Friday, July 29, 2022

ಮುಕ್ತಕಗಳು - ೩೦

ಬಂಧುಗಳು ಇವರೇನು? ಮತ್ಸರದ ಮೂಟೆಗಳು

ಕಂದಕಕೆ ಬಿದ್ದವಗೆ ಕಲ್ಲು ಹೊಡೆಯುವರು |

ಚಂದದಲಿ ಸಂಬಂಧ ತೂಗಿಸಲು ಒಲ್ಲದಿರೆ

ಬಂಧುತ್ವವೆಲ್ಲಿಹುದು ಪರಮಾತ್ಮನೆ ||೧೪೬||


ಕಲ್ಲಿನೊಲು ಎದೆಯಿರಲು ದೂರ ಸರಿಯುವರೆಲ್ಲ

ಮುಳ್ಳಿನೊಲು ಮನವಿರಲು ಮಾತನಾಡಿಸರು

ಜೊಳ್ಳುಮಾತಿಗೆ ಬೆಲೆಯ ನೀಡುವವರಾರು? ಹೂ

ಬಳ್ಳಿಯಂತಿರಬೇಕು ಪರಮಾತ್ಮನೆ ||೧೪೭||


ಅನುಭವದೆ ಮಾಗಿರಲು ಅರಿವಿನಿಂ ತುಂಬಿರಲು

ಹಣತೆಗಳ ಹಚ್ಚುವಾ ಮನದಾಸೆಯಿರಲು |

ಘನಪಾದವನು ಬಿಡದೆ ಹಿಡಿ ಪಾಠಕಲಿಯಲೀ

ತನಗಿಂತ ಗುರುವೆಲ್ಲಿ ಪರಮಾತ್ಮನೆ ||೧೪೮||


ಗಾನಕ್ಕಿಹುದು ಮೈಮರೆಸುವ ಸನ್ಮೋಹಕತೆ

ಜೇನಿನೊಲು ಸವಿಯಿಹುದು ಚುಂಬಕದ ಸೆಳೆತ |

ಗಾನ ಪಲ್ಲವಿ ರಾಗ ತಾಳಗಳು ಔಷಧವು

ಮಾನಸಿಕ ಶಮನಿಕವು ಪರಮಾತ್ಮನೆ ||೧೪೯||


ವಿಪರೀತ ಮನಗಳೊಡೆ ಗೆಳೆತನವು ತರವಲ್ಲ

ಅಪವಿತ್ರ ಸಂಬಂಧ ಸಂದೇಹ ನಿತ್ಯ |

ಅಪನಂಬಿಕೆಯ ಬಿತ್ತಿ ದಮನಕರು ಕರಟಕರು

ಕಪಟವನೆ ಎಸಗುವರು ಪರಮಾತ್ಮನೆ ||೧೫೦||

ಮುಕ್ತಕಗಳು - ೨೯

ಧರೆಯಲ್ಲಿ ಬಾಳುವುದ ಕಲಿಯುವಾ ಮುನ್ನವೇ

ಪುರವನ್ನು ಕಟ್ಟುವುದೆ ಚಂದಿರನ ಮೇಲೆ |

ಹೊರಗೆಲ್ಲೊ ಕಾಲಿಟ್ಟು ಎಡವುವಾ ಮುನ್ನವೇ

ಧರಣಿಯಲಿ ಬದುಕೆ ಕಲಿ ಪರಮಾತ್ಮನೆ ||೧೪೧||


ದುಃಖವನು ನುಂಗುವಳು ಅನುದಿನವು ಅಮ್ಮ ತಾನ್

ದುಃಖದನಲವು ದಹಿಸುತಿಹುದು ಒಡಲಿನಲಿ |

ಯಃಕಶ್ಚಿತ್‌ ನೋವು ಕಾಣದು ನಗುಮೊಗದಲಿ, ಅಂ

ತಃಕರಣವೆನೆ ಅಮ್ಮ ಪರಮಾತ್ಮನೆ ||೧೪೨||


ವಿಜ್ಞಾನ ನೀಡುತಿದೆ ಭೌತಿಕದ ಜ್ಞಾನವನು

ವಿಜ್ಞಾನಿಯತಿಯಾಸೆ ವಿಧ್ವಂಸಕಾರಿ |

ಅಜ್ಞಾನ ಕಳೆಯುತಿದೆ ಆಧ್ಯಾತ್ಮ ಜ್ಞಾನವನು 

ಸುಜ್ಞಾನ ಬೇಕಿಂದು ಪರಮಾತ್ಮನೆ ||೧೪೩||


ನಿನ್ನ ನೀ ತಿಳಿವದಿದೆ ಮುನ್ನಡೆಯ ಸಾಧಿಸಲು

ಕನ್ನಡಿಯು ತೋರುವುದು ನಿನ್ನನೇ ನಿನಗೆ |

ಮಣ್ಣಿನಾ ದೇಹವನು ನೋಡಿದರೆ ಫಲವಿಲ್ಲ

ಕನ್ನಡಿಯ ಹಿಡಿ ಮನಕೆ ಪರಮಾತ್ಮನೆ ||೧೪೪||


ಇರುವೆಯೆಂದರೆ ಶಿಸ್ತಿರುವ ಸಿಪಾಯಿಯ ತೆರದಿ

ಕೊರತೆಯೇನಿಲ್ಲ ಮುಂದಾಲೋಚನೆಗೂ |

ಮರೆಯದೆಂದೂ ತನ್ನವರ ಕೂಡಿಬಾಳುವುದ

ಇರುವೆಯಿಂ ಕಲಿವುದಿದೆ ಪರಮಾತ್ಮನೆ ||೧೪೫||

ಮುಕ್ತಕಗಳು - ೨೮

ಗುರುವಾದ ಶಕುನಿ ತಾ ಗಾಂಧಾರಿ ಪುತ್ರನಿಗೆ

ಹರಿಯೆ ಗುರುವೆಂದ ಬಕುತಿಯಲಿ ಅರ್ಜುನನು |

ಗುರುತರವು ಗುರುಪಾದವನರಸುವ ಕಾರ್ಯವದು

ಸರಿಗುರುವು ಕೈವಲ್ಯ ಪರಮಾತ್ಮನೆ ||೧೩೬||


ಅನ್ನವನು ಉಣ್ಣುತಿರೆ ಅನ್ನದಾತನ ನೆನೆಸು

ನಿನ್ನ ಭೂಮಿಗೆ ತಂದ ಜನ್ಮದಾತರನು |

ತನ್ನಾತ್ಮದೊಂದು ಭಾಗವನಿತ್ತವನ ನೆನೆಸು

ಉನ್ನತಿಗೆ ಮಾರ್ಗವದು ಪರಮಾತ್ಮನೆ ||೧೩೭||


ಮೊಳೆತು ಮರವಾಗಲಿಕೆ ತಂತ್ರಾಂಶ ಬೀಜದಲಿ

ಬೆಳೆದು ಮಗುವಾಗೊ ತಂತ್ರ ಭ್ರೂಣದಲ್ಲಿ |

ಕೊಳೆತು ಮಣ್ಣಲಿ ಕಲೆವ ಸೂತ್ರ ನಿರ್ಜೀವದಲಿ

ಅಳೆದು ಇಟ್ಟವರಾರು ಪರಮಾತ್ಮನೆ ||೧೩೮||


ಬೇಡು ದೇವರನು ನಿನಗಾಗಿ ಅಲ್ಲದೆ, ಪರರ

ಕಾಡುತಿಹ ನೋವುಗಳ ಕೊನೆಗಾಣಿಸಲಿಕೆ |

ಓಡಿ ಬರುವನು ದೇವ ನಿಸ್ವಾರ್ಥ ಕೋರಿಕೆಗೆ

ತೀಡುವನು ನಿನ ಕರುಮ ಪರಮಾತ್ಮನೆ ||೧೩೯||


ದೇವರೆಂದರೆ ಕಾವ ದೊರೆ, ಕೋರಿಕೆಗೆ ಪಿತನೆ?

ಜೀವಸಖ, ಅರಿವ ಕೊಡುವಂಥ ಗುರುವೇನು? |

ಜೀವಿಯೊಳಿರುವ ಆತ್ಮ, ಸರ್ವಶ ಕ್ತನೆ, ಯಾರು?

ನಾವು ಭಾವಿಸಿದಂತೆ ಪರಮಾತ್ಮನೆ ||೧೪೦||

Monday, July 11, 2022

ಮುಕ್ತಕಗಳು - ೨೭

ಧನವಧಿಕವಾಗಿರಲು ಕಳೆದುಕೊಳ್ಳುವ ಚಿಂತೆ

ಧನವಿಲ್ಲದಿರೆ ಕೋಟಲೆಗಳ ಕಂತೆಗಳು |

ಮನಕಶಾಂತಿಯೆ ಅಧಿಕ ಧನದಿಂದ ಸಿಹಿಗಿಂತ

ಕೊನೆಯಿಲ್ಲದಿಹ ದುಃಖ ಪರಮಾತ್ಮನೆ ||೧೩೧||


ತ್ರಿಗುಣಗಳ ಸೂತ್ರದಲಿ ಗೊಂಬೆಗಳು ನಾವೆಲ್ಲ

ಬಗೆಬಗೆಯ ನಾಟ್ಯಗಳು ವಿಧಿಯಬೆರಳಾಟ |

ಭಗವಂತ ಬೋಧಿಸಿಹ ಯೋಗಗಳ ನಮಗೆಲ್ಲ

ಸಿಗಿದುಹಾಕಲು ಸೂತ್ರ ಪರಮಾತ್ಮನೆ ||೧೩೨||


ಮಂಗನಿಂದಾದವನು ಮಾನವನು ಎನ್ನುವರು

ಮಂಗಬುದ್ಧಿಯು ಪೂರ್ಣ ಹೋಗಿಲ್ಲವೇನು |

ರಂಗಾಗಿ ಬದುಕೆ ದಾನವನಾದ ಮಾನವನು

ಭಂಗವಾಗಲಿ ಮದವು ಪರಮಾತ್ಮನೆ ||೧೩೩||


ಉಳಿಸಿದುದ ಬಿಟ್ಟುಹೋಗಲುಬೇಕು ಮರಣದಲಿ

ಗಳಿಸುವತಿಯಾಸೆಯೇಕಿದೆ ಅರಿಯಲಾರೆ |

ಉಳಿಸಿದುದ ಕೊಂಡೊಯ್ಯುವಂತಿರೆ ಮೇಲೆ

ಇಳೆಯ ಗತಿ ಊಹಿಸೆನು ಪರಮಾತ್ಮನೆ ||೧೩೪||


ಅವರಿವರ ಕರ್ತವ್ಯವೇನೆಂದು ಕೇಳದಿರು

ರವಿಯು ಕೇಳುವನೆ ನಿನ ಕರ್ತವ್ಯ ಬಂಧು |

ನವಿರಾಗಿ ನುಡಿಯುತ್ತ ಕರ್ತವ್ಯ ಪಾಲಿಸಲು

ರವಿಯಂತೆ ನಡೆಯುತಿರು ಪರಮಾತ್ಮನೆ ||೧೩೫||

ಮುಕ್ತಕಗಳು - ೨೬

ಹದ್ದಿರದ  ಹಯಗಳೊಲು ಪಂಚೇಂದ್ರಿ ಯಗಳಿರಲು

ಬಿದ್ದಿಹುದು ಕಡಿವಾಣ ಮನವೆಂಬ ಹಿಡಿತ |

ಬುದ್ಧಿಯೇ ಕಡಿವಾಣ ಹಿಡಿದೊಡೆಯನಲ್ಲವೇ

ಬುದ್ಧಿಗಿಷ್ಟರಿವ ತಾ ಪರಮಾತ್ಮನೆ  ||೧೨೬||


ಅನುದಿನವು ಸಿಗುತಿಹುದು ಹೊಸದೊಂದು ದಿನವೆಮಗೆ

ಚಣಚಣವು ಕರಗುತಿದೆ ದಕ್ಕಿರುವ ದಿನವು |

ಕನಸಿನಲಿ ಕಳೆಯದೆಲೆ ಅತಿಮುಖ್ಯ ಚಣಗಳನು

ಇನಿತಿನಿತು ಕಲಿಯೋಣ ಪರಮಾತ್ಮನೆ ||೧೨೭||


ಸೇವೆಯನು ಮಾಡುತ್ತ ದಾದಿಯರು ಬೆಂದಿಹರು

ಸಾವುನೋವುಗಳ ದಿನನಿತ್ಯ ನೋಡುತಲಿ |

ಜೀವಕ್ಕೆ ಸೋದರಿಯು ವೈದ್ಯರಿಗೆ ಬಲದಕೈ

ನೋವಿರದಿರಲವರಿಗೆ ಪರಮಾತ್ಮನೆ ||೧೨೮||


ಕರಿನೆರಳ ಮುಷ್ಟಿಯಲಿ ನಮ್ಮ ಭೂಲೋಕವಿರೆ

ಬಿರುಗಾಳಿ ಬೀಸಿ ದೇಹಗಳು ಧರೆಗುರುಳೆ

ಗಿರಿಧರನ ಕರುಣೆಯೇ ರಕ್ಷಣೆಗೆ ಸಾಧನವು

ಮೊರೆಯಿಡುವೆ ಕಾಪಾಡು ಪರಮಾತ್ಮನೆ ||೧೨೯||


ಉಕ್ಕಿ ಬಂದರೆ ಕೋಪ ಹಿತಬಯಸುವವರಲ್ಲಿ

ಸೊಕ್ಕು ತೋರದೆ ಬಾಯಿಮುಚ್ಚೆರಡು ಘಳಿಗೆ |

ಸಿಕ್ಕಿ ಬೀಳದಿರು ನೀ ತಾಮಸದ ಬಲೆಯಲ್ಲಿ

ನಕ್ಕುಬಿಡು ಗೆದ್ದೆ ನೀ ಪರಮಾತ್ಮನೆ ||೧೩೦||

ಮುಕ್ತಕಗಳು - ೯

ಹಸ್ತವನು ಚಾಚುವೆನು ಸ್ನೇಹಕ್ಕೆ ದಾನಕ್ಕೆ

ವಿಸ್ತರಿಸಲರಿವನ್ನು ಪುಸ್ತಕಕೆ ಶರಣು |

ಮಸ್ತಕವು ಬಾಗುವುದು ದೈವಕ್ಕೆ ಹಿರಿಯರಿಗೆ

ಹಸ್ತಾಕ್ಷರವಿದೆನ್ನ ಪರಮಾತ್ಮನೆ ||೪೧||


ಒಬ್ಬನಿಗೆ ಕೊಟ್ಟೆ ಧನವಧಿಕ ಮಿತಬಲವ ಇ

ನ್ನೊಬ್ಬನಿಗೆ ದುಡಿಯಲಿಕೆ ಅಧಿಕ ತೋಳ್ಬಲವ |

ಇಬ್ಬರೂ ಕೊಟ್ಟುಪಡೆಯುತ ಬಾಳೆ ಜಗದಲ್ಲಿ 

ತಬ್ಬಲಿಗಳಾಗುವರೆ?  ಪರಮಾತ್ಮನೆ ||೪೨||


ಅತಿಧನದ ಮೋಹವದು ಮನಬಿಟ್ಟು ಪೋಗುವುದೆ

ಹಿತವಚನ ಬಂಡೆ ಮೇಗಡೆಯ ಮಳೆಯಾಯ್ತು |

ಸತಿಯು ಜೊತೆಬಿಟ್ಟರೂ ಬಿಡದಿಹುದು ಜೊತೆಯನ್ನು

ಚಿತೆಯನಕ ಬರುವುದೋ ಪರಮಾತ್ಮನೆ ||೪೩||


ನಂಬಿಕೆಯನಿಟ್ಟಿರಲು ಮೋಸಹೋಗುವ ಚಿಂತೆ

ನಂಬಿಕೆಯನಿಡದಿರಲು ಬದುಕುವುದೆ ಬವಣೆ |

ನಂಬಿಕೆಯನಿಡಬೇಕು ನಂಬುತ್ತ ನಿನ್ನನ್ನು

ನಂಬಿ ಕೆಟ್ಟವರಿಲ್ಲ ಪರಮಾತ್ಮನೆ ||೪೪||


ಇಳಿಗೆ ಬಂದಿಳಿದಿರಲು ಹಸಿಹಸಿರ ಹೊಸಹೊನಲು

ನಳನಳಿಸುತಿವೆಯಲ್ಲ ಹೊಸಬಯಕೆ ಚಿಗುರು |

ಕಳೆದುಹೋಗಿರುವಾಗ ಹಳೆನೆನಪಿನೆಲೆಗಳೂ

ತಳಿರುಟ್ಟ ಯುಗದಾದಿ ಪರಮಾತ್ಮನೆ ||೪೫||

ಪ್ರೇಮಲೋಕ (ವಾರ್ಧಕ ಷಟ್ಪದಿ)

