ = ವ್ಯರ್ಥ


ಕಡ ಪಡೆಯಲಾಗುವುದೆ ಪರರ ಸತ್ಕರ್ಮಗಳ

ದುಡಿದು ಪಡೆಯುವುದೊಂದೆ ಅದಕಿರುವ ಮಾರ್ಗ |

ಕುಡಿಯೇಳುವುದೆ ಮಾವಿನದು ಬೇವು ಬಿತ್ತಿದರೆ

ತಡವೇಕೆ ಬಿತ್ತನೆಗೆ ~ ಪರಮಾತ್ಮನೆ ||೨೬೩||


ಎರಚಿದರು ಕಸದಂತೆ ಧನವನ್ನು ಬುವಿಯಲ್ಲಿ

ಪರಿಣಯವು ಪರಿಷೆಯನು ನಾಚಿಸುವ ರೀತಿ |

ಮುರಿಯುತ್ತ ಮದವನ್ನು ವೈರಾಣು ಬಂದಿಹುದು

ವರವಿತ್ತು ಜನಕರಿಗೆ ~ ಪರಮಾತ್ಮನೆ ||೨೬೪||


ಕಷ್ಟಕಾರ್ಪಣ್ಯಗಳು ಇರದವರು ಯಾರುಂಟು

ತುಷ್ಟಿ ಹುಡುಕಲುಬೇಕು ಕಷ್ಟಗಳ ನಡುವೆ |

ದುಷ್ಟ ಕಷ್ಟಗಳ ಪ್ರಭಾವ ಕುಂದಿಸೆ ನಿತ್ಯ

ಇಷ್ಟದೇವರನು ನೆನೆ ~ ಪರಮಾತ್ಮನೆ ||೨೬೫||

ಮುಕ್ತಕಗಳು - ೫೪

ಪೊಂಗದಿರು ಸುರಿಯುತಿದೆ ಆಗಸದ ಮಡಿಲಿಂದ

ಚಂಗದಿರ ನಡೆಸುತಿರೆ ಸಪ್ತಾಶ್ವ ರಥವ |

ತಂಗದಿರ ಮರೆಯಾದ ನಾಚಿಕೆಯ ಮುಸುಕಿನಲಿ

ರಂಗು ಬಂದಿದೆ ಬುವಿಗೆ ~ ಪರಮಾತ್ಮನೆ ||೨೬೬||


ನಿಶೆಯ ನಶೆಯಲ್ಲಿ ಮುಳುಗಿಹ ಇಹದ ಜಗಕೆಲ್ಲ

ಉಷೆಯು ಕಳೆಯುವಳು ನಿದಿರೆಯ ಮಾದಕತೆಯ |

ಭಿಷಜ ಜಾಡ್ಯವ ಕಳೆಯೆ ಓಷಧಿಯ ನೀಡುವೊಲು

ಉಷೆಯು ಕೊಡುವಳು ರವಿಯ ~ ಪರಮಾತ್ಮನೆ ||೨೬೭||

ಭಿಷಜ = ವೈದ್ಯ


ಅಮ್ಮನೊಲು ಪೊರೆಯುವ ಪ್ರಕೃತಿಯೇ ಇತ್ತಿರುವ

ನಮ್ಮದೇ ಪರಿಸರವು ನಮ್ಮ ಮನೆಯಂತೆ |

ಸುಮ್ಮನೇ ಹಾಳ್ಗೆಡವಿ ತಿಪ್ಪೆಯನು ಮಾಡಿದರೆ

ಗುಮ್ಮನಂತಾಗುವುದು ~ ಪರಮಾತ್ಮನೆ || ೨೬೮||


ಮಗುವಿನಾ ನಗೆಗಿಂತ ಹಿರಿಮದ್ದು ಉಂಟೇನು

ದುಗುಡ ದುಮ್ಮಾನಗಳ ಕಳೆಯುವುದು ಚಣಕೆ |

ಜಗದ ಕೋಟಲೆಗಳೇ ಕಾಡಿರಲು ಎಡೆಬಿಡದೆ

ಮಗುವಂತೆ ನಕ್ಕುಬಿಡು ~ ಪರಮಾತ್ಮನೆ ||೨೬೯||


ಅನೃತ ರಾಗದ್ವೇಷ ಅತಿಕಾಮ ಮದಗಳೇ

ಅನವರತ ಮನುಜನನು ಬಗ್ಗುಬಡಿ ದಿಹವು |

ಮನಗಳಿಗೆ ಕಿಲುಬು ಹಿಡಿಸುವ ಆಮ್ಲಗಳಿವೆಲ್ಲ

ಮನವ ತೊಳೆ ಕಿಲುಬ ಕಳೆ ~ ಪರಮಾತ್ಮನೆ ||೨೭೦||

ಮುಕ್ತಕಗಳು - ೫೫

ಕರವೀರಪುರದಲ್ಲಿ ನೆಲಸಿರುವ ಲಕುಮಿಯೇ

ಪೊರೆ ನೀನು ಪುತ್ರರನು ಉಸುರಿರುವ ತನಕ |

ತರುವೆ ನೀ ಭಕುತರಿಗೆ ಸಾಯುಜ್ಯ ಪದವಿಯನು

ತೊರೆದಾಗ ಅತಿಯಾಸೆ ~ ಪರಮಾತ್ಮನೆ ||೨೭೧||

ಸಾಯುಜ್ಯ = ಮೋಕ್ಷ

  

ನಡೆದಿಹೆವು ಪ್ರತಿದಿನವು ಜವರಾಯ ಇರುವೆಡೆಗೆ

ಕೊಡನಲ್ಲ ವಿಶ್ರಾಂತಿ ಅರೆಘಳಿಗೆ ಕೂಡ |

ಕೊಡ ನಮಗೆ ಬೇರೆ ದಾರಿಯ ಹಿಡಿಯಲಾಸ್ಪದವ

ಬಿಡದೆ ನೆನೆಯುತಿರು ಇದ ~ ಪರಮಾತ್ಮನೆ ||೨೭೨||


ರಾಮನಾಮವ ಜಪಿಸಿ ದಾರಿಕೆಟ್ಟವರಿಲ್ಲ

ಶ್ಯಾಮಸುಂದರನ ನೆನೆವಗೆ ಶೋಕವಿಲ್ಲ |

ಕಾಮವನು ನಿಗ್ರಹಿಸೊ ಶಕ್ತಿ ಬೆಳೆದರೆ, ಪರಂ

ಧಾಮದಾ ದಾರಿಯದು ~ ಪರಮಾತ್ಮನೆ ||೨೭೩||


ಕಸವ ತುಂಬದಿರಿ ಎಳೆಯರ ಉದರ ಮಸ್ತಕಕೆ

ಕಸುವು ಬೇಕಿದೆ ತಮ್ಮ ಬದುಕ ಸಾಗಿಸಲು |

ಸಸಿಗೆ ನೀಡಿದರೆ ಪರಿಶುದ್ಧ ಜಲ ವಾಯುಗಳ

ಫಸಲನೀಯುವುದಧಿಕ ~ ಪರಮಾತ್ಮನೆ ||೨೭೪||


ಸಾಗರದ ನೀರಿನೊಳು ಧ್ಯಾನವದು ಸಾಧ್ಯವೇ

ಜೋಗದಾ ಧಾರೆಯಲಿ ಮೀಯುವುದು ಉಂಟೆ |

ಆಗುವವು ಕಾರ್ಯಗಳು ಸೂಕ್ತದಾ ಪರಿಸರದಿ

ನೀಗಿಸಿರೆ ಅಡೆತಡೆಯ ~ ಪರಮಾತ್ಮನೆ || ೨೭೫||


Wednesday, August 17, 2022

ಸ್ವಾರ್ಥ

ಅಯ್ಯೋ ಅದೆಷ್ಟು ಸ್ವಾರ್ಥಿಗಳು ನಾವು!

