Monday, September 26, 2022

ಮುಕ್ತಕಗಳು - ೭೦

ಎಲೆಯಲ್ಲಿ ಕೊಳೆಯಿರಲು ಊಟ ಮಾಡುವುದೆಂತು

ಕೊಳೆಯನ್ನು ತೊಳೆದು ಶುಭ್ರಗೊಳಿಸಲು ಬೇಕು  |

ಮಲಿನತೆಯು  ಮನದಲ್ಲಿ ಮನೆಮಾಡಿ ನಗುತಿರಲು

ಮುಳುವಾಯ್ತು ಸವಿನುಡಿಗೆ ~ ಪರಮಾತ್ಮನೆ||೩೪೬||


ಸುಖವಿಲ್ಲ ನಗನಾಣ್ಯ ದಿರಿಸು ಅರಮನೆಗಳಲಿ

ಸುಖವಿಹುದು ನಮ್ಮದೇ ಸ್ವಂತ ಮನಗಳಲಿ |

ಸಕಲ ಸಂತೋಷಗಳ ಆಕರವು ಎದೆಯಲಿರೆ

ಮಕುಟ ಬೇಕೇಕೆ ದೊರೆ ~ ಪರಮಾತ್ಮನೆ ||೩೪೭||


ಮಕುಟವಿರೆ ಚಿನ್ನದ್ದು ತಲೆಗಾಯ್ತು ಮಣಭಾರ

ಸಕಲ ಅಧಿಕಾರವಿರೆ ಕರ್ತವ್ಯಭಾರ |

ಸಕಲ ಐಶ್ವರ್ಯವಿರೆ ಭಯಭಾರ ಮನದಲ್ಲಿ

ಯುಕುತಿಯಲಿ ತೂಗಿರುವೆ ಪರಮಾತ್ಮನೆ ||೩೪೮||


ಸುಖ ಪಡಲು ಪರಮಾತ್ಮ ಜನುಮವನು ಕೊಟ್ಟಿರುವ

ನಖಶಿಖಾಂತದ ದೇಹ ಬುದ್ಧಿ ಮನಗಳನು |

ಸುಖ ಪಡಲು ದೇವರಲಿ ವಸ್ತುಗಳ ಬೇಡಿಹೆವು

ಪ್ರಖರ ಮಂದಮತಿಗಳು ~ ಪರಮಾತ್ಮನೆ ||೩೪೯||


ಬುದ್ಧಿಜೀವಿಗಳೆಂದು ಗದ್ದಲವ ಮಾಡಿಹರು

ಸದ್ದು ಮಾಡುತಿವೆ ಅರೆಬೆಂದ ಮಡಕೆಗಳು |

ಪೆದ್ದ ದೊರೆ ಕುರುಡನೊಲು ಆನೆಯನು ಮುಟ್ಟಿದವ

ಉದ್ಧರಿಸು ಇಂಥವರ ಪರಮಾತ್ಮನೆ ||೩೫೦||

Saturday, September 17, 2022

ಮುಕ್ತಕಗಳು - ೬೯

ಹೊಸಬೆಳಕ ಚೆಲ್ಲುವನು ರವಿ ಜಗದ ತುಂಬೆಲ್ಲ

ಫಸಲು ಮೇಟಿಯು ಬೆವರ ಹರಿಸಿದೆಡೆ ಮಾತ್ರ |

ಪಸರಿಸುವ ದೇವ ಕೃಪೆಯನ್ನು ಮಕ್ಕಳಿಗೆಲ್ಲ

ಬಸಿ ಬೆವರ ಪಡೆ ವರವ ~ ಪರಮಾತ್ಮನೆ ||೩೪೧||


ಕಾಲಕ್ರಮೇಣ ಕೆಲ ಜನರ ಮರೆತರೆ ನಾವು

ಕಾಲವನ್ನೇ ಮರೆಸೊ ಸ್ನೇಹಗಳು ಕೆಲವು |

ಕೋಲವಿದು, ಜನುಮಜನುಮಗಳ ಅನುಬಂಧವಿದು

