Thursday, January 28, 2021

ಚಂಚಲ ಮನಸ್ಸು

 ಊಸರವಳ್ಳಿ, ಊಸರವಳ್ಳಿ,

ಬಣ್ಣವ ಬದಲಿಸೊ ಕಳ್ಳಿ, ಮಳ್ಳಿ!

ನಿಮಿಷಕೆ ಒಂದು, ಚಣಕೆ ಒಂದು,

ಬಣ್ಣವು ಈ ಮನಸಿನ ಬಂಧು!


ಪಾತರಗಿತ್ತಿ, ಪಾತರಗಿತ್ತಿ,

ಹೂವಿಂದ ಹೂವಿಗೆ ಹಾರುತ್ತಿ!

ಆಕಡೆ, ಈಕಡೆ ಹಾರು ಬೇಡ,

ಮನಸೇ ನಿಲ್ಲು ನೀ ಒಂದು ಕಡೆ!


ಮನಸೇ ನೀನು ತಂಪಿನ ಗಾಳಿ,

ಆಗುವೆ ಆಗಾಗ ಸುಂಟರಗಾಳಿ!

ತಲ್ಲಣಗೊಳಿಸಿ, ತಪ್ಪನು ಮಾಡಿಸಿ,

ಬಿರುಗಾಳಿ ಎಬ್ಬಿಸುವೆ ಬಾಳಿನಲಿ!


ಬೆಣ್ಣೆಯು ನೀನೇ, ಬಂಡೆಯು ನೀನೇ,

ಕೋಪದ ಬೆಂಕಿಯ ಉಂಡೆಯು ನೀನೇ!

ಕರುಣೆಯು ನೀನೇ, ಧರಣಿಯು ನೀನೇ!

ಸಹಸ್ರ ಮುಖದ ಮಾಯೆಯೂ ನೀನೇ!

Tuesday, January 26, 2021

ಅನ್ನವ ನೀಡುವ ಸೌಭಾಗ್ಯ

 ಎದ್ದು ಬಂದನೋ ಮೂಡಣ ವಿಕ್ರಮ,

ಚಾಲನೆ ಕೊಟ್ಟನು ಬದುಕಿಗೆ ಸಕ್ರಮ!


ಕೋಳಿಯು ಕೂಗಿದೆ ಹಿತ್ತಲಲಿ,

ಗುಬ್ಬಿಯ ಚಿಲಿಪಿಲಿ ಕಿವಿಗಳಲಿ!

ನೇಗಿಲು ಏರಿತು ಹೆಗಲನ್ನು,

ಭೂಮಿಯು ನೀಡಿತು ವರವನ್ನು!


ಹಸಿ ಹಸಿರಿನ ಪೈರು ಕಣ್ಣಿಗೆ ತಂಪು,

ಮೂಗನು ತಲುಪಿದೆ ಮಣ್ಣಿನ ಕಂಪು!

ಜುಳು ಜುಳು ಹರಿದಿದೆ ಕಾಲುವೆ ನೀರು,

ಸಂತಸದಲಿ ಕುಣಿದಾಡಿದೆ ಪೈರು!


ಇಂತಹ ಹಳ್ಳಿಯು ಬೇಡವೆ ಕಂದ?

ಯಾಂತ್ರಿಕ ಪಟ್ಟಣದಲ್ಲೇನಿದೆ ಚೆಂದ?

ಕೂಲಿಯ ಬದುಕಲಿ ಏನಿದೆ ನೆಮ್ಮದಿ?

ಮೇಟಿಯ ಆಟವ ಆಡುನೀ ಚೆಂದದಿ!


ಬೆವರನು ಸುರಿಸು, ಹಸಿರನು ಬೆಳೆಸು,

ಹಸಿವಿನ ಕೂಗನು ನೀ ಅಳಿಸು!

ಅನ್ನವ ನೀಡುವ ಯೋಗದ ಭಾಗ್ಯ,

ಕೈಬಿಡದಿರು ಇಂತಹ ಸೌಭಾಗ್ಯ!