ನಮ್ಮ ಮೇಲೆ ನಮಗೇಕೆ ಇಷ್ಟೊಂದು ಪ್ರೇಮ?

ಸ್ವಾರ್ಥವೇ ನಡೆಸುತಿದೆ ಈ ಜಗದ ಸಂತೆ,

ಉಗಿಬಂಡಿಯ ನಡೆಸುವ ನಿಗಿನಿಗಿ ಕೆಂಡದಂತೆ!


ಪತಿಪತ್ನಿಯರಾ ಧರ್ಮ, ತಾಯಿ ಮಕ್ಕಳ ಪ್ರೇಮ,

ಗುರುಶಿಷ್ಯರಾ ನಂಟು, ಗೆಳೆಯ ಗೆಳತಿಯರ ಸ್ನೇಹ,

ಎಲ್ಲ ಸಂಬಂಧಗಳಾಗಿವೆ ಸ್ವಾರ್ಥದಾ ಕೊಂಡಿಗಳು,

ಓಡುತಿವೆ ಹುರುಪಿಂದ ಹುರುಪಿನಲಿ ಉಗಿಬಂಡಿಗಳು!


ಏಣಿಯಾ ಅಗತ್ಯ ಈಗ ಸೂರು ಮುಟ್ಟುವ ತನಕ,

ಹಳೆಯ ಕೊಂಡಿಗಳ ಕಳಚಿ ಹೊಸತ ಜೋಡಿಸುವ ತವಕ.

ಕಾಣದಾ ಎನನ್ನೋ ಸಾಧಿಸುವ ಅಪೇಕ್ಷೆ,

ಸ್ವಾರ್ಥದಾ ಜಗದಲ್ಲಿ ಸಂಬಂಧಗಳಿಗೆ ಪರೀಕ್ಷೆ!


ಅಷ್ಟು ಆತುರವೇಕೆ ನಿಧಾನವಿರಲಿ,

ತಿರುಗುತಿದೆ ಬುವಿಯು ಸಾವಧಾನದಲಿ.

ಸ್ವಾರ್ಥವು ಸೆಳೆದಾಗ ಯೋಚಿಸು ಒಮ್ಮೆ,

ಮರೆಯದೆ ಪ್ರೀತಿ, ವಾತ್ಸಲ್ಯ, ಕರ್ತವ್ಯಗಳ ಹಿರಿಮೆ!

Tuesday, August 16, 2022

ಮುಕ್ತಕಗಳು - ೪೫

ಚಪಲದಾ ಮನಸಿಂದು ಅಂಕೆಯೇ ಇಲ್ಲದೇ

ಕಪಿಯಂತೆ ಕುಣಿಯುತಿರೆ ಎಲ್ಲೆಯಿರದಂತೆ |

ಉಪಯೋಗವೇನಿಲ್ಲ ಚುಚ್ಚುವುವು ಮಳ್ಳುಗಳು

ಜಪಮಾಲೆ ನೀಡದಕೆ ಪರಮಾತ್ಮನೆ ||೨೨೧||


ಗೆದ್ದವರ ಬಿದ್ದವರ ಕಥೆಯು ಇತಿಹಾಸವೇ

ಇದ್ದವರು ಸುಮ್ಮನೆಯೆ ನೆನಪಾಗರಲ್ಲ |

ಗೆದ್ದಲಿನ ಮನದ ಕುಹಕಿಗಳು ಕಥೆಯಾಗುವರೆ

ಸದ್ದಿರದೆ ಕರಗುವರು ~ ಪರಮಾತ್ಮನೆ ||೨೨೨||


ಎತ್ತರಕ್ಕೊಯ್ದರೂ ಮನುಜನನು ವಿದ್ಯೆಯೇ 

ಮತ್ತದೇ ಪೀಠದಲಿ ನಿಲಿಸೊ ಬಲವುಂಟೆ? |

ಬಿತ್ತಿಬೆಳೆಸುತಿರೆ ಆದರ್ಶ ನಡೆ ನುಡಿಗಳನು

ಕುತ್ತಿರದು ಪೀಠಕ್ಕೆ ಪರಮಾತ್ಮನೆ ||೨೨೩||


ಚಂದದಲಿ ತಿಳಿಹೇಳಿ ಅಕ್ಕರವ ಕಲಿಸಿರುವೆ

ಮಂದಮತಿ ಮಂಡೆಯಲಿ ಬೀರಿ ಬೆಳಕನ್ನು |

ಬಿಂದಿಗೆಗೆ ತುಂಬಿಸಿದೆ ಅಮೃತದಾ ಸಾರವನು

ವಂದಿಪೆನು ಗುರುದೇವ ~ ಪರಮಾತ್ಮನೆ ||೨೨೪||

 