ಪಡುವಣದ ದಿನಮಣಿಗೆ ದಣಿವಾಗಿ ದಾಹವಿರೆ

ಕಡಲಿನಲಿ ತಣಿವರಸಿ ಮುಳುಗುಹಾಕುತ್ತಿಹನು

ಕಡುಕೆಂಪಿನಾ ದೇಹ ಸಾಗರವ ತಾಕಿದೊಡೆ ತಂಪಾಗಿ ನಿದ್ರಿಸಿದನು |

ಅಡಗಿದ್ದ ಚಂದಿರನು ಮದವೇರಿ ಬಂದಿಹನು

ಮಡದಿಯರ ಜೊತೆಗೂಡಿ ರಸಸಂಜೆ ಮೋದದಲಿ

ಹುಡುಕಾಟ ಹುಡುಗಾಟ ಸರಸಸಲ್ಲಾಪಗಳು ರಾತ್ರಿಯಲಿ ಸಾಗುತಿಹವು ||

 

ಅಂಬರದ ಹೊಸ ಬೆಳಕು ಬುವಿಯಲ್ಲಿ ಚೆಲ್ಲಿರಲು

ತಂಬೆಳಕು ಕರೆಯುತಿದೆ ಸೆಳೆಯುತ ಪ್ರೇಮಿಗಳ

ಸಂಬಾಳಿಸುತ ಮಾರುತನು ತನುವ ಪುಳಕಿಸುತ ನವಲೋಕ ಸೃಷ್ಟಿಸಿಹನು |

ಅಂಬರದ ಸಂಭ್ರಮವು ಬುವಿಯಲ್ಲಿ ಬಿಂಬಿಸಿದೆ

ಹುಂಬ ಚಂದಿರ ತಾರೆಯರೊಲುಮೆ ಹೊಮ್ಮಿಸಿದೆ

ಚುಂಬಕದ ವಾತಾವರಣ ಬೆರೆಸಿ ಮೋಹದಲೆಯ ರಂಗುಗಳಾಟವ ||

ವಾರ್ಧಕ ಷಟ್ಪದಿ

ಯಶವನೇನೆಂಬೆ ಧನ ವಿದ್ಯೆ ಸಿರಿ ಸಂಪತ್ತೆ

ಪಶು ಭೂಮಿಯಧಿಕಾರ ಯೌವ್ವನದ ಬಲಗಳೇ

ದಶಕಂಠ ಹೊಂದಿದ್ದವೆಲ್ಲವೂ ಮಣ್ಣಾಗಿ ಪಶುವಂತೆ ಬಲಿಯಾದನು

ಯಶವ ಕ್ಷಣಿಕದ ಮಿಂಚಂತೆ ಕಂಡರೆಷ್ಟೋ

ನಶಿಸದಾ ಯಶವನ್ನು ಪಡೆದವರು ಕೆಲವರೇ

ವಶವಾಯ್ತು ಯಶವು ಗುಣದಲ್ಲಿ ನಿಂತವಗೆ ಹೆಸರಾಗುವನು ಕೊನೆಯವರೆಗೆ


ಕೋಪವೇ ಬಂದಿರಲಿ ಮನಸುಗಳು ಬೆಂದಿರಲಿ

ತಾಪದಾ ನುಡಿ ಬೇಡ  ಕಾತುರದ ನಡೆ ಬೇಡ

ಜೋಪಡಿಗೆ ಬೆಂಕಿಯನು ಹಚ್ಚಿಕೊಳ್ಳುವರಾರು ಮೊಗದ ಮೇಗಡೆ ಮಸಿಯನು

ಕೋಪವೇ ಸರ್ವನಾಶದ ಬೀಜ ಬಿತ್ತದಿರಿ ಬುವಿಯಲ್ಲಿ

ತಾಪತ್ರಯಗಳು ಬಾಳಿನಲಿ ಸಾಮಾನ್ಯ ವಿಧಿಯಾಟದಲಿ

ಕೋಪತಾಪಗಳಿಗಿದ್ದರಂಕುಶ ಬಾಳುಹಸನಾಗಿರಲು ಜೀವ ತಂಪು

ಮುಕ್ತಕಗಳು - ೨೫

ಡೊಂಕಿರಬಹುದು ನಾಯಿ ಬಾಲದಲಿ ಬಣ್ಣದಲಿ

ಡೊಂಕೆಲ್ಲಿಹುದು ತೋರಿ ಸ್ವಾಮಿನಿಷ್ಠೆಯಲಿ |

ಡೊಂಕು ಹುಡುಕುವ ಮುನ್ನ ಹುಡುಕೋಣ ಸದ್ಗುಣವ

ಕೊಂಕುಗುಣ ತೊರೆಯೋಣ ಪರಮಾತ್ಮನೆ ||೧೨೧||


ಕಲಿಗಾಲವಿದೆಯೆಂದು ಕೈಚೆಲ್ಲಿ ಕೂರದಿರಿ

ಕಲಿಯ ಮನದಿಂದ ಕಿತ್ತೆಸೆಯೋಣ ಎಲ್ಲ |

ಬಲಿಯಲಿಲ್ಲದೆ ಎಡೆಯು ಕಲಿಕಾಲು ಕೀಳುವನು

ಕಲೆತು ಮಾಡುವ ಬನ್ನಿ ಪರಮಾತ್ಮನೆ ||೧೨೨||


ಚಂಚಲವು ನೀರಿನೊಲು ಆಕಾಶದಗಲವದು

ಮಿಂಚಿಗೂ ವೇಗ ಬೆಂಕಿಯೊಲು ತೀ ಕ್ಷ್ಣವದು |

ಪಂಚಭೂತಗಳ ಗುಣ ಪಂಚೇಂದ್ರಿಯಗಳೊಡೆಯ

ಸಂಚು ಮಾಡುವ ಮನಸು ಪರಮಾತ್ಮನೆ ||೧೨೩||


ಅನುಕಂಪ ಕರುಣೆಗಳು ಅವನಿತ್ತ ಕೊಡುಗೆಗಳು

ಜನಕೆ ಹಂಚುವ ಕೊಂಚಕೊಂಚವಾದರೂ |

ಜನಕನಿತ್ತಾಸ್ತಿಯನು ತನುಜನುಜರಿಗೆನೀಡೆ

ನನಗೇನು ನಷ್ಟವಿದೆ ಪರಮಾತ್ಮನೆ ||೧೨೪||


ಮಲಿನವಾಗುವುದು ಮನ ಪಂಚೇಂದ್ರಿಯಗಳಿಂದ

ಕುಳಿತು ಗ್ರಹಿಸುತಿರಲು ಜಗದ ನಾಟಕವ |

ಕೊಳೆ ತೆಗೆಯಬೇಕು ದಿನದಿನ ಧ್ಯಾನಗಳಿಂದ

ತಿಳಿಯಾಗುವುದು ಮನವು ಪರಮಾತ್ಮನೆ ||೧೨೫||

ಮುಕ್ತಕಗಳು - ೨೪

ಚಿಂತೆಯೊಂದಿರೆ ಮನದಿ ನಿಶ್ಚಿಂತ ಮಾನವನು

ಚಿಂತೆಯಿಲ್ಲದಿರವನು ಜಲತೊರೆದ ಮೀನು |

ಸಂತೆಯಾಗುವುದು ಮನ ಚಿಂತೆಯಿಲ್ಲದರಂತು

ಚಿಂತೆ ಚಿಂತನೆ ತರಲಿ ಪರಮಾತ್ಮನೆ ||೧೧೬||


ಅಮ್ಮನೆನ್ನುವ ನುಡಿಯ ಒಮ್ಮೆ ನುಡಿದರೆಸಾಕು

ಒಮ್ಮೆಲೇ ಮೈಯೆಲ್ಲ ಪುಳಕಿತದ ಭಾವ

ಕಮ್ಮಿಯಾಗದು ಹೆತ್ತೊಡಲ ಮಮತೆ ಮುದ್ದಿಸುವ

ಅಮ್ಮ ನಿನಗಿರುವಳೇ ಪರಮಾತ್ಮನೆ ||೧೧೭||


ನಾವು ಸೂತ್ರದ ಗೊಂಬೆಗಳು ಸಂಶಯವೆ ಇಲ್ಲ

ಜೀವವಿಲ್ಲದ ತೊಗಲು ಗೊಂಬೆಗಳು ಅಲ್ಲ |

ದೇವನರುಹಿಹ ವಿಧಿಯ ಸೂತ್ರ ಹರಿಯುವ ವಿದ್ಯೆ

ಜೀವನಕೆ ಸೂತ್ರವಿದು ಪರಮಾತ್ಮನೆ ||೧೧೮||


ನಮ್ಮ ತಪ್ಪೆಲ್ಲವಕೆ ಬೆನ್ನೊಡ್ಡಿ ಕುಳಿತಾಗ

ಸುಮ್ಮನವು ಜಗದಿಂದ ಮರೆಯಾಗುವವೇ |

ನಮ್ಮ ಜಗ ಕುರುಡಲ್ಲ ಎಣಿಸುವುದು ತಪ್ಪುಗಳ

ಸುಮ್ಮನೇಕೀ ನಟನೆ ಪರಮಾತ್ಮನೆ ||೧೧೯||


ಇರುಳು ಕಳೆದಾ ಮೇಲೆ ಹಗಲು ಬರಲೇಬೇಕು

ಸುರಿಯುತಿಹ ಮಳೆಯೊಮ್ಮೆ ನಿಲ್ಲಲೇ ಬೇಕು |

ಧರಣಿಯೊಳು ಇದು ಸತ್ಯ ಕಾಲಮಹಿಮೆಯ ಸೂತ್ರ

ಕೊರಗದೆಲೆ ಕಾಯುವೆನು ಪರಮಾತ್ಮನೆ ||೧೨೦||


ಮುಕ್ತಕಗಳು - ೨೩

ಮನಕೆ ನೆಮ್ಮದಿಯಿಲ್ಲ ಸುಖವನ್ನು ಮರೆತಾಯ್ತು

ಧನಕನಕಗಳ ಕೂಡಿಡುವ ಲೋಭ ಮುಸುಕಿ |

ಹಣವಧಿಕವಿರೆ ಹಂಚಿಕೊಳ್ಳದಿರೆ ದೀನರಲಿ

ಧನವಾಗ್ವುದರ್ಬುದವು ಪರಮಾತ್ಮನೆ ||೧೧೧||


ಕಲಿಯುವರೆ ಬಾಲಕರು ನಾವು ಹೇಳಿದ ಕೇಳಿ

ಬಲುಬೇಗ ಕಲಿಯುವರು ನಮ್ಮ ನಡೆ ನೋಡಿ |

ಕಲಿಯಲೇಬೇಕಿಹುದು ಕಲಿಸುವಾ ಮುನ್ನವೇ

ಕಲಿಯಬೇಕಿದೆ ಬೇಗ ಪರಮಾತ್ಮನೆ ||೧೧೨||


ಕಾವನಿಗೆ ಬೇಕೇಕೆ ಕಾವಲಿನ ಕೋಟೆಗಳು

ದೇವನಿಗೆ ಬೇಕಿಲ್ಲ ರಜತಕನಕಗಳು |

ಹೂವುಹಣ್ಣುಗಳನರ್ಪಿಸೆ ಸಾಕು ಬಕುತಿಯಲಿ

ಗೋವಿಂದನನೊಲಿಸಲು ಪರಮಾತ್ಮನೆ ||೧೧೩||


 ಬೆದರಿಹರು ಪಿಳ್ಳೆಗಳು ಕೋರೋನ ಗುಮ್ಮಕ್ಕೆ

 ಕದದಾಚೆ ಕಾಲಿಡರು ಕಾಡುತಿದೆ ಭೀತಿ |

 ಚದುರಿ ಹೋಗುತಿದೆ ಆತ್ಮಸ್ಥೈರ್ಯ ಚಿಣ್ಣರದು

 ಬದುವ ಕಳೆ ಹೆಚ್ಚುತಿದೆ ಪರಮಾತ್ಮನೆ ||೧೧೪||


ಮಮತೆಯಾ ಹಿತವಿರಲಿ ಗೆಳೆತನದ ಸವಿಯಿರಲಿ

ಸುಮದ ಸೊಬಗಿರಲಿ ಚಂದನದ ಘಮವಿರಲಿ |

ಸಮತೆಯ ಸ್ವಾದ ನಿಸ್ವಾರ್ಥ ತಳಹದಿಯಿರಲಿ

ನಮದೆನುವ ನಡತೆಯಲಿ ಪರಮಾತ್ಮನೆ ||೧೧೫||

ಮುಕ್ತಕಗಳು - ೨೨

ಪಿಡುಗು ಕಾಡಿದೆ ವಿಶ್ವದಾದ್ಯಂತ ಎಲ್ಲರನು

ಕುಡಿಕೆ ಹೊನ್ನು ಗಳಿಸುವ ಪಿಡುಗು ಕೆಲವರನು |

ಎಡೆಬಿಡದೆ ಬದುಕುಗಳ ಹೆಣಮಾಡಿ ಧನಗಳಿಸೆ

ತಡೆಯುವಾ ಗಂಡೆಲ್ಲಿ ಪರಮಾತ್ಮನೆ ||೧೦೬||


ಮೆರವಣಿಗೆ ಸಾಗುತಿದೆ ರಸ್ತೆಯಲಿ ಗಾಡಿಗಳ

ಪರಿವೆಯಿಲ್ಲದೆ ವಿಷಾನಿಲವ ಚೆಲ್ಲುತಲಿ

ಹೊರಟಿರುವುದೆಲ್ಲಿಗೆನೆ ಮರಳಿಬಾರದಕಡೆಗೆ

ನೆರೆಯಲ್ಲೆ ಸುಡುಗಾಡು ಪರಮಾತ್ಮನೆ ||೧೦೭||


ಪ್ರಾರ್ಥನೆಗೆ ಮೀರಿರುವುದೇನಾದರುಂಟೇನು

ಆರ್ತನಾ ಬೇಡಿಕೆಯಲಿದೆ ಪೂರ್ಣಶಕ್ತಿ  |

ಧೂರ್ತರಿಗೆ  ನಿಲುಕದದು ಮನದೆ ಕಲ್ಮಶವಿರೆ

ಪ್ರಾರ್ಥನೆಗೊಲಿಯುವೆ ನೀ ಪರಮಾತ್ಮನೆ ||೧೦೮||


ಹೊರಲು ಹೆಗಲುಗಳಿಲ್ಲ ಸುಡಲು ಕಟ್ಟಿಗೆಯಿಲ್ಲ

ಉರುಳುತಿಹ ದೇಹಗಳ ಹೂಳಲೆಡೆಯಿಲ್ಲ |

ಕಿರುಬಗಳು ಕದಿಯುತಿವೆ ದೇಹದಂಗಾಂಗಗಳ

ಸರಿದಾರಿ ತಪ್ಪಿಹೆವು ಪರಮಾತ್ಮನೆ ||೧೦೯||


ವೈರಾಣುವಾಗಿಹನು ಮನುಜನೇ ಭೂರಮೆಗೆ

ತೀರದಾಸೆಗಳಿಂದ ಘಾಸಿಗೊಳಿಸಿಹನು |