Saturday, January 23, 2021

ಬಾಲ್ಯದ ನೆನಪು (ಶರಷಟ್ಪದಿ)

 ಹಿಂದಿನ ದಿನಗಳ,

ಚೆಂದದ ನೆನಪಿನ,

ಬಂದಿದೆ ಸುಂದರ ಮೆರವಣಿಗೆ!

ಅಂದದ ವಯಸಿನ,

ಸುಂದರ ಸಂತಸ,

ಗಂಧದ ಕಂಪಿನ ನೆನಪುಗಳು!


ಮರಗಳ ಹತ್ತುತ,

ಕೆರೆಯಲಿ ಮೀಯುತ,

ಮರೆತೆವು ಸಮಯವ ದಣಿವಿರದೆ!

ಉರಿಯುವ ಬಿಸಿಲಲಿ

ಕರೆಯಲು  ಮಾತೆಯ

ಕೊರಳಿನ ದನಿಗೇ ಬೆದರಿದೆವು!


೪|೪|

೪|೪|

೪|೪|೪|-

೪|೪|

೪|೪|

೪|೪|೪|-

ವಾಸವಿ ಮಾತೆ

ವಾಸವೀ ಮಾತೆ ಬಾರಮ್ಮ ಹರಸಮ್ಮ ನೀ

ವೈಶ್ಯರಾ ವರವು ನೀನಮ್ಮ ||ಪ||


ಕುಸುಮ ಶ್ರೇಷ್ಠಿಯ ಪುತ್ರಿಯು ನೀನು

ಕುಸುಮಾಂಬಿಕೆಯ ಕಣ್ಮಣಿ ನೀನು |

ಕುಸುಮ ಕೋಮಲೇ ಕುಮಾರಿ ಬಾರೇ

ವಸುಧೆಯ ಕಂದರ ತಪ್ಪದೆ ಕಾಯೇ ||೧||

 

ಪೆನುಗೊಂಡೆಯಲಿ ಜನ್ಮವ ಪಡೆದೆ

ಅನುಜನ ಜೊತೆಜೊತೆಯಾಗಿ ಬೆಳೆದೆ |

ತನುಮನ ಬಾಗಿಸಿ ನೇಮದೆ ಭಜಿಸುವೆ

ಜನುಮವ ಸಾರ್ಥಕವಾಗಿಸೆ ಬೇಗ ||೨||

 

ಆದಿಶಕ್ತಿಯ ಅಂಶವು ನೀನು

ಆದಿಗುರುವಿನ ಶಂಕರಿ ನೀನು |

ಕಾದಿಹೆ ನಾನು ನಿನ್ನಯ ಕರುಣೆಗೆ

ಛೇದಿಸು ಎನ್ನಯ ಕರ್ಮವ ತಾಯೇ ||೩||

 

ಅಂಕೆ ಇಲ್ಲದೆ ಭಾಗ್ಯವ ಕೊಟ್ಟು

ಶಂಕೆ ಇಲ್ಲದ ಮನಸನು ನೀಡು |

ಸಂಕಟ ಹರಿಸು ಸಂತಸ ಹರಿಸು

ಬೆಂಕಿಯಿಲ್ಲದ ಬದುಕನು ಹರಸು ||೪||


ವಿಶ್ವರೂಪವ ತೋರುತ ಬಾರೆ

ಆಶ್ವಮನವನು ಹಿಡಿತಕೆ ತಾರೆ |

ನಶ್ವರ ಬದುಕಿಗೆ ದಾರಿಯ ತೋರುತ

ಈಶ್ವರನೆಡೆಗೆ ಮನವನು ಸೆಳೆಯೇ ||೫||


("ಭಾಗ್ಯದಾ ಲಕ್ಷ್ಮೀ ಬಾರಮ್ಮ" ಕೀರ್ತನೆಯ ಧಾಟಿಯಲ್ಲೇ ಹಾಡಬಹುದಾದ ಹಾಡು)


Thursday, January 21, 2021

ಹೊಸವರ್ಷ 2021

ತರಲಿ ಈ ಹೊಸವರ್ಷ,

ನವಚೇತನದ ಹರ್ಷ!

ಹಳೆಯ ಗಾಯಗಳ ಮರೆಸಿ,

ಹೊಸ ಹುರುಪ ಮೆರೆಸಲಿ!


