Showing posts with label ಮನಸ್ಸು. Show all posts
Showing posts with label ಮನಸ್ಸು. Show all posts

Sunday, January 8, 2023

ಮುಕ್ತಕಗಳು - ೯೬

ಮಕ್ಕಳಾ ಮಾತುಗಳು ಚಿಲಿಪಿಲಿಯ ಇಂಪಂತೆ

ಪಕ್ಕದಲೆ ಅರಳುತಿಹ ಚೆಲುವ ಹೂವಂತೆ |

ಚಿಕ್ಕದಾದರು ಕೂಡ ದೊಡ್ಡ ಹರುಷವನೀವ

ಸಕ್ಕರೆಯ ಗೊಂಬೆಗಳು ~ ಪರಮಾತ್ಮನೆ ||೪೭೬||


ಉತ್ತಮರು ಆಗೋಣ ಇಂದಿಗಿಂತಲು ನಾಳೆ

ಉತ್ತಮರು ಆಗೋಣ ನಮಗಿಂತ ನಾವು |

ಇತ್ತ ಎದುರಾಳಿಗಳು ಬೇರೆ ಯಾರೂ ಅಲ್ಲ

ಕುತ್ತಿರದ ದಾರಿಯಿದು ~ ಪರಮಾತ್ಮನೆ ||೪೭೭||


ಶಿಶುವಾಗುವರು ಜನರು ಆನಂದ ಹೆಚ್ಚಿರಲು

ಪಶುವಾಗುವರು ಅವರೆ ಕ್ರೋಧ ಉಕ್ಕಿರಲು! |

ವಶವಾಗದಿರಬೇಕು ವಿಷಯಗಳ ಹಿಡಿತಕ್ಕೆ

ನಶೆಯು ಮನ ಕೆಡಿಸುವುದು ~ ಪರಮಾತ್ಮನೆ ||೪೭೮||


ವೇಗ ಹೆಚ್ಚಾದಂತೆ ಮಾನವನ ಬದುಕಿನಲಿ

ಸೋಗು ಹೆಚ್ಚಾಗುತಿದೆ ನೀತಿ ಕೊರೆಯಾಗಿ |

ಜೌಗಿನಲಿ ಜಾರುತಿರೆ ಮುನ್ನೆಡವ ಕಾಲುಗಳು

ಜಾಗರೂಕತೆ ಇರಲಿ ~ ಪರಮಾತ್ಮನೆ ||೪೭೯||


ತೇಲದಿರು ಕನಸಿನಲಿ ಸಾಲ ದೊರೆತಿದೆಯೆಂದು

ಸಾಲವೆಂಬುದು ಎರಡು ಮೊನಚಿನಾ ಖಡ್ಗ! |

ಬೇಲಿಯಿಲ್ಲದ ಹೊಲಕೆ ಆನೆ ನುಗ್ಗಿದ ಹಾಗೆ

ಸಾಲ ಮಿತಿಮೀರಿದರೆ ~ ಪರಮಾತ್ಮನೆ ||೪೮೦||

Saturday, September 17, 2022

ಮುಕ್ತಕಗಳು - ೬೭

ಸ್ವಾರ್ಥಿಗಳು ನಾವಿಂದು ನೆರೆಹೊರೆಗೆ ನೆರವಿಲ್ಲ

ಕಾರ್ಯಸಾಧನೆಗಾಗಿ ಹಿಡಿಯುವೆವು ಕಾಲು |

ದೂರ್ವಾಸರಾಗುವೆವು ಚಿಕ್ಕ ತೊಂದರೆಯಾಗೆ

ಈರ್ಷೆ ಬಿಂಕಗಳ ತೊರೆ ~ ಪರಮಾತ್ಮನೆ ||೩೩೧||


ಧನವಿರದೆ ಹೋದರೂ ಕಡಪಡೆದು ನಡೆಸುವರು

ಮನವಿರದೆ ಇರಲು ಮಾಡುವುದೆಂತು ಕೆಲಸ? |

ತನುಮನಗಳಣಿಗೊಳಿಸಿ ಮುಂದಾಗು ಕಾಯಕಕೆ

ಧನ ಬೆಲೆಗೆ ದೊರಕುವುದು ~ ಪರಮಾತ್ಮನೆ ||೩೩೨||


ಅರಿವ ಹೆಚ್ಚಿಸಬೇಕು ಪ್ರತಿನಿತ್ಯ ತುಸುತುಸುವೆ

ಮೆರೆಯದಿರು ಎಲ್ಲವನು ಅರಿತವನು ಎಂದು |

ಅರಿತೆಯೆಲ್ಲವನೆಂದು ನಂಬಿದರೆ ನೀ ಹಿಡಿವೆ

ಗಿರಿಯಇಳಿ ಯುವದಾರಿ ~ ಪರಮಾತ್ಮನೆ ||೩೩೩||


ಜನುಮಗಳ ಕೊಂಡಿಗಳು ಪಾಪಗಳು ಪುಣ್ಯಗಳು

ಕೊನೆಯಿಲ್ಲದಂತೆ ಜೊತೆಯಲ್ಲೆ ಬರುತಿಹವು |