ವೈರಾಣು ಕಳಿಸಿಹಳು ದೋಷಿಗಳ ನಾಶಕ್ಕೆ

ಮಾರಕಾಸ್ತ್ರದ ಧಾಳಿ ಪರಮಾತ್ಮನೆ ||೧೧೦||

ಮುಕ್ತಕಗಳು - ೨೧

ಮಾರಾಟವಾಗುತಿವೆ ಶಾಲುಪೇಟಗಳಿಂದು

ಕೋರಿದವರಿಗೆ ಮಕುಟವಾಗುತಿದೆ ಪೇಟ

ಮಾರಾಟವಾಗುತಿವೆ ವೇದಿಕೆಯ ಮಧ್ಯದಲಿ

ಜೋರಿನಾ ವ್ಯಾಪಾರ ಪರಮಾತ್ಮನೆ ||೧೦೧||


ನಗುನಗುತಲಿರಬೇಕು ನವಸುಮವು ಅರಳುವೊಲು 

ಮಗುವಿನಾ ನಗುವಂತೆ ಪರಿಶುದ್ಧವಾಗಿ |

ಬಿಗಿದ ಮೊಗಗಳ ಸಡಿಲಗೊಳಿಸಿ ನೋವ ಮರೆಸಲು

ನಗುವೆ ನೋವಿಗೆ ಮದ್ದು ಪರಮಾತ್ಮನೆ ||೧೦೨||


ತಪ್ಪು ಮಾಡದವರಾರುಂಟು ಜಗದಲಿ ತಮ್ಮ

ತಪ್ಪನೊಪ್ಪಿಕೊಳುವವರತಿವಿರಳವಿಹರು |

ತಪ್ಪನಿತರರ ಮುಡಿಗೆ ಮುಡಿಸುವರು ಬಲುಬೇಗ

ತಪ್ಪ ನುಡಿದಿರೆ ತಾಳು ಪರಮಾತ್ಮನೆ ||೧೦೩||

ತಾಳು = ಸಹಿಸಿಕೋ


ರೋಗಿಗಳ ನೋವಿನಲಿ ನೋಟು ಕಂಡರು ಕಂತೆ

ಯೋಗವೋ ಅತಿಧನದ ಮೋಹವೋ ಕಾಣೆ |

ಜೋಗುಳವ ಹಾಡುವರೆ ಚಾಟಿ ಹಿಡಿದಂತಾಯ್ತು

ಹೋಗುತಿವೆ ಜೀವಗಳು ಪರಮಾತ್ಮನೆ ||೧೦೪||


ಹಿಂದಿನದ ನೆನೆಯುತಿರೆ ನೋವು ಮರುಕಳಿಸುವುದು

ಮುಂದಿನದ ಯೋಚಿಸಲು ಮೂಡುವುದು ಭಯವು |

ಇಂದು ನಮ್ಮೊಂದಿಗಿರೆ ತಪ್ಪು ಮಾಡದಿರೋಣ

ಎಂದಿಗೂ ಸರಿದಾರಿ ಪರಮಾತ್ಮನೆ ||೧೦೫||

ಕೃಷ್ಣಕವಿ: ಕನ್ನಡ ಕಾವ್ಯಲೋಕದ ಕುಹೂಗಾನ

    ಕೃಷ್ಣಕವಿಯವರ ʻಸ್ವಾತಿ ಮುತ್ತುಗಳುʼ ಕೃತಿಗೆ ಕೆ. ರಾಜಕುಮಾರ್‌ ಅವರ ಮುನ್ನುಡಿ

     ಕೃಷ್ಣಕವಿ: ಕನ್ನಡ ಕಾವ್ಯಲೋಕದ ಕುಹೂಗಾನ

    ಮುಕ್ತಕಗಳೆಂಬ ರಸಪಾಕವನ್ನು ಓದುಗರಿಗೆ ಸವಿಯಲು ನೀಡಿರುವ ಕೃಷ್ಣಕವಿಯವರು ತಮ್ಮ ಅಭಿವ್ಯಕ್ತಿಗಾಗಿ ಕಾವ್ಯವನ್ನೇ ಪ್ರಧಾನ ಮಾಧ್ಯಮವನ್ನಾಗಿ ಆರಿಸಿಕೊಂಡವರು. ಅವರದು ಸುಲಭದ ಹಾದಿಯಲ್ಲ; ದುರ್ಗಮ ಹಾದಿ. ಅವರು ತಮಗೆ ತಾವೇ ಸವಾಲುಗಳನ್ನು ಎಸೆದುಕೊಳ್ಳುವವರೂ ಹಾಗೂ ಸಮರ್ಪಕ ಉತ್ತರ ಕಂಡುಕೊಳ್ಳುವವರೂ ಹೌದು. ಅವರದು ಸಾಹಸದ ನಡೆ. ತೋಚಿದ್ದನ್ನು ಗೀಚಿ ಕಾವ್ಯವೆಂದು ಪ್ರಸ್ತುತಪಡಿಸುವ ಪೈಕಿ ಅವರಲ್ಲ. ಅವರು ಒಂದು ಚುಟುಕು ಬರೆದರೂ ಒಂದು ನೀಳ್ಗವನ ರಚಿಸಿದರೂ ಅಲ್ಲೊಂದು ಉದ್ದೇಶವಿರುತ್ತದೆ; ಸಂದೇಶವಿರುತ್ತದೆ. ಅವರಿಗೆ ಕಾವ್ಯ ನವನವೋನ್ಮೇಷಶಾಲಿ. ಹಾಗಾಗಿ ಅವರು ಯಾವುದೇ ಒಂದಕ್ಕೆ ಜೋತುಬಿದ್ದವರಲ್ಲ, ಅವರದು ನಿರಂತರ ಅನ್ವೇಷಣೆ; ಅದ್ಭುತ ಧೀಶಕ್ತಿ. ಅವರು ಕಾವ್ಯರಚನೆಗೆ ತೊಡಗಿ ಹದಿನೆಂಟು ವರ್ಷಗಳಾಗುತ್ತಿವೆ. ಹದಿನೆಂಟು ಎಂಬ ಈ ನಿರಂತರ ಯಾನದಲ್ಲಿ ಅನೇಕ ಮೈಲುಗಲ್ಲುಗಳನ್ನು ನೆಟ್ಟಿದ್ದಾರೆ. ನಮ್ಮ ನಡುವಿನ ಭರವಸೆಯ ಕವಿ ಎಂಬ ಶ್ಲಾಘನೆಗೆ ಪಾತ್ರರಾಗಿದ್ದಾರೆ.

    ಅವರ ಮೊದಲ ಪ್ರಯತ್ನವೇ ಚಿತ್ರ-ಕವನ ಸಂಕಲನ. ತಾವು ದೇಶ, ವಿದೇಶಗಳಲ್ಲಿ ಕ್ಲಿಕ್ಕಿಸಿದ್ದ ಆಯ್ದ ಚಿತ್ರಗಳಿಗೆ, ಚಿತ್ರಕ್ಕೊಂದರಂತೆ ಕವನ ಹೆಣೆದರು. ಕನ್ನಡದಲ್ಲಿ ಹೀಗೆ ದೃಶ್ಯ ಮತ್ತು ಕಾವ್ಯವನ್ನು ಒಟ್ಟಿಗೆ ಬೆಸೆದು ಹೊರತಂದ ಸಂಕಲನ ಅದೇ ಮೊದಲು. ಅದಕ್ಕೆ ಎಲ್.ಎಸ್. ಶೇಷಗಿರಿ ರಾವ್‌ ಅವರ ಮುನ್ನುಡಿ, ಜರಗನಹಳ್ಳಿ ಶಿವಶಂಕರ್‌ ಅವರ ಬೆನ್ನುಡಿಯ ಶ್ರೀರಕ್ಷೆ ಇತ್ತು. ಅವರು ಜಗಲಿ(ವಾಟ್ಸಾಪ್)ಯಲ್ಲಿ ಏಕಾಕ್ಷರ ಕವಿತೆ ಬರೆಯಲು ಆರಂಭಿಸಿದರು. ಹಲವು ಹತ್ತು ಕಾವ್ಯಾಭ್ಯಾಸಿಗಳೂ ಇದರಿಂದ ಪ್ರಭಾವಿತರಾಗಿ ತಾವೂ ಪ್ರಯೋಗಿಸಿ ನೋಡಿದರು. ಇತ್ತೀಚೆಗೆ ಮುಕ್ತಕಗಳನ್ನು ರಚಿಸಲಾರಂಭಿಸಿದರು. ಮುಕ್ತಕ ಕವಿಗಳ ಪಡೆಯೇ ಹುಟ್ಟಿಕೊಂಡಿತು. ಹಾಗಾಗಿ ಅವರಿಗೆ ʻಅಭಿಮಾನಿ ದೇವರುʼಗಳಿದ್ದಾರೆ ಎನ್ನಬಹುದು. ಕಾವ್ಯೋದ್ಯಾನದ ಹೊಸ ಕುಕಿಲು ಎಸ್. ಕೃಷ್ಣಮೂರ್ತಿ. ಅವರು ಈಗ ʻಕೃಷ್ಣಕವಿʼ ಎನ್ನುವ ಕಾವ್ಯನಾಮವನ್ನು ಧರಿಸಿದ್ದಾರೆ.

    ಸಾವಿರ ವರ್ಷಗಳನ್ನೂ ಮೀರಿದ ನಿಡಿದಾದ ಇತಿಹಾಸ ಈ ಮುಕ್ತಕಗಳದ್ದು. ಇತಿಹಾಸದ ಹಿಮದಲ್ಲಿ ಮುಕ್ತಕವೆಂಬ ಕಾವ್ಯಪ್ರಕಾರ ಹೂತುಹೋಯಿತೇ ಎಂದೆನಿಸಿದಾಗ ಅರುಣಪಲ್ಲವವಾಗಿ ಬಿಸುಪು ಸೋಕಿ, ಹಿಮ ಕರಗಿ, ಕರಗಿ, ಮುಕ್ತಕಗಳ ಸಿಂಹಾಸನ ಮಾಲೆ ಮತ್ತೆ ಚಾರ್‌ಧಾಮದಂತೆ ಕಂಗೊಳಿಸುವಂತಾಗಿದೆ. ಇತ್ತೀಚೆಗೆ ಅದು ಮತ್ತೆ ಹುಲುಸಾಗಿ ಬೆಳೆಯುತ್ತಿದೆ. ಹಲವು ಬಗೆಯ ಪ್ರಯೋಗಗಳಿಗೆ ಕನ್ನಡ ಈಗ ಕನ್ನೆನೆಲ. ನವ ಸಾಮಾಜಿಕ ಮಾಧ್ಯಮಗಳು ಈ ಪ್ರಯೋಗಗಳಿಗೆ ಆಸರೆ ಮತ್ತು ನೆಲೆಯನ್ನು ಒದಗಿಸಿವೆ. ಮುಕ್ತಕ ಎಂದರೆ ಬಿಡಿ ಪದ್ಯ, ಒಂದು ರೀತಿಯ ಚುಟುಕು. ಇನ್ನೊಂದು ಪದ್ಯದ ಆಸರೆಯಿಲ್ಲದೆ ಸ್ವತಂತ್ರವಾದ ಹಾಗೂ ಚಿಕ್ಕ-ಚೊಕ್ಕ ಪದ್ಯವೇ ಮುಕ್ತಕ. ಅದರದು ಸ್ವತಂತ್ರಭಾವ. ಅದೊಂದು ರೀತಿಯ ಸಂಕೀರ್ಣ ಅಂಕಗಣಿತವೂ ಹೌದು. ಆದರೆ ಮೇಲ್ನೋಟಕ್ಕೆ ತನ್ನಲ್ಲಿನ ಈ ಲೆಕ್ಕಾಚಾರದ ಯಾವುದೇ ಸುಳಿವನ್ನು ನೀಡದೆ ಸಂವಹನವನ್ನು ಸಾಧಿಸುತ್ತದೆ. ಇದೀಗ ಮುಕ್ತಕ ಸಾಮ್ರಾಟರದೇ ಒಂದು ತಂಡ. ಅವರ ಮುಕ್ತಕಗಳದ್ದೇ ಚುಂಬಕ ಗಾಳಿ. ಇದು ಪ್ರಬಲ ಮಾರುತವೂ ಹೌದು. ಚುಟುಕಗಳಿಗೆ, ಹನಿಗವನಗಳಿಗೆ ಇಲ್ಲದ ಬಿಗಿಬಂಧ ಮುಕ್ತಕಗಳಿಗಿದೆ. ಇತ್ತೀಚೆಗೆ ಚುಟುಕು, ಹನಿಗವನ, ಹಾಯ್ಕು, ಟಂಕಾ, ರುಬಾಯಿ, ಖಸಿದಾ, ಅಬಾಬಿ, ಮಸ್ನವಿ ಹೀಗೆ ಎಲ್ಲವನ್ನೂ ಸಗಟಾಗಿ ಮುಕ್ತಕಗಳೆಂದು ಕರೆಯಲಾಗುತ್ತಿದೆ. ಈ ಅಪವ್ಯಾಖ್ಯಾನ ಮತ್ತು ಅಪವರ್ಗೀಕರಣ ನಿಲ್ಲಬೇಕು. 

    ಚುಟುಕು, ಹನಿಗವನ, ಮುಕ್ತಕ ಇವೆಲ್ಲವೂ ಈ ಕಾಲದ ಅಗತ್ಯಗಳು. ತೆರೆಯ ಮರೆಗೆ ಸರಿದಿದ್ದ ಮುಕ್ತಕ ಪ್ರಕಾರ ಮತ್ತೆ ಮೈಕೊಡವಿಕೊಂಡು ಲಗುಬಗೆಯಲ್ಲಿ ವಿಜೃಂಭಿಸುತ್ತಿರುವುದಕ್ಕೆ ಇದೂ ಒಂದು ಕಾರಣ. ಇದೀಗ ಕನ್ನಡದಲ್ಲಿ ಮುಕ್ತಕ ಮಣಿಗಳಿಗೆ ಮೀಸಲಾದ ಜಗಲಿ(ವಾಟ್ಸಾಪ್) ಗುಂಪುಗಳಿವೆ; ವೇದಿಕೆಗಳಿವೆ, ಸಂಘಟನೆಗಳಿವೆ, ಸಂಸ್ಥೆಗಳಿವೆ. ಮುಕ್ತಕಗಳ ನಿತ್ಯೋಪಾಸಕರಿದ್ದಾರೆ.  ಅವರಿಗೆ ಮುಕ್ತಕಗಳೇ ವೇದಮಂತ್ರ. ವೇದಗಳೂ ಮುಕ್ತಕ ರಚನೆಯ ಮಾದರಿ ತಾನೆ? ಇದೀಗ ನಾಡಿನೆಲ್ಲೆಡೆ ಮುಕ್ತಕರದೇ ಚಿಲಿಪಿಲಿ. ನಿಂತ ನೆಲ ಸರಿದರೂ, ಹಿಡಿದ ಹುಡಿ ಜಾರಿದರೂ, ಕೈಯಲ್ಲಿನ ಕಲಮು ಮಾತ್ರ ನಿಲ್ಲಲಾರದು. ಕಲಮು ಇಲ್ಲದಿದ್ದರೇನಂತೆ ಕಾಗದರಹಿತವಾಗಿ ಮುಕ್ತಕಗಳನ್ನು ರಚಿಸಲು ಬೆರಳತುದಿಯೆಂಬ ವಿಸ್ಮಯವೊಂದಿದೆ!