ಕೈತುಂಬ ಕೆಲಸವಿರಲಿ,

ಕಣ್ತುಂಬ ನಿದ್ದೆಯಿರಲಿ,

ಎಲ್ಲರಲ್ಲೂ ಸ್ನೇಹ ಬೆಳೆದು,

ಮನಕೆ ನೆಮ್ಮದಿ ತರಲಿ!



ಗಡಿಗಳಲ್ಲಿ ಶಾಂತಿಯಿರಲಿ,

ಗುಡಿಗಳಲ್ಲಿ ಪೂಜೆಯಿರಲಿ,

ಮಾವು, ತೆಂಗು, ಬಾಳೆಗಳು,

ತೂಗಿ ತೊನೆಯಲಿ!


ಮುಖದ ಗವುಸು ದೂರವಾಗಿ,

ಹಣೆಯ ಸುಕ್ಕು ಮಾಯವಾಗಿ,

ಸ್ವಚ್ಛಂದದ ಕಿರುನಗೆಯು,

ಹೆಮ್ಮೆಯ ಒಡವೆಯಾಗಲಿ!

Wednesday, January 20, 2021

ಮುದ್ದು ಕಂದ

 ಪುಟ್ಟ ಪುಟ್ಟ ಹೆಜ್ಜೆ ಇಡುತಾ,

ಬಟ್ಟಲ ಕಂಗಳ ಅರಳಿಸಿ ಬರುವೆ,

ನಗುವ ಹೂಗಳ ಪರಿಮಳ ಚೆಲ್ಲುತ,

ಎದೆಯಲಿ ಸಂತಸ ಅರಳಿಸಿ ನಗುವೆ!


ಮಗುವೆ, ಮಗುವೆ, ನೀನೇ ಒಡವೆ,

ಇಲ್ಲ ನಿನಗೆ ಯಾವುದೇ ಗೊಡವೆ,

ಸುಂದರ ಮೊಗವು, ನಿಷ್ಕಲ್ಮಶ ಮನವು,

ಸಂತಸದಲೆಯಲಿ ತೇಲಿದೆ ಗೃಹವು!


ಅಪ್ಪ, ಅಮ್ಮನ, ಮುದ್ದಿನ ಕೂಸೆ,

ಸಂತಸ ಲಹರಿಯ ಚಿನ್ನದ ಮೂಸೆ,

ನಿನ್ನನು ಎತ್ತಿ ಆಡುವ ಆಸೆ,

ಕೊಡುವೆನು ನಿನಗೆ ಒಂದು ಭಾಷೆ!


ಉತ್ತಮ ನೀರು, ಉತ್ತಮ ಗಾಳಿ,

ನಿಮಗೆ ನೀಡುವುದೆಮ್ಮೆಯ ಪಾಳಿ,

ಭಾಷೆಯ ಕೊಡುವೆವು ನಿಮಗಿಂದು,

ಶುದ್ಧ ಪರಿಸರ ರಕ್ಷಣೆ ನಮದೆಂದು!


ಧನ್ಯವಾದಗಳು ನಿನಗೆ ಓ 2020!

 ಅತಿಯಾಸೆಯ ನಾಗಾಲೋಟಕೆ,

ಹಾಕಿದೆ ಲಗಾಮು ಕುರುಡು ಓಟಕೆ.

ದುಡ್ಡೇ ದೊಡ್ಡಪ್ಪನಲ್ಲ ಎನ್ನುವ,

ಪಾಠ ಕಲಿಸಿದ ಗುರು ನೀ 2020!


ವಿಮುಖ ಸಂಬಂಧಗಳ ಬಳಿಸೆಳೆದೆ,

ತಿರುಗಿಸಿ ಮುಖಾಮುಖಿಯಾಗಿಸಿದೆ.

ಮನೆಯೇ ಮಂತ್ರಾಲಯ ಎನ್ನುವ,

ಪಾಠ ಕಲಿಸಿದ ಗುರು ನೀ 2020!