ಬಿರಿದರೂ ವನಸುಮವು ಅರ್ಚನೆಗೆ ಸಿಗದಲ್ಲ

ಪರಮಪುರುಷನ ಪಾದ ಸೇರದಳಿಯುವುದು |

ತೊರೆ ಕಾಡ ಹಿಡಿ ನಾಡ ಮೂಢ ಸನ್ಯಾಸಿಯೇ

ವರವಾಗು ಪುರಜನಕೆ ~ ಪರಮಾತ್ಮನೆ ||೨೨೫||


ಮುಕ್ತಕಗಳು - ೪೪

ಶರಣು ಶರಣೆಂದವರು ಶರಣರೇನೆಲ್ಲರೂ

ಪರಮೇಶ್ವರನೆ ಶರಣು ಬಾರದಿರೆ ನಿನಗೆ |

ಭರಣಿಯಲಿ ಕಲ್ಲುಗಳು ಮಾಡಿದರೆ ಸಪ್ಪಳವ

ಅರಿಯಲಾಗದು ಅರ್ಥ ಪರಮಾತ್ಮನೆ ||೨೧೬||


ಚಕ್ರಗಳ ಹೊಂದಿರುವ ವಾಹನವು ಈ ದೇಹ

ವಕ್ರಪಥದಲಿ ಚಲಿಸಿ ದಾರಿ ತಪ್ಪಿಹುದು |

ಸಕ್ರಿಯದಿ ಆಧ್ಯಾತ್ಮ ದಿಕ್ಸೂಚಿ ನೋಡಿ ನಡೆ

ಚಕ್ರಿ ತಾ ಮೆಚ್ಚುವನು ~ ಪರಮಾತ್ಮನೆ ||೨೧೭||


ಮೌನ ಮಾತಾಡಿದರೆ ಹಲವಾರು ಅರ್ಥಗಳು

ಜೇನಿನಾ ಮಧುರತೆಯು, ಕೋಪದಾ ತಾಪ |

ಬೋನದಾ ತೃಪ್ತಿ, ಕ್ಷಮೆಯ ತಂಪು ನಲ್ನುಡಿಯು

ಮೌನಕ್ಕೆ ಭಾಷೆಯಿದೆ ~ ಪರಮಾತ್ಮನೆ ||೨೧೮||


ಕಂಡಂಥ ಕನಸುಗಳ ಧರೆಗಿಳಿಸಬಹುದಲ್ಲ

ಗಂಡೆದಯ ಕಲಿಗಳೊಲು ಬೆನ್ನು ಹತ್ತಿದರೆ |

ದಂಡವಾಗದೆ ಇರಲಿ ಕನಸುಗಳ ಬೇಟೆಗಳು

ಉಂಡು ಮಲಗುವುದೇಕೆ ~ ಪರಮಾತ್ಮನೆ ||೨೧೯||


ಬರಿದಾಗದಿರಲಿ ಸಿರಿ ಕರೆದು ದಾನವನೀಯೆ

ಕರಗಳೆಂಟಾಗೆ ಸರಿ ಸೇವೆ ಮಾಡುವಗೆ |

ಮರಿಮಕ್ಕಳಿರಬೇಕು ಪರಹಿತವ ಕೋರುವಗೆ

ಹರಸೆನ್ನ ಕೋರಿಕೆಯ ಪರಮಾತ್ಮನೆ ||೨೨೦||

ಮುಕ್ತಕಗಳು - ೪೩

ನಿನ್ನ ನೀ ತಿದ್ದುತಿರು ಅನುದಿನವು ಬೆಳೆಯುತಿರು

ಮನ್ನಿಸುತ ತಪ್ಪುಗಳ ಒಪ್ಪುಗಳ ಹುಡುಕು |

ಉನ್ನತಿಯು ದೊರಕುವುದು ಬಹುಬೇಗ ಸುಳ್ಳಲ್ಲ

ಜೊನ್ನವೇ ಜೀವನವು ~ ಪರಮಾತ್ಮನೆ ||೨೧೧||


ವನಸುಮವು ಏನ ಸಾಧಿಸಿತು ಕಿರು ಬದುಕಿನಲಿ?

ಜನಕಿತ್ತಿತೇ ಗಂಧ ಮುಡಿಯೇರಿತೇನು? |

ಬನದ ಸನ್ಯಾಸಿ ತಾ ಏನು ನೀಡಿದ ಜಗಕೆ?