    ಕೃಷ್ಣಕವಿಯವರು ಮುಕ್ತಕಗಳ ಮೂಲಕ ಆದರ್ಶವನ್ನು ಪ್ರತಿಪಾದಿಸಿದ್ದಾರೆ. ಸಮಾಜವನ್ನು ತಿದ್ದಲು, ಶುಚಿಗೊಳಿಸಲು ಅವರು ಮುಕ್ತಕಗಳೆಂಬ ಬಾಣಗಳನ್ನು ಪ್ರಯೋಗಿಸಿದ್ದಾರೆ. ಅವರು ಮುಕ್ತಕಗಳಿಗೆ ʻಸ್ವಚ್ಛಕʼ ಗುಣವನ್ನು ಲೇಪಿಸಿದ್ದಾರೆ. ಹಾಗಾಗಿ ಅವುಗಳ ರಚನೆಯಲ್ಲಿ ಅವರಿಗಿರುವ ಸದುದ್ದೇಶವನ್ನು ಗಮನಿಸಬಹುದು. ಸಮಾಜದ, ಸಮೂಹದ ಆಮಿಷಗಳಿಗೆ, ಆವೇಗಕ್ಕೆ ಒಂದು ನೈತಿಕ ಅಂಕುಶವನ್ನು ಹಾಕಲು ಯತ್ನಿಸಿದ್ದಾರೆ. ಕೆಳಗಿನ ಮುಕ್ತಕಗಳು ಈ ಮಾತಿಗೆ ಪೂರಕವಾಗಿವೆ:


ಒಲವಿರಲಿ ಮಕ್ಕಳಲಿ ನಲ್ಮೆ ಮಾಸದಹಾಗೆ       ಸಾಲುಮರಗಳ ಬೆಳೆಸಿ ನೆರಳನಿತ್ತರು ಹಿಂದೆ

ಛಲವೇಕೆ ಬಹುಧನದ ಬಳುವಳಿಯ ಕೊಡಲು? |       ಸಾಲುಸಾಲಾಗಿ ಕತ್ತರಿಸುತಿಹೆವಿಂದು |

ಬಲಿಯಾಗುವರು ದುಂದು ದುಶ್ಚಟದ ಮೋಹಕ್ಕೆ       ಸಾಲವಾದರು ಕೂಡ ಬೆಳಸದಿರೆ ಮರಗಳನು

ಕಲಿಗಾಲ ತರವಲ್ಲ ~ ಪರಮಾತ್ಮನೆ ||       ಸಾಲಾಗಿ ಮಲಗುವೆವು ~ ಪರಮಾತ್ಮನೆ ||


    ತಾವು ಆಡಿದ, ಆಚರಿಸಿದ, ಅನುಸರಿಸಿದ, ಅಳವಡಿಸಿಕೊಂಡ ಆದರ್ಶಗಳನ್ನೇ ಮುಕ್ತಕಗಳಲ್ಲೂ ಕಂಡರಿಸಿದ್ದಾರೆ. ಅವರು ಸಂಯಮಿ, ಸಾತ್ತ್ವಿಕ ನಡೆ ಅವರದು. ಅವರು ಅಭಿವ್ಯಕ್ತಿಯಲ್ಲಿ ಸಾಧಿಸಿರುವ ಆಪ್ತಭಾವ ಪರಿಣಾಮಕಾರಿಯಾದುದು. ಶ್ಲೇಷೆಯನ್ನೇ ಕ್ಲೀಷೆ ಎನ್ನುವಷ್ಟರ ಮಟ್ಟಿಗೆ ಅಸ್ತ್ರವಾಗಿ ಝಳಪಿಸುವವರಲ್ಲ. ಪನ್ನು, ಪಂಚು ಎಂಬ ಉರುಳುಗಳಿಗೆ ಕೊರಳು ಒಡ್ಡದೆ ಅಪಾಯದಿಂದ ಪಾರಾಗಿದ್ದಾರೆ. ಅಗ್ಗದ ಜನಪ್ರಿಯತೆಗೆ ಹಾತೊರೆದು ಪಾಕವನ್ನು ಅಳ್ಳಕವಾಗಿಸಿಕೊಂಡವರಲ್ಲ. ಅವರು ತಮ್ಮ ಇಚ್ಛೆಗಾಗಿ ಬರೆದವರು, ಮುಕ್ತಕಗಳಲ್ಲಿ ಸಾಧಿಸಿದ ಗಾಂಭೀರ್ಯ ಮತ್ತು ತೋರಿಸಿದ ಸಂಯಮ ಉಲ್ಲೇಖಾರ್ಹ. ಕಾವ್ಯದ ಕಡುಮೋಹಿ. ಹತ್ತಿರ ಹತ್ತಿರ ಎರಡು ದಶಕಗಳಿಂದ ಸೃಜಿಸುತ್ತ ಸಾಗಿದ್ದರೂ ದಣಿದಿಲ್ಲ, ಬಸವಳಿದಿಲ್ಲ, ಉತ್ಸಾಹ ಉಡುಗಿಲ್ಲ, ಧ್ವನಿ ಕುಗ್ಗಿಲ್ಲ. ಇವರ ಕಾವ್ಯ ಗುಡುಗು-ಮಿಂಚು, ಸಿಡಿಲು-ಸದ್ದು ಇಲ್ಲದೆ ಒಂದೇ ಸಮನೆ ಸುರಿವ ಮುಸಲಧಾರೆ. ಇಂತಹ ಆರ್ಭಟಗಳು ಇಲ್ಲದಿರುವುದರಿಂದಲೇ ಈ ಮುಕ್ತಕಗಳು ಅನನ್ಯ. ಈ ಸಂಕಲನದ ಮುಕ್ತಕಗಳು ಈಗಾಗಲೇ ಅವರಿಗೆ ಅಸ್ಮಿತೆ ನೀಡಿವೆ. 

    ಕೆಲವು ಮುಕ್ತಕಗಳನ್ನು ಅವರು ತಮ್ಮ ಮತ್ತು ತಾವು ನಂಬಿದ ಪರಮಾತ್ಮನ ನಡುವಿನ ಅನುಸಂಧಾನದ ಸೇತುವೆಯನ್ನಾಗಿಸಿದ್ದಾರೆ. ಈ ಕೆಳಗಿನ ಮುಕ್ತಕಗಳಲ್ಲಿ ಆ ಭಾವವನ್ನು ಕಾಣಬಹುದು:


ಬಿಸಿಯೂಟ  ಹಸಿವಳಿಸೆ, ಸಿಹಿನೀರು ಮನತಣಿಸೆ,     ಒಳಗಿರುವೆ ಹೊರಗಿರುವೆ ಕಣಕಣದೆ ಕುಳಿತಿರುವೆ

ಉಸಿರಾಡೆ ತಂಗಾಳಿ, ಸೂರು ತಲೆಮೇಲೆ |     ಹೊಳೆಯ ಮೀನಿನ ಸುತ್ತಲಿನ ನೀರಿನಂತೆ |

ಹಸಿವ ತೀರಿಸುವುಗಳನೆಲ್ಲವನು ನನಗಿತ್ತೆ     ಬಳಿಯಲೇ ಇದ್ದರೂ ಕಾಣೆ ನೀ ಬರಿಗಣ್ಗೆ

ಕೊಸರು ಬೇಡೆನು ನಿನ್ನ ಪರಮಾತ್ಮನೆ ||     ಒಳಗಣ್ಣ ತೆರೆಸು ನೀ ಪರಮಾತ್ಮನೆ ||


    ಇನ್ನು ಕೆಲವು ಮುಕ್ತಕಗಳು ಸನಾತನ ಧರ್ಮದ ತತ್ತ್ವಗಳನ್ನು ಸರಳ ಭಾಷೆಯಲ್ಲಿ ಬಿಂಬಿಸಿವೆ. ಈ ಕೆಲವು ಮುಕ್ತಕಗಳು ಅದಕ್ಕೆ ಸಾಕ್ಷಿ:


ಪರರು ಬರಿಯಂಚೆಯವರಾಗಿಹರು ತಲುಪಿಸಲು     ಮಲಿನವಾಗುವುದು ಮನ ಪಂಚೇಂದ್ರಿಯಗಳಿಂದ

ಪರಿಪರಿಯ ನಿನ್ನ ಕರ್ಮಫಲದಾ ಫಸಲು |     ಕುಳಿತು ಗ್ರಹಿಸುತಿರಲು ಜಗದ ನಾಟಕವ |

ಜರೆಯದಿರು ಪರರನ್ನು ನಿನ್ನ ಸಂಕಟಗಳಿಗೆ     ಕೊಳೆ ತೆಗೆಯಬೇಕು ದಿನ ದಿನ ಧ್ಯಾನಗಳಿಂದ

ಪರರಲ್ಲಿ ದಯೆಯಿರಲಿ ~ ಪರಮಾತ್ಮನೆ ||     ತಿಳಿಯಾಗುವುದು ಮನವು ~ ಪರಮಾತ್ಮನೆ ||


    ನಾವೆಲ್ಲ ಎದುರಿಸಿದ, ಎದುರಿಸುತ್ತಿರುವ ಕೊರೋನ ಮಹಾಮಾರಿ ಮಾನವ ಸಮಾಜವನ್ನು ತಲ್ಲಣಗೊಳಿಸಿದೆ. ಕವಿಹೃದಯ ಈ ಸಮಸ್ಯೆಯು ತಂದ ಪರಿಸ್ಥಿತಿಯನ್ನು ಮುಕ್ತಕಗಳ ರೂಪದಲ್ಲಿ ಅನಾವರಣಗೊಳಿಸಿದೆ:


ಅವಿವೇಕಿ ಮಾನವರು ಬುದ್ಧಿಯಿಲ್ಲದೆ ಅಂದು       ಹೊರಲು ಹೆಗಲುಗಳಿಲ್ಲ ಸುಡಲು ಕಟ್ಟಿಗೆಯಿಲ್ಲ

ಬುವಿಗೆ ಹೊದಿಸಲು ಕಸದ ಪ್ಲಾಸ್ಟೀಕು ಹೊದಿಕೆ |       ಉರುಳುತಿಹ ದೇಹಗಳ ಹೂಳಲೆಡೆಯಿಲ್ಲ |

ಕವುಚುತ್ತ ದೇಹಗಳ ಪ್ಲಾಸ್ಟೀಕಿನಲ್ಲಿಂದು       ಕಿರುಬಗಳು ಕದಿಯುತಿವೆ ದೇಹದಂಗಾಂಗಗಳ

ಬುವಿಯೊಳಗೆ ತಳ್ಳಿಹೆವು ಪರಮಾತ್ಮನೆ ||       ಸರಿದಾರಿ ತಪ್ಪಿಹೆವು ~ ಪರಮಾತ್ಮನೆ ||


    ಈ ಮುಕ್ತಕಗಳು ಸಾಮಾಜಿಕ, ನೈತಿಕ, ಆಧ್ಯಾತ್ಮಿಕ, ಪರಿಸರ, ರಾಜಕೀಯ, ಪ್ರಕೃತಿ, ಮಾನವಧರ್ಮ ಹೀಗೆ ಹತ್ತು ಹಲವಾರು ಮುಖಗಳ ಆಯಾಮವನ್ನು ಹೊಂದಿವೆ. ಮುಕ್ತಕ ಎಂಬುದರ ವ್ಯಾಖ್ಯೆ ಏನೇ ಇರಲಿ; ಅದರ ಉದ್ದೇಶ ಆಯಾ ಕಾಲದ ಜನರ ಜೀವನಶೈಲಿ, ಮನೋಧರ್ಮಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನ. ಅಲ್ಲಿಂದ ಅವರ ನಡೆ-ನುಡಿಯನ್ನು ತಿದ್ದಿ-ತೀಡಿ, ಸುಧಾರಣೆಯ ಕಡೆಗೆ ಹೊರಳುವ ಹಾಗೆ ಮಾಡುವುದು. ತನ್ನ ಕಾರ್ಯದಲ್ಲಿ ಈ ಸಂಕಲನ ಸಫಲವಾಗಿದೆ. ಸನ್ಮಾರ್ಗದ ಕಡೆಗೆ ಜನರನ್ನು ಕರೆದೊಯ್ಯುತ್ತದೆ. ಇದು ಚೋದಕ ಗುಣಕ್ಕಿಂತ ಪ್ರೇರಣಾತ್ಮಕ ಉದ್ದೇಶ ಉಳ್ಳದ್ದು. ಆ ನಿಟ್ಟಿನಲ್ಲಿ ಈ ಕೆಳಗಿನ ಮುಕ್ತಕಗಳನ್ನು ಉದಾಹರಿಸಬಹುದು:


ಪರಿಪರಿಯ ಪಾಠಗಳ ಕಲಿಯುವೆವು ಎಲ್ಲರಲಿ ದುಡುಕದಿರು ಆತುರದಿ ಕೋಪದಾ ತಾಪದಲಿ

ಅರಿವ ನೀಡಲು ಪಟ್ಟಗುರು ಮಾತ್ರ ಬೇಕೆ? | ಎಡವದಿರು ಸುರಿಯುವುದು ನಿನ್ನದೇ ರಕುತ |

ಬರಲಿ ಒಳಿತಾದುದೆಲ್ಲವು ನಮ್ಮೆಡೆಗೆ ನಿರತ ಅಡಿಯಿಡುವ ಮುನ್ನ ಯೋಚಿಸು ಒಂದೆರಡು ಘಳಿಗೆ

ತೆರೆ ಎಲ್ಲ ಕಿಟಕಿಗಳ ~ ಪರಮಾತ್ಮನೆ || ಕೊಡೆ ಮಾಡು ಬುದ್ಧಿಯನು ~ ಪರಮಾತ್ಮನೆ ||

 

    ವೇಗವಾಗಿ ಓಡಬೇಕೆಂಬ ಹಟದಲ್ಲಿ, ಸಂಕ್ಷಿಪ್ತವಾಗಬೇಕೆಂಬ ಚಪಲದಲ್ಲಿ ದಾಪುಗಾಲು ಹಾಕುತ್ತಿರುವ ಈ ತಲೆಮಾರಿನವರಿಗೆ ಕಾವ್ಯವನ್ನು ಉಣಬಡಿಸುವ ವಿಧಾನಗಳೂ ಬದಲಾಗಬೇಕು. ಇದನ್ನು ಈ ಕವಿಯು ಅರಿತುಕೊಂಡು ಹೇಳಬೇಕಾದುದನ್ನು ಸುತ್ತಿ ಬಳಸಿ ಹೇಳದೆ ನೇರವಾಗಿ ಹೇಳಲು ಮುಕ್ತಕ ಪ್ರಕಾರವನ್ನು ಆಯ್ದುಕೊಂಡಿದ್ದಾರೆ. ಇದಕ್ಕೆ ಸಮರ್ಥನೆ ಉದ್ದಕ್ಕೂ ಸಿಗುತ್ತದೆ.

    ಎಸ್. ಕೃಷ್ಣಮೂರ್ತಿ ಅವರಿಗೂ ನನಗೂ ಹದಿನಾರು ವರ್ಷಗಳ ಗೆಳೆತನ, ಸಮಾನ ವಯಸ್ಕರು; ಸಮಾನ ಮನಸ್ಕರು. ಅವರು ಕಾವ್ಯದ ಕೈಹಿಡಿದು ಕೃಷಿಕರಾದರು, ಛಂದೋಬದ್ಧ ಪದ್ಯಗಳನ್ನು ರಚಿಸುತ್ತ ಪ್ರವಾಹದ ವಿರುದ್ಧ ಈಸಿ ಜೈಸಿದರು. ನಾನು ಗದ್ಯದ ಕಾಲಿಗೆ ಗೆಜ್ಜೆಕಟ್ಟುತ್ತ ನಡೆದೆ. ಕಾವ್ಯ ನನ್ನ ಪಾಲಿಗೆ ಗಗನಕುಸುಮ. ಅವರು ತಮ್ಮ ಈ ಎರಡನೆಯ ಕವನ ಸಂಕಲನಕ್ಕೆ ಮುನ್ನುಡಿಯಬೇಕೆಂದು ನನ್ನನ್ನು ಕೋರಿದ್ದಾರೆ! ನನಗೆ ಕುವೆಂಪು ಅವರ ಕವನ ನೆನಪಾಗುತ್ತಿದೆ:

ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ? ಸಡಗರದ ಮಾತುಗಳ ಬಿಂಕವೇಕೆ?

ನಿನ್ನ ಮುಂದಿರುವಾಗ ಮಂತ್ರಗಳ ಮರೆಯೇಕೆ? ಸಂಪ್ರದಾಯದ ಮರುಳು ಲಜ್ಜೆಯೇಕೆ?


    ಹೌದು, ಕೃಷ್ಣಕವಿಯವರ ಮುಕ್ತಕಗಳನ್ನು ಓದಲು, ಆಸ್ವಾದಿಸಲು ಯಾವ ಸಿದ್ಧತೆಗಳೂ ಬೇಡ, ಯಾರ ಶಿಫಾರಸ್ಸೂ ಬೇಕಿಲ್ಲ. ಅವರ ಈ ಮುಕ್ತಕಗಳು ಸ್ವಯಂಸ್ಪಷ್ಟ; ಸ್ವಯಂಪರಿಪೂರ್ಣ. 

    ಇದೇ ಸಂದರ್ಭದಲ್ಲಿ ಸುಮಾರು ಒಂದೂಕಾಲು ಶತಮಾನದ ಹಿಂದಿನ ಮುದ್ದಣ-ಮನೋರಮೆಯರ ಸಲ್ಲಾಪ ನೆನಪಾಗುತ್ತದೆ. ಅಲ್ಲಿ ಮನೋರಮೆ “ಪದ್ಯಂ ವಧ್ಯಂ ಗದ್ಯಂ ಹೃದ್ಯಂ” ಎಂದು ಬಿರುನುಡಿಯುತ್ತಾಳೆ. ಪದ್ಯವನ್ನು ಸಾರಾಸಗಟಾಗಿ ನಿರಾಕರಿಸುತ್ತಾಳೆ; ನಿವಾಳಿಸಿ ಎಸೆಯುತ್ತಾಳೆ. ಗದ್ಯವನ್ನು ಹೃದ್ಯವೆಂದು ಬಣ್ಣಿಸುತ್ತಾಳೆ. ಕೃಷ್ಣಕವಿಯ ಈ ಮುಕ್ತಕಗಳನ್ನು ಮನೋರಮೆ ಓದುವಂತಾಗಿದ್ದರೆ, ಖಂಡಿತ ಪದ್ಯಂ ವಧ್ಯಂ ಎನ್ನುವ ತನ್ನ ನಿಲುವನ್ನು ಬದಲಿಸಿಕೊಳ್ಳುತ್ತಿದ್ದಳು!

