Showing posts with label ಕೃಷ್ಣಕವಿ. Show all posts
Showing posts with label ಕೃಷ್ಣಕವಿ. Show all posts

Wednesday, April 24, 2024

ಎರಡು ಹನಿ

ಕಾದು ಕಾದು ಕಾಯುತ್ತಿದ್ದ
ಮಳೆಯು ಬಂದೇಬಿಟ್ಟಿತು
ಹೊರಗೆ ಇಣುಕಿ ಹರುಷದಿಂದ
ಮನಸು ಕುಣಿದುಬಿಟ್ಟಿತು

ತಂತಿ ಮೇಲೆ ಇರುವ ಬಟ್ಟೆ
ಬೇಗ ತನ್ನಿ ಅಂದಳು
ಒಣಗಲಿಟ್ಟ ಹಪ್ಪಳಗಳ
ತಾನೆ ಓಡಿ ತಂದಳು

ಓಡಿ ಓಡಿ ಮಹಿಡಿ ಹತ್ತಿ
ಬಟ್ಟೆ ತರಲು ಹೊರಟೆನು
ಮಳೆಯ ಹನಿಯ ತಂಪಿಗೆ
ಮೈಯ ಒಡ್ಡಿ ನಿಂತೆನು

ನೆನೆಯಬೇಡಿ ಮೊದಲ ಮಳೆಯು
ರೋಗ ರುಜಿನ ತರುವುದು
ಕೂಗಿ ಕರೆದಳೆನ್ನ ಮಡದಿ
ಬೇಗ ಮರಳಿ ಬಂದೆನು

ಅಯ್ಯೋ ದೇವ ಎರಡೆ ಹನಿಯು
ಪಲ್ಸ್ ಪೋಲಿಯೊ ಹಾಗೆಯೆ
ಇಳಿದು ಹೋಯ್ತು ಹರುಷವೆಲ್ಲ
ಬಂದ ಹಾಗೆ ಬೇಗನೆ

Sunday, October 1, 2023

ಆನಂದ

ಕುಡುಕನಿಗೆ ಮತ್ತಿನಲೇ ಆನಂದ

ಕಾಮುಕಗೆ ದೇಹಸುಖವೇ ಆನಂದ

ಬಕುತನಿಗೆ ಸನ್ನಿಧಿಯೇ ಆನಂದ

ಆನಂದವಿರುವಾಗ ಮತ್ತೇನು ಬೇಕೆಂದ!


ಕತ್ತೆಗೆ ಪಾಳುಗೋಡೆಯೇ ಚೆಂದ

ಅರಸನಿಗೆ ಅರೆಮನೆಯೇ ಅಂದ

ಬಡವಗೆ ಹಟ್ಟಿಯಲೇ ಆನಂದ

ಮೀನು ಅಟ್ಟುವವಗೆ ಇಲ್ಲ ದುರ್ಗಂಧ!


ಹಕ್ಕಿಗೆ ನೀರಿನಲಿ ಗೂಡಿಲ್ಲ

ಮೀನಿಗೆ ಬಾನಿನಲಿ ಎಡೆಯಿಲ್ಲ

ಚತುಷ್ಪಾದಕೆ ನೆಲವೇ ಎಲ್ಲ

ಮನುಜ ಮಾತ್ರ ಎಲ್ಲಿಯೂ ಸಲ್ಲ!


ಮತ್ತು ಬೇಕೆನುವವಗೆ ಮದ್ದೇ ಹಾಸ,

ಹಿತವಚನ ಕಿವಿಗೆ ಕಾದ ಸೀಸ

ಕಾಣಿಸದೇ ಇಲ್ಲಿ ಮತ್ತಿನ ಮೋಸ?

ಕಾಪಾಡಬೇಕಿದೆ ನಮ್ಮೆಲ್ಲರ ಕೂಸ!

Tuesday, September 26, 2023

ಮುಕ್ತಕಗಳು - ೧೦೧

ಸಂತೆಯಲಿ ಸರಕಿರಲು ಕಿಸೆಯಲ್ಲಿ ಹಣವಿರಲು

ಕಂತೆಕಟ್ಟುತ ಸರಕು ಕೊಳ್ಳುವೆವು ದರಕೆ |

ಚಿಂತನೆಗೆ ವಿಷಯವಿರೆ ಆಸಕ್ತ ಮನಗಳಿರೆ

ಅಂತಗೊಳಿಸುವ ಶಂಕೆ ~ ಪರಮಾತ್ಮನೆ ||೫೦೧||


ಹುಟ್ಟುವೆವು ಅಳುತಲೇ ಎಲ್ಲರೂ ಜಗದಲ್ಲಿ

ಕಟ್ಟುವೆವು ಅನವರತ ನಗುವ ಕನಸುಗಳ |

ಕೊಟ್ಟರೇ ಇತರರಿಗೆ ನಗೆಯ ಕಾಣಿಕೆಗಳನು

ಒಟ್ಟುವೆವು ನಗೆಗಂಟು ~ ಪರಮಾತ್ಮನೆ ||೫೦೨||

ಒಟ್ಟು = ಕೂಡಿಸು


ಕರೆದುತಂದರೆ ಧನವು ಗೆಳೆಯರನು ಹೊಸದಾಗಿ

ಒರೆಹಚ್ಚಿ ಅವರ ಪರಿಶೀಲಿಸಿತು ಕಷ್ಟ |

ತೊರೆಯದೇ ಕಷ್ಟಕ್ಕೆ ಆದವನೆ ನಿಜಗೆಳೆಯ

ಅರಿ ನಂಬುವಾ ಮುನ್ನ ~ ಪರಮಾತ್ಮನೆ ||೫೦೩||

Wednesday, February 8, 2023

ನೀನಿಲ್ಲದೆ...

ಬಣ್ಣಗಳೆಲ್ಲ ಕಪ್ಪಾಗಿಹೋಗಿವೆ, 

ಬಾಳು ತಾಳವ ತಪ್ಪಿದೆ! 


ನೀನು ಇಲ್ಲದ ಬದುಕು ಬರಡು

ಚಳಿಗಾಳಿಗೆ ಕೊರಡಾಗಿದೆ |

ಮಧುಮಾಸದ ನೆನಪು ಕಾಡಿದೆ

ಪ್ರೀತಿ ಸುಮವು ಬಾಡಿದೆ ||೧||


ನಾನು ಮಾಡಿದ ಯಾವ ತಪ್ಪಿಗೆ

ಶಿಕ್ಷೆಯಾಗಿದೆ ಅಗಲಿಕೆ? |

ನೀನು ಇಲ್ಲದ ಪ್ರೇಮಲೋಕವು

ಅಂಧಕಾರದಿ ಮುಳುಗಿದೆ ||೨||


ಒಂಟಿ ನಾನು ಬಾಳ ಕಡಲಲಿ

ಹುಟ್ಟು ಹಾಕಲು ನೀನಿಲ್ಲದೆ |

ಬಾಳ ನೌಕೆಯು ದಾರಿ ತಪ್ಪಿದೆ

ಗೊತ್ತು ಗುರಿಯು ಇಲ್ಲದೆ ||೩||


ಮರಳಿ ಬಾರದ ಲೋಕವೆಲ್ಲಿದೆ

ತಿಳಿಸು ಬರುವೆನು ಅಲ್ಲಿಗೇ |

ಮತ್ತೆ ಸೇರುವ, ಮತ್ತೆ ಹಾಡುವ

ಪ್ರಣಯಗೀತೆಯ ನಾಳೆಗೆ ||೪||


Tuesday, February 7, 2023

ನಿನ್ನ ನಗು

ನಿನ್ನ ನಗುವೆ ನನ್ನ ಉಸಿರು, 

ನಿನ್ನ ಕನಸೇ ಕಣ್ಣ ಹಸಿರು! 


ದೇವಲೋಕದ ಚೆಲುವು ನೀನು

ತಾರಾಲೋಕದ ಬೆಳಕು ನೀನು

ತಿಂಗಳ ರಾತ್ರಿಯ ತಂಪು ನೀನು

ನಿನ್ನ ಮಾತೇ ಮಧುರ ಜೇನು! 


ನನ್ನ ಸನಿಹಕೆ ವರವಾಗಿ ಬಂದೆ, 

ಕುರುಡು ಕಣ್ಣಿಗೆ ಬೆಳಕಾಗಿ ನಿಂದೆ,

ಬರಡು ಬಾಳಿಗೆ ಅಮೃತದಂತೆ, 

ಕೊರಡ ಕೊನರಿಸೊ ವರ್ಷದಂತೆ!


ನಮ್ಮ ಜೋಡಿ ಶುಕಪಿಕಗಳಂತೆ, 

ನಮ್ಮ ಬದುಕು ಹೂಬಿಸಿಲಿನಂತೆ, 

ಸಮಯ ನಿಂತೇ ಹೋಯಿತು, 

ಹೃದಯ ಕುಣಿಕುಣಿದಾಡಿತು! 


ಎಂದು ಬರುವೆ ನನ್ನ ಬಾಳಿಗೆ, 

ಎಂದು ತರುವೆ ಸಿಹಿಯ ಹೋಳಿಗೆ?

ಬಳಸಿ ಬಂದು ನನ್ನ ತೋಳಿಗೆ, 

ತುಂಬು ನನ್ನ ಪ್ರೀತಿ ಜೋಳಿಗೆ! 

Sunday, January 8, 2023

ಮುಕ್ತಕಗಳು - ೧೦೦

ನಮ್ಮ ಭಾಗ್ಯವು ಕರ್ಮ ಶ್ರಮಗಳ ಮಿಶ್ರಣವು

ಎಮ್ಮೆಯಂತಿರಬೇಕೆ ಕರ್ಮಕ್ಕೆ ಬಾಗಿ |

ಹೊಮ್ಮಿಸುವ ಶ್ರಮದಿಂದ ಹೊಸತು ಸತ್ಫಲಗಳನು

ಚಿಮ್ಮಿಸುವ ಆನಂದ ~ ಪರಮಾತ್ಮನೆ ||೪೯೬||


ಹೇರಿದರೆ ನಿಮ್ಮಾಸೆಗಳನು ಮಕ್ಕಳಮೇಲೆ

ದೂರದಿರಿ ತೀರದಿರೆ ನಿಮ್ಮ ಬಯಕೆಗಳು |

ಯಾರ ತಪ್ಪದು ಎಣ್ಣೆ ನೀರಿನಲಿ ಕರಗದಿರೆ

ನೀರಿನದೊ? ಎಣ್ಣೆಯದೊ? ~ ಪರಮಾತ್ಮನೆ ||೪೯೭||


ಪರಿಪರಿಯ ಪಾಠಗಳ ಕಲಿಯುವೆವು ಎಲ್ಲರಲಿ

ಅರಿವ ನೀಡಲು ಪಟ್ಟಗುರು ಮಾತ್ರ ಬೇಕೆ? |

ಬರಲಿ ಒಳಿತಾದುದೆಲ್ಲವು ನಮ್ಮೆಡೆಗೆ ನಿರತ

ತೆರೆ ಎಲ್ಲ ಕಿಟಕಿಗಳ ~ ಪರಮಾತ್ಮನೆ ||೪೯೮||


ಅನೃತವನು ನುಡಿಯುತ್ತ ಪಡೆದ ಉತ್ತಮ ಪದವಿ

ಜನರ ಹಿಂಸಿಸಿ ಪಡೆದ ಗೌರವಾದರವು |

ಧನವ ಗಳಿಸಿಟ್ಟಿರಲು ಮೋಸದಾ ಹಾದಿಯಲಿ

ಇನನ ಎದುರಿನ ಹಿಮವು ~ ಪರಮಾತ್ಮನೆ ||೪೯೯||


ಎಲ್ಲವನ್ನೂ ನಮಗೆ ಕೊಟ್ಟಿರುವ ಲೋಕಕ್ಕೆ

ಎಳ್ಳಿನಷ್ಟಾದರೂ ಕೊಡಬೇಕು ನಾವು |

ಕಳ್ಳರಾಗುವೆವು ಕೊಡದೆಲೆ ಲೋಕ ತೊರೆದಲ್ಲಿ

ಜೊಳ್ಳು ಜೀವನವೇಕೆ? ~ ಪರಮಾತ್ಮನೆ ||೫೦೦||

ಮುಕ್ತಕಗಳು - ೯೯

ಸಿರಿ ತಾನು ಕೀಲಿಕೈಯಲ್ಲ ಸುಖ ಸಂತಸಕೆ

ಸಿರಿಯಿಂದ ಕೊಳ್ಳಲಾಗದು ಸಂತಸವನು |

ಸಿರಿಯಿರಲು ಸಂತಸದ ಕೀಲಿ ಮಾಡಿಸೆ ಸಾಧ್ಯ

ಸಿರಿಯ ಸರಿ ಬಳಕೆಯದು ~ ಪರಮಾತ್ಮನೆ ||೪೯೧||


ಸಿಕ್ಕರೂ ಸಿಗಬಹುದು ಗೌರವವು ಹಣದಿಂದ

ಸಿಕ್ಕರೂ ಸಿಗಬಹುದು ಅದು ವಿದ್ಯೆಯಿಂದ |

ಸಿಕ್ಕುವುದು ಖಂಡಿತವು ಸತತ ಸನ್ನಡೆತೆಯಿಂ

ಪಕ್ಕವಾದ್ಯಗಳೇಕೆ? ~ ಪರಮಾತ್ಮನೆ ||೪೯೨||


ಕಣ್ಣುಕಿವಿಗಳು ತರುವ ಅರಿವಿನಾ ತುಣುಕುಗಳ

ಮುನ್ನ ಇರಿಸುತ ಮನದ ಉಗ್ರಾಣದಲ್ಲಿ |

ಚೆನ್ನ ಮನನವ ಮಾಡಿ ಬೆಸೆಯುತ್ತ ತುಣುಕುಗಳ

ಚಿನ್ನದಾ ಸರಮಾಡು ~ ಪರಮಾತ್ಮನೆ ||೪೯೩||


ಒಂದು ವೀಣೆಯ ಹಾಗೆ ಮಾನವರ ಸಂಬಂಧ

ಚೆಂದದಾ ನಾದ ಹೊಮ್ಮದಿರಲೇನಿಂದು |

ಬಂಧಗಳ ಕಾಪಾಡು ಮುರಿಯದಾ ತಂತಿಯೊಲು

ಮುಂದಿಹುದು ಸವಿನಾದ ~ ಪರಮಾತ್ಮನೆ ||೪೯೪||


ಹಂಚಬಲ್ಲದು ನಾಲಿಗೆಯು ಸಿಹಿಯ ಅಮೃತವನು

ಹಂಚಬಲ್ಲದದು ಕಹಿ ಹಾಲಾಹಲವನು |

ಕೊಂಚ ಹಿಡಿತವು ಇರಲಿ ಈ ಮರ್ಕಟದ ಮೇಲೆ

ಪಂಚರಲಿ ಪಾತಕಿಯು ~ ಪರಮಾತ್ಮನೆ ||೪೯೫||

ಮುಕ್ತಕಗಳು - ೯೮

ತಿರುಮಲೆಯ ಗೋವಿಂದ ಸಿಹಿರುಚಿಯ ಮಕರಂದ

ಮರಳಿ ದುಂಬಿಗಳು ಸವಿಯುತಿವೆ ಆನಂದ |

ಹರಿದು ಬಕುತಿಯ ಜೇನು ನಲಿದಿಹವು ಮುದದಿಂದ

ಮರೆತು ಕೋಟಲೆಗಳನು ~ ಪರಮಾತ್ಮನೆ ||೪೮೬||


ಅರಿತು ನಡೆಯಲುಬೇಕು ಕೆಲವನ್ನು ಬದುಕಿನಲಿ

ಮರೆತು ನಡೆಯಲುಬೇಕು ಮತ್ತೆ ಕೆಲವನ್ನು  |

ಬೆರೆತು ಬಾಳಲುಬೇಕು ಪ್ರೀತಿಯಿಂ ಎಲ್ಲರಲಿ

ಮರೆತು ಸೇಡಿನ ದಾರಿ ~ ಪರಮಾತ್ಮನೆ ||೩೮೭||


ಗಳಿಸದಿದ್ದರೆ ಏನು ಕೋಟಿ ಸಕ್ರಮವಾಗಿ

ಬೆಳೆಯುವವು ಶಾಂತಿ ನೆಮ್ಮದಿ ಸಂತಸಗಳು  |

ಮೊಳಕೆಯೊಡೆಯುವವು ನಿಸ್ವಾರ್ಥದಾ ಬೀಜಗಳು

ಹುಳುಕಿಲ್ಲದಿಹ ಫಲವು ~ ಪರಮಾತ್ಮನೆ ||೪೮೮||


ಬದಲಿಸುವ ಬಟ್ಟೆಗಳ ಬಗ್ಗೆ ಚಿಂತಿಸಬೇಡ

ಬದಲಿಸಿದೆ ಲಕ್ಷ್ಯವನು  ಎಡೆಬಿಡದೆ ಸಾಗು |

ಮುದದಿ ಮಾಧವ ತಾನು ಬಟ್ಟೆಯನು ತೋರುವನು

ಕದವ ತೆರೆಯುತ ಮನೆಯ ~ ಪರಮಾತ್ಮನೆ ||೪೮೯||


ಬಲ್ಲಿದರು ಪೇಳಿಹರು ಕಿವಿಮಾತು ನೆನಪಿಡಲು

ಕಲ್ಲೆಸೆಯೆ ಕೆಸರಿನಲಿ ಮುಖವೆಲ್ಲ ಮಣ್ಣು |

ನಲ್ಲವರು ಚೇಷ್ಟೆಯನು ಮಾಡದಿರುವರು, ತಮ್ಮ

ಗಲ್ಲಿಯಲಿ ಕೆಸರಿರಲು ~ ಪರಮಾತ್ಮನೆ ||೪೯೦||

ನಲ್ಲವರು = ಉತ್ತಮರು

ಮುಕ್ತಕಗಳು - ೯೭

ನೂರು ಸಂತತಿಯ ಸಂಸಾರಿ ಒಂದೇ ಸುಳ್ಳು

ಯಾರಿರದ ಬ್ರಹ್ಮಚಾರಿಯು ಒಂಟಿ ಸತ್ಯ |

ನೂರು ಸುಳ್ಳಿನ ಬಲೆಯ ಕತ್ತರಿಸುವುದು ಸತ್ಯ

ತೋರಿಸುವ ಸಮಯಕ್ಕೆ ~ ಪರಮಾತ್ಮನೆ ||೪೮೧||


ಉಪಕಾರಿ ಮುಡುಪಿಡುವ ಪರರಿಗೇ ಅವನಧನ

ಕೃಪಣನಾ ಧನ ಕೂಡ ಪರರ  ಸೇರುವುದು |

ಚಪಲತೆಯು ಕಾಡದದು ಈರ್ವರನು ಲವಲೇಶ

ಅಪವಾದ ಇನ್ನೆಲ್ಲ ~ ಪರಮಾತ್ಮನೆ ||೪೮೨||


ಛಡಿಯೇಟು ತಿಂದವನು ಗುರುಗಳಾ ಅಂಕೆಯಲಿ

ಹೊಡೆಸಿಕೊಂಡಿಹ ಮಗನು ತನ್ನ ಪಿತನಿಂದ |

ಕೊಡತಿಯಾ ಏಟು ತಿಂದಿಹ ಹೊನ್ನಿನಾ ತುಂಡು

ತಡೆಯಿರದೆ ಬೆಳಗುವರು ~ ಪರಮಾತ್ಮನೆ ||೪೮೩||

ಕೊಡತಿ = ಸುತ್ತಿಗೆ


ತೊರೆಯಿತಾದರೆ ಮೀನು ನೀರಿನಾಸರೆಯನ್ನು   

ಅರಗುವುದು ಯಾರದೋ ಜಠರಾಗ್ನಿಯಲಿ |

ತೊರೆದೆಯಾದರೆ ಬದುಕಿನಲಿ ನೈತಿಕತೆಯನ್ನು

ಕರಗುವೆಯೊ ಕತ್ತಲಲಿ ~ ಪರಮಾತ್ಮನೆ ||೪೮೪||


ಕರೆಯುತಿದೆ ಕೈಬೀಸಿ ಗೋವಿಂದನಾ ಮಲೆಯು

ಮೆರೆಯುತಿದೆ ಬಕುತಿಯಲೆ ಮಿತಿಯಿಲ್ಲದಂತೆ |

ಹರಿಯುತಿದೆ ಜನಸಾಗರವು ಮಲೆಯ ಮುಚ್ಚುವೊಲು

ಧರೆಯ ಅಚ್ಚರಿಯಿದುವೆ ~ ಪರಮಾತ್ಮನೆ ||೪೮೫||

ಮುಕ್ತಕಗಳು - ೯೬

ಮಕ್ಕಳಾ ಮಾತುಗಳು ಚಿಲಿಪಿಲಿಯ ಇಂಪಂತೆ

ಪಕ್ಕದಲೆ ಅರಳುತಿಹ ಚೆಲುವ ಹೂವಂತೆ |

ಚಿಕ್ಕದಾದರು ಕೂಡ ದೊಡ್ಡ ಹರುಷವನೀವ

ಸಕ್ಕರೆಯ ಗೊಂಬೆಗಳು ~ ಪರಮಾತ್ಮನೆ ||೪೭೬||


ಉತ್ತಮರು ಆಗೋಣ ಇಂದಿಗಿಂತಲು ನಾಳೆ

ಉತ್ತಮರು ಆಗೋಣ ನಮಗಿಂತ ನಾವು |

ಇತ್ತ ಎದುರಾಳಿಗಳು ಬೇರೆ ಯಾರೂ ಅಲ್ಲ

ಕುತ್ತಿರದ ದಾರಿಯಿದು ~ ಪರಮಾತ್ಮನೆ ||೪೭೭||


ಶಿಶುವಾಗುವರು ಜನರು ಆನಂದ ಹೆಚ್ಚಿರಲು

ಪಶುವಾಗುವರು ಅವರೆ ಕ್ರೋಧ ಉಕ್ಕಿರಲು! |

ವಶವಾಗದಿರಬೇಕು ವಿಷಯಗಳ ಹಿಡಿತಕ್ಕೆ

ನಶೆಯು ಮನ ಕೆಡಿಸುವುದು ~ ಪರಮಾತ್ಮನೆ ||೪೭೮||


ವೇಗ ಹೆಚ್ಚಾದಂತೆ ಮಾನವನ ಬದುಕಿನಲಿ

ಸೋಗು ಹೆಚ್ಚಾಗುತಿದೆ ನೀತಿ ಕೊರೆಯಾಗಿ |

ಜೌಗಿನಲಿ ಜಾರುತಿರೆ ಮುನ್ನೆಡವ ಕಾಲುಗಳು

ಜಾಗರೂಕತೆ ಇರಲಿ ~ ಪರಮಾತ್ಮನೆ ||೪೭೯||


ತೇಲದಿರು ಕನಸಿನಲಿ ಸಾಲ ದೊರೆತಿದೆಯೆಂದು

ಸಾಲವೆಂಬುದು ಎರಡು ಮೊನಚಿನಾ ಖಡ್ಗ! |

ಬೇಲಿಯಿಲ್ಲದ ಹೊಲಕೆ ಆನೆ ನುಗ್ಗಿದ ಹಾಗೆ

ಸಾಲ ಮಿತಿಮೀರಿದರೆ ~ ಪರಮಾತ್ಮನೆ ||೪೮೦||

ಮುಕ್ತಕಗಳು - ೯೫

ಪಾಪವೇ ಭಾರವದು ಭೂಮಿ ಭಾರಕ್ಕಿಂತ

ಆಪಕಿಂತಲು ತಿಳಿಯು ಬೆಳಗುವ ಜ್ಞಾನ |

ಕೋಪವೇ ಪ್ರಖರವದು ರವಿಯಶಾಖಕ್ಕಿಂತ

ಜ್ಞಾಪಕವಿರಲಿ ಸದಾ ~ ಪರಮಾತ್ಮನೆ ||೪೭೧||


ಮನವಿಟ್ಟು ಕಲಿತಿರುವ ಅಕ್ಕರವು, ವಿದ್ಯೆಗಳು

ತನು ಮಣಿಸಿ ಬೆವರಿಳಿಸಿ ಗಳಿಸಿದಾ ಧನವು |

ಇನಿತಾದರೂ ಆರ್ತರಿಗೆ ಮಾಡಿದಾ ದಾನ

ಕೊನೆವರೆಗೆ ಕಾಯುವವು ~ ಪರಮಾತ್ಮನೆ ||೪೭೨||

ಆರ್ತ = ದುಃಖಿತ


ಕೊಟ್ಟು ಕೊರಗದಿರು ಏನೋ ಕಳೆದಿಹಿದು ಎಂದು

ಕೊಟ್ಟದ್ದು ತಪ್ಪದೇ ಹಿಂದಿರುಗಿ ಬಹುದು |

ಕೊಟ್ಟಿರಲು ನಿಸ್ವಾರ್ಥ ಪ್ರೀತಿಯನು, ಬರುವುದದು

ಬೆಟ್ಟದಷ್ಟಾಗುತಲಿ ~ ಪರಮಾತ್ಮನೆ ||೪೭೩||


ನೋಯಿಸದೆ ಇದ್ದಾಗ ತಂದೆತಾಯಿಯ ಮನಸು

ಬೇಯಿಸದೆ ಇದ್ದಾಗ ಕೋಪದಾಗ್ನಿಯಲಿ |

ತೋಯಿಸದೆ ಇದ್ದಾಗ ಕಣ್ಣೀರ ಧಾರೆಯಲಿ

ಹಾಯಾಗಿ ಇರುವೆ ನೀ ~ ಪರಮಾತ್ಮನೆ ||೪೭೪||


ಬದಲಿಸದು ತಪ್ಪರಿವು ನಡೆದ ಘಟನೆಗಳನ್ನು

ಬದಲಿಸದು ಕಾತುರವು ಮುಂದೆ ನಡೆಯುವುದ |

ಎದೆಯಿರಿಸು ಇಂದನ್ನು ಉಪಯುಕ್ತ ವಾಗಿಸಲು

ಮುದ ಬಹುದು ಕದ ತೆರೆದು ~ ಪರಮಾತ್ಮನೆ ||೪೭೫||

ಮುಕ್ತಕಗಳು - ೯೪

ಬದಲಾಗಬೇಕಿದೆಯೆ ನೀನು ಉತ್ತಮನಾಗಿ?

ಬದುವಿನಲ್ಲಿರುವ ಕಳೆ ಕೀಳಬೇಕಿದೆಯೆ? |

ಬದಲಾಯಿಸಲು ನಿನ್ನ ಕಣ್ಣು ಕಿವಿಗಳ ಊಟ

ಬದಲಾಗುವುದು ಬದುಕು ~ ಪರಮಾತ್ಮನೆ ||೪೬೬||


ಹೇಳದಿರಿ ಜಾತಿಯಿಂ ನಾನು ಉತ್ತಮನೆಂದು

ಕೇಳದಿರಿ ಜಾತಿಯದು ನಿನದಾವುದೆಂದು |

ಆಳು ಉತ್ತಮನು ಕೇವಲ ನಡತೆಯಿಂದಷ್ಟೆ

ಕೋಳಿ ಕೂಗದೆ