ಜನನಿಗೂ ಸುಖವಿಲ್ಲ ~ ಪರಮಾತ್ಮನೆ ||೨೧೨||


ಬೆಲೆಯುಂಟು ಮರಗಳಿಗೆ ಧರೆಗೆ ಬಿದ್ದರು ಕೂಡ

ಫಲನೆರಳುಗಳ ನೀಡುವವು ಜೀವವಿರಲು |

ಕಲಿಯಬೇಕಿದೆ ಪಾಠ ಮರದಂತಹವರಿಂದ

ಬೆಲೆಬಾಳುವುದು ಬಾಳು ~ ಪರಮಾತ್ಮನೆ ||೨೧೩||


ಕನ್ನಡಿಯು ದೋಷಿಯೇ ಬಿಂಬ ಅಂದವಿರದಿರೆ

ಭಿನ್ನರೂಪವ ತೋರದದು ನಿನ್ನ ಹೊರತು |

ನಿನ್ನಜನ ದೂರಿದರೆ ನಿನ್ನ ನಡೆ ಕಂಡವರು

ಸನ್ನಡತೆ ಬೆಳೆಸಿಕೋ ~ ಪರಮಾತ್ಮನೆ ||೨೧೪||


ಕರುಗಳಿಗೆ ಇರಬೇಕು ಹಸುಗಳಾ ಮೊಲೆಯುಣಿಕೆ

ತರುವೊಂದೆ ಆಧಾರ ಬೆಳೆಯುವಾ ಲತೆಗೆ |

ಇರಬೇಕು ನಿನ್ನಾಸರೆಯು ನನಗೆ ಬಾಳಿನಲಿ

ಕರಪಿಡಿದು ನಡೆಸುವೆಯ  ಪರಮಾತ್ಮನೆ? ||೨೧೫||

ಮುಕ್ತಕಗಳು - ೪೨

ಬಯಕೆ ಸಾಮರ್ಥ್ಯದಾ ಪರಿಧಿಯಲ್ಲಿರಬೇಕು

ಬಯಸುವುದೆ ಆಗಸದ ಮಿನುಗುತಾರೆಯನು |

ಚಯನ ಸಾಲದು ಪುಟ್ಟ ಗುಡಿಸಲನು ಕಟ್ಟಲಿಕೆ

ಮಯಸಭೆಗೆ ಆಸೆಯೇ ~ ಪರಮಾತ್ಮನೆ ||೨೦೬||


ಕಾಮಾಲೆ ಕಂಗಳಿಗೆ ಕಾಣುವುದು ಸರಿಯಲ್ಲ

ಹೂಮಾಲೆ ಕಾಣುವುದು ಹಾವಿನೊಲು ಮರುಳೆ |

ಧಾಮನಿಧಿಯೊಬ್ಬನೇ ಕಳಚುವನು ಪೊರೆಯನ್ನು

ಭೂಮಾತೆ ಬಲ್ಲಳಿದ ಪರಮಾತ್ಮನೆ ||೨೦೭||


ನಲುಗಿಹನು ಮನುಜ ರಾಗದ್ವೇಷಗಳ ನಡುವೆ

ಕಲಿಯಬೇಕಿದೆ ಅಂಟಿಕೊಳದ ಚತುರತೆಯ |

ಇಳೆಯೊಳಗೆ ಸಾತ್ವಿಕದ ದಾರಿಯಿದೆ ಇದಕಾಗಿ

ಮಳೆಯೊಳಗೆ ಕೊಡೆಯಂತೆ ಪರಮಾತ್ಮನೆ ||೨೦೮||


ರಾಗವಿಲ್ಲದರವನು ವೈರಾಗ್ಯ ಪಡೆದವನು

ಭಗವಂತ ನೀಡಿದುದ ಅನುಭವಿಸಿ ತೃಪ್ತ |

ಸಿಗದಿದನು ಬೇಕೆಂದು ಆಸೆಪಡದಾ ವ್ಯಕ್ತಿ

ಜಗವ ಗೆದ್ದಿಹ ಯೋಗಿ ಪರಮಾತ್ಮನೆ ||೨೦೯||


ಒಲವಿರಲಿ ಬಾಳಿನಲಿ ನೋವುಗಳ ಮರೆಸಲಿಕೆ

ಜಲವಿರುವ ಬಾವಿಯದು ಸನಿಹವಿರೆ ಚೆಂದ

ಕಲಿಯುವಾ ಶಿಷ್ಯನಿಗೆ ಗುರುವಿರಲಿ ಸನಿಹದಲಿ

ಕಳೆತೆಗೆದು ಬೆಳಸಲಿಕೆ ಪರಮಾತ್ಮನೆ ||೨೧೦||

ಮುಕ್ತಕಗಳು - ೪೧

ಊಳಿಗವ ಮಾಡುವರು ಜೀತದಾಳುಗಳಲ್ಲ

ತಾಳಿಹರು ಕೂಳಿನಾ ಸಂಕಟವ ಹರಿಸೆ |

ಧೂಳಿನೊಲು ಕಾಣದಿರಿ ಪ್ರೀತಿಯನು ತುಂಬುತಿರಿ

ಜೋಳಿಗೆಗೆ ಅನುದಿನವು ~ ಪರಮಾತ್ಮನೆ ||೨೦೧||


ಗುಳಿಗೆಗಳು ನಕಲಿ ಕುಡಿಯುವ ಹಾಲಿನಲಿ ನೀರು

ಮಲಿನವಾಗುತಿವೆ ಜಲ ವಾಯು ಭೂಮಿಗಳು |

ಕಲಬೆರಕೆ ಯುಗದಲ್ಲಿ ಮನಗಳೇ ಕಲುಷಿತವು

ಕಲಿಯುಗದ ಶಾಪವೇ ಪರಮಾತ್ಮನೆ? ||೨೦೨||


ವೈದ್ಯರೇ ಇವರಲ್ಲ ಕಲ್ಲೆದೆಯ ದಾನವರು

ಬಾಧ್ಯತೆಯ ಮರೆತು ರೋಗಿಗಳ ದೋಚಿದರೆ |

ಆದ್ಯತೆಯ ನೀಡುತಲಿ ಸೇವೆಯನು ಮಾಡುವರು

ವೈದ್ಯನಾರಾಯಣರು ಪರಮಾತ್ಮನೆ ||೨೦೩||


ಗೋಮುಖದ ವ್ಯಾಘ್ರಗಳು ಹೊಂಚು ಹಾಕಿವೆಯಲ್ಲ

ಕಾಮನೆಯ ದಾಹಕ್ಕೆ ಆಹುತಿಯ ನೀಡೆ |

ರಾಮನನ್ನೂ ಬಿಡದ ಪಾಪಿಗಳು ಇಂಥವರು

ಪಾಮರರೆ ಯಜ್ಞಪಶು ಪರಮಾತ್ಮನೆ ||೨೦೪||


ಮಾತಿನಲಿ ಮಮತೆಯಿರೆ ನೋಟದಲಿ ಕರುಣೆಯಿರೆ

ಜಾತಿಗಳ ಕೇಳದೆಯೆ ಸೇವೆಯನು ಮಾಡೆ |

ನೇತಿಯೆನ್ನದೆ ಎಲ್ಲರಲಿ ಬೆರೆತಿರಲು, ನಾಕ

ಈತನಿರುವೆಡೆಯಲ್ಲೆ ಪರಮಾತ್ಮನೆ ||೨೦೫||

Monday, August 15, 2022

ಮುಕ್ತಕಗಳು - ೪೦

ಕೊಂಕು ಮಾತುಗಳೆ ವೈರಿಗಳು ಸಂಬಂಧದಲಿ

ಬಿಂಕ ತೊರೆ ಸನಿಹ ಕರೆ ಸವಿನುಡಿಯ ಉಲಿದು |

ಸುಂಕವಿಲ್ಲದೆ ಲಾಭ ತರುವುದೀ ವ್ಯವಹಾರ

ರಂಕನಿಗು ಸಾಧ್ಯವಿದೆ ಪರಮಾತ್ಮನೆ ||೧೯೬||


ಛಂದಸ್ಸು ತೊಡಕಲ್ಲ ಕಾವ್ಯ ರಚಿಸುವ ಕವಿಗೆ

ಚಂದದಲಿ ಲಯ ಯತಿಗಳನು ನೀಡಿ ಹರಸಿ |

ಗೊಂದಲವ ಬಿಡಿಸುವುದು ವಾಚಿಸುವ ಇನಿದನಿಗೆ

ಅಂದದ ಪ್ರಾಸದಲಿ ಪರಮಾತ್ಮನೆ ||೧೯೭||


ಹುಟ್ಟುಸಾವುಗಳ ನಡುವಿನಲಿ ದೊರೆತಿಹ ಪಾತ್ರ

ಗಟ್ಟಿ ಆತ್ಮಕೆ ಸಿಕ್ಕ ಮತ್ತೊಂದು ವೇಷ |

ತಟ್ಟುತಲೆ ತಮಟೆಯನು ಪಾತ್ರವದು ಮುಗಿದಾಗ

ಸುಟ್ಟುಬಿಡುವರು ವೇಷ ಪರಮಾತ್ಮನೆ ||೧೯೮||


ಗಾಳಕ್ಕೆ ಸಿಕ್ಕಿಹುದು ಮೀನೆಂದು ಹಿಗ್ಗದಿರು