ಬೇಲಿ ಕಟ್ಟುತ ಪೊರೆಯೊ ~ ಪರಮಾತ್ಮನೆ ||೩೪೨||

ಕೋಲ = ಸೊಗಸು


ಮೂರು ದಿನಗಳ ಸಂತೆ ಮುಗಿದುಹೋಗುವ ಮುನ್ನ

ಕೋರು ಸರಕೆಲ್ಲವೂ ಬಿಕರಿಯಾಗಲಿಕೆ |

ಸೇರುವುದು ಹೊಸ ಸರಕು ಮುಂದಿನಾ ಸಂತೆಯಲಿ

ಮಾರಾಟ ಬಲುಕಷ್ಟ ~ ಪರಮಾತ್ಮನೆ ||೩೪೩||


ಸಾವೆಂದು ಬರುವುದೋ ಹೇಗೆ ಕರೆದೊಯ್ವುದೋ

ನಾವಿಂದು ಅರಿಯುವಾ ಸಾಧನವು ಇಲ್ಲ |

ಜೀವನದ ಕೊನೆವರೆಗೆ ಬದುಕುವಾ ರೀತಿಯನು

ನಾವು ನಿರ್ಧರಿಸೋಣ ~ ಪರಮಾತ್ಮನೆ ||೩೪೪||


ಕೃತಿಚೋರನಿವ ಭಾವನೆಗಳನೇ ಕದ್ದಿಹನು

ಅತಿ ಅಧಮನಿವನು ಬರಡಾದ ಮನದವನು |

ಮತಿಗೇಡಿಯಾಗಿಹನು ಹೊಟ್ಟೆ ತುಂಬಿದ ಚೋರ

ಹತಮಾಡು ಸಂತತಿಯ ~ ಪರಮಾತ್ಮನೆ ||೩೪೫||

ಮುಕ್ತಕಗಳು - ೬೮

ಜೀವನದ ಪಂದ್ಯವದು ಎಷ್ಟು ದಿನಗಳ ಆಟ

ಯಾವ ದಿನ ಮುಗಿವುದೋ ಬಲ್ಲವರು ಯಾರು? |

ನಾವು ಗೆದ್ದವರೊ ಸೋತವರೊ ತಿಳಿಸುವರು ಜನ

ಸಾವ ಗೆದ್ದವರಾರು ~ ಪರಮಾತ್ಮನೆ ||೩೩೬||


ಎಳೆಯರಾಗುತಿರುವರು ಸ್ವಾರ್ಥದಾ ಮೂಟೆಗಳು

ತಲೆಗೆ ಹೋಗುತಿದೆ ಮಾತಾಪಿತರ ನಡತೆ |

ಬೆಳೆಯುವಾ ಸಮಯದಲಿ ಸರಿದಾರಿ ಹಿಡಿಯದಿರೆ

ಬೆಳಗುವರು ಹೇಗಿನ್ನು ~ ಪರಮಾತ್ಮನೆ ||೩೩೭||


ಕಲಬೆರೆಕೆ ಪಿಡುಗಿಂದು ಕೊಲ್ಲುತಿದೆ ಮಾನವರ

ಎಲೆಗೆ ಬಿದ್ದರೆ ಸಾಕೆ ಪರಿಶುದ್ಧ ಅನ್ನ |

ತಲೆಗೆ ಬೀಳಲೆಬೇಕು ಪರಿಶುದ್ಧ ಯೋಚನೆಯು

ಕೊಳೆಯ ತುಂಬುವೆಯೇಕೆ ~ ಪರಮಾತ್ಮನೆ ||೩೩೮||


ತಪ್ಪು ಮಾಡಿರುವುದರಿವಿಗೆ ಬಂದ ಕ್ಷಣದಲೇ

ತಪ್ಪೊಪ್ಪಿಗೆಯ ಕೇಳು ಸಂಬಂಧ ಉಳಿಸೆ |

ಕೊಪ್ಪರಿಗೆ ಧನಕೂಡ ಸರಿಪಡಿಸಲಾಗದದ

ತಪ್ಪದೆಲೆ ಕ್ಷಮೆಕೇಳು ~ ಪರಮಾತ್ಮನೆ ||೩೩೯||