    ಕೃಷ್ಣಕವಿ ಅವರದು ಶಿಸ್ತಿಗೆ, ಕಟ್ಟುಪಾಡಿಗೆ ಒಳಪಟ್ಟ ವ್ಯಕ್ತಿತ್ವ. ಮುಕ್ತಕವೆಂಬುದೂ ಅಷ್ಟೇ: ಕವಿಯೊಬ್ಬ ತನ್ನನ್ನು ತಾನೇ ಒಂದು ಶಿಸ್ತಿಗೆ, ಕಟ್ಟುಪಾಡಿಗೆ ಒಳಪಡಿಸಿಕೊಳ್ಳುವ ಪರಿ. ಅಂತಹ ಮಿತಿಯೊಂದರ ಗಡಿ ದಾಟದೆಯೇ ಹೇಳಬೇಕಾದುದನ್ನು ಅರುಹಬೇಕು. ಮುಕ್ತಕಗಳಿಗೂ, ಕೃಷ್ಣಕವಿ ಅವರ ಮನೋಧರ್ಮಕ್ಕೂ ಅಂತರವಿಲ್ಲ. ಹಾಗಾಗಿ ಅವರು ತಮ್ಮ ಅಭಿವ್ಯಕ್ತಿಗಾಗಿ ಮುಕ್ತಕ ಪ್ರಕಾರವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಸಮರ್ಥನೆಯಿದೆ. ಛಂದಸ್ಸಿನ ಕಟ್ಟುಪಾಡಿನಲ್ಲಿ, ಬಂಧನದಲ್ಲಿ ಸಂತೋಷವನ್ನು ಅರಸಿ ಯಶೋವಂತರಾದವರು ಅವರು! ಇದೀಗ ಅವರು ಮುಕ್ತಕಗಳಿಗೆ ನಡುಬಗ್ಗಿ ನಜ಼ರುಗಳನ್ನು ಒಪ್ಪಿಸಬೇಕಿಲ್ಲ, ಮುಕ್ತಕಗಳೇ ಅವರಿಗೆ ನಡೆಮುಡಿ ಹಾಸಿ ಕೈವಶವಾಗುತ್ತಿವೆ.

    ಶ್ರೇಷ್ಠತೆಯ ವ್ಯಸನಕ್ಕೆ ಬಿದ್ದವರು ಮಹಾಕಾವ್ಯ, ಖಂಡಕಾವ್ಯ, ನೀಳ್ಗವನಗಳಲ್ಲಿ ಮಾತ್ರ ಕೃಷಿ ಮಾಡುತ್ತಾರೆ. ಮುಕ್ತಕಗಳು; ಸಮರದ ಸಂದರ್ಭದಲ್ಲಿ ಸೈನಿಕರಿಗೆ ಮಾತ್ರೆಗಳ ರೂಪದಲ್ಲಿ ಅಡಕಗೊಳಿಸಿ ಉಣಬಡಿಸುವ ಆಹಾರದಂತೆ. ಇಂತಹ ಪರಿಹಾರ ರೂಪದ ಪ್ರಯತ್ನ ಕೃಷ್ಣಕವಿಯವರದು. ಅವರ ಮುಕ್ತಕಗಳು ಮಿತವಾದ ಪದಗಳಲ್ಲಿ ಅಮಿತಾರ್ಥವನ್ನು ಸೂಸುವಂತಹ ಸಾರಯುತ ರಚನೆಗಳು. ಇಲ್ಲಿನ ಅನೇಕ ಮುಕ್ತಕಗಳು ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸುವ ಕರುಣಾಳು ಬೆಳಕು. ಇವು ಮುದ ಕೊಡುವ ಮುಕ್ತಕಗಳಷ್ಟೇ ಅಲ್ಲ; ಮಸ್ತಿಷ್ಕದ ಮದ ಕಳೆವ ಮುಕ್ತಕಗಳೂ ಹೌದು.

    ಛಂದಸ್ಸನ್ನು ಗಮನಿಸಬೇಕಾದಂತಹ ಸಂದರ್ಭದಲ್ಲಿ ಕೆಲವು ಪದರೂಪಗಳು ಹ್ರಸ್ವಗೊಂಡಿವೆ. ಅಭಿನವ ಪಂಪ ನಾಗಚಂದ್ರನ ಈ ಮಾತು ನೆನಪಾಗುತ್ತದೆ: “ಅಬ್ಧಿಯುಂ ಒರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ”. ಇಲ್ಲಿ ಮುಕ್ತಕಗಳನ್ನು ರಚಿಸಿದ ಕಾಲಾನುಕ್ರಮದಲ್ಲಿಯೇ ಅವುಗಳನ್ನು ದಾಖಲಿಸಿದ್ದಾರೆ. ಹಾಗಾಗಿ ಮುಕ್ತಕಗಳು ಕ್ರಮೇಣ ಇವರಿಗೆ ಕರಗತವಾಗಿ ಕಲಾತ್ಮಕವಾಗಿ ಇಲ್ಲಿ ಅರಳಿರುವುದನ್ನು ಗಮನಿಸಬಹುದು. ಒಂಬತ್ತು ದಶಕಗಳ ಹಿಂದೆ ಹೊಸಗನ್ನಡದಲ್ಲಿ ಕುವೆಂಪು ಅವರಿಂದ ಆರಂಭವಾದ ಮುಕ್ತಕ ರಚನೆ ತೀನಂಶ್ರೀ, ಡಿ.ವಿ.ಜಿ. ಮುಂತಾದವರಿಂದ ಮುಂದುವರೆಯಿತು. ಇದೀಗ ಕೃಷ್ಣಕವಿಯವರೆಗೆ ಬಂದು ನಿಂತಿದೆ. ಅವರ ಮುಕ್ತಕಗಳಲ್ಲಿ ಜೀವನಾನುಭವವಿದೆ. ತನ್ಮೂಲಕ ವೈಯಕ್ತಿಕ ಹಾಗೂ ಸಾಮುದಾಯಿಕ ಸಂಕಷ್ಟಗಳಿಗೆ ಪರಿಹಾರವನ್ನು ಸೂಚಿಸಲು ಸಾಧ್ಯವಾಗಿದೆ. ಮುಕ್ತಕಗಳಿಗೆ ಗೇಯಗುಣವಿದೆ. ಹಾಗಾಗಿ ಹಾಡಬಹುದು; ಗುನುಗಬಹುದು. ಈ ಮುಕ್ತಕಗಳ ಭಾಷೆ ಸರಳವಾಗಿದ್ದು ಇವುಗಳನ್ನು ಅರ್ಥೈಸಲು ನಿಘಂಟು ಬೇಕಿಲ್ಲ.

    ಇಲ್ಲಿನ ಪ್ರತಿಯೊಂದು ಬಿಡಿಪದ್ಯವೂ ತನ್ನದೇ ಆದ ಭಾವವನ್ನು ಅಂತರ್ಗತಗೊಳಿಸುವ ರೀತಿಯೂ ಅಸದೃಶ. ಕೃಷ್ಣಕವಿ ಇಲ್ಲಿ ʻಆನು ಒಲಿದಂತೆʼ ಹಾಡಿದ್ದಾರೆ. ಅವರನ್ನು ಈಗ ಮುಕ್ತಕಗಳ ರಾಯಭಾರಿ ಎನ್ನಬಹುದು. ಅವರೀಗ ಮುಕ್ತಕ ಕುಟುಂಬದ ಪಾಲಿಗೆ ʻಆನು ದೇವಾ ಹೊರಗಣವನುʼ ಅಲ್ಲ! ಈಗ ಅವರು ಮುಕ್ತಕ ಪರಿವಾರದ ಪ್ರಮುಖ ಸದಸ್ಯ. ಆರಂಭದಲ್ಲಿ ಅವರು ಬರೆದು, ಬರೆದು ಪಳಗಿದವರು. ಈಗ ಪಳಗಿ ಬರೆಯುತ್ತಿರುವವರು; ಮೆರೆಯುತ್ತಿರುವವರು. ಮುಕ್ತಕಗಳ ಅವರ ಈ ಕೃತಿ ಒಂದು ಹನಿಖಜಾನೆ. ಮಂಜುಹನಿಯಂತೆ ಶೀತಲವಲ್ಲ; ಬೆವರು ಹನಿಯಂತೆ ಕಮಟಲ್ಲ; ಆದರೆ ನಿಶ್ಚಿತವಾಗಿ ಜೇನಹನಿಯಂತೆ ಸಿಹಿ!

    ಕೃಷ್ಣಕವಿ ಕನ್ನಡದ ಚಲನಶೀಲ ಕಾವ್ಯ ಪರಂಪರೆಯನ್ನೂ, ಹೊಸಗನ್ನಡದ ಪ್ರಾತಿನಿಧಿಕ ಕವಿಗಳ ಆಯ್ದ ಕವನಗಳನ್ನೂ ಅಭ್ಯಾಸ ಮಾಡಲಿ. ಅವುಗಳ ರಚನೆ, ಬಂಧ, ವಸ್ತು ಮತ್ತು ವಿನ್ಯಾಸಗಳನ್ನು ಅವಲೋಕಿಸಲಿ. ಕನ್ನಡದ ಸಂವೇದನೆಯನ್ನೂ, ಈ ನೆಲದಲ್ಲಿ ನಡೆದ ಎಲ್ಲ ಸಾಹಿತ್ಯಿಕ ಚಳವಳಿಗಳನ್ನೂ ಅರಿತು ಸಮಕಾಲೀನವಾಗಿ ಪ್ರಸ್ತುತ, ಸಂಗತ ಎನ್ನಬಹುದಾದ ಕಾವ್ಯವನ್ನು ಸೃಜಿಸುತ್ತ ಜಿಗಿಜಿಗಿದು ಸಾಗಲಿ. ಅವರಿಗೆ ಶುಭವಾಗಲಿ, ಒಳಿತಾಗಲಿ, ಮಂಗಳವಾಗಲಿ.


ಕೆ. ರಾಜಕುಮಾರ್‌

ಸನಿಹವಾಣಿ: 9035313490

ನಿಕಟಪೂರ್ವ ಗೌರವ ಕಾರ್ಯದರ್ಶಿ

 ಕನ್ನಡ ಸಾಹಿತ್ಯ ಪರಿಷತ್ತು

1-6-2022 


ಮುಕ್ತಕಗಳು - ೨೦

ವಿಷವಿಹುದು ನೀರಿನಲಿ ವಿಷವಿಹುದು ಗಾಳಿಯಲಿ

ವಿಷವಿಹುದು ಹಸುಗೂಸಿನಾಹಾರದಲ್ಲಿ |

ವಿಷಮಸಮಯವಿದು ಸಾವಮೊದಲೇ ನೀ ಮನದ

ವಿಷವ ತೊರೆ ಮನುಜ ಪೇಳ್ ಪರಮಾತ್ಮನೆ ||೯೬||


ಧನವೆಂಬ ಸಿರಿಯುಂಟು  ವಸ್ತುಗಳ   ಕೊಳ್ಳಲಿಕೆ

ಗುಣವೆಂಬ ನಿಧಿಯುಂಟು ಪಡೆಯೆ ನೆಮ್ಮದಿಯ |

ಗುಣಧನಗಳೆರಡನ್ನು ಪಡೆಯುವುದು ವಿರಳವಿರೆ

ಧನದಾಸೆ ಬಿಡಿಸಯ್ಯ ಪರಮಾತ್ಮನೆ ||೯೭||


ಸಾರಥಿಯು ನೀನಾದೆ ಪಾರ್ಥನಿಗೆ ಯುದ್ಧದಲಿ

ಕೌರವರ ಸೆದೆಬಡಿಯೆ ನೆರವಾದೆ ನೀನು |

ಪಾರುಗಾಣಿಸಲು ಜೀವನ ಕದನದಲಿ ಎನಗೆ

ಸಾರಥಿಯು ನೀನಾಗು ಪರಮಾತ್ಮನೆ ||೯೮||


ಹಸೆಮಣೆಯನೇರಿ ಜೊತೆ ಸಪ್ತಪದಿ ತುಳಿದಿಹಳು

ಹೊಸಬದುಕ ಕೊಡಲೆನಗೆ ತನ್ನವರ ತೊರೆದು |

ನಸುನಗೆಯ ಮುಖವಾಡದಲಿ ನೋವ ನುಂಗಿಹಳು

ಹೊಸಜೀವವಿಳೆಗಿಳಿಸಿ ಪರಮಾತ್ಮನೆ ||೯೯|| 


ಮುಕ್ತಕದ ಮಾಲೆಯಲಿ ಶತಸಂಖ್ಯೆ ಪುಷ್ಪಗಳು

ಭಕ್ತನಾ ಕಾಣಿಕೆಯ ಸ್ವೀಕರಿಸು ಗುರುವೆ |

ಪಕ್ವವಿಹ ತಿಳಿವನ್ನು ನೀಡಿರಲು ವಂದನೆಯು

ದಕ್ಷಿಣಾಮೂರ್ತಿಯೇ ಪರಮಾತ್ಮನೆ ||೧೦೦||


ಮುಕ್ತಕಗಳು - ೧೯

ಮರಣದಾ ಹೆಮ್ಮಾರಿ ಕಾಡಿಹುದು ದಿನರಾತ್ರಿ

ಮರೆಯದಿರಿ ವೈದ್ಯಜನ ಕೊಟ್ಟಿರುವ ಸಲಹೆ |

ಇರುಳು ಕಂಡಿಹ ಬಾವಿಯಲಿ ಹಗಲು ಬೀಳುವುದೆ

ಕುರಿಗಳಾಗುವುದೇಕೆ ಪರಮಾತ್ಮನೆ ||೯೧||


ಕೀಟ ಕೀಳೆನುವವರು ಮೂಢಮತಿಗಳು ಕೇಳಿ

ಕೀಟವಿಲ್ಲದೆ ಪರಾಗಸ್ಪರ್ಶ ವಿರಳ |

ಮೇಟಿಯಾ ಶ್ರಮವೆಲ್ಲ ನೀರಿನಲಿ ಹೋಮವೇ

ಕೀಟವಿರೆ ಊಟವಿದೆ ಪರಮಾತ್ಮನೆ ||೯೨||


ದಾನ ಕೊಡುವುದು ಲೇಸು ಕುಡಿಕೆಯಲಿಡುವ ಬದಲು

ದೀನ ದುರ್ಬಲರಿಂಗೆ ಹಸಿವನೀಗಿಸಲು |

ದಾನ ನೀಡುವುದ ಸತ್ಪಾತ್ರರಿಗೆ ನೀಡಿದೊಡೆ

ದಾನಕ್ಕೆ ಸದ್ಗತಿಯು ಪರಮಾತ್ಮನೆ ||೯೩||


ನುಡಿಯಲ್ಲಿ ಸತ್ಯ ಹೃದಯದಲ್ಲಿ ಪ್ರೀತಿಸೆಲೆ

ನಡೆಯಲ್ಲಿ ನಿಷ್ಠೆ ಕರಗಳಲಿ ದಾನಗುಣ |

ಹಿಡಿಯೆ ಧರ್ಮದ ದಾರಿ ಮನದಲ್ಲಿ ಪ್ರಾರ್ಥನೆಯು 

ಇರುವಲ್ಲಿ ನೀನಿರುವೆ ಪರಮಾತ್ಮನೆ ||೯೪||


ಸಾಲುಮರಗಳ ಬೆಳೆಸಿ ನೆರಳನಿತ್ತರು ಹಿಂದೆ

ಸಾಲುಸಾಲಾಗಿ ಕತ್ತರಿಸುತಿಹೆವಿಂದು |

ಸಾಲವಾದರು ಕೂಡ ಬೆಳಸದಿರೆ ಮರಗಳನು

ಸಾಲಾಗಿ ಮಲಗುವೆವು ಪರಮಾತ್ಮನೆ ||೯೫||


ಮುಕ್ತಕಗಳು - ೧೮

ಮೂವತ್ತಮೂರು ರೀತಿಯ ಶಕ್ತಿಗಳು ಜಗದಿ

ಮೂವತ್ತಮೂರು ದೇವತೆಗಳೆನೆ ತಪ್ಪೆ |

ಜೀವಿಗಳ ನಿರ್ವಹಿಸೊ ದೇವತೆಗಳಿವರೆಲ್ಲ

ದೇವರಿಗೆ ದೇವ ನೀ ಪರಮಾತ್ಮನೆ ||೮೬||


ಸಾವಿರದ ಮನೆಯಿಲ್ಲದಿರೆ ಸಾಯೆ ಭಯವೇಕೆ

ಸಾವು ನೀಡುವುದು ನಿವೃತ್ತಿ ಜಗದಿಂದ | 

ನೋವು ಕೆಲದಿನ ಮಾತ್ರ  ಜೊತೆ ನಂಟಿರುವವರಿಗೆ

ನೋವಿರದ ಸಾವಿರಲಿ ಪರಮಾತ್ಮನೆ ||೮೭||


ದ್ವೇಷ ಕೋಪಗಳೆನಲು ಬೆಂಕಿಯಾ ಜ್ವಾಲೆಗಳು

ವೇಷವನು ಧರಿಸಿ ಮೋಸವನು ಮಾಡಿಹವು  |       

ದ್ವೇಷ ಸುಡುತಿಹುದಲ್ಲ ನಮ್ಮದೇ ಕಾಯವನು

ದ್ವೇಷವನು ನಿಗ್ರಹಿಸು ಪರಮಾತ್ಮನೆ ||೮೮||


ನನ್ನೆದೆಯ ವೀಣೆಯನು ನುಡಿಸು ಬಾ ಚೆಲುವೆಯೇ

ನಿನ್ನೆದೆಯ ತಾಳಕ್ಕೆ ಕುಣಿಯುವೆನು ನಾನು |

ಚೆನ್ನ ಮೇಳೈಸಲೆಮ್ಮಯ ನಾದನಾಟ್ಯಗಳು

ಜೊನ್ನ ಸುರಿವುದೆದೆಯಲಿ ಪರಮಾತ್ಮನೆ ||೮೯||

 