ಗಾಳವೇ ಮೋಸಕ್ಕೆ ಮತ್ತೊಂದು ಹೆಸರು |

ಗಾಳ ಹಾಕುವುದು ತಪ್ಪಲ್ಲ ಉದರ ಪೋಷಣೆಗೆ

ಊಳಿಗವು ದೊರಕದಿರೆ ~ ಪರಮಾತ್ಮನೆ ||೧೯೯||


ನಡೆಯುತಿರೆ ಎಡವುವರು ಹತ್ತುತಿರೆ ಜಾರುವರು

ಎಡವುವರೆ, ಜಾರುವರೆ, ಕುಳಿತವರು ಕೆಳಗೆ? |

ಬಡಿವಾರ ಬಿಡಬೇಕು ಕುಳಿತು ಟೀಕಿಸುವುದನು

ಬಡಿಯದಿರು ಡೋಲನ್ನು ~ ಪರಮಾತ್ಮನೆ ||೨೦೦||

ಮುಕ್ತಕಗಳು - ೩೭

ಕರಗುವುದು ಕರಿಮೋಡ ಮೂಡುವುದು ಹೊಸ ಕಿರಣ

ಗುರುವಿನಾ ಕೃಪೆಯಿರಲು ಬದುಕಿನಲಿ ಬೆಳಕು |

ಕರುಗಳಿಗೆ ಗೋವಂತೆ ಗುರುವು ತಾನಿರಬೇಕು

ಅರಿವಿನಾ ಹಾಲುಣಿಸೆ ~ ಪರಮಾತ್ಮನೆ ||೧೮೧||


ಭಕ್ತಿಮಾರ್ಗವು ಸುಲಭ ಸಾಧನವು ಜಗದಲ್ಲಿ

ಮುಕ್ತಿಯನು ಪಡೆಯಲಿಕೆ ನರಜನುಮದಲ್ಲಿ |

ವ್ಯಕ್ತಿ ಮಾಡಿದ ಕರ್ಮ ಸುಟ್ಟು ಬೂದಿಯ ಮಾಡೊ

ಶಕ್ತಿಯಿದೆ ಭಕ್ತಿಯಲಿ ~ ಪರಮಾತ್ಮನೆ ||೧೮೨||


ನಾಕವಿದೆ ನರಕವಿದೆ ಕತ್ತಲೆಯ ಕೂಪವಿದೆ

ಬೇಕು ಎಂದರೆ ಸಿಗುವ ಲೋಕಗಳು ಇಲ್ಲಿ |

ಜೋಕೆಯಲಿ ಆರಿಸಿಕೊಳಲುಬೇಕು ಲೋಕವನು

ಭೀಕರವು ತಪ್ಪಿದರೆ ಪರಮಾತ್ಮನೆ ||೧೮೩||


ಕಾಡುಗಳ ಕಡಿಯುತ್ತ ನಾಡನ್ನು ಕಟ್ಟಿಹೆವು

ನೋಡುನೋಡುತ ಹಸಿರು ಕಾಡುಗಳೆ ಮಾಯ |

ಬೇಡುವುದು ಯಾರಲ್ಲಿ ಬರಡಾಗೆ ಭೂತಾಯಿ

ತೋಡಿಹೆವು ಗೋರಿಗಳ ಪರಮಾತ್ಮನೆ ||೧೮೪||


ಬದುಕೊಂದು ಉತ್ಸವದ ಪಂಕ್ತಿಭೋಜನವಲ್ಲ

ಉದರಕ್ಕೆ ಸಿಗದು ಎಲ್ಲರಿಗು ಭಕ್ಷ್ಯಗಳು |

ಬೆದರಿಸುತ ಪಡೆಯಲಾಗದು ಪರರ ಹಣೆಬರಹ

ಕದಿಯಲಾಗದು ಕರ್ಮ ಪರಮಾತ್ಮನೆ ||೧೮೫||

ಮುಕ್ತಕಗಳು - ೩೯

ಬಿರಿದ ಮಲ್ಲಿಗೆಯ ಕಂಪನು ತಡೆಯಲಾದೀತೆ

ಸುರಿವ ಮಳೆಹನಿಯ ಮರಳಿಸಲು ಆದೀತೆ |

ಜರಿದು ನುಡಿದಿಹ ಮಾತ ಹಿಂಪಡೆಯಲಾದೀತೆ

ಅರಿತು ನುಡಿ ಎಲ್ಲರಲಿ ಪರಮಾತ್ಮನೆ ||೧೯೧||


ಮರದ ಹಣ್ಣುಗಳೆಲ್ಲ ಪರರಿಗೋಸುಗವಾಗಿ

ಝರಿಯ ನೀರೆಲ್ಲ ದಾಹವನು ತೀರಿಸಲು |

ಪರರಿಗೇನನು ನೀಡಿರುವೆ ನಿನ್ನದೆಂಬುವುದ

ಪರಶಿವನು ಕೇಳುತಿಹ ~ ಪರಮಾತ್ಮನೆ ||೧೯೨||


ತೂಗಿರಲು ಪೈರುಗಳು, ಬಂತದೋ ಸಂಕ್ರಾಂತಿ

ಕೂಗಿರಲು ಕೋಗಿಲೆಯು, ಬಂತಲ್ಲ ಚೈತ್ರ |

ಬಾಗಿರಲು ದೈವಕ್ಕೆ, ಕಾಣವುದು ಸರಿದಾರಿ

ಮಾಗುವುದು ಬುದ್ಧಿ ಮನ ಪರಮಾತ್ಮನೆ ||೧೯೩||


ಅಡಿಗಡಿಗೆ ತೋರುವುದು ಪರರ ಲೋಪಗಳೆಮಗೆ

ಕಡೆಗಣಿಸುತಲಿ ನಮ್ಮ ಲೋಪಗಳ ಮನವು |

ಬಿಡದಿರಲು ಈ ಚಾಳಿ ಅತಿ ಶೀಘ್ರದಲ್ಲಿಯೇ

ತೊಡಕಾಗು ವುದುಬಾಳು ~ ಪರಮಾತ್ಮನೆ ||೧೯೪||


ಜೀವತೊರೆದವರ ಅಟ್ಟಕ್ಕೇರಿಸುತ ಹೊಗಳಿ

ಜೀವವಿರುವಾಗ ಮುಖ ಕಿವಿಚುತ್ತ ನಡೆದು |

ಸೋವಿ ಬೂಟಾಟಿಕೆಯ ಮೆರೆದಾಡುತಿಹೆವಲ್ಲ

ಜೀವವಿರೆ ಸವಿಯ ನುಡಿ ~ ಪರಮಾತ್ಮನೆ ||೧೯೫||

ಮುಕ್ತಕ - ೩೮

ಅಡೆತಡೆಯ ಬಳಸುತ್ತ ಹರಿಯುವುದು ಕಿರುಝರಿಯು

ಒಡೆದು ನುಗ್ಗುವುದು ತಡೆಯುವುದನ್ನು ಜಲಧಿ |

ತಡೆವ  ಶಕ್ತಿಯನರಿತು ಹೆಜ್ಜೆಯಿಡು ಬದುಕಿನಲಿ

ನಡೆಯಲ್ಲಿ ಜಾಗ್ರತೆಯು ~ ಪರಮಾತ್ಮನೆ ||೧೮೬||


ಭೂ ರಂಗಮಂಚದಲಿ ದೊರೆತೊಂದು ಪಾತ್ರವಿದು

ಭಾರಿಯಾ ಸ್ವಾಗತಕೆ ಕಥೆಯನ್ನೆ ಮರೆತೆ |

ಓರಿಗೆಯ ಪಾತ್ರಗಳ ನಟನೆಗೆ ಸ್ಪಂದಿಸುತ

ಜೋರಿನಲಿ ನಟಿಸುತಿಹೆ ಪರಮಾತ್ಮನೆ ||೧೮೭||


ಅವಕಾಶ ದೊರೆಯುವುದು ನೀ ಶ್ರಮವ ಹಾಕಿರಲು

ನವನೀತ ತೇಲಿಬಂದಂತೆ ಅಳೆಯೊಳಗೆ |

ಎವೆತೆರೆದು ಕಾಯುತ್ತ ಶಾಖವನು ನೀಡಿದರೆ

ಹವಿಯಾಯ್ತು ನವನೀತ ~ ಪರಮಾತ್ಮನೆ ||೧೮೮||

ಅಳೆ = ಮಜ್ಜಿಗೆ ಹವಿ = ತುಪ್ಪ


ತಿನ್ನಲಿರದಿರೆ ಉದರ ಪೋಷಣೆಯ ಚಿಂತೆಗಳು

ಅನ್ನವಿರೆ ಬಟ್ಟೆಬರೆಗಳ ಚಿಂತೆ, ಮುಂದೆ |

ಹೊನ್ನು, ತಲೆಸೂರು, ಜಂಗಮವಾಣಿ...ಮತ್ತೆಷ್ಟೊ

ಬೆನ್ನುಬಿಡ ಬೇತಾಳ ಪರಮಾತ್ಮನೆ ||೧೮೯||


ಸುಲಭವದು ಎಲ್ಲರಿಗೆ ಭಕ್ತಿಯೋಗದ ಮಾರ್ಗ