ದೀನರ ಆರ್ತನಾದಕೆ ಮನಕರಗಿಸಿದೆ,

ಎದೆಯ ಕರುಣೆಯ ಹೊರಚಿಮ್ಮಿಸಿದೆ.

ಜನಸೇವೆಯೇ ಜನಾರ್ದನನ ಸೇವೆ ಎನ್ನುವ,

ಪಾಠ ಕಲಿಸಿದ ಗುರು ನೀ 2020!


ವೈದ್ಯರು, ದಾದಿಯರು, ಪೌರಕಾರ್ಮಿಕರು,

ತನುಮನಗಳ ತೇಯುವಂತೆ ಮಾಡಿದೆ.

ವೈದ್ಯೋನಾರಾಯಣೋ ಹರಿಃ ಎನ್ನುವ,

ಪಾಠ ಕಲಿಸಿದ ಗುರು ನೀ 2020!


ತಂದೆ ನೀ ಸೌಟು ಹಿಡಿಯದ ಕೈಗಳಿಗೆ,

ನಳಪಾಕವಿಳಿಸುವ ಸವಿಘಳಿಗೆ!

ಹಿತ್ತ ಗಿಡದಲ್ಲೂ ಮದ್ದಿದೆ ಎನ್ನುವ,

ಪಾಠ ಕಲಿಸಿದ ಗುರು ನೀ 2020!


ತಂತ್ರಜ್ಞಾನವ ಹಿರಿಯರ ಕೈಯಲಿತ್ತೆ,

ಸುಖದುಃಖಗಳ ವಿನಿಮಯಕ್ಕೆ ದಾರಿಯಿತ್ತೆ.

ಅಗತ್ಯವೇ ಆವಿಷ್ಕಾರದ ತಾಯಿ ಎನ್ನುವ,

ಪಾಠ ಕಲಿಸಿದ ಗುರು ನೀ 2020!


ಸಂಕಷ್ಟವ ಎದುರಿಸುವ ಶಕ್ತಿ ಹೊರತಂದೆ,

ಕಾಯಕ ಬದಲಿಸುವ ಹೊಸ ಹೆಜ್ಜೆ ಇಡಿಸಿದೆ.

ಈಜು ಕಲಿಯಲು ನೀರಿಗೆ ಬೀಳಲೇಬೇಕೆಂಬ,

ಪಾಠ ಕಲಿಸಿದ ಗುರು ನೀ 2020!


ಧನ್ಯವಾದಗಳು ನಿನಗೆ ಓ 2020!

ಕತ್ತಲಿನಿಂದ ಬೆಳಕಿನೆಡೆಗೆ

 ನಡೆ, ಕತ್ತಲಿನಿಂದ ಬೆಳಕಿನೆಡೆಗೆ,

ಭ್ರಮೆಯಿಂದ ವಾಸ್ತವದೆಡೆಗೆ!


ಆಗುತ್ತಿರುವೆವು ನಾವು ಕುರಿಗಳು,

ಹುಲಿಗಳು ಈ ರಾಜಕಾರಣಿಗಳು!

ಎಚ್ಚೆತ್ತುಕೊಳ್ಳಬೇಕಿದೆ ಗೆಳೆಯರೆ ನಾವು,

ಹುಲಿಕುರಿಯಾಟದಲ್ಲಿ ಬಲಿಯಾಗುವ ಮುನ್ನ!


ಕತ್ತಲಿದೆ, ಕತ್ತಲಿದೆ ಮನದಲ್ಲಿ!

ಮನದ ಸೂರ್ಯನ ಮರೆಮಾಡಿವೆ,

ಅಜ್ಞಾನದ ಕರಿ ಮೋಡಗಳು.

ಗುರು ಬೇಕು ಮೋಡ ಚದುರಿಸಲು!


ಜ್ಞಾನಭಂಡಾರದ ದೀಪವಿತ್ತಿಹರು ಹಿರಿಯರು,

ಆ ದೀಪದ ಗುಂಡಿಯೊತ್ತಬೇಕಿದೆ ಅರಿತು,

ತಮಾಂಧಕಾರವ ಚದುರಿಸಲು,

ಸತ್ವದ ಬೆಳಕಲ್ಲಿ ಸಂಚರಿಸಲು!