ಪುಸ್ತಕವನೋದಲದು ಹಚ್ಚುವುದು ಹಣತೆಯನು

ಮಸ್ತಕದ ದೀಪವದು ಬಾಳಿಗೇ ಬೆಳಕು |

ವಿಸ್ತರಿಸಿ ಕೊಳ್ಳಲಿಕೆ ಜ್ಞಾನದಾ ಪರಿಧಿಯನು

ಪುಸ್ತಕವು ಬಹುಮುಖ್ಯ ~ ಪರಮಾತ್ಮನೆ ||೯೦||

ಮುಕ್ತಕಗಳು - ೧೭

ಮದವೇರಿ ನಿಂತಾಗ ಮದ್ಯದಮಲೇರಿದೊಲು

ಬೆದರಿಹೋಗ್ವುದು ವಿವೇಚನೆಯ ದೃಢಶಕ್ತಿ |

ಇದಿರಾಗೊ ತಡೆಗಳೆಲ್ಲವು ಸರ್ವನಾಶವೇ

ನದಿಯು ಹುಚ್ಚೆದ್ದಂತೆ ಪರಮಾತ್ಮನೆ ||೮೧||


ಚಂದನದ ವನದಲ್ಲಿ ಮೇರುಪರ್ವತವಾದೆ

ಗಂಧದಾ ಗುಡಿಯ ಗರ್ಭದಲಿ ನೆಲೆಯಾದೆ |

ಮಂದಿಯಾ ಮನದಲ್ಲಿ ರಾರಾಜಿಸಿದ ತಾರೆ

ಬಂಧುವೇ ನಮಗೆಲ್ಲ ಪರಮಾತ್ಮನೆ ||೮೨||


ನಿನ್ನವರ ಬದಲಾಗೆನುವ ಮುನ್ನ ನಡತೆಯಲಿ

ತನ್ನತನ ಬದಲಿಸುವ ಬವಣೆಯನು ಕಾಣು |

ಭಿನ್ನತೆಯ ಮೇಳದಲಿ ನವರಾಗ ಮೂಡಿಸುತ 

ಮನ್ನಿಸೈ ನಿನ್ನವರ ಪರಮಾತ್ಮನೆ ||೮೩||


ರಾಜನನು ಅನುಸರಿಪ ಪ್ರಜೆಗಳೆಲ್ಲಿಹರೀಗ 

ರಾಜನಾರಿಸುವ ಹಕ್ಕೀಗ ತಮದೇನೆ |

ರಾಜನ ಕ್ಷಮತೆ ಆರಿಸಿದವರ ಮತಿಯಷ್ಟೆ

ರಾಜನನು ತೆಗಳುವುದೆ ಪರಮಾತ್ಮನೆ ||೮೪||


ದಿನದಿನದ ಬವಣೆಯಲಿ ಬದುಕ ಜಂಜಾಟದಲಿ

ನೆನಪಿರವು ನೀತಿವಾಕ್ಯ ಹಿತವಚನಗಳು |

ದಿನದ ಕೊನೆಗಿರಬೇಕು ನಾಕುಚಣದೇಕಾಂತ

ಮನನಮಾಡಲು ತಿಳಿವ ಪರಮಾತ್ಮನೆ ||೮೫||


ಮುಕ್ತಕಗಳು - ೮

ಒಂಟಿಯೇ ಗಾಳಿಯಲಿ ತಿರುಗುವಾ ಗಿರಗಿಟ್ಲೆ?

ಒಂಟಿ ನಾನಲ್ಲ ನೀನಿರಲು ಸಖನಾಗಿ |

ನೆಂಟ ನೀನೇ ಬರುವೆ ಜೊತೆಯಾಗಿ ಕೊನೆವರೆಗೆ 

ಬಂಟ ನಾನಾಗಿರುವೆ ಪರಮಾತ್ಮನೆ ||೩೬||


ಕನಸೆಲ್ಲ ಕರಗಿರಲು ಮನದಲ್ಲಿ ಕಹಿಯಿರಲು

ತನುವಲ್ಲಿ ಜಡವಿರಲು ನಿದಿರೆ ದೂರಾಗೆ |

ಜಿನುಗಿಸಲು ಹೊಸ ಹುರುಪು ಮರೆಯಲಿಕೆ ಕಹಿಯನ್ನು

ನಿನನಿಡುವೆ ಮನದಲ್ಲಿ ಪರಮಾತ್ಮನೆ ||೩೭||


ಎಲ್ಲ ಕೊಡುತಿಹ ಬುವಿಗೆ ನಾವೇನು ಕೊಟ್ಟಿಹೆವು

ಗಿಲ್ಲಿಹೆವು ಗುದ್ದಿಹೆವು ಮೆದ್ದಿಹೆವು ಬೆಲ್ಲ |

ಗಲ್ಲಿಯಲಿ ಶ್ವಾನವೂ ತಿರುಗಿ ಬೀಳುವುದೊಮ್ಮೆ

ಕಲ್ಲುಹೊಡೆದರೆ ನಿತ್ಯ ಪರಮಾತ್ಮನೆ ||೩೮||


ಕರದಲ್ಲಿ ಪಿಡಿದಿಹೆವು ಮಾಯದಾಟಿಕೆಯನ್ನು

ಭರದಲ್ಲಿ ತೊರೆದಿಹೆವು ಮತ್ತೆಲ್ಲವನ್ನು |

ಎರಡು ಮೊನಚಿನ ಖಡ್ಗ ಕೊಯ್ಯ ಬಲ್ಲದು ಕತ್ತ

ಮರೆತು ಮೈಮರೆತಾಗ ಪರಮಾತ್ಮನೆ ||೩೯||


ಏನೆ ಮಾಡಲಿ ನಾವು ನೋವಾಗದಂತಿರಲಿ

ಜಾನುವಾರುಗಳಿಗೂ ಬಿಸಿ ತಾಕದಿರಲಿ |

ನಾನು ಗೋಡೆಗೆಸೆವಾ ಚೆಂಡೊಂದು ಹಿಮ್ಮರಳಿ

ತಾನೆದೆಗೆ ತಾಕುವುದು ಪರಮಾತ್ಮನೆ ||೪೦||

ಮುಕ್ತಕಗಳು - ೧೬

ಪರರು ಬರಿಯಂಚೆಯವರಾಗಿಹರು ತಲುಪಿಸಲು

ಪರಿಪರಿಯ ನಿನ್ನ ಕರ್ಮಫಲದಾ ಫಸಲು |

ಜರೆಯದಿರು ಪರರನ್ನು ನಿನ್ನ ಸಂಕಟಗಳಿಗೆ

ಪರರಲ್ಲಿ ದಯೆಯಿರಲಿ ಪರಮಾತ್ಮನೆ ||೭೬||


ಕಾಮದಲಿ ಕುರುಡಾಗೆ ಭಯವಿಲ್ಲ ಸಿಗ್ಗಿಲ್ಲ

ರೋಮರೋಮದಿ ದಹಿಸೆ ಕಾಮದಾಹಾಗ್ನಿ |

ಕಾಮದಾಹಕ್ಕೆ ಬಂಧುಗಳೆ ಬಲಿಯಾಗುತಿರೆ

ಪಾಮರತೆ ಸಂಹರಿಸು ಪರಮಾತ್ಮನೆ ||೭೭||


ವೈರಾಣು ಬಂದಿಹುದು ವೈರಿಯಾ ರೂಪದಲಿ

ಹೋರಾಟ ನಡೆಯುತಿದೆ ಮನೆಮನಗಳಲ್ಲಿ |

ಜೋರಿನಾ ಮಾನವನು ರೆಕ್ಕೆತರಿದಿದ್ದರೂ

ಹಾರಾಟ ಬಿಡಲೊಲ್ಲ ಪರಮಾತ್ಮನೆ ||೭೮||


ಮೋಹವಾಗುವುದಲ್ಲ ಚೆಂದದ್ದು ಕಂಡಾಗ

ಮೋಹ ಚಿಗುರೊಡೆಯಲಿಕೆ ಸ್ವಾರ್ಥವೇ ಮೂಲ

ಮೋಹ ಪಾಶಗಳು ಜೀವನದ ಕಗ್ಗಂಟುಗಳು

ಮೋಹ ಭಯವೀಯುವುದು ಪರಮಾತ್ಮನೆ ||೭೯|| 


ಕದಡುವುದು ತಿಳಿಗೊಳದ ನೀರನ್ನು ಮತ್ಸರವು

ಹದವಿರುವ ಮನದಲ್ಲಿ ಕಸವ ತುಂಬುವುದು |

ಎದೆಯಿಂದ ಮತ್ಸರದ ಬೇರು ಕೀಳದೆ ಬಿಡಲು

ಬದುಕು ಹಸನಾಗದದು ಪರಮಾತ್ಮನೆ ||೮೦||

ಮುಕ್ತಕಗಳು - ೧೫

ಮುಂಗವುಸ ಮರೆಯಲ್ಲಿ ಮುಖವ ಮರೆಮಾಚಿಹೆವು

ಟೊಂಗೆಯಿಲ್ಲದ ಮರವನಾಶ್ರಯಿಸಿ ನಿಂದು |

ರಂಗಾಗಿ ಬದುಕಲಿಕೆ ಟೊಂಗೆಗಳ ಕಡಿದಿರುವ

ಮಂಗಗಳ ಕಾಪಾಡು ಪರಮಾತ್ಮನೆ ||೭೧||


ಅವಿವೇಕಿ ಮಾನವರು ಬುದ್ಧಿಯಿಲ್ಲದೆ ಅಂದು

ಬುವಿಗೆ ಹೊದಿಸಲು ಕಸದ ಪ್ಲಾಸ್ಟೀಕು ಹೊದಿಕೆ |

ಕವುಚುತ್ತ ದೇಹಗಳ ಪ್ಲಾಸ್ಟೀಕಿನಲ್ಲಿಂದು

ಬುವಿಯೊಳಗೆ ತಳ್ಳಿಹೆವು ~ ಪರಮಾತ್ಮನೆ ||೭೨||


ಕಾಮ ಲೋಭ ಕ್ರೋಧ ನರಕದಾ ದ್ವಾರಗಳು

ವಾಮಮಾರ್ಗಗಳ ತೊರೆಯೋಣ ಬಂಧುಗಳೆ

ರಾಮರಾಜ್ಯವ ತರಲು ಬೇಡ ಯಾರೂ, ಸಾಕು

ರಾಮನಾಮದ ಶಕ್ತಿ ~ ಪರಮಾತ್ಮನೆ ||೭೩||


ವಿಕೃತದೀ ಮನಸಿಗಿನ್ನೂ ಬೇಕೆನುವ ದಾಹ

ಸಕಲವಿರಲೂ ತೃಪ್ತಿಯಿಲ್ಲದಿಹ ಲೋಪ |

ಅಕಳಿಕೆಯ ಬಲೆಯಲ್ಲಿ ಸಿಲುಕಿರುವ ಕೂಸು ನಾ

ವಿಕಲತೆಯ ಗುಣಪಡಿಸು ಪರಮಾತ್ಮನೆ ||೭೪||

ಅಕಳಿಕೆ = ಕಚಗುಳಿ


ಮಂದಿರದ ಹುಂಡಿಯಲಿ ಕಾಣಿಕೆಯನೊಪ್ಪಿಸುತ

ಮಂದಿ ದುಃಖಗಳ ಮರೆಸುವ ಸುಖವ ಕೋರೆ

ತಿಂದಿರದ ಹೊಟ್ಟೆಗನ್ನವ ನೀಡಲದು ಹೆಚ್ಚು

ಮಂದಿರದ ಕಾಣಿಕೆಗೆ ~ ಪರಮಾತ್ಮನೆ ||೭೫||

ಮುಕ್ತಕಗಳು - ೧೪

ಧನವನಾಕರ್ಷಿಸುವುದುಂಟು ಧನ ಚುಂಬಕವು

ಧನವು ಬೆಳೆಸುವುದು ಸಂತತಿಯನತಿಶಯದಿ |

ಕೊನೆಗೆ ಹೂತಿಟ್ಟರೂ ಪಡೆಯುವುದು ಮರುಜನುಮ

ಧನಪುರಾಣವಿದುವೇ ಪರಮಾತ್ಮನೆ ||೬೬||


ಕಲಿಯುವುದು ಮುಗಿಯುವುದೆ ಜೀವನದ ಕೊನೆವರೆಗೆ

ಕಲಿಕೆ ಜೀವದ ಸೂಕ್ಷ್ಮ ಸಂಕೇತ ಸಾಕ್ಷಿ |

ಕಲಿವುದೇನಿಲ್ಲದಿರೆ ಬದುಕಲೇನಿದೆ ನಮಗೆ

ಕಲಿಕೆ ನಾಡಿಮಿಡಿತವು ಪರಮಾತ್ಮನೆ ||೬೭||


ವೈರಾಣು ಬಂದಿಹುದು ವೈರಿರೂಪದಲಿಂದು

ಬಾರಿಸುತ ಮರಣಭೇರಿಯ ನಿಲ್ಲದಂತೆ |

ಮೀರಿ ಭೇದಗಳ ಹೋರಾಡಬೇಕಿದೆಯಿಂದು

ತೋರಿಕೆಯು ಸಲ್ಲದದು ಪರಮಾತ್ಮನೆ ||೬೮||


ರಾಜಧರ್ಮವಮರೆತ ದೇಶನಾಶಕರಿವರು

ರಾಜಕೀಯದ ಮುಸುಕು ಧರಿಸಿ ನಿಂದಿಹರು |

ಗಾಜಿನಾ ಮನೆಯಲ್ಲಿ ಕಲ್ಲು ತೂರಾಡಿಹರು

ರಾಜಿಯಾಗಿಹೆವಲ್ಲ ಪರಮಾತ್ಮನೆ ||೬೯||


ತಂಗದಿರ ಬುವಿಗಿತ್ತ ರಜತಮಯ ಕಾಂತಿಯನು

ಚಂಗದಿರನಿತ್ತಿಹನು ಹೊನ್ನಿನಾಭರಣ |

ರಂಗನಾಥನ ಸತಿಗೆ ವೈಭವದಲಂಕಾರ

ಸಿಂಗರದ ಸಂಭ್ರಮವು ಪರಮಾತ್ಮನೆ ||೭೦||

ಮುಕ್ತಕಗಳು - ೧೩

ವೇದದಲಿ ತಿಳಿಸಿರುವ ಸಂಕಲ್ಪ ಪೂಜೆಗಳು

ಹಾದಿಯಲ್ಲವು ಸಾತ್ವಿಕರಿಗಾಗಿ ಮರುಳೆ |

ಕಾದಿರಿಸಿ ನಾರದರು ಪೇಳಿರುವ ಸತ್ಯವಿದು

ನಾದದಲ ಪಸ್ವರವು ಪರಮಾತ್ಮನೆ ||೬೧||


ಸಮತೆಯೆಲ್ಲಿದೆ ಜಗದ ಸೃಷ್ಟಿಯಲಿ ಬಂಧುಗಳೆ

ಸಮತೆ ಬೇಕೆನ್ನದಿರಿ ಮಾನವರ ನಡುವೆ |

ಮಮತೆಯಿರಬೇಕೆಲ್ಲ ಜೀವರಾಶಿಗಳಲ್ಲಿ

ಮಮತೆಸಮ ವಾಗಿರಲಿ ಪರಮಾತ್ಮನೆ ||೬೨||

 