ಕೆಲಸವೇ ಪೂಜೆಯೆನೆ ಕರ್ಮದಾ ಮಾರ್ಗ |

ಕಲಿತು ಮಥಿಸುವವರಿಗೆ ಜ್ಞಾನಯೋಗದ ಮಾರ್ಗ

ತಿಳಿಸಿರುವೆ ಗೀತೆಯಲಿ ಪರಮಾತ್ಮನೆ ||೧೯೦||

ಮುಕ್ತಕಗಳು - ೩೬

ಕೂಡುವರು ಕಳೆಯುವರು ಲಾಭಗಳ ನಷ್ಟಗಳ

ನೋಡುವರು ತೂಗಿ ಮುಂಬರುವ ಗಳಿಕೆಗಳ |

ಜೋಡಿಯಾಗುವರು ಲಾಭವೆನಿಸಲು ಸಂಬಂಧ

ಬೇಡ ಬೀಸಿದ ಬಲೆಯು ~ ಪರಮಾತ್ಮನೆ ||೧೭೬||


ವಿನಯ ಕಲಿಸದ ವಿದ್ಯೆ ಸಮಯಕ್ಕೆ ಸಿಗದ ಹಣ

ಮೊನಚಿರದ ಆಯುಧವು ಹೂಬಿಡದ ಬಳ್ಳಿ |

ಗುಣವಿಲ್ಲದಿಹ ರೂಪ ಆದರಿಸದಿಹ ಪುತ್ರ

ತೃಣಕಿಂತ ತೃಣದಂತೆ ~ ಪರಮಾತ್ಮನೆ ||೧೭೭||


ಜುಟ್ಟು ಹಿಡಿದಲುಗಿಸಿದೆ ಕೋರೋನ ಜಗವನ್ನು

ಪಟ್ಟುಬಿಡದೆಲೆ ಮತ್ತೆ ದಂಡೆತ್ತಿ ಬಂದು |

ಕಟ್ಟುನಿಟ್ಟಾದ ಅಭ್ಯಾಸಗಳ ಕಲಿಬೇಕು 

ಮೆಟ್ಟಿ ನಿಲ್ಲಲದನ್ನು ಪರಮಾತ್ಮನೆ ||೧೭೮||


ಕನಸು ಕಾಣುವುದೆಲ್ಲ ನನಸಾಗುವುದು ಕಠಿಣ

ಕನವರಿಕೆ ಬಿಟ್ಟು ಶ್ರಮವ ಹಾಕಬೇಕು |

ಇನಿತು ಸಸಿ ಬೆಳೆಯುತ್ತ ಮರವಾಗಬೇಕಿರಲು

ದಿನನಿತ್ಯ ನೀರುಣಿಸು ~ ಪರಮಾತ್ಮನೆ ||೧೭೯||


ತೀರಿಹೋಗುತಿರೆ ಅನಿಲಗಳು ಬುವಿ ಗರ್ಭದಲಿ

ಸೌರಶಕ್ತಿಯು ಮಾನವರಿಗೆ ವರದಾನ |

ಆ ರಾಜ ರವಿಕಿರಣ ಸೋರಿಹೋಗುತಲಿರಲು

ಹೀರಿ ಹಿಡಿಯುವ ರವಿಯ ~ ಪರಮಾತ್ಮನೆ ||೧೮೦||

Monday, August 8, 2022

ವಿರಹದ ನೋವು

ಹೃದಯ ವೀಣೆಯ ಮೀಟಿ,

ಮಧುರ ರಾಗವ ನುಡಿಸು!

ಮಿಲನದಾಸೆಯ ನಾಟಿ,

ಎದೆಯ ನೋವನು ಮರೆಸು!


ಮರೆತು ಹೋದೆಯ ನೀನು?

ಜೊತೆಗೆ ಕಳೆದಾ ಸಮಯ!

ಸಾಕ್ಷಿ ರವಿ, ಶಶಿ, ಬಾನು,

ಮಿಡಿವ ನನ್ನಾ ಹೃದಯ!


ಚಂದ್ರನಣುಕಿಸಿದ ನನ್ನ,

ತೊಟ್ಟು ತಾರೆಯ ಮಾಲೆ!

ಬಾನು ಕೇಳಿದೆ ನನ್ನ,

ಕೊಡಲೆ ಮೇಘದ ಓಲೆ?


ನೀ ನುಡಿದ ಪಿಸುಮಾತು,

ಕಿವಿಯಲಿ ಗುನುಗುಟ್ಟಿದೆ!

ನಿನ ಕಣ್ಣ ಸವಿಮಾತು,

ಎದೆಯಲೇ ಮನೆ ಕಟ್ಟಿದೆ!

 

ನೀನು ಬರದಿರೆ ಈಗ,

ಮಿಡಿವುದೇ ಈ ಹೃದಯ?

ಬಂತದೋ ಬಹಬೇಗ,

ಕೊನೆಯ ಉಸಿರಿನ ಸಮಯ!

Friday, August 5, 2022

ಕರುಣೆಯ ಕಡಲು

ವಿಠ್ಠಲಾ ನೀನು ಕರುಣೆಯ ಕಡಲು, 

ನಿನ್ನಲೆ ಕಂಡೆ ಮಾತೆಯ ಮಡಿಲು! 

ಪಂಢರಪುರದಾ ಭಾಗ್ಯವು ನೀನು, 

ಬಕುತರ ಪಾಲಿನ ನಿಜ ಕಾಮಧೇನು! 


ಪಾಂಡುರಂಗ ವಿಠ್ಠಲಾ ಜಯ ವಿಠ್ಠಲ, 

ನಿನ್ನಯ ನಾಮವೇ ಸವಿ ವಿಠ್ಠಲಾ! 

ತಪ್ಪದೆ ಭಜಿಸುವೆ ನಿನ್ನಯ ನಾಮ, 

ತೋರಿಸು ಎನಗೆ ನಿನ್ನಯ ಧಾಮ! 


ಬದುಕಲಿ ಬೆಂದು ಹಣ್ಣಾಗಿಹೆನು, 

ಅಶ್ರುಧಾರೆಯ ಕಣ್ಣಾಗಿಹೆನು! 

ನಿನ್ನಯ ಪ್ರೀತಿಯ ಆಸರೆ ನೀಡು, 

ವಿಠಲನೆ ಇಂದೇ ಅಭಯವ ನೀಡು! 


ನಿನ್ನಯ ರೂಪವ ಕಣ್ತುಂಬಿಕೊಳುವೆ, 

ನಿನ್ನಯ ನಾಮವ ಎದೆಯಲಿ ತುಂಬುವೆ, 

ಭವ ಬಂಧನವಾ ಬೇಗನೆ ಬಿಡಿಸು, 

ವಿಠಲನೆ ನನ್ನನು ನಿನ್ನಲೆ ಸೇರಿಸು! 


Thursday, August 4, 2022

ಮುಂಜಾನೆಯಲಿ ಮುಗುದೆ (ಕುಸುಮ ಷಟ್ಪದಿ)

ಹೊನ್ನಕಿರಣವು ಮೂಡಿ

ಚೆನ್ನಿರಲು ಗಗನದಲಿ

ರನ್ನಮಣಿ  ಸಿಂಗರವು  ಹಸಿರೆಲೆಯಲಿ!

ಕನ್ನ ಹಾಕಿದೆ ಮನಕೆ 

ಪನ್ನೀರ ಮಣಿಮಾಲೆ

ಜೊನ್ನು ಸುರಿದಿದೆ ಮನದ ಗೂಡಿನೊಳಗೆ!


ವಸುಮತಿಯ ಮನದಾಸೆ

ಕುಸುಮದೊಲು ಹೊರಬಂದು

ಪಿಸುಮಾತ ನುಡಿಯುತಿದೆ ಪವನನೊಡನೆ!

ಕುಸುಮ ಗಂಧವ ಹೊತ್ತು

ರಸಿಕ ನಾಸಿಕಗಳಿಗೆ

ವಸುಮತಿಯ ಮನದಾಸೆ ತಿಳಿಸುತಿಹನು!


ನಲ್ಲೆಯೂ ಜೊತೆಯಿರಲು

ಸಲ್ಲಾಪ ಸಾಗಿರಲು

ಘಲ್ಲೆನುತಿಹುದು ಹೃದಯ ಗೆಜ್ಜೆ ತೊಟ್ಟು!

ಮೆಲ್ಲಮೆಲ್ಲನೆ ಮನವು

ಹುಲ್ಲೆಯಂತೆಯೆ ಜಿಗಿದು

ಹುಲ್ಲು ಹಾಸಿನ ಮೇಲೆ ಕುಣಿದಾಡಿದೆ!


ತಂಗಾಳಿ ಹಿತವಾಗಿ

ಮುಂಗುರುಳ ಮೀಟುತಿರೆ

ಮಂಗಳೆಯ ಚೆಲುವಿಂದು ಮಿತಿಮೀರಿದೆ!

ಚೆಂಗದಿರ ಹೊಳೆಯುತಿರೆ

ಕಂಗಳನು ಬೆಳಗುತಿರೆ

ಸಂಗಡವೆ ಕದಪುಗಳು ಪ್ರತಿಫಲಿಸಿವೆ!


