Tuesday, February 25, 2020

ಮುನಿಸೇಕೆ ಮನದನ್ನೆ?






ಮುನಿಸೇಕೆ ಮನದನ್ನೆ, ಮನದರಸಿ
ಕಾತುರದಿ ಬಂದಿರುವೆ ನಿನ್ನನರಸಿ

ಕಲ್ಲಾಯಿತೇಕೆ ಕೋಮಲ ಹೃದಯ?
ಮರೆತೆಯಾ ಜೊತೆಯ ಮಧುರ ದಿನಗಳ?
ನಕ್ಷತ್ರಗಳ ನೋಡುತ ಕಳೆದ ಕ್ಷಣಗಳ?
ಮುಂಗಾರು ಮಳೆಯ ಕಚಗುಳಿಗಳ?

ನೀಲವೇಣಿಯೇ ನಿನ್ನ ಕೇಶದಲಿ ಬಂದಿ
ನಾನಾಗಿದ್ದೆ ನಿನ್ನೆದೆಯ ಪಂಜರದಲಿ,
ಸಂತಸದ ಆಗಸದಲಿ ಹಾರಾಡುತ
ಸಗ್ಗದ ಸೀಮೆಯಲಿ ತೇಲುತಲಿದ್ದೆ.

ತಿರುಗಿ ನೋಡೊಮ್ಮೆ ಕುಂಭನಿತಂಬೆ,
ಕಿರುಕಟಿಯ ಸಿರಿಮನದ ಚೆಲುವೆ,
ಬಿರುನುಡಿಯಾಡಿದ ತಪ್ಪು ನನ್ನದು
ಕ್ಷಮಿಸಲಾರೆಯ ನಿನ್ನೆದೆಯಲಿ ನನ್ನನೊರಗಿಸಿ?

Monday, February 24, 2020

ಮನದ ಅಂಗಳದಲ್ಲಿ

ನನ್ನ ಮನದ ಅಂಗಳದಲ್ಲಿ,
ದಿನಕೊಂದು ಹೊಸತು ರಂಗವಲ್ಲಿ.

ಕಹಿಯ ಕಸವನು ಗುಡಿಸಿ,
ನಗೆಯ ನೀರನು ಚೆಲ್ಲಿ, ನಲ್ಲೆ
ಬಿಡಿಸುವಳು ಚೆಲುವ ರಂಗವಲ್ಲಿ,
ದಿನವೂ ಬಣ್ಣದ ಕನಸು ಅಲ್ಲಿ.

ನಡೆಯುತಿದೆ ಪರಿಪಾಠ ದಿನದಿನವೂ ಪ್ರತಿದಿನವೂ,
ತಪ್ಪಿಲ್ಲ, ತಡೆಯಿಲ್ಲ, ಮರೆವಂತು ಇಲ್ಲವೇ ಇಲ್ಲ,
ಬೆಟ್ಟದ ಮೇಲೆ ಬೀಸುವ ಗಾಳಿಯಂತೆ,
ಮುಂಜಾನೆಯ ಮೂಡಣದ ಸೂರ್ಯನಂತೆ.

ಅಂದೊಂದು ದಿನ, ಗುಡುಗಿತ್ತು, ಸಿಡಿಲಿತ್ತು,
ಧೋ ಎಂದು ಸುರಿದಿತ್ತು ದಿನವೆಲ್ಲ.
ಚದುರಿಹೋಗಿತ್ತು ಮುಂಜಾನೆಯ ರಂಗವಲ್ಲಿ,
ಕರಿಗಿಹೋಗಿತ್ತು ಕನಸು, ಮಳೆಯ ನೀರಿನಲ್ಲಿ.

ಮಳೆ ನಿಂತಾಯಿತು, ದಿನ ಹತ್ತಾಯಿತು,
ಬರಲಿಲ್ಲ ಅವಳು ಹಾಕಲು ನಗುವ ರಂಗವಲ್ಲಿ.
ನಗುವಿಲ್ಲ, ನಲಿವಿಲ್ಲ, ತಂಪಿನ ಇಂಪಿಲ್ಲ,
ಬರಡು ಬರಡಾಯಿತು, ಇನ್ನು ಮನಕೆ ಮುದವೆಲ್ಲಿ?

ಹೀಗೇಕೆ ಮಾಡಿದಳು? ಬರಲಿಲ್ಲವೇಕವಳು?
ತಲೆಯೆತ್ತಿ ನೋಡಿದರೆ ಕಾಣಿಸಿತು,
ಮುಚ್ಚಿದ್ದ ಅಂಗಳದ ಬಾಗಿಲು,
ಅದಕೆ ನಾನೇ ಜಡಿದಿದ್ದ ಬೀಗಗಳು!

ಹೊಸಬೆಳಕು

ಉದಯಿಸಿದೆ ಹೊಸಬೆಳಕು,
ಹಳೆಯ ಕತ್ತಲೆಯ ಸೀಳಿ ಬಂದು.
ಮೂಡುತಿವೆ ಕನಸುಗಳು,
ಹೊಸ ಬೆಳಕಿನಲಿ ಮಿಂದು ಇಂದು.

ಮನಮನಗಳ ನಡುವೆ ಗೋಡೆ ಏಕೆ?
ಕೂಪಮಂಡೂಕಗಳ ಗೊಡವೆ ಬೇಕೆ?
ಬರಲಿ, ಹಿತದ ತಂಪನೆಯ ತಂಗಾಳಿ.
ಇರಲಿ, ಜ್ಞಾನದಾಹದ ಬೆಂಕಿಬಿರುಗಾಳಿ.

ಒಡೆದ ವಿಶ್ವದ ಬಿರುಕುಗಳ,
ಮುಚ್ಚಿ ಮರೆಸಲಿ ಸ್ನೇಹದಂಟು.
ಕದಡಿ ಮುದುಡಿದ ಮನಗಳು,
ಚಿಗುರಲಿ, ಸುಖವು ಮುಂದೆ ಉಂಟು.

ಕಾಡದಿರಲಿ ಹಳೆಯ ನೋವುಗಳು,
ಮಧುರ ನೆನಪುಗಳು ಮಾಸದಿರಲಿ.
ತಳಿರು ತೋರಣಗಳು ಇರಲಿ ನಿತ್ಯ,
ಸಾಗುತಿರಲಿ ಕಾಯಕ, ಅದುವೆ ಸತ್ಯ!