ಮನೆಯ ಬಂಧುಗಳಂತೆ ಇರುತ ಸುಖ ದುಃಖಗಳ

ಗೊನೆಯನ್ನು ನೀಡುವವು ~ ಪರಮಾತ್ಮನೆ ||೩೩೪||


ಮತಿಯಲ್ಲಿ ಸದ್ವಿಚಾರಗಳು ಬೆಳೆಯಲಿ ಸದಾ

ಇತಿಮಿತಿಯ ಮಾತುಗಳು ನಸುನಗುತಲಿರಲಿ |

ಕೃತಿಯಿರಲಿ ಎಲ್ಲರೂ ನೋಡಿ ಕಲಿಯುವ ರೀತಿ

ಜೊತೆಯಾಗುವುದು ದೈವ ~ ಪರಮಾತ್ಮನೆ ||೩೩೫||

Thursday, January 28, 2021

ಚಂಚಲ ಮನಸ್ಸು

 ಊಸರವಳ್ಳಿ, ಊಸರವಳ್ಳಿ,

ಬಣ್ಣವ ಬದಲಿಸೊ ಕಳ್ಳಿ, ಮಳ್ಳಿ!

ನಿಮಿಷಕೆ ಒಂದು, ಚಣಕೆ ಒಂದು,

ಬಣ್ಣವು ಈ ಮನಸಿನ ಬಂಧು!


ಪಾತರಗಿತ್ತಿ, ಪಾತರಗಿತ್ತಿ,

ಹೂವಿಂದ ಹೂವಿಗೆ ಹಾರುತ್ತಿ!

ಆಕಡೆ, ಈಕಡೆ ಹಾರು ಬೇಡ,

ಮನಸೇ ನಿಲ್ಲು ನೀ ಒಂದು ಕಡೆ!


ಮನಸೇ ನೀನು ತಂಪಿನ ಗಾಳಿ,

ಆಗುವೆ ಆಗಾಗ ಸುಂಟರಗಾಳಿ!

ತಲ್ಲಣಗೊಳಿಸಿ, ತಪ್ಪನು ಮಾಡಿಸಿ,

ಬಿರುಗಾಳಿ ಎಬ್ಬಿಸುವೆ ಬಾಳಿನಲಿ!


ಬೆಣ್ಣೆಯು ನೀನೇ, ಬಂಡೆಯು ನೀನೇ,

ಕೋಪದ ಬೆಂಕಿಯ ಉಂಡೆಯು ನೀನೇ!

ಕರುಣೆಯು ನೀನೇ, ಧರಣಿಯು ನೀನೇ!

ಸಹಸ್ರ ಮುಖದ ಮಾಯೆಯೂ ನೀನೇ!

Monday, February 24, 2020

ಮನದ ಅಂಗಳದಲ್ಲಿ

ನನ್ನ ಮನದ ಅಂಗಳದಲ್ಲಿ,
ದಿನಕೊಂದು ಹೊಸತು ರಂಗವಲ್ಲಿ.

ಕಹಿಯ ಕಸವನು ಗುಡಿಸಿ,
ನಗೆಯ ನೀರನು ಚೆಲ್ಲಿ, ನಲ್ಲೆ
ಬಿಡಿಸುವಳು ಚೆಲುವ ರಂಗವಲ್ಲಿ,
ದಿನವೂ ಬಣ್ಣದ ಕನಸು ಅಲ್ಲಿ.

ನಡೆಯುತಿದೆ ಪರಿಪಾಠ ದಿನದಿನವೂ ಪ್ರತಿದಿನವೂ,
ತಪ್ಪಿಲ್ಲ, ತಡೆಯಿಲ್ಲ, ಮರೆವಂತು ಇಲ್ಲವೇ ಇಲ್ಲ,
ಬೆಟ್ಟದ ಮೇಲೆ ಬೀಸುವ ಗಾಳಿಯಂತೆ,
ಮುಂಜಾನೆಯ ಮೂಡಣದ ಸೂರ್ಯನಂತೆ.

ಅಂದೊಂದು ದಿನ, ಗುಡುಗಿತ್ತು, ಸಿಡಿಲಿತ್ತು,
ಧೋ ಎಂದು ಸುರಿದಿತ್ತು ದಿನವೆಲ್ಲ.
ಚದುರಿಹೋಗಿತ್ತು ಮುಂಜಾನೆಯ ರಂಗವಲ್ಲಿ,
ಕರಿಗಿಹೋಗಿತ್ತು ಕನಸು, ಮಳೆಯ ನೀರಿನಲ್ಲಿ.

ಮಳೆ ನಿಂತಾಯಿತು, ದಿನ ಹತ್ತಾಯಿತು,
ಬರಲಿಲ್ಲ ಅವಳು ಹಾಕಲು ನಗುವ ರಂಗವಲ್ಲಿ.
ನಗುವಿಲ್ಲ, ನಲಿವಿಲ್ಲ, ತಂಪಿನ ಇಂಪಿಲ್ಲ,
ಬರಡು ಬರಡಾಯಿತು, ಇನ್ನು ಮನಕೆ ಮುದವೆಲ್ಲಿ?

ಹೀಗೇಕೆ ಮಾಡಿದಳು? ಬರಲಿಲ್ಲವೇಕವಳು?
ತಲೆಯೆತ್ತಿ ನೋಡಿದರೆ ಕಾಣಿಸಿತು,
ಮುಚ್ಚಿದ್ದ ಅಂಗಳದ ಬಾಗಿಲು,
ಅದಕೆ ನಾನೇ ಜಡಿದಿದ್ದ ಬೀಗಗಳು!