ಕುಸುಮ ಷಟ್ಪದಿಯ ಛಂದಸ್ಸು:

೫|೫|

೫|೫|

೫|೫|೫|-

೫|೫|

೫|೫|

೫|೫|೫|-

1ನೆಯ ಹಾಗೂ 4ನೆಯ ಸಾಲುಗಳ ಮೊದಲನೆಯ ಅಕ್ಷರ ಮಾತ್ರ ಸ್ವರವಾಗಿರಬಹುದು

ಯಗಣ (U_ _ ) ಮತ್ತು  ಜಗಣ(U_UU) ಗಳನ್ನು ಬಳಸುವಂತಿಲ್ಲ (ಲಗಾದಿ ದೋಷ)


ಮುಕ್ತಕಗಳು - ೩೫

ಜೋರಿನಲಿ ಬೆಳೆದಂಥ ಮರಗಳನು ವಾಹನಕೆ

ದಾರಿ ಮಾಡಲು ಕಡಿದು, ತಾರು ಸುರಿದಾಯ್ತು |

ತಾರಿನಾ ಬಣ್ಣದಲೆ ಧನವು ಸೋರಿಕೆಯಾಗೆ

ತೋರಿಕೆಗೆ ರಸ್ತೆಯದು ~ ಪರಮಾತ್ಮನೆ ||೧೭೧||


ನರಜನ್ಮ ದೊರೆತಿಹುದು ಸತ್ಕರ್ಮ ಮಾಡಲಿಕೆ

ಸುರರಿಗೂ ನರಜನ್ಮ ಕರ್ಮ ಕಾರಣಕೆ |

ದೊರೆತಿಹುದು ಅವಕಾಶ ಆಕಾಶದೆತ್ತರದ

ಮರೆತು ನಿದ್ರಿಸಬೇಡ ~ ಪರಮಾತ್ಮನೆ ||೧೭೨||


ಸಸಿಗಳನು ನೆಡುನೆಡುತ ಮರಗಳನೆ ಬೆಳೆಸಿಬಿಡಿ

ಹಸಿರು ಗಿಡಗಳನು ಉಸಿರಂತೆ ಕಾಪಾಡಿ |

ಉಸಿರಾಗುವವು ನಮ್ಮ ಮುಂದಿನಾ ಪೀಳಿಗೆಗೆ

ಬಸಿರಾಯ್ತು ಸತ್ಕರ್ಮ ಪರಮಾತ್ಮನೆ ||೧೭೩||


ಹಸ್ತದಲಿರುವ ಸಂಪದವು ಕರಗಿ ಹೋದರೂ

ಮಸ್ತಕದ ಸಂಪದವು ಕರಗುವುದೆ ಹೇಳು |

ಪುಸ್ತಕವು, ಗುರುಮುಖವು, ವ್ಯವಹಾರ, ಪರ್ಯಟನೆ, 

ಮಸ್ತಕವ ತುಂಬುವವು ~ ಪರಮಾತ್ಮನೆ ||೧೭೪||


ಮಾಡಿರುವ ಪಾಪಕ್ಕೆ ಶಿಕ್ಷೆ ತಪ್ಪುವುದಿಲ್ಲ

ಬೇಡಿದರೆ ದೇವರನು ಕರುಣೆಯನು ತೋರ |

ಮಾಡಿದರೆ ಉಪಕಾರ ಮೂರರಷ್ಟಾದರೂ

ನೋಡುವನು ಕಣ್ತೆರೆದು ಪರಮಾತ್ಮನೆ ||೧೭೫||

ಮುಕ್ತಕಗಳು - ೩೪

ಹಿತ್ತಾಳೆಗಿವಿಯರಸಗೆ ಚಾರರೂ ಮಂತ್ರಿಗಳು

ತೊತ್ತುಗಳೆ ಆಳುವರು ರಾಜ್ಯವನು ಕೇಳು |

ಬಿತ್ತುವರು ಸಂಶಯವ ಆಲಿಸುವ ಕಿವಿಯಿರಲು

ಸತ್ತಿರದ ಮತಿಯಿರಲಿ ~ ಪರಮಾತ್ಮನೆ ||೧೬೬||


ಹೊತ್ತಲ್ಲದೊತ್ತಿನಲಿ ಉಳಬೇಡ ಉಣಬೇಡ

ಗೊತ್ತುಗುರಿ ಇಲ್ಲದೆಯೆ ಬದುಕುವುದು ಬೇಡ |

ಮತ್ತಿನಲಿ ಮುಳುಗಿಸುವ ವಿಷ ವಿಷಯಗಳು ಬೇಡ

ಚಿತ್ತಚಾಂಚಲ್ಯ ತೊರೆ ~ ಪರಮಾತ್ಮನೆ ||೧೬೭||


ಭೋಗದಲಿ ಆಸಕ್ತಿ, ಕೋಪಗಳು, ಅತಿಯಾಸೆ,

ರಾಗಗಳು, ಗರ್ವ, ಒಡಲಿನನಲವು, ಆರು |

ತೂಗುಗತ್ತಿಗಳು ತಲೆಮೇಲಿರಲು ಬುವಿಯಲ್ಲಿ  

ಸಾಗುವುದು ಸುಲಭವೇ ಪರಮಾತ್ಮನೆ || ೧೬೮||

 