ತಿಂಡುಂಡು ಮಲಗಿದರೆ ಮಂಡೆ ಬೆಂಡಾಗುವುದು

ದಂಡ ಮಾಡಿದ ಸಮಯ ಹಿಂದೆ ಬರಬಹುದೆ |

ದಂಡಿಸಲು ದೇಹವನು ಚೈತನ್ಯ ತುಂಬುವುದು 

ಗುಂಡಿಗೆಗೆ ಮಯ್ಯೊಳಿತು ಪರಮಾತ್ಮನೆ ||೬೩||


ನದಿಯ ಹಾದಿಯ ಬದಲಿಸಲು ಸಾಧ್ಯ ಬುವಿಯಲ್ಲಿ

ಬದಲಿಸಲು ಸಾಧ್ಯವೇ ವಿಧಿವಿಲಾಸವನು |

ಎದೆತಟ್ಟಿ ಪೇಳುವೆ ಶ್ರದ್ಧೆಯಚಲವಿರೆ ನೀ

ಬದಲಿಸುವೆಯೆಮಗಾಗಿ ಪ್ರಮಾತ್ಮನೆ ||೬೪||


ಪ್ರಾರಬ್ಧವೆನೆ ಹಿಂದೆ ನಾ ಮಾಡಿರುವ ಕರ್ಮ

ಯಾರು ಬದಲಿಸಬಲ್ಲರದ ನನ್ನ ಹೊರತು |

ಪಾರಾಯಣ ಧ್ಯಾನ ಸೇವೆ ಲಂಘನದಿಂದ

ಪ್ರಾರಬ್ಧ ಬದಲಿಸುವೆ ಪರಮಾತ್ಮನೆ ||೬೫||

ಮುಕ್ತಕಗಳು - ೧೨

ಯಂತ್ರಗಳ ಮಿತಿ ಮಾನವನ ಮತಿಗೆ ಸೀಮಿತವು

ತಂತ್ರಗಳು ಎಲ್ಲ ಪ್ರಕೃತಿಗೆ ಸೀಮಿತವು |

ಯಂತ್ರಗಳ ತಂತ್ರಗಳ ಮೀರಿಸಿದೆ ಭಕ್ತಿಯಾ

ಮಂತ್ರ ನಿನ್ನ ಪಡೆಯಲು ಪರಮಾತ್ಮನೆ ||೫೬||


ಹೊಸಯುಗವಿದೆನಲೇಕೆ ಕಲಿಗಾಲ ಕಳೆಯಿತೇ

ದೆಸೆಯು ಬದಲಾಗಿ ಶುಕ್ರದೆಸೆ ಬಂದಿಹುದೆ |

ಹೊಸಬಟ್ಟೆ ತೊಟ್ಟೊಡನೆ ತುಸುಬುದ್ಧಿ ಬಂತೇನು

ಹೊಸಮಾತು ಹೇಳಯ್ಯ ಪರಮಾತ್ಮನೇ ||೫೭||


ಬಾಗಿಲಿಗೆ ತೋರಣವು ಹೋಳಿಗೆಗೆ ಹೂರಣವು

ಭಾಗಿಯಾಗಿವೆ ಜೊತೆಗೆ ಬೇವುಬೆಲ್ಲಗಳು |

ತೂಗಿತೊನೆಯುವ ಮಾವು ಹಾಡಿಕುಣಿಯುವ ನಾವು

ಹೀಗಿದೆಯೊ ಯುಗದಾದಿ ಪರಮಾತ್ಮನೆ ||೫೮||


ವ್ಯಕ್ತಿ ಯಾರಾದರೇನವನರಸನಾಗಿರಲಿ

ಶಕ್ತಿ ತುಂಬಿರಲಿ ಬಾಹುಗಳಲ್ಲಿ ಅಧಿಕ |

ಯುಕ್ತಿಯಲಿ ಅತಿಕುಶಲ ಚತುರಮತಿಯಾದರೂ

ಭಕ್ತಿಗೊಲಿಯುವೆ ಮಾತ್ರ ಪರಮಾತ್ಮನೆ ||೫೯||


ಮರದ ಮೇಲಿನ ಹಕ್ಕಿ ಮರಬೀಳೆ ಹೆದರುವುದೆ

ಶರಧಿಯಲಿರುವ ಮೀನು ಜಲವುಕ್ಕಿಬರಲು |

ನೆರೆಯಲ್ಲ ಜಗದಪ್ರಳಯಕು ಹೆದರೆನು ನಿನ್ನ

ಕರತಲದ ರಕ್ಷೆಯಿರೆ ಪರಮಾತ್ಮನೆ ||೬೦||

ಮುಕ್ತಕಗಳು - ೧೧

ಪ್ರಣವವೇ ಪ್ರಥಮ ರವ ಸೃಷ್ಟಿಯಾರಂಭದಲಿ

ಕಣಕಣಕೆ ತಾಯ್ನಾಡಿಯನುಭವವ ನೀಡಿ |

ತಣಿಸಿ ಮನ ತನುವಿಗೀಯ್ವುದು ಮುದದ ಚೈತನ್ಯ

ಮಣಿವೆ ನಾ ಪ್ರಣವಕ್ಕೆ ಪರಮಾತ್ಮನೆ ||೫೧||


ಈಶ್ವರನ ದಯವಿರದೆ ಕಾಗೆ ಕಾಯೆನದು ಜಗ

ದೀಶ್ವರನ ದಯವಿರದೆ ಮೋಕ್ಷವದು ಹೇಗೆ |

ಈಶ್ವರನೆ ಬದುಕಿನಲಿ ಶ್ರೀಚರಣ ಪಿಡಿದಿಹೆನು

ಶಾಶ್ವತದೆಡೆಯ ನೀಡು ಪರಮಾತ್ಮನೆ ||೫೨||


ವೇದಗಳ ಕಾಲದಲಿ ಕಂಡ ನಾರೀಸಮತೆ

ಗಾದೆಗಳ ಕಾಲಕ್ಕೆ ಕಾಣದಾಯ್ತಲ್ಲ |

ಪಾದಗಳ ತೊಳೆದರೂ ನೀಡಿಲ್ಲ ಸಮತೆಯನು

ಭೇದವನಳಿಸಿ ಪೊರೆಯೊ ಪರಮಾತ್ಮನೆ ||೫೩||


ದಾನವರ ಸಂಹರಿಸಲವತಾರಗಳನೆತ್ತಿ

ನೀನವರ ಸಂಹರಿಸಿ ಜಗವನ್ನು ಕಾಯ್ದೆ |

ಮಾನವರೆದೆಯ ದಾನವತೆ ಕಾಣಲಿಲ್ಲವೇ

ನೀನದನು ಮರೆತೆಯಾ ~ ಪರಮಾತ್ಮನೆ ||೫೪||


ಕರ್ಮದಾ ವಿಧಿಯಾಟ ಯಾರಿಗೂ ತಪ್ಪದದು

ಮರ್ಮವನರಿತು ಜರಿಯದಿರು ನೋಯಿಸಿದರೆ |

ಧರ್ಮವನು ಪಾಲಿಸುತ ಕರ್ಮವನು ಸವೆಸುತಿರು

ನಿರ್ಮಲದ ಮನದಿಂದ ~ ಪರಮಾತ್ಮನೆ ||೫೫||


ಮುಕ್ತಕಗಳು - ೧೦

ವಾದಮಾಡಿದರೆ ಫಲವಿಲ್ಲ ಮೂರ್ಖರ ಜೊತೆಗೆ 

ವಾದ ಮಾಡುವುದು ಸಲ್ಲದು ವಿತಂಡಿಯೊಡೆ |

ವಾದ ಮಾಡುವುದು ಗೆಲುವಿಗೆನಲದು ಸರಿಯಲ್ಲ

ವಾದವಿದೆ ಮಂಥನಕೆ ಪರಮಾತ್ಮನೆ ||೪೬||


ಕ್ರೋಧವದು ಮೆರೆವಾಗ ವಾದಕಿಳಿಯುದಿರು ನೀ

ವ್ಯಾಧಿಯನು ಮುಚ್ಚಿಟ್ಟು ರೋಧಿಸಲು ಬೇಡ |

ಸಾಧನೆಗೆ ಗುರಿಯಿಂದ ದೃಷ್ಟಿ ಸರಿಸದೆ ಸದಾ

ಮಾಧವನ ನೆನೆಬೇಕು ಪರಮಾತ್ಮನೆ ||೪೭||


ಕರುಣೆಯಿಲ್ಲದ ಹೃದಯ ಎಣ್ಣೆಯಿಲ್ಲದ ದೀಪ

ಧರಣಿಯಲಿ  ಸಲ್ಲನೀ ದುರುಳದಾ ನವನು |     

ಮರಣದಲಿ ಜೊತೆಯಿಲ್ಲದೊಂಟಿಯಾಗುವನಲ್ಲ

ಕರುಣೆಯಿರೆ ಸಹಬಾಳ್ವೆ ಪರಮಾತ್ಮನೆ ||೪೮||


ಒಳಗಿನಾತ್ಮಕ್ಕಿದೆಯೊ ಕಣ್ಣು ಕಿವಿಯರಿವೆಲ್ಲ

ಬಳಿಯಿದ್ದು ನೋಡುತಿಹ ಸಿಸಿಕ್ಯಾಮೆರವು |

ಒಳಗಿನದು ಮನದ ಹೊರಗಿನದೆಲ್ಲವಚ್ಚಾಗಿ

ತಿಳಿಯುತಿದೆ ನಿನಗೆಲ್ಲ ಪರಮಾತ್ಮನೆ ||೪೯||


ಕಲಿಗಾಲ ಕವಿದಿಹುದು ಸತ್ಯಕ್ಕೆ ಕಾರ್ಮೋಡ

ಲಲನೆಯರಿಗಾಗುತಿದೆ ಶೋಷಣೆಯ ಶಿಕ್ಷೆ |

ಹುಲಿಗಳೇ ತೊಟ್ಟಿಹವು ಗೋಮುಖದ ಮುಖವಾಡ 

ಬಲಿಗಳೇ ಬೇಕೇನು ಪರಮಾತ್ಮನೆ ||೫೦||

ಮುಕ್ತಕಗಳು - ೭

ಉಸಿರು ತುಂಬಿದೆ ವೇಣುವಿಗೆ ನುಡಿಸೆ ಸವಿರಾಗ

ಉಸಿರು ತುಂಬಿದೆಯೆಮಗೆ ನುಡಿಯೆ ಸವಿಮಾತು |

ಉಸಿರು ಉಸಿರಲಿ ನಿನ್ನ ಉಸಿರಿರಲು ಜನರೇಕೆ

ಪಸರಿಸರು ಸವಿನುಡಿಯ ಪರಮಾತ್ಮನೆ ||೩೧||


ನಮಗಿರ್ಪ ಸತಿಸುತರು ಮಾತೆಪಿತರೆಲ್ಲರೂ

ನಮದೇನೆ ಪೂರ್ವಕರ್ಮದ ಫಲಿತವಂತೆ |

ನಮದಾದ ಕರ್ಮಗಳ ತೀರಿಸುವ ಪರಿಕರವು

ನಮಗಿರುವ ನಮ್ಮವರು ಪರಮಾತ್ಮನೆ ||೩೨||


ಯಾರು ಬಂದರು ಜನಿಸಿದಾಗ ಜೊತೆ ಜೊತೆಯಾಗಿ

ಯಾರು ಬರುವರು ಹೋಗುತಿರಲು ಜೊತೆಯಾಗಿ |

ಮೂರು ದಿನಗಳ ಪಯಣದಲಿ ಕಳಚಿದರೆ ಕೊಂಡಿ 

ಕೂರೆ ದುಃಖದಿ ಸರಿಯೆ ಪರಮಾತ್ಮನೆ ||೩೩||


ಒಲವಿರಲಿ ಮಕ್ಕಳಲಿ ನಲ್ಮೆ ಮಾಸದಹಾಗೆ

ಛಲವೇಕೆ ಬಹುಧನದ ಬಳುವಳಿಯ ಕೊಡಲು |

ಬಲಿಯಾಗುವರು ದುಂದು ದುಶ್ಚಟದ ಮೋಹಕ್ಕೆ

ಕಲಿಗಾಲ ತರವಲ್ಲ ಪರಮಾತ್ಮನೆ ||೩೪||


ಮರೆತು ವಾನಪ್ರಸ್ಥವನು ಬದುಕುತಿಹೆವಿಂದು

ಹೊರೆಯಾಗಿ ಜನಮನದ ಸೌಖ್ಯಕ್ಕೆ ಬಂಧು |

ಕರೆಯೆ ವೃದ್ಧಾಶ್ರಮವು ಯಾರು ಕಾರಣ ಪೇಳು

ಜರೆಯದಿರು ಪುತ್ರರನು ಪರಮಾತ್ಮನೆ ||೩೫||

ಕೃಷ್ಣಾ ಮುಕುಂದ

 ಕೃಷ್ಣಾ ಮುಕುಂದ ಹೇ ಪರಮಾತ್ಮ,

ಹೇಗೆ ಕರೆದರೂ ನಿನ್ನ ತೃಪ್ತ ನನ್ನಾತ್ಮ!

ನಾಮಮಾತ್ರದಲ್ಲೇ ಜೇನಿನ ಸಿಹಿಯು,

ದರುಶನದಲ್ಲಿ ಏನುಂಟೋ ಭಾಗ್ಯವು!    


ಈ ಬದುಕಲಿ ನಿನ್ನ ಕಾಣದಾಗಿಹೆ,

ತೋರೋ ದಾರಿಯ ನಿನ್ನಯ ಗಮ್ಯಕೆ.

ವಿಶ್ವರೋಪ ತೋರಿದೆ ಆ ಪಾರ್ಥನಿಗೆ,

ತೋರೋ ನಿನ್ನ ನಿಜ ರೂಪ ಎನಗೆ!


ಆ ಮುರಳಿಯಲಿ ನಿನ್ನ ಉಸಿರು ಹರಿಸಿ ,

ನುಡಿಸಿದೆ ಎದೆಯ ಸೆಳೆಯೋ ರಾಗ!

ಈ ದೇಹದಲಿ ನಿನ್ನ ಉಸಿರು ಸೇರಿಸಿ,

ತೊಗಲು ಬೊಂಬೆಗೆ ಜೀವವ ತುಂಬಿದೆ!


ಈ ಜೀವ ನಿನ್ನದೇ ನಿನ್ನ ದಾಸ ನಾನು,

ನಿನ್ನಯ ಪಾದದ ಸೇವೆ ಕೊಡುವೆಯೇನು?

ನಿನ್ನ ಪಾದದಾಣೆ ಎಂದೂ ಬಿಡೆ ನಾನು,

ನಾಮವ ರೂಪವ ತುಂಬಿಕೊಂಡಿಹೆನು!


ನಿನ್ನ ಕಂಡ ಕೂಡಲೇ ಸಾಕು ಈ ಜೀವನ,

ನಿನ್ನ ಕಂಡ ರಾಧೆಯಂತೆ ಆಯಿತು ಪಾವನ!

ನೀ ಸಾಲ ಕೊಟ್ಟ ಉಸಿರು ಆ ನಿನ್ನ ಪಾದಕೆ,

ಅರ್ಪಿಸಿ ಸಮರ್ಪಿಸಿ ಲೀನವಾಗುವೆ ನಿನ್ನಲೇ!

Sunday, July 10, 2022

ಮುಕ್ತಕಗಳು - ೩

ಯಶವ ಏನೆಂಬೆ? ಧನ, ವಿದ್ಯೆ, ಸಿರಿಸಂಪತ್ತೆ?

