Tuesday, September 26, 2023

ಜೋಡಿ ಜೀವ

ಜೋಡಿ ಜೀವದ ದೂರದ ಪಯಣ

ವಿರಮಿಸಲಿಲ್ಲ ಒಂದು ಕ್ಷಣ

ಭಾರವ ಹೊತ್ತು ಬಾಗಿದೆ ಬೆನ್ನು 

ಪ್ರೀತಿಯ ಪೊರೆಗೆ ಮಂಜಾಗಿದೆ ಕಣ್ಣು


ಸೂತ್ರವು ಹರಿದಿದೆ ಗಾಳಿಪಟಕೆ, 

ಏಳುತ ಬೀಳುತ ಸೇರುವುದೆಲ್ಲಿಗೆ? 

ಹಗಲಲೇ ಕಾಡಿದೆ ಇರುಳಿನ ಕುರುಡು

ಮಕ್ಕಳು ಇದ್ದರೂ ಬಾಳೇ ಬರಡು. 


ನಿಮ್ಮಯ ನೆರಳಲಿ ಬೆಳೆದ ಸಸಿಗಳು

ಆದವು ಬೇಗನೆ ನೆರಳಿನ ಮರಗಳು 

ದೂಡಿವೆ ನಿಮ್ಮನೇ ಬಿಸಿಲಿನ ಝಳಕೆ

ಕರುಣೆಯೇ ಇಲ್ಲವೇ ಇಂದಿನ ಜನಕೆ

ಮುಕ್ತಕಗಳು - ೧೦೧

ಸಂತೆಯಲಿ ಸರಕಿರಲು ಕಿಸೆಯಲ್ಲಿ ಹಣವಿರಲು

ಕಂತೆಕಟ್ಟುತ ಸರಕು ಕೊಳ್ಳುವೆವು ದರಕೆ |

ಚಿಂತನೆಗೆ ವಿಷಯವಿರೆ ಆಸಕ್ತ ಮನಗಳಿರೆ

ಅಂತಗೊಳಿಸುವ ಶಂಕೆ ~ ಪರಮಾತ್ಮನೆ ||೫೦೧||


ಹುಟ್ಟುವೆವು ಅಳುತಲೇ ಎಲ್ಲರೂ ಜಗದಲ್ಲಿ

ಕಟ್ಟುವೆವು ಅನವರತ ನಗುವ ಕನಸುಗಳ |

ಕೊಟ್ಟರೇ ಇತರರಿಗೆ ನಗೆಯ ಕಾಣಿಕೆಗಳನು

ಒಟ್ಟುವೆವು ನಗೆಗಂಟು ~ ಪರಮಾತ್ಮನೆ ||೫೦೨||

ಒಟ್ಟು = ಕೂಡಿಸು


ಕರೆದುತಂದರೆ ಧನವು ಗೆಳೆಯರನು ಹೊಸದಾಗಿ

ಒರೆಹಚ್ಚಿ ಅವರ ಪರಿಶೀಲಿಸಿತು ಕಷ್ಟ |

ತೊರೆಯದೇ ಕಷ್ಟಕ್ಕೆ ಆದವನೆ ನಿಜಗೆಳೆಯ

ಅರಿ ನಂಬುವಾ ಮುನ್ನ ~ ಪರಮಾತ್ಮನೆ ||೫೦೩||

ಸಮರ್ಪಣೆ

ಮಾಧವಾ ಕೃಷ್ಣಾ ಮಧುಸೂದನ!

ನಿನಗಾಗಿ ಅರ್ಪಣೆ ಈ ನನ್ನ ಗಾನ.

ಮಿಡಿದಿದೆ ಎದೆಯು ಪ್ರೀತಿಯ ತಾನ,

ಮಾಡಿಹೆ ನಿನದೇ ಮುಗಿಯದ ಧ್ಯಾನ!


ಮುರುಳಿಯ ನಾದವ ಕೇಳಿಸು ನೀನು,

ಮನದಲಿ ಅದನೇ ತುಂಬುವೆ ನಾನು!

ಮತ್ತೆಮತ್ತೆ ನಿನ್ನನು ಕಾಡುವೆನೇನು?

ಮನದಲೆ ತುಂಬಿರೆ ಸವಿಸಿಹಿ ಜೇನು!


ಕಾದಿವೆ ಕಂಗಳು ನಿನ್ನಯ ದರ್ಶನಕೆ,

ಬೆಳಕನು ತೋರಿಸು ಈ ನನ್ನ ಮನಕೆ.

ಉತ್ತರ ದೊರೆಯಲಿ ಕಾಡುವ ಜಗಕೆ,

ಪಾವಿತ್ರ್ಯ ಸಿಗಲಿ ನನ್ನಯ ಜನುಮಕೆ.


ನಿನಗಾಗಿ ನಾನು ಹಾತೊರೆದಿರಲು,

ತೆರೆಯೋ ಬೇಗ ನಿನ್ನೆದೆ ಬಾಗಿಲು.

ನದಿಗಳು ಹರಿದು ಸೇರಿವೆ ಕಡಲು,

ಮೀರೆಯು ಬಂದಳು ನಿನ್ನನು ಸೇರಲು!