Saturday, June 27, 2020

ಬೆಂಗಳೂರಲಿ ಕೊರೋನಾ

ಅಟ್ಟಹಾಸವ ಗೈಯುತಿದೆ ಕೊರೋನಾ,
ಬೆಂಗಳೂರನು ಮಟ್ಟ ಹಾಕುತಿದೆ ಈ  ದಿನ!

ನನಗೇನಾಗದು ಎಂದು ಬೀಗುತ್ತಿದ್ದವರಿಗೆ
ತಾನಾರೆಂದು ತೋರುತಿದೆ ಕೊರೋನಾ!
ತನ್ನ ನಿರ್ಲಕ್ಷಿಸಿ ಮೋಜು ಮಾಡಿದವರ,
ಬೆನ್ನು ಹತ್ತಿ ಕೇಕೆ ಹಾಕುತಿದೆ ಈ ದಿನ!

ಪರದೆಯ ಮುಂದೆ ಕುಳಿತು ದೇಶ ವಿದೇಶಗಳ,
ದೂರದೂರುಗಳ ವ್ಯಥೆಗಳ ನೋಡುತ್ತಿದ್ದೆವು.
ಈಗ ನಮ್ಮೂರಲೇ, ನಮ್ಮ ಗಲ್ಲಿಯಲೇ ಗೆಜ್ಜೆಕಟ್ಟಿ,
ತಾಂಡವವಾಡುತಿದೆ ನಿರ್ದಯಿ ಕೊರೋನಾ!

ಎಚ್ಚರವಿರಲಿ, ಎಚ್ಚರವಿರಲಿ ಬಂಧುಗಳೇ,
ಜಿಹ್ವಾಚಾಪಲ್ಯವ ಮನೆಗೆ ಸೀಮಿತಗೊಳಿಸಿ,
ಹೊಸ ಒಡವೆ ವಸ್ತ್ರಗಳು ಬೇಕೆ ಈಗ?
ಸತ್ತರೆ ಹೆಣದ ಮೇಲೂ ಹಾಕಲಾಗದು!

ಮಂಗಳಾರತಿಯ ಕರ್ಪೂರ ಕಾರಗಿದಂತೆ
ಮಾಯವಾಗುವ ಮನುಜ ಸದ್ದಿಲ್ಲದಂತೆ!
ಮುಖದರ್ಶನವಿಲ್ಲ, ದೇಹದಧಿಕಾರವಿಲ್ಲ,
ಬೇಕೆ ಇಂತಹ ಸಾವು? ಬೇಡ, ಬೇಡ!

Monday, June 22, 2020

ನಕ್ಕರೆ ಬೆಳದಿಂಗಳು

ಪುಟ್ಟ ಚಂದ್ರನ ಹೊಳೆವ ಕಂಗಳು,
ನಕ್ಕರೆ ಬೆಳದಿಂಗಳು!
ಅತ್ತರಂತೂ ಕಿವಿಗೆ ಇಂಪಿನ,
ನಾದಸ್ವರದ ಸ್ವರಗಳು!

ಪುಟ್ಟ ಪಾದವು ಎದೆಯ ಮೇಲೆ,
ಭರತನಾಟ್ಯವ ಮಾಡಲು,
ಥೈಯ ಥಕ್ಕ ಎಂದು ಕುಣಿದವು,
ಮನದ ಗೆಜ್ಜೆಯ ಕಾಲ್ಗಳು!

ನನ್ನ ಸ್ವರಕೆ ಕಂಗಳರಳಿ,
ನಿನ್ನ ತುಟಿಗಳು ಬಿರಿಯಲು,
ಹರಿಯಿತಿಲ್ಲಿ ನನ್ನ ಎದೆಯಲಿ,
ತಿಳಿಯ ನೀರಿನ ತೊರೆಗಳು!

ನಿನ್ನನಪ್ಪಿ ಎದೆಗೆ ಅವಚಲು,
ಏನೋ ತೃಪ್ತಿಯ ಸಾಧನೆ,
ನನ್ನ ನಾನೇ ಅಪ್ಪಿದಂತಹ,
ಮರೆಯಲಾಗದ ಭಾವನೆ!

ಮುಗ್ಧ ಮುಖದ ಮಂದಹಾಸವು,
ಕೋಟಿ ಸೂರ್ಯ ಸಮಪ್ರಭ!
ದಂತ ಮೂಡದ ನಿನ್ನ ಪೊರೆಯಲಿ,
ಏಕದಂತನು ಸರ್ವದಾ!

(ಮೊಮ್ಮಗ ಅವ್ಯಾನ್‌ ಹುಟ್ಟಿದಾಗ ರಚಿಸಿದ್ದು)

ಬಲಿಪಶುಗಳು

ಸಾಗರದ ಅಲೆಯಿಲ್ಲ, ಸುನಾಮಿಯಿಲ್ಲ,
ಆದರೂ ಕೊಚ್ಚಿಹೋಗುತ್ತಿದ್ದೇವಲ್ಲ!
ಸೆಳವ ಸುಳಿಯಿಲ್ಲ, ಪ್ರಳಯವಿಲ್ಲ,
ಆದರೂ ಮುಳುಗಿಹೋಗುತ್ತಿದ್ದೇವಲ್ಲ!

ಏನೂ ತಿಳಿಯದೇನಿಲ್ಲ, ಅರಿವಿಲ್ಲದಿಲ್ಲ,
ಆದರೂ ತಪ್ಪು ಹೆಜ್ಜೆ ಹಾಕುತ್ತಿದ್ದೇವಲ್ಲ!
ತಲೆಕಡಿವ ಕಟುಕನಿಲ್ಲ, ರಕ್ಕಸನೂ ಇಲ್ಲ,
ಆದರೂ ಬಲಿಯಾಗುತ್ತಿದ್ದೇವಲ್ಲ!

ಕರ್ತವ್ಯದ ಅರಿವಿದೆ, ಜವಾಬ್ದಾರಿಯಿದೆ,
ಆದರೂ ನಿಭಾಯಿಸುತ್ತಿಲ್ಲವಲ್ಲ!
ಸಂಬಂಧಗಳ ಬೆಸೆಯಿದೆ, ಪ್ರೀತಿಯಿದೆ,
ಆದರೂ ವಿಮುಖರಾಗುತ್ತಿದ್ದೇವಲ್ಲ!

ವಾಟ್ಸಾಪ್‌ನ ಸುನಾಮಿಯಲಿ,
ಫೇಸ್‌ಬುಕ್‌ನ ಸುಳಿಯಲ್ಲಿ,
ಟ್ವಿಟ್ಟರ್‌ನ ಅಲೆಗಳಲಿ, ಬಲೆಗಳಲಿ,
ರಕ್ಕಸರಿಗೆ ಬಲಿಶುಗಳು ನಾವೆಲ್ಲ!

ಕವಿಯ ಬಯಕೆ

ಕುಣಿಯಲಿ ನಾಲಿಗೆ ಪದಗಳ ಮೋಡಿಗೆ,
ತೂಗಲಿ ತಲೆಯು ಪ್ರಾಸದ ಸೊಂಪಿಗೆ,
ನಿಮಿರಲಿ ಕಿವಿಯು ರಾಗದ ಇಂಪಿಗೆ,
ಅರಳಲಿ ಮನವು ಸಾರದ ಬೆಳಕಿಗೆ.

ಓದಲು ಕವಿತೆ ಹಾಡದು ಹೊಮ್ಮಲಿ,
ಹಾಡಲು ಕವಿತೆ ನಾದವು ಚಿಮ್ಮಲಿ,
ಸಂಗೀತ ಬೆರೆತು ಗಾಂಧರ್ವವಾಗಲಿ,
ಎದೆಯನು ತಾಕಿ ಚೈತನ್ಯ ತುಂಬಲಿ.

ಕವಿಯ ಆಶಯ ಬೆಳಕನು ಕಾಣಲಿ,
ಓದುವ ಮನಕೆ ಮುದವನು ನೀಡಲಿ,
ಕತ್ತಲ ಕನಸಿಗೆ ಬೆಳಕನು ತುಂಬಲಿ,
ಬೆಳಕಿನ ಪಯಣಕೆ ಮುನ್ನುಡಿ ಬರೆಯಲಿ.

ಬರೆಯಲು ಆಸೆ ಇಂತಹ ಕವಿತೆ,
ನೀಡೆಯ ಶಾರದೆ ಜ್ಞಾನದ ಹಣತೆ?
ಹಚ್ಚಲು ಬೆಳಗುವ ದೀಪವನು,
ಸರಿಸಲು ಕತ್ತಲ ಪರದೆಯನು!

Sunday, June 21, 2020

ನನ್ನಪ್ಪ

ನಾ ಹುಟ್ಟುವ ಮೊದಲೇ,
ನನ್ನ ಭವಿಷ್ಯದ 
ಕನಸನು ಕಂಡವ ನನ್ನಪ್ಪ!

ನಾ ಹುಟ್ಟಲು, ಪುಟ್ಟ 
ತನ್ನನು ಕಂಡು
ಆನಂದದ ಕಡಲು ನನ್ನಪ್ಪ.

ಹೆಜ್ಜೆಯ ಹಾಕಲು 
ಕಲಿಸುತ ನನಗೆ 
ಓಡುವ ಕನಸನು ಕೊಟ್ಟಪ್ಪ.

ಆಟಕೆ, ಊಟಕೆ,
ಕೊರತೆಯ ಕಾಟವು
ಇಲ್ಲದೆ ಹಾಗೆ ಇತ್ತಪ್ಪ.

ಕೋಪದೆ ಊಟವ
ತೊರೆದರೆ ನಾನು,
ರಮಿಸಿ ಉಣಿಸಿದ ನನ್ನಪ್ಪ.

ವಿದ್ಯೆಗೆ, ಬುದ್ಧಿಗೆ, 
ನಾಲಿಗೆ ಶುದ್ಧಿಗೆ,
ಒತ್ತನು ಕೊಟ್ಟವ ನನ್ನಪ್ಪ.

ಮಕ್ಕಳು ಬೆಳೆದು
ಸತ್ಪ್ರಜೆಗಳಾಗುವ
ಕ್ರಮಶಿಕ್ಷಣವ ಕೊಟ್ಟಪ್ಪ.

ಹೇಗೆ ಮರೆಯಲಿ
ನಿನ್ನಯ ಪ್ರೀತಿಯ?
ಮನಸಲಿ ಎಂದೂ ನೀನಪ್ಪ!

Friday, June 19, 2020

ಹೀಗೇಕೆ? ನಾವು ಹೀಗೇಕೆ?

ಭರ್ಜರಿ ಸೋಫಾ ಸೆಟ್ಟು,
ಕಾಸ್ಟ್ಲಿ ಮೇಜು ಕಪಾಟು,
ಮನೆ ಪೂರ್ತಿ ನೀಟ್ನೀಟು,
ಕಸವನು ಬೀದೀಲಿ ಹಾಕ್ಬಿಟ್ಟು!
ಹೀಗೇಕೆ? ನಾವು ಹೀಗೇಕೆ?

ವಾಟ್ಸ್ಯಾಪ್ ವೀರ ಎನ್ನುವ ಶೋಕಿ,
ಬೀದಿಯ ಕಸವ ಜಗಲಿಗೆ ಹಾಕಿ,
ಗೆಳೆಯರ ಕೋರಿಕೆ ಪಕ್ಕಕ್ಕೆ ನೂಕಿ,
ಹಾಕಿದ್ದೆ ಹಾಕಿ, ಹಾಕಿದ್ದೆ ಹಾಕಿ,
ಹೀಗೇಕೆ? ನಾವು ಹೀಗೇಕೆ?

ಟಿವಿಯ ಪರದೆಯ ನಿತ್ಯವೂ ನೋಡಿ,
ಆಗಿದೆ ನಮಗೆ ಮಾಸದ ಮೋಡಿ,
ಮನೆಯವರೆಲ್ಲ ಜೊತೆಯಲಿ ಕೂಡಿ,
ಬೆರೆಯಲು ಈಗ ಆಗದು ನೋಡಿ.
ಹೀಗೇಕೆ? ನಾವು ಹೀಗೇಕೆ?

ಎಲ್ಲರ ಕೈಲೂ ಮಾಯಾ ಗೊಂಬೆ,
ಅದರ ಪ್ರಭಾವ ಹೇಗಿದೆ ಅಂಬೆ?
ಕೊಟ್ಟರೂ ಬೇಡ ಇಂದ್ರನ ರಂಭೆ,
ಗೊಂಬೆಯ ಮುಂದದು ಗೋಸುಂಬೆ!
ಹೀಗೇಕೆ? ನಾವು ಹೀಗೇಕೆ?

ಏನಾಯಿತೆಲ್ಲರ ಸಂಬಂಧ,
ಹೃದಯದ, ಮನಸಿನ ಅನುಬಂಧ,
ಮಾಯಾಲೋಕದ ಪದಬಂಧ,
ಬಿಡಿಸಲು ಆಗದ ಘಟಬಂಧ,
ಹೀಗೇಕೆ? ನಾವು ಹೀಗೇಕೆ?

ಹೀಗೇಕೆ? ನಾವು ಹೀಗೇಕೆ?

Saturday, June 13, 2020

ಸಗ್ಗಸೀಮೆ

ಇಳೆಯ ತಳದ ದೇಶದಲ್ಲಿ,
ಭೂಮಿತಾಯಿ ನಲಿದಳು.
ಜೋಡಿದ್ವೀಪದ ನಾಡಿನಲ್ಲಿ
ದೇವಸನ್ನಿಧಿ ತಂದಳು!

ಸಗ್ಗಸೀಮೆಯ ನಾಡಿನಲ್ಲಿ,
ಭಾವ ಬುಗ್ಗೆಯು ಚಿಮ್ಮಿದೆ. 
ಕಣ್ಣ ಮುಂದಿನ ಅಂದ ಕಂಡು,
ಹೃದಯ ತುಂಬಿ ಬಂದಿದೆ. 
 
ನೀಲಿ ನಭದ ಬೆಳಕಿನಲ್ಲಿ,
ಎದೆಯ ಕಲ್ಮಶ ಕರಗಿದೆ. 
ಅರಳೆ ಮೋಡದ ಸುರುಳಿಯಿಂದ,
ಮನಸು ಹಗುರ ಎನಿಸಿದೆ. 

ಎಲ್ಲಿ ನೋಡಿದರಲ್ಲಿ ಕಾಣಿರಿ,
ಹಸಿರ ಬುಗ್ಗೆಯು ಚಿಮ್ಮಿದೆ. 
ಬುವಿಯ ಒಡಲಿನ ಪ್ರೀತಿಯಿಲ್ಲಿ,
ಬಣ್ಣದಲಿ ಹೊರ ಹೊಮ್ಮಿದೆ. 

ಧವಳ ಗಿರಿಗಳ ಶಿಖರಗಳು,
ತಲೆಯೆತ್ತಿ ಆಗಸ ಮುಟ್ಟಿವೆ.
ನೀಲಿ ನೀರಿನ ಕೊಳಗಳಿಲ್ಲಿ,
ಗಿರಿಯ ಪಾದವ ತೊಳೆದಿವೆ!

ಹಸಿರು ರೇಷಿಮೆ ಹಾಸಮೇಲೆ,
ಮೇಯೋ ಕುರಿಯ ಮರಿಗಳು,
ಹೆಣ್ಣುಮಕ್ಕಳು ಇಟ್ಟಿರುವಂತೆ,
ಬಿಳಿಯ ರಂಗೋಲಿ ಚುಕ್ಕೆಗಳು!

ಗಾಳಿಯಾಡುವ ಮಾತಿನಲ್ಲಿ,
ಮಧುರ ರಾಗವು ಮೂಡಿದೆ. 
ಎದೆಯ ನವಿರು ಭಾವಗಳಿಗೆ,
ಭಾಷೆಯೊಂದು ದೊರಕಿದೆ!

Thursday, June 11, 2020

ನೆನಪಿನ ಅಲೆಗಳು

ಸಾಗರ ತಟದೊಲು ಎನ್ನಯ ಮನವು,
ಸವೆದಿದೆ ಅಲೆಗಳ ಹೊಡೆತಕೆ ದಿನವೂ.

ಮರೆಯಬೇಕಿದೆ ದುಃಖದ ದಿನಗಳ,
ನೋವನು ಕೊಡುವ ನೆನಪಿನ ಅಲೆಗಳ!
ಪುಡಿಯಾಗುತಿದೆ ಅಲೆಗಳ ಹೊಡೆತಕೆ,
ಎದೆಯಾಗುತಿದೆ ಮರಳಿನ ಮಡಕೆ!

ನೆನಪಿಸಿಕೊಂಡು ನೋವಿನ ಕಥೆಯ,
ಸುರಿಸಿದೆ ಎದೆಯು ಕಣ್ಣೀರಿನ ವ್ಯಥೆಯ!
ಕಾಣುವುದಿಲ್ಲ ಕಣ್ಣೀರಿನ ಬಿಂದು,
ಕರಿಗಿಹೋಗಿದೆ ಜಲದಲಿ ಮಿಂದು!

ಕಣ್ಣೀರ ಕೋಡಿ ಹರಿದಿದೆ ಇಲ್ಲಿ,
ಮರಳಿನ ಕಣಗಳ ಸಾಕ್ಷಿಯಲ್ಲಿ!
ಹೆಪ್ಪುಗಟ್ಟಿದ ಹೃದಯವು ಕರಗಿದೆ,
ಸಾಗರ ಜಲವನು ಉಪ್ಪಾಗಿಸಿದೆ!

ನೆನಪಿನ ಅಲೆಗಳ ನೆರಳಿನ ಜೊತೆ,
ಮರೆಯಲು ಆಗದು ನೋವಿನ ಕಥೆ!
ಅಲೆಗಳು ನಿಂತರೆ ಪುನರ್ಜನ್ಮ,
ಗಾಳಿಯ ನಿಲ್ಲಿಸೋ ಪರಮಾತ್ಮ!

Sunday, June 7, 2020

ನಮ್ಮ ಲೋಕ

ನಮ್ಮಯ ಲೋಕ, ಹೆಮ್ಮಯ ಲೋಕ,
ಎಲ್ಲವ ಮೀರಿದ ಮಾಯಾಲೋಕ!

ಕೋಟಿ ಗ್ರಹಗಳಿಗೆ ಮುಕುಟಪ್ರಾಯ,
ನಿತ್ಯನೂತನ ಹರಯದ ಪ್ರಾಯ!
ಜೀವವ ಧರಿಸಿ, ಪ್ರೀತಿಯ ಉಣಿಸುವ,
ಬಣ್ಣದುಡುಗೆಯ ಚೆಲುವರಸಿ!

ವಿಶಾಲ ನಭದಲಿ ಹರಡಿದೆ ಹತ್ತಿ,
ಬಿಸಿಲನು ತಡೆದು ತಣಿಸುವ ಭಿತ್ತಿ.
ದಣಿದ ಬುವಿಗೆ ಕರುಣೆಯ ತೋರಿ,
ದಾಹವ ನೀಗುವ ಅಂಬರ ಪೋರಿ!

ನೀಲಿಯ ಬಾನು, ಹಸುರಿನ ಕಾನು,
ಕಾಡಿನ ಮರದಲಿ ತುಂಬಿದೆ ಜೇನು!
ಕಿವಿಯಲಿ ಗುನುಗಿದೆ ಹಕ್ಕಿಯ ಹಾಡು,
ಹೂಗಳ ಪರಿಮಳ ಸೆಳೆದಿದೆ ನೋಡು!

ಬೆಳಗಿಗೆ ಒಂದು, ರಾತ್ರಿಗೆ ಒಂದು,
ಬಾನನು ಬೆಳಗಿದೆ ಜೋಡಿದೀಪ.
ಏಳು ಬಣ್ಣಗಳ ಬೆಡಗಿನ ರೂಪ,
ರಂಗೋಲಿ‌ ಇಲ್ಲಿ ಇಂದ್ರಛಾಪ!

ಏಳುವ ದಿನಕರ ನಸುಕಿನಲಿ,
ಕುಂಚವು ಸಾವಿರ  ಕರಗಳಲಿ,
ಕೋಟಿ ಚಿತ್ರಗಳ ಬಿಡಿಸುತಲಿ,
ನಿದ್ದೆಗೆ ಜಾರುವ ಸಂಜೆಯಲಿ!

ಬಂದ, ಬಂದ, ರಾತ್ರಿಯ ರಾಜ,
ಬುವಿಗೆ ತಂದ ಹೊಸ ತೇಜ!
ಹಾಲನು ಹೊಯ್ದು, ಎದೆಯನು ತೊಯ್ದು,
ಮರೆಯಾದನು ಮನವನು ಕದ್ದೊಯ್ದು!

ಬಳಕುವ ನದಿಗಳ ಮೈಮಾಟ,
ಸಾಗರದಲೆಗಳ ಜಿದ್ದಿನ ಓಟ!
ಗಿರಿ, ಮೋಡಗಳ ಪ್ರೇಮ ಸಂಘರ್ಷ,
ತಂದಿದೆ ಕೊನೆಗೆ ಹರ್ಷದ ವರ್ಷ!

ಎಲ್ಲಿದೆ ಇಂತಹ ಮಾಯಾಲೋಕ?
ಕಾಣದ ಸ್ವರ್ಗವು ಬೇಕೇಕ?
ಇದ್ದರೂ ಗ್ರಹಗಳು  ಕೋಟಿ, ಕೋಟಿ,
ಸುಂದರ ಬುವಿಗೆ ಯಾರು ಸಾಟಿ?!


Saturday, June 6, 2020

ನಿಸರ್ಗ ಮಾತೆಯ ವ್ಯಥೆ

ನಿಸರ್ಗ ಮಾತೆಯ ಕಥೆಯ ಏನು ಹೇಳಲಿ?
ಕಣ್ಣೀರಿನ ವ್ಯಥೆಯೇ ಪ್ರತಿನಿತ್ಯ ಬಾಳಲಿ.
ಪರಿಸರಕೆ ಸಾಕೇ ಒಂದು ದಿನದ ಉತ್ಸವವು?
ಪ್ರಾಣವಾಯುವಿಲ್ಲದೆ ಹೇಗೆ ತಾನೆ ಬದುಕುವೆವು?

ನಿತ್ಯಪೂಜೆಗಿಲ್ಲಿ ಕೊಳಕುಗಳು, ಕಸಗಳು,
ಬುದ್ಧಿಮಾಂದ್ಯರಮ್ಮನಿಗೆ ಇನ್ನೆಂಥ ಬಾಳು!
ವಿಷದ ಧೂಪ ಹಾಕಿದರು ಧೂರ್ತರು, ಪಾಪಿಗಳು,
ಪ್ಲಾಸ್ಟಿಕ್ಕಿಂದ ಮುಚ್ಚಿವೆ ಶ್ವಾಸದ ನಳಿಕೆಗಳು!

ಕೊಡಲಿಯೇಟು ನಿತ್ಯವೂ ದೇಹದ ಮೇಲೆ,
ಇವರಿಗೆ ಕಲಿಸಲು ಎಲ್ಲೂ ಇಲ್ಲ ಶಾಲೆ!
ಔಷಧಿ ಆಗಿದೆ ಬಹುದೂರದ ನಂಟು,
ಗಾಯಕ್ಕೆ ಬಿದ್ದಿದೆ ಬರೆಯಂತೆ ಕಾಂಕ್ರೀಟು!

ಕಣ್ಣುತೆರೆಯಬೇಕಿದೆ ಎಲ್ಲ ಧೃತರಾಷ್ಟ್ರರು,
ಕಾಪಾಡಲು ಬರಲಿ ಪಾಂಡುವಿನ ಪುತ್ರರು!
ನಿಸರ್ಗ ಮಾತೆಗೆ ನಿತ್ಯವೂ ವೇದನೆ,
ನಿತ್ಯೋತ್ಸವವಾಗಬೇಕು ಪರಿಸರ ರಕ್ಷಣೆ!

ಬನ್ನಿ, ಎಲ್ಲ ಬನ್ನಿ, ಸೇರಿ ಮಾಡೋಣ ಶಪಥ,
ಭೂತಾಯ ರಕ್ಷಣೆಗೆ ಹುಡುಕೋಣ ಶತ ಪಥ!
ಆಗೋಣ ಬನ್ನಿ ಸ್ವಚ್ಛ ನಾಗರಿಕರು,
ನಿಸರ್ಗ ಮಾತೆಯ ಹೆಮ್ಮೆಯ ಪುತ್ರರು!

Tuesday, June 2, 2020

ತಾಯಿ-ತವರು

ತವರು ತಂಪು, ತಣ್ಗಂಪು, ತಣ್ಬನಿ,
ತಾಯಿ ತಂಬುಳಿ, ತಂಗಾಳಿ, ತಣ್ಗೊಳ.

ತಳಿರ ತಲ್ಪವು ತಾಯ ತೊಡೆಯು,
ತರುಣಾತಪವು ತಾಯ ತೆಕ್ಕೆಯು.
ತಾಯಿಲ್ಲದರೆಲ್ಲಿ ತವರು?
ತೋಂಟಿಗನಿಲ್ಲದೆಲ್ಲಿ ತೋಟವು?

ತಂತಿ ತಂಬೂರಿ, ತೊಗಲು ತಮಟೆ,
ತಳಿರು ತೋರಣ, ತುಹಿನ ತಂಪು,
ತಾವರೆ ತಟಾಕ, ತುಡುಪು ತೆಪ್ಪ,
ತಾಯಿ ತವರು, ತಾಯಿ ತವರು.

ತಂಗಳಿರಲಿ, ತುಪ್ಪವಿರಲಿ,
ತಿಮಿರವಿರಲಿ, ತಿಂಗಳಿರಲಿ,
ತಾಪವಿರಲಿ, ತಲ್ಪವಿರಲಿ,
ತುಡಿವ ತವರಿನ ತಂಪಿರಲಿ ತರಳೆಗೆ!

Monday, June 1, 2020

ಜೋಗ

ಜನಪ, ಜೋರುರವ, ಜವನ, ಜವ್ವನೆ,
ಜೊತೆಜೊತೆಯಲಿ ಜಿದ್ದಿನ ಜಲಕೇಳಿ!

ಜ್ಯೋತಿರ್ಲತೆಗಳ ಜಳಕವೋ,
ಜಾಜಿಮಲ್ಲೆಗಳ ಜಲಪಾತವೋ?
ಜುಮ್ಮೆನಿಸಿದೆ ಜೋಗದ ಜಂಪೆ,
ಜಂಬೂದ್ವೀಪದ ಜಲಜಿಂಕೆ!

ಜಟಾಜೂಟದಿಂ ಜಾರಿದ ಜಾಹ್ನವಿ,
ಜಿಗಿದಳು, ಜಿಗಿದಳು ಜುಮ್ಮನೆ.
ಜನಿಸಿದ ಜ್ಯೋತಿಯ ಜಗಮಗದಲಿ,
ಜಗದಲಿ ಜೀವನ ಜೋರಿನ ಜಲಸಾ!

ಜೀಮೂತಗಳು ಜಿನುಗಲಿ ಜಿನುಗಲಿ,
ಜಲವೃಷ್ಟಿಯು ಜೀಕಲಿ ಜೀಕಲಿ.
ಜನಿಸಲಿ ಜೀವಂತ ಜನಕರಾಗ,
ಜನುಮಕ್ಕಿರಲೊಮ್ಮೆ ಜೋಗದ ಜೋಗ!