ಇಳೆಯಲ್ಲಿ ಹಗಲಿರುಳು ಕತ್ತಲೆಯ ಸಾಮ್ರಾಜ್ಯ

ಬೆಳಕಿನೆಡೆ ಹೋಗುವಾ ದಾರಿಕಾಣದಿದೆ |

ಒಳಗಿರುವ ಚೈತನ್ಯವನು ಬೇಡು ದಿಕ್ಸೂಚಿ

ತಳಮಳವ ತೊರೆದಿಟ್ಟು ~ ಪರಮಾತ್ಮನೆ ||೧೬೯||


ಜಾಲಿಯಾ ಮರದ ನೆರಳಿನಲಿ ನಿಂತರೆ ಕಷ್ಟ

ಸಾಲದಾ ಸುಳಿಯಲ್ಲಿ ಸಿಲುಕಿದರೆ ನಷ್ಟ |

ಗಾಳದಾ ಮೀನನ್ನು ಹಿಡಿದಿಹುದು ಕಿರುಕೊಕ್ಕಿ

ಜೋಲಿಹೊಡೆದರೆ ಸತ್ತೆ ~ ಪರಮಾತ್ಮನೆ ||೧೭೦||

ಮುಕ್ತಕಗಳು - ೩೩

ಮರಣಗಳ ಸಾಲಾಗಿ ತಂದಿಹುದು ವೈರಾಣು

ಮರೆತಿದ್ದ ಪಾಠಗಳ ಮತ್ತೆ ನೆನಪಿಸುತ |

ಬೆರೆತಿಹವು ಋಣಧನಗಳಾ ಫಲವು, ಜೀವನವು

ಎರಡು ಮುಖಗಳ ನಾಣ್ಯ ~ ಪರಮಾತ್ಮನೆ ||೧೬೧||


ದಯೆಯಿಲ್ಲದಿರೆ ಧರ್ಮವೆಂಬುವರೆ ಬೋಧನೆಯ

ಲಯವಾಗಿಹೋಗುವುದು ಮಾನವತೆ ನಶಿಸಿ |

ಜಯವಿರಲಿ ದಯೆಯ ರಕ್ಷಿಸುವವಗೆ ಅನವರತ

ದಯೆಯಿಡುವ ಸಕಲರಲಿ ~ ಪರಮಾತ್ಮನೆ ||೧೬೨|| 


ಸಾಹಿತ್ಯ ಸಂಗೀತ ಲಲಿತಕಲೆಗಳು ಬೇಕು

ದೇಹಕ್ಕೆ ಮನಗಳಿಗೆ ಮುದ ನೀಡಲೆಂದು |

ದೇಹಿ ಎಂದರೆ ಮನಸುಗಳ ಕುಣಿಸಿ, ಸಾತ್ವಿಕದ

ದಾಹವನು ತಣಿಸುವವು ~ ಪರಮಾತ್ಮನೆ ||೧೬೩||


ಸಂಕಟವು ಬಂದಿರಲು ಸೊಂಟ ಬಗ್ಗಿಸಿ ನಾವು

ವೆಂಕಟರಮಣನ ಮೊರೆ ಹೋಗುವೆವು ಬಂಧು |

ಬಿಂಕದೀಯಾಟ ತೊರೆಯಲು ಸದಾ ನೆನೆ ಪಾದ

ಟಂಕಿಸುತ ಮನದಲ್ಲಿ ~ ಪರಮಾತ್ಮನೆ ||೧೬೪||


ದೇವ ದಾನವರ ಹೋರಾಟ ನಡೆದಿದೆ ಸತ್ಯ

ರಾವಣರು ತಲೆಯೆತ್ತಿ ನಿಲ್ಲುತಿರೆ ನಿತ್ಯ |

ಕಾವಲಿದೆ ಮನಕೆ ರಾವಣರ ಹುಟ್ಟಡಗಿಸಲು

ಕೋವಿಯೇ ಸನ್ಮತಿಯು ಪರಮಾತ್ಮನೆ ||೧೬೫||

ಮುಕ್ತಕಗಳು - ೩೨

ಬೇರು ಇದೆಯೆಂದು ನಂಬಲು ಬೇಕು ವಿಧಿಯಿಲ್ಲ

ದೂರದಾ ಮರದಲ್ಲಿ ತುಂಬಿರಲು ಹಣ್ಣು |

ಕಾರಣವು ಇಲ್ಲದೆಯೆ ಏನು ನಡೆಯುವುದಿಲ್ಲಿ?

ಬೇರಿನೊಲು ಕಾರಣವು ~ ಪರಮಾತ್ಮನೆ ||೧೫೬||


ಚೆಲ್ಲದಿರಿ ಅನ್ನವನು ಬಡವನಿಗದೇ ಚಿನ್ನ

ಒಲ್ಲೆಯೆನಿ ಬಡಿಸುವಗೆ ಎಲೆಯತುಂಬೆಲ್ಲ |

ಒಲ್ಲದಿಹ ಹೊಟ್ಟೆಯಲಿ ತುರುಕುವುದು ಚೆಂದವೇ

ಎಲ್ಲೆಯಿಡು ಎಲೆಯಲ್ಲಿ ~ ಪರಮಾತ್ಮನೆ ||೧೫೭||


ಜಗದಲ್ಲಿ ತುಂಬಿಹುದು ಎಲ್ಲೆಡೆಯು ಚೈತನ್ಯ

ಬೊಗಸೆಯನು ತರೆದಿಡುವ ಪ್ರಾಣದಾಕರಕೆ |

ಜಗದೊಡೆಯ ಸೂಸುತಿಹ ವಿಶ್ವಕಿರಣಗಳ, ನಸು

ಹಗಲಿನಲಿ ಅನುಭವಿಸು ~ ಪರಮಾತ್ಮನೆ ||೧೫೮||


ಚಮಚ ತಟ್ಟೆಗಳೆಲ್ಲ ರುಚಿಯ ಸವಿಯುವವೇನು

ಘಮದ ಹೂವಿನ ಗಂಧ ಹೂದಾನಿಗಿಲ್ಲ |

ಗಮನ ಮನನವಿರದೇ ಅಭ್ಯಾಸ ಮಾಡಿದರೆ

ಚಮಚಗಳೆ ಆಗುವೆವು ಪರಮಾತ್ಮನೆ ||೧೫೯||


ಕಲಿತೆ ಕಾಲೇಜಿನಲಿ ನಾನೆಂದು ಬೀಗದಿರು

ಕಲಿತೆಯಾ ಮಾನವತ್ವದ ಮೂಲ ಪಾಠ? |

ಕಲಿಸುವುದೆ ಸನ್ನಡತೆ ಮೂರಕ್ಕರದ ಪದವಿ?

ಕಲೆತು ಬಾಳುವುದ ಕಲಿ ~ ಪರಮಾತ್ಮನೆ ||೧೬೦|| 

ಮುಕ್ತಕಗಳು - ೩೧

ದುರುಳರನು ದೂರವಿಡು ಮರುಳರಲಿ ಮರುಕವಿಡು

ಕರುಳಬಳ್ಳಿಗಳ ನೀರುಣಿಸಿ ಬೆಳೆಸುತಿರು |

ಪರರಲ್ಲಿ ನೇಹವಿಡು ಜಂತುಗಳ ಕಾಪಾಡು

ಪರಭಾರೆ ಮಾಡದೆಲೆ ~ ಪರಮಾತ್ಮನೆ ||೧೫೧||


ಹಸಿದು ಬಂದವಗೆ ತುತ್ತನ್ನವನು ನೀಡುವುದು

ಕುಸಿದು ಕುಳಿತವಗೆ ಹೆಗಲಿನ ಆಸರೆಯನು |

ತುಸು ನೀರು ಬಾಯಾರಿ ಬಂದವಗೆ ತಪ್ಪದೆಲೆ

ಜಸದಾದ ಸಂಸ್ಕೃತಿಯು ಪರಮಾತ್ಮನೆ ||೧೫೨||


ಜೊತೆಯಲ್ಲಿ ನೆರಳಂತೆ ಕಷ್ಟದಲಿ ಹೆಗಲಂತೆ

ಕಥೆಯಲ್ಲಿ ನಾಯಕಿಯು ಈ ನನ್ನ ಕಾಂತೆ |

ಚತುರಮತಿ ಸಂಸಾರ ಜಂಜಾಟ ಬಿಡಿಸುವಲಿ

ಸತಿಯೀಕೆ ಸರಸತಿಯು ಪರಮಾತ್ಮನೆ ||೧೫೩||


ರಾಜಕೀಯದ ಮುಸುಕಿನಲಿ ಕಳ್ಳಕಾಕರಿಗೆ

ಮೋಜಿನಲಿ ರಾಜನೊಲು ಬದುಕುವಾ ಆಸೆ |

ರಾಜಧರ್ಮವನರಿತವರು ಅಲ್ಲ, ದೇಶವನು

ಬಾಜಿಯಲಿ ಕಳೆಯುವರು ಪರಮಾತ್ಮನೆ ||೧೫೪||


ಮಗುವೆಂಬ ಮಲ್ಲಿಗೆಯ ಮುಗ್ಧನಗು ಘಮಘಮವು

ನಗುವಳಿಯದಿರಲಿ ಮಗು ಬೆಳೆದಂತೆ ನಿತ್ಯ |

ಜಗದ ಕಲ್ಮಶಗಳೇ ಅಳಿಸುವವು ನಗುವನ್ನು

ನಗದಂತೆ ನಗುವ ಪೊರೆ ~ ಪರಮಾತ್ಮನೆ ||೧೫೫||