ಪಶು, ಭೂಮಿ, ಅಧಿಕಾರ, ಯೌವ್ವನದ ಬಲವೆ? |

ದಶಕಂಠ ಹೊಂದಿದ್ದೆಲ್ಲವೂ ಗೆಲಿಸಿದವೆ?!

ಯಶವ ಗುಣದಲಿ ನೋಡು ~ ಪರಮಾತ್ಮನೆ  ||೧೧||


ಗುಡಿ ಸುತ್ತಿ ಗುಂಡಾರ ಸುತ್ತಿ ದೇವನೊಲಿಸಲು

ಬಿಡದೆ ತೀರ್ಥಗಳ ಸುತ್ತಿಹೆ ಗಾಣದೆತ್ತೆ! |

ಒಡೆಯನನು ಮರೆತಾಗ ಎದೆಯ ಗೂಡಿನಲಿರುವ

ಕೊಡುವನೇ ಪರಮಪದ ~ ಪರಮಾತ್ಮನೆ ||೧೨||


ನಗೆಯ ಮಲ್ಲಿಗೆಯನರಳಿಸು ಸುಗುಣವಂತನೇ

ಮಗುವಂತೆ ನಕ್ಕುಬಿಡು ನೋವುಗಳ ಮರೆಸೆ |

ಸಿಗುವಂತೆ ಸಿಹಿಬೆಲ್ಲ ಬೇವಿನೆಸಳಿನ ಜೊತೆಗೆ

ಸಿಗಲಿ ಬಾಳಲಿ ಸವಿಯು ಪರಮಾತ್ಮನೆ  ||೧೩||


ಕಾವ್ಯಕನ್ನಿಕೆಯ ರಸಗಂಗೆ ಹರಿದಿದೆ ಸದಾ 

ದಿವ್ಯತೆಯ ಬೆಳಗುತಿಹ ದಿವಿನಾದ ಗೊಂಬೆ |

ನವ್ಯತೆಯ ನಗನತ್ತ ಕಾಲವೇ ಕೊಟ್ಟಿಹುದು

ಭವ್ಯತೆಗೆ ಕುಂದಿಲ್ಲ ಪರಮಾತ್ಮನೆ ||೧೪||


ಎಲ್ಲ ಚಪಲಗಳಲ್ಲಿ ನಾಲಿಗೆಯ ಚಪಲವೇ

ಬಲ್ಲಿದರು ಪೇಳಿಹರು ಬಲು ಜಿಗುಟು ಚಪಲ |

ಗಲ್ಲು ಶಿಕ್ಷೆಗೆ ಹೆದರದಿಹ ದುಷ್ಟ ದುರುಳನೊಲು

ಜೊಲ್ಲು ಸುರಿಸುವ ನಾಲ್ಗೆ ಪರಮಾತ್ಮನೆ ||೧೫||

ಮುಕ್ತಕಗಳು - ೬

ಏಕೆ ರಕ್ಷಿಸಿ ವರಾಹನೆ ಕರಪಿಡಿದೆಯೆನ್ನ  

ಸಾಕಾಯ್ತು ಬವಣೆ ಮನುಜನಿಗೆ ಮನೆಯಾಗಿ |

ಬೇಕು ಬೇಡಗಳು ಬರೆ ಹಾಕುತಿವೆ ದಿನನಿತ್ಯ

ನೂಕಿಬಿಡು ಸಾಗರಕೆ ಪರಮಾತ್ಮನೆ ||೨೬||


ಇಂದು ರಮೆ ಒಲಿದಿರಲು ನಿಶಿತಮತಿಯಾಗಿರಲು

ಹೊಂದುವೆನು ಎಲ್ಲವನು ಎನಬೇಡ  ಬಂಧು |

ಮುಂದೆ ಸುಖ ಪಡೆಯಲಿಕೆ ದಾನವನು ಮಾಡಿದವ

ಮಂದಮತಿ ತಾನಲ್ಲ ಪರಮಾತ್ಮನೆ  ||೨೭||


ಚಿಂತೆಯೇ ಚಿಗುರುವುದು ಬೆಳೆದು ಮರವಾಗುವುದು

ಕುಂತಿರಲು ಸುಮ್ಮನೇ ಸೋಮಾರಿ ಗಂಡು |

ಬಂತು ಮಂಡೆಯಲಿ ಬರೆ ದೆವ್ವಗಳ ಕಾರ್ಖಾನೆ

ಕಂತೆ ಕೆಲಸವ ನೀಡು ಪರಮಾತ್ಮನೆ ||೨೮||


ದೇಹದಣುಗಳ ಹಿಂಪಡೆವೆ ಬದಲಿಸುತ ನಿತ್ಯ 

ಮೋಹಗಳ ಹಿಂಪಡೆದು ಮೋಕ್ಷವನು ನೀಡು |

ದಾಹಗಳ ಹಿಂಪಡೆದು ನಿನ್ನ ದಾಸನ ಮಾಡು

ದೇಹಿ ಎನ್ನುವೆ ತಂದೆ ಪರಮಾತ್ಮನೆ ||೨೯||


ಕೋಪವೇ ಬಂದಿರಲಿ ಮನಸುಗಳು ಬೆಂದಿರಲಿ

ತಾಪದಾ ನುಡಿ ಬೇಡ ಆತುರವು ಬೇಡ

ಜೋಪಡಿಗೆ ಬೆಂಕಿ ಹಚ್ಚುವುದಾವ ಲಾಭಕ್ಕೆ

ಆಪತ್ತು ಬೇಡೆಮಗೆ ಪರಮಾತ್ಮನೆ ||೩೦||

 

ಮುಕ್ತಕಗಳು - ೨

ಅನ್ಯ ಭಾಷೆಯು ಬೇಕೆ ಕನ್ನಡವನುಲಿವಾಗ?

ಕನ್ಯೆ ಬೇಕೆನುವಾಭರಣದಲಂಕಾರ |

ವನ್ಯಜೀವಿಗೆ ಕಾಡು, ಕನ್ನಡವನೆನಗಿತ್ತೆ

ಧನ್ಯನಾಗಿಸಿ ನನ್ನ ಪರಮಾತ್ಮನೆ ||೬||


ಮುಕ್ತಕದ ಸೊಗಸುಗಳ ಮೆಚ್ಚದವರುಂಟೇನು?

ಶಕ್ತ ಚೌಕಟ್ಟಿನಲ್ಲನುಭಾವ  ಹೊಂದಿ |

ರಕ್ತಮಾಂಸಗಳಿರುವ ಜೀವಂತ ಗೊಂಬೆಯದು

ಭಕ್ತನಾಗಿಹೆ ನಾನು ಪರಮಾತ್ಮನೆ ||೭||


ಅಂದು ಗುಂಡಪ್ಪ ಕೈ ಹಿಡಿದ ಮುಕ್ತಕವನೇ

ಚೆಂದದಲಿ ಹೆಚ್ಚಾಯ್ತು ಮುಕ್ತಕದ ಪದ್ಯ |

ಇಂದು ಆ  ಕಗ್ಗವೇ ದಿಕ್ಸೂಚಿ  ಬದುಕಲಿಕೆ

ಸಂದೇಹ ಎಲ್ಲಿಹುದು ಪರಮಾತ್ಮನೆ ||೮|| 


ಮುಕ್ತಕವ ರಚಿಸಿದೊಡೆ ಮುತ್ತುಕಟ್ಟಿದೊಲಿರಲಿ

ಮುಕ್ತಕವನೋದಿದರೆ ತಲೆ ತೂಗಬೇಕು |

ಮುಕ್ತಕವು ಅಂತರಂಗಕೆ ಈಯೆ ಬೆಳಕನ್ನು

ಮುಕ್ತಮನ ಶರಣೆನಲಿ ಪರಮಾತ್ಮನೆ ||೯||


ಆಸೆಯಿದ್ದರೆ ಸಾಕೆ ದೇಹ ದಣಿಸಲುಬೇಕು

ವಾಸುದೇವನ ಕೃಪೆಯು ಜೊತೆಯಾಗಬೇಕು |

ಏಸು ನೀರಿನಲಿ ಮುಳುಗೇಳಬೇಕಿದೆ ಜಸಕೆ

ಕಾಸು ಕೊಟ್ಟರೆ ಕಡಲೆ ಪರಮಾತ್ಮನೆ  ||೧೦||

ಮುಕ್ತಕಗಳು - ೧

ಪೂಜೆಯನು ಮಾಡಿದರೆ ಪುಣ್ಯವದು ಬರುವುದೇ

ಮೋಜಿನಲಿ  ಮನ ಮುಳುಗಿ ತೇಲುತಿರೆ ನಿತ್ಯ |

ಗಾಜಿನಾ ಕಿಟಕಿಗಳು ಗೋಣಿಯಲಿ ಮುಚ್ಚಿರಲು

ತೇಜಸ್ಸು ಒಳಬರದು ~  ಪರಮಾತ್ಮನೆ ||೧||


ಬಿಸಿಯೂಟ  ಹಸಿವಳಿಸೆ ಸಿಹಿನೀರು  ಮನತಣಿಸೆ

ಉಸಿರಾಡೆ ತಂಗಾಳಿ ಸೂರು ತಲೆಮೇಲೆ |

ಹಸಿವ ತೀರಿಸುವುಗಳನೆಲ್ಲವನು  ನನಗಿತ್ತೆ

ಕೊಸರು ಬೇಡೆನು ನಿನ್ನ ಪರಮಾತ್ಮನೆ ||೨||


ಯೋಗಿಯಾಗೆಂದಾಸೆಗಳ ತುಂಬಿಸಿ, ತ್ಯಜಿಸು

ಭೋಗಗಳನೆಂದೆ, ಮುಳುಗಿಸಿ ವಿಷಯಗಳಲಿ |

ರಾಗಗಳ ಗುಲಾಮನ ಮಾಡಿಟ್ಟೆ ನನ್ನನ್ನು

ಹೇಗೆ ಗುರಿ ಮುಟ್ಟುವುದು ಪರಮಾತ್ಮನೆ? ||೩||


ಒಳಗಿರುವೆ ಹೊರಗಿರುವೆ ಕಣಕಣದೆ ಕುಳಿತಿರುವೆ

ಹೊಳೆಯ ಮೀನಿನ ಸುತ್ತಲಿನ ನೀರಿನಂತೆ |

ಬಳಿಯಲೇ ಇದ್ದರೂ ಕಾಣೆ ನೀ ಬರಿಗಣ್ಗೆ

ಒಳಗಣ್ಣ ತೆರೆಸು ನೀ ಪರಮಾತ್ಮನೆ ||೪||


ದಿನದಿನದ ಬದುಕಿನಲಿ ನಿಲ್ಲದಿಹ ಓಟದಲಿ

ಕನಸುಗಳ ಬೇಟೆಯಲಿ ಮನಕಿಲ್ಲ ಶಾಂತಿ |

ದನಕೆ ಬೇಕಿದೆ ಮೂಗುದಾರದಾ ಕಡಿವಾಣ

ಮಣಿಸಿ ಚಿಂತನೆ ನೀಡು ಪರಮಾತ್ಮನೆ ||೫||

ಮುಕ್ತಕಗಳು - ೫

ಬಾಳಿನಲಿ ಕಷ್ಟಗಳು ಎದುರಾಗೆ ಭಯವೇಕೆ?

ಕಾಲಚಕ್ರವು ತಿರುಗುತಿದೆ ನಿಲ್ಲದಂತೆ |

ಕಾಳರಾತ್ರಿಯು ಕರಗಿ ಹೊಂಬೆಳಕು ಮೂಡುವುದು

ಕಾಲಕ್ಕೆ ಎದುರಿಲ್ಲ ಪರಮಾತ್ಮನೆ ||೨೧||


ಮೂಡಣದ ಕೋಣೆಯಲಿ ಉಷೆಯು ಕೆಂಪಾಗಿಹಳು

ಮೋಡದಾ ಸೆರಗನ್ನು ತಲೆಮೇಲೆ ಹೊದ್ದು |

ನೋಡುತಲೆ ಉದಯನನು ನಾಚಿನೀರಾಗಿರಲು

ಕಾಡಿನಲಿ ಹನಿಮುತ್ತು ಪರಮಾತ್ಮನೆ ||೨೨||


ನಿಯತಕರ್ಮಗಳನ್ನು ನಿರ್ವಹಿಸಿ,  ಫಲಗಳನು

ಬಯಸದೆಯೆ ಕಾಯಕವ ಅನವರತ ನಡೆಸೆ |

ಜಯವನಿತ್ತರೆ ದೇವ ಕರಮುಗಿದು ಪಡೆಯುವೆನು

ದಯವು ನಿನ್ನದೆ ಬಲ್ಲೆ ಪರಮಾತ್ಮನೆ ||೨೩||


ಮಲ್ಲಿಗೆಯ ಮುಡಿದಿರುವ ಮುಗುದೆಯಾ ಮೊಗದಲ್ಲಿ

ಚೆಲ್ಲಿಹುದು ಚುಂಬಕದ ಚಂಚಲಿಸೊ ಚೆಲುವು |

ಕಲ್ಲೆದೆಯ ಕಾದಲನ ಕೋಪವನು ಕರಗಿಸಿರೆ

ಸಲ್ಲಿಸಿಹ ಸರಮಾಲೆ ಪರಮಾತ್ಮನೆ ||೨೪||


ಬೆಚ್ಚಿಹೆವು ನಾವುಗಳು ಕೋಮಲದ ಕುಸುಮಗಳು

ಚುಚ್ಚುವಿರಿ ಸೂಜಿಯಲಿ ಕುಣಿಕೆ ಬಿಗಿಯುವಿರಿ |

ಹುಚ್ಚರೇ ಶವದಮೇ ಲೇಕೆಶಯ ನದಿಬೇಕೆ  

ಮೆಚ್ಚದಿರು ಮನುಜರನು ಪರಮಾತ್ಮನೆ ||೨೫||

ಮುಕ್ತಕಗಳು - ೪

ಶಿಶು ರಚ್ಚೆ ಹಿಡಿವಂತೆ ಪಾರಿತೋಷಕದಾಸೆ

ಪಶುಗಳೂ ಕೋರುತಿವೆ ಶಾಲು ಪೇಟಗಳ |

ಸಶರೀರವಾಗಿ ನಾಕಕ್ಕೆ ತೆರಳುವ ಆಸೆ

ನಶೆಯ ಇಳಿಸಯ್ಯ ನೀ ಪರಮಾತ್ಮನೆ ||೧೬||


ಇಂದು ಮಂಜಮ್ಮ ಜೋಗತಿಗೆ ಮುಕ್ತಕಸೇವೆ

ಮಂದ್ರದಲಿ ಉಳಿಯದೆಯೆ ಮೇಲಕ್ಕೆ ಎದ್ದೆ |

ಕಂದೀಲು ಬೆಳಕಿನಲಿ ಹೊಳೆಯುವಾ ವಜ್ರದೊಲು

ಬಂದಿಹುದು ಪದುಮಸಿರಿ ಪರಮಾತ್ಮನೆ ||೧೭||


ಗೀತೆಯಲಿ ನೀ ಕೊಟ್ಟೆ ಮೂರು ಮಾರ್ಗಗಳೆಮಗೆ

ಮಾತೆಯೊಲು ಮಮತೆಯಲಿ ಮೃಷ್ಟಾನ್ನದಂತೆ |

ಕೂತು ಕಳೆಯದೆ ಸಮಯ ಓಡುತ್ತ ಸಾಗುವೆನು

ಸೋತೆನೆಂದರೆ ಕೇಳು ಪರಮಾತ್ಮನೆ ||೧೮||


ದೇಶವನು ಆಳುವರ ಜನರಾರಿಸಿದ್ದರೂ

ಆಶಯಗಳೆಲ್ಲ ಪುಡಿಮಣ್ಣಾಗುತಿಹುದು |

ಪೋಷಿಸಿದ ಪಶುವನ್ನು ಕಟುಕನಿಗೆ ಒಪ್ಪಿಸಿರೆ

ದೂಷಿಪುದು ಯಾರನ್ನು ಪರಮಾತ್ಮನೆ ||೧೯||


ಸಂಪತ್ತು ಸಂಬಂಧ ನಂಟೇನು ಜಗದಲ್ಲಿ?

ಸಂಪತ್ತಿಗೋಸ್ಕರದ ಸಂಬಂಧ ಒಡಕು |

ಸಂಪತ್ತ ಕಡೆಗಣಿಸೊ ಸಂಬಂಧ ಕೊನೆತನಕ

ತಂಪಿನಾ ಸಂಬಂಧ ಪರಮಾತ್ಮನೆ ||೨೦||