ವಿಶ್ವಪ್ರೇಮದ ಹರಿಕಾರ

ಪರಮಹಂಸನ ಪರಮಶಿಷ್ಯ, ಹರಿಕಾರ ನೀ ವಿವೇಕಾನಂದ, 

ಭವ್ಯ ಭಾರತ ಭೂಮಿಯಲ್ಲಿ, ಪಡೆದೆ ನೀ ದಿವ್ಯ ಜನುಮ,

ತಂದೆ ಗುರುವಿಗೆ ಕೀರುತಿ, ತಂದೆ ವಿವೇಕಕೆ ಆನಂದ,

ಸಾಗರದಾಚೆಯ ನಾಡಿನಲ್ಲಿ, ಎತ್ತಿಹಿಡಿದೆ ತಾಯ ನಾಮ!


ಅದ್ವೈತ ತತ್ವ, ಸ್ವದೇಶಿ ಮಂತ್ರ, ಎತ್ತಿಹಿಡಿದ ಪುಣ್ಯಪಾದ,

ಯಾವ ಪುಣ್ಯದ ಫಲವೋ, ನೀನಾದೆ ಮಹಾಮಹಿಮ,

"ನಮ್ಮ ನಾಡು, ನಮ್ಮ ಹೆಮ್ಮೆ", ಎತ್ತಿಹಿಡಿದೆ ನಿನ್ನ ವಾದ,

ಸೋದರ ತತ್ವವ ಸಾರಿ ಜನರಿಗೆ, ತುಂಬಿದೆ ನೀ ವಿಶ್ವಪ್ರೇಮ!


ನಮ್ಮ ನಾಡ ಪುಣ್ಯ, ದೈವ ತಂದ ವರದ ಪೆಂಪು,

ಯುವಕರ ಬದುಕಿಗೆ ಬೆಳಕನಿತ್ತ ಕಾಮಧೇನು!

ನಿನ್ನ ಮಹಿಮೆಗೆ ಮಾರಿಹೋದರಲ್ಲ ಕುವೆಂಪು,

ಹರಡಿದರು ಕನ್ನಡದಲ್ಲೂ ನಿನ್ನ ಮಹಿಮೆಯ ಜೇನು!


ಇಂದು ನಿನ್ನ ಜನ್ಮದಿನವು, ನೆನಸಿಕೊಳ್ಳುವ ಶ್ರೇಷ್ಠ ದಿನವು,

ಚೈತನ್ಯ ತರಲಿ ಬದಕಿಗೆ, ನಮ್ಮ ಪಾಲಿನ ಮಹಾ ವರವು!

(ಸಾನೆಟ್‌/ಸುನೀತ)

ಅನ್ನದ ಋಣ

 ಹಸಿದಾಗ ಸಿಗುವ ಆ ಒಂದು ತುತ್ತು,

ಬೆಲೆಯು ಕೇವಲ ಹಸಿದವಗೇ ಗೊತ್ತು!


ದೇಹವ, ಪ್ರಾಣವ, ಜೊತೆಹಿಡಿವ ಗುಟ್ಟು,

ಯಾರಿಗೂ ತಿಳಿಯದು ಅನ್ನಕೆ ಬಿಟ್ಟು!

ಹಸಿದಾಗ ಸಿಗುವ ಒಂದು ಹಿಡಿ ಅನ್ನ,

ಅನ್ನಪೂರ್ಣೇಶ್ವರಿ ಕೊಟ್ಟ ವರದಾನ!


ಪಡೆದವಗೆ ಸಂತೃಪ್ತಿ ನೀಡುವ ದಾನ,

ಅದೊಂದೇ ಅಲ್ಲವೇ ಅನ್ನದಾನ!

ಹೊಟ್ಟೆ ತುಂಬಿದಾಗ ಮೃಷ್ಟಾನ್ನ,

ಬೇಡದ ಮುಷ್ಟಿ ಬೂದಿಗೆ ಸಮಾನ!


ಬೆಲೆಕಟ್ಟಲಾಗದು ಅನ್ನದ ಋಣಕೆ,

ಚಿನ್ನದ ಋಣವೂ ನಿಲ್ಲದು ಸಮಕೆ!

ಮರೆಯಬಾರದೆಂದೂ ಅನ್ನದ ಋಣವ,

ಅದು ಸೇರಿದೆ ದೇಹದ ಕಣಕಣವ!


ಏನೇ ಇತ್ತರೂ ತೀರದೀ ಋಣ,

ತಿನ್ನಲಾಗದೆಂದೂ ಕುಡಿಕೆ ಹಣ!

ಹಸಿದ ಹೊಟ್ಟೆಗೆ ನೀಡಿ ಹಿಡಿ ಅನ್ನ,

ತೀರಿಸು ದೇವರುಣಿಸಿದ ಋಣವನ್ನ!

Tuesday, January 5, 2021

ದಿಟ್ಟೆ


 







ಪುಟ್ಟ ಬಾಲೆಯಾದರೇನು ಈಕೆ, 

ಇವಳ ಆತ್ಮಸ್ಥೈರ್ಯ ಪುಟ್ಟದೇ?


ನಡಿಗೆ ನೋಡಿ, ಗಡಿಗೆ ನೋಡಿ,

ದಿಟ್ಟ ನಡಿಗೆ, ದಿಟ್ಟಿ ನೋಡಿ. 

ಗಡಿಗೆಯಲ್ಲಿ ನೀರಿನಂತೆ, 

ನಡಿಗೆಯಲ್ಲಿ ಸ್ವಾಭಿಮಾನ ತುಂಬಿದೆ! 


ಅಮ್ಮನಿಗೆ ಹೆಗಲು ಕೊಟ್ಟು, 

ಮನೆಗೆಲಸದ ಹೊರೆಯ ಹೊತ್ತು, 

ಗೆಳಯರೊಡನೆ ಆಡೋ ಹೊತ್ತು, 

ಭಲೇ! ನೀರ ಹೊತ್ತ ಬಾಲೆ!


ಸೀರೆ ಉಡದಿದ್ದರೇನು ಈಕೆ, 

ನೀರೆಗೇನು ಕಡಿಮೆಯೇ?

ಓದು ಬರೆಹ ಇಲ್ಲದಿರೆ ಮಾತ್ರ, 

ಹಣೆಯಬರಹ ದುಡಿಮೆಯೇ! 

Saturday, January 2, 2021

ಸಂ ಕ್ರಾಂತಿ

 ಸಂಕ್ರಾಂತಿ ಬರಲಿ, 

ಸಂ ಕ್ರಾಂತಿ ತರಲಿ. 


ನಮ್ಮತನ ಉಳಿಸೋ ಕ್ರಾಂತಿ, 

ಒಮ್ಮತವ ಬೆಳೆಸೋ ಕ್ರಾಂತಿ,

ಹಸಿರ ಕೊಯ್ಲಿನ ಕ್ರಾಂತಿ,

ಹಸಿವ ನೀಗುವ ಕ್ರಾಂತಿ.


ಶುದ್ಧ ಗಾಳಿಯ ಕ್ರಾಂತಿ,

ಶುದ್ಧ ನೀರಿನ ಕ್ರಾಂತಿ,

ಸ್ವಚ್ಛ ಪರಿಸರದ ಕ್ರಾಂತಿ,

ಶುಭ್ರ ಮನಸಿನ ಕ್ರಾಂತಿ.


ಎಳ್ಳು ಬೆಲ್ಲದ ರೀತಿ,

ಸವಿಯ ಸ್ನೇಹದ ಕ್ರಾಂತಿ.

ಕಬ್ಬು ಹಾಲಿನ ರೀತಿ,

ಪ್ರೀತಿ ಹಂಚುವ ಕ್ರಾಂತಿ.



ಕಸವೇ ಇಲ್ಲದ ರೀತಿ,

ಸ್ವಚ್ಛ ಜಗಲಿಯ ಕ್ರಾಂತಿ.

ಕಳಚುವ ಕಹಿಯ ಭ್ರಾಂತಿ,

ಎಲ್ಲರಿಗೂ ಸ್ನೇಹ ಸಂಕ್ರಾಂತಿ!