ಪರಧನವ ತಿನ್ನುವುದೆ ಪರಮಾರ್ಥ ಎನ್ನುತಲಿ

ಪುರದ ಅಭಿವೃದ್ಧಿಯಲಿ ಕಳ್ಳತನ ಮಾಡೆ |

ಪರಮಾತ್ಮ ಶಿಕ್ಷಿಸುವ ಎಂದು ಕಾಯಲುಬೇಡಿ

ಜರಿದು ಶಾಪವ ಹಾಕಿ ~ ಪರಮಾತ್ಮನೆ ||೩೪೦||

ಮುಕ್ತಕಗಳು - ೬೭

ಸ್ವಾರ್ಥಿಗಳು ನಾವಿಂದು ನೆರೆಹೊರೆಗೆ ನೆರವಿಲ್ಲ

ಕಾರ್ಯಸಾಧನೆಗಾಗಿ ಹಿಡಿಯುವೆವು ಕಾಲು |

ದೂರ್ವಾಸರಾಗುವೆವು ಚಿಕ್ಕ ತೊಂದರೆಯಾಗೆ

ಈರ್ಷೆ ಬಿಂಕಗಳ ತೊರೆ ~ ಪರಮಾತ್ಮನೆ ||೩೩೧||


ಧನವಿರದೆ ಹೋದರೂ ಕಡಪಡೆದು ನಡೆಸುವರು

ಮನವಿರದೆ ಇರಲು ಮಾಡುವುದೆಂತು ಕೆಲಸ? |

ತನುಮನಗಳಣಿಗೊಳಿಸಿ ಮುಂದಾಗು ಕಾಯಕಕೆ

ಧನ ಬೆಲೆಗೆ ದೊರಕುವುದು ~ ಪರಮಾತ್ಮನೆ ||೩೩೨||


ಅರಿವ ಹೆಚ್ಚಿಸಬೇಕು ಪ್ರತಿನಿತ್ಯ ತುಸುತುಸುವೆ

ಮೆರೆಯದಿರು ಎಲ್ಲವನು ಅರಿತವನು ಎಂದು |

ಅರಿತೆಯೆಲ್ಲವನೆಂದು ನಂಬಿದರೆ ನೀ ಹಿಡಿವೆ

ಗಿರಿಯಇಳಿ ಯುವದಾರಿ ~ ಪರಮಾತ್ಮನೆ ||೩೩೩||


ಜನುಮಗಳ ಕೊಂಡಿಗಳು ಪಾಪಗಳು ಪುಣ್ಯಗಳು

ಕೊನೆಯಿಲ್ಲದಂತೆ ಜೊತೆಯಲ್ಲೆ ಬರುತಿಹವು |

ಮನೆಯ ಬಂಧುಗಳಂತೆ ಇರುತ ಸುಖ ದುಃಖಗಳ

ಗೊನೆಯನ್ನು ನೀಡುವವು ~ ಪರಮಾತ್ಮನೆ ||೩೩೪||


ಮತಿಯಲ್ಲಿ ಸದ್ವಿಚಾರಗಳು ಬೆಳೆಯಲಿ ಸದಾ

ಇತಿಮಿತಿಯ ಮಾತುಗಳು ನಸುನಗುತಲಿರಲಿ |

ಕೃತಿಯಿರಲಿ ಎಲ್ಲರೂ ನೋಡಿ ಕಲಿಯುವ ರೀತಿ

ಜೊತೆಯಾಗುವುದು ದೈವ ~ ಪರಮಾತ್ಮನೆ ||೩೩೫||

ಮುಕ್ತಕಗಳು - ೬೬

ಫಲವತ್ತು ಭೂಮಿಯದು ಮನುಜನಾ ಹೃದಯವೇ

ಬೆಳೆಯುವುದು ಸೊಂಪಾಗಿ ಬಿತ್ತು ನೀ ಸುಗುಣ |

ಕಳೆ ಕೀಟಗಳ ಕಾಟವನು ಕೊನೆಗೊಳಿಸು ನಿತ್ಯ

ಕಲಿಗೆ ಊಟದ ಕೊರತೆ ~ ಪರಮಾತ್ಮನೆ ||೩೨೬||


ಸಮಯಕ್ಕೆ ರಜೆಯಿಲ್ಲ ಜಮೆಮಾಡಲಾಗದದ

ವಿಮೆಯ ಮಾಡಿಸಲಾರೆ ದೊರೆತ ಸಮಯಕ್ಕೆ |        

ಗಮನವಿಡಬೇಕು ಚಣಚಣವ ಉಪಯೋಗಿಸಲು

ನಮಗಮೂಲ್ಯಸಿರಿಯದು ~ ಪರಮಾತ್ಮನೆ ||೩೨೭||


ಪರಿಹಾರ ಹುಟ್ಟುವುದು ತೊಂದರೆಯ ಜೊತೆಯಲ್ಲೆ

ಅರಿವ ಬೆಳೆಸಲುಬೇಕು ಪರಿಹಾರ ಹುಡುಕೆ |

ಗಿರಿಶಿಖರ ತಲಪುವಾ ಸೋಪಾನ ಕಟ್ಟಲಿಕೆ

ಗಿರಿಯ ಬಂಡೆಗಳಿಹವು ~ ಪರಮಾತ್ಮನೆ ||೩೨೮||


ಜನನಿಬಿಡ ಪಟ್ಟಣದೆ ಅತ್ತರಿಗೆ ಬೆಲೆಹೆಚ್ಚು

ಬನದ ಕುಸುಮದ ಗಂಧ ಮೂಸುವವರಿಲ್ಲ |

ಜನವ ಮುಟ್ಟುವ ವಸ್ತು ಬೇಡಿಕೆಯಲಿರಲೇನು

ಗುಣವ ಕಡೆಗಣಿಸದಿರು ಪರಮಾತ್ಮನೆ ||೩೨೯||


ಯಾರದೋ ಮೆಚ್ಚುಗೆಗೆ ವಸ್ತುಗಳ ಕೊಳ್ಳುವೆವು

ತೋರಲಿಕೆ ನಮ್ಮ ಸಂಪತ್ತಿನಾ ಘನತೆ  |

ತೀರದಾ ದಾಹವದು ಸುಡುತಿಹುದು ನೆಮ್ಮದಿಯ

ಹೀರು ಆಧ್ಯಾತ್ಮ ಜಲ ~ ಪರಮಾತ್ಮನೆ ||೩೩೦||

Tuesday, September 6, 2022

ಮುಕ್ತಕಗಳು - ೬೫

ದಿನಮಣಿಯೊ ಲರಬೇಕು ಕರ್ತವ್ಯನಿಷ್ಠೆಯಲಿ

ಕನಕನಂತಿರಬೇಕು ಅಚಲ ವಿಶ್ವಾಸ |

ಜನಕನಂತಿರಬೇಕು ಫಲದಾಸೆ ಇಲ್ಲದೆಯೆ

ಬೆನಕ ನೀಗುವ ವಿಘ್ನ ~ ಪರಮಾತ್ಮನೆ ||೩೨೧||


ಪರಿವಾರವೆನೆ ಇಂದು ಪತಿಪತ್ನಿಯರು ಮಾತ್ರ

ಪರಿಧಿಯನು ದಾಟಿಹರು ಮಕ್ಕಳೂ ಈಗ |    

ಹರಿ ನಿನ್ನ ವಸುದೈವದಾ ಕುಟುಂಬವೆಲ್ಲೋ

ಬರಡಾಯ್ತು ಎದೆಯೇಕೆ  ಪರಮಾತ್ಮನೆ ||೩೨೨||


ಆಕಾರವಿಲ್ಲ ಬಲ್ಲೆವು ನಿನಗೆ ಪರಮಾತ್ಮ

ಸಾಕಾರ ರೂಪದಲಿ ನಿನ್ನ ಪೂಜಿಪೆವು |

ಬೇಕು ಕೇಂದ್ರೀಕರಿಸೆ ಚಂಚಲದ ಚಿತ್ತವನು

ಸಾಕಾರ ರೂಪವೇ ~ ಪರಮಾತ್ಮನೆ ||೩೨೩||


ಎಡವಿ ಬಿದ್ದರೆ ನಾವು ಭೂಮಿಯದು ತಪ್ಪೇನು?

ಕೊಡವಿಕೊಂಡೇಳುತಿರು ಕಣ್ಣನ್ನು ತೆರೆದು |

ಕಡವ ಪಡೆದವ ನಿನಗೆ ಹಿಂತಿರುಗಿ ನೀಡದಿರೆ

ಮಡೆಯ ನೀನಲ್ಲವೇ? ~ ಪರಮಾತ್ಮನೆ ||೩೨೪||


ಎಲುಬಿರದ ನಾಲಿಗೆಯು ಚಾಪಲ್ಯ ಮೆರೆಸುತಿದೆ

ತಲೆಯಲ್ಲಿ ಮೂಡುತಿಹ ಜೋಕೆಯನು ಕೊಂದು |

ಕಳೆಯುತಿರೆ ಮಯ್ಯೊಳಿತು ದಿನದಿನವು ಮತ್ತೇನು

ಬಳಿಸಾರುವುದು ರೋಗ ~ ಪರಮಾತ್ಮನೆ ||೩೨೫||

ಮುಕ್ತಕಗಳು - ೬೪

ಚಿಕ್ಕ ಬೀಜದೊಳಗಿದೆ ದೊಡ್ಡ ಮರದಾ ನಕ್ಷೆ

ಚೊಕ್ಕದಲಿ ಮೊಳೆತು ಬೆಳೆಯುತ್ತ ಮರವಾಯ್ತು |

ಸಿಕ್ಕ ಸಂಸ್ಕಾರವೇ ರೂಪಿಸಿದೆ ಎಳೆಯರನು

ಲೆಕ್ಕವದು ತಪ್ಪುವುದೆ ~ ಪರಮಾತ್ಮನೆ ||೩೧೬||


ರಂಗಾದ ದಿರಿಸುಗಳು ದೇಹಕ್ಕೆ ಸಿಂಗಾರ

ಬಂಗಾರ ದೊಡವೆಗಳು ಹೆಚ್ಚಿಸಿವೆ ಹೊಳಪು |

ಲಂಗು ಪಾವಿತ್ರ್ಯಸುಖ ಜ್ಞಾನ ಬಲ ಪ್ರೇಮಗಳು

ಸಿಂಗಾರ ಒಳಮನಕೆ ~ ಪರಮಾತ್ಮನೆ ||೩೧೭||

ಲಂಗು = ಕುದುರೆಯ ಬಾಯಿಗೆ ಹಾಕುವ ತಡೆ


ಕೊಟ್ಟು ಹೋಗುತಿರು ಮನುಜಾ ನಿನ್ನದೆಲ್ಲವನು

ಬಿಟ್ಟು ಹೋಗಲುಬೇಕು ಎಷ್ಟಿದ್ದರೇನು |

ಕಟ್ಟಿಕೊಳ್ಳುವೆ ಮೂಟೆಯಲಿ ಪಾಪಪುಣ್ಯಗಳ

ಚಟ್ಟ ಹತ್ತುವ ಮೊದಲು ~ ಪರಮಾತ್ಮನೆ ||೩೧೮||


ತ್ರಿಗುಣಗಳ ಜಗದಿ ಚಾತುರ್ವರ್ಣಗಳ ಸೃಷ್ಟಿ

ಭಗವಂತ ತೋರಿದಾ ಕಾಯಕದ ದಾರಿ |

ಅಗಣಿತದ ವರ್ಣಗಳ ಸೃಷ್ಟಿಸಿದ ಮಾನವನು

ಮಿಗವಾಗಿ ಮೆರೆಯುತಿಹ ~ ಪರಮಾತ್ಮನೆ ||೩೧೯||


ಉಳಿತಾಯ ಮಾಡುವುದು ಎಂತು ಈ ಕಾಲದಲಿ

ಕಳೆಯುವಾ ದಾರಿಗಳು ಹೆಚ್ಚುತಿವೆ ನಿತ್ಯ |

ಕೊಳಲಿನಾ ಸಂಗೀತ ಮಧುರವಾಗುವುದೆಂತು

ಕೊಳಲಿನಲಿ ಬಹುರಂಧ್ರ ~ ಪರಮಾತ್ಮನೆ ||೩೨೦||

ಮುಕ್ತಕಗಳು - ೬೩

ಎಲ್ಲರಾ ತಲೆಮೇಲೆ ಗಾಜಿನಾ ಛಾವಣಿಯು

ಎಲ್ಲರೂ ಅರಿತಿಲ್ಲ ಛಾವಣಿಯ ಮಟ್ಟ |

ಅಲ್ಲಿಗೇರುವವನೇ ಛಲದಂಕಮಲ್ಲ ನೀ

ನಿಲ್ಲದೆಯೆ ಮೇಲೇರು ~ ಪರಮಾತ್ಮನೆ ||೩೧೧||


ಕೊಳುತಿಹರು ಕೊಳುತಿಹರು ಇಲ್ಲದಾ ಹಣದಿಂದ

ಬೆಲೆಯಿಲ್ಲ ಮನೆಯಲ್ಲಿ ತುಂಬಿಹುದು ಕಸವು |

ಒಲೆಯ ಮೇಲಿನ ಹಾಲು ಉಕ್ಕಿಹರಿ ಯುತಲಿಹುದು

ತಲೆಯ ಮೇಗಡೆ ಸಾಲ ~ ಪರಮಾತ್ಮನೆ ||೩೧೨||


ಎಲೆಯ ತಿನ್ನುವ ಕೀಟ ಚಿಟ್ಟೆಯಾಗುವ ರೀತಿ

ಬೆಳೆದು ಪಸರಿಸು ನಿನ್ನ ರೆಕ್ಕೆಗಳ ಜಗದಿ |

ಬಿಲದಿ ಇಲಿಯಾಗಿರಲು ಹೇಗೆ ನೋಡುವೆ ಜಗವ

ಕಲಿಯೆ ದೇಶವ ಸುತ್ತು  ಪರಮಾತ್ಮನೆ ||೩೧೩||


ಜಲಧಿಯಲೆಗಳ ನಡುವೆ ಧ್ಯಾನ ಮಾಡುವೆ ಹೇಗೆ

ಜಲಪಾತದಡಿಯಲ್ಲಿ ಸ್ನಾನವದು ಎಂತು? |

ಕಲಿ ಶಾಂತವಿರಿಸೆ ಮನದಾಲೋಚನೆಯಲೆಗಳ

ಉಲಿವ ಒಳಗಿನ ಬಂಧು ~ ಪರಮಾತ್ಮನೆ ||೩೧೪||


ನವರಾತ್ರಿ ಶುಭರಾತ್ರಿ ಭಾರತೀಯರಿಗೆಲ್ಲ

ನವದುರ್ಗೆಯರ ಪೂಜೆ ಸಂಭ್ರಮದ ಸಮಯ |

ಅವಿರತವು ದಶಕಂಠ, ಮಹಿಷಾಸುರರ ದಮನ

ನವಹರ್ಷ ಪ್ರಜೆಗಳಿಗೆ ~ ಪರಮಾತ್ಮನೆ ||೩೧೫||

ಮುಕ್ತಕಗಳು - ೬೨

ತುಟಿಯಂಚಿನಲಿ ಬಂದ ನುಡಿಗಳಿಗೆ ಬೆಲೆಯಿಲ್ಲ

ನಟನೆಯೆಂಬುದು ತಿಳಿಯೆ ಸಮಯಬೇಕಿಲ್ಲ |

ಸಟೆಯಾಡುವುದಕೆ ಸಮ ಎದೆಯ ನುಡಿಯಾಡದಿರೆ

ತಟವಟವ ತೊರೆದುಬಿಡು ಪರಮಾತ್ಮನೆ ||೩೦೬||

ತಟವಟ = ಬೂಟಾಟಿಕೆ


ಕಸಬಿನಲಿ ಕೀಳ್ಯಾವ್ದು ಮೇಲ್ಯಾವ್ದು ಹೇಳಯ್ಯ

ಕಸವ ತೆಗೆಯುವುದರಲಿ ಕೀಳುತನವೆಲ್ಲಿ?

ಬಿಸುಡಿದರೆ ಕಸವನ್ನು ಎಲ್ಲೆಂದರಲ್ಲಿಯೇ

ಹೆಸರಾದೆ ಕೀಳ್ತನಕೆ ~ ಪರಮಾತ್ಮನೆ ||೩೦೭||


ಅನ್ನಕ್ಕೆ ಚಿನ್ನಕ್ಕೆ ಹೋಲಿಕೆಯು ತರವೇನು

ಚಿನ್ನವನು ತಿನ್ನುವೆಯ ಹೊಟ್ಟೆ ಹಸಿದಿರಲು |

ನಿನ್ನ ಹೋಲಿಸಲೇಕೆ ಇನ್ನಾರದೋ ಜೊತೆಗೆ

ನಿನ್ನಬೆಲೆ ನಿನಗುಂಟು ~ ಪರಮಾತ್ಮನೆ ||೩೦೮||


ಕಾಲಚಕ್ರವು ತಿರುಗಿ ಮುನ್ನಡೆಸುತಿದೆ ಜಗವ

ಜಾಲವಿದು ಕಾಲದಲಿ ಖೈದಿಗಳು ನಾವು |

ಚಾಲಕನು ಕಾಣಸಿಗ ತಲುಪುವುದು ಎಲ್ಲಿಗೋ

ಕೇಳುವುದು ಯಾರನ್ನು ~ ಪರಮಾತ್ಮನೆ ||೩೦೯||


ದಾರಿದೀಪದ ಬೆಳಕು ದಾರಿಗೇ ಸೀಮಿತವು

ಕಾರಿರುಳ ಮನೆಗೆ ಬೆಳಕಾಗಲಾರದದು |

ನೂರಿರಲು ಶಿಕ್ಷಕರು ಬದುಕುವುದ ಕಲಿಸಲಿಕೆ

ತೋರುವರೆ ಒಳದೈವ ಪರಮಾತ್ಮನೆ ||೩೧೦||

Monday, September 5, 2022

ಮುಕ್ತಕಗಳು - ೬೧

ಝಗಮಗಿಸೊ ದೀಪಗಳು, ಎದೆಯಲ್ಲಿ ಕತ್ತಲೆಯು

ಧಗಧಗನೆ ಉರಿಯುತಿದೆ ಬೇಕುಗಳ ಬೆಂಕಿ |

ನಿಗಿನಿಗಿಸೊ ಕೆಂಡಗಳು ಸುಡುತಿರಲು ಮನಗಳನು

ಹೊಗೆಯಾಡುತಿದೆ ಬುವಿಯು ~ ಪರಮಾತ್ಮನೆ ||೩೦೧||


ದಶಕಂಠನದು ಒಂದು ದೌರ್ಬಲ್ಯ ಮಾತ್ರವೇ

ನಶೆಯಿತ್ತು ಪರನೀರೆ ವ್ಯಾಮೋಹವಧಿಕ |

ಯಶ ಶೌರ್ಯ ಪಾಂಡಿತ್ಯ ಬರಲಿಲ್ಲ ಕೆಲಸಕ್ಕೆ

ವಿಷವಾಯ್ತು ಹೆಣ್ಣಾಸೆ ಪರಮಾತ್ಮನೆ ||೩೦೨||


ತನುವ ಸುಂದರವಿಡಲು ಈಸೊಂದು ಶ್ರಮವೇಕೆ

ಮನವ ಸುಂದರವಾಗಿ ಇರಿಸೋಣ ನಾವು |

ಶುನಕ ಬಿಳಿಯಿರಲೇನು ಹೊಲಸ ತೊರೆಯುವುದೇನು

ಗುಣಕೆ ಬೆಲೆ ಮೆಯ್‌ಗಲ್ಲ ~ ಪರಮಾತ್ಮನೆ ||೩೦೩||


ನಾವು ಓಡುವುದೇಕೆ ಪಕ್ಕದವ ಓಡಿದರೆ

ಜೀವನವು ಪಂದ್ಯವೇ? ಪೋಟಿಯೇನಿಲ್ಲ |

ಸಾವು ಬರುವುದರೊಳಗೆ ಅನುಭವಿಸು ಪ್ರೀತಿಯನು

ಕೋವಿ ಗುಂಡಾಗದಿರು ~ ಪರಮಾತ್ಮನೆ ||೩೦೪||


ಕಲಿತು ಮಾಡುವ ಕೆಲಸ ಉತ್ತಮವು ನಿಜವಾಗಿ

ಕಲೆತು ಮಾಡುವ ಕೆಲಸ ಸರ್ವೋಪಯೋಗಿ |

ಕಲೆತು ಕಲಿಯುತ ಮಾಡುವುದು ಮಹಾ ಶ್ರೇಷ್ಠವದು

ಕಲೆಯುವುದ ಕಲಿಯೋಣ ಪರಮಾತ್ಮನೆ ||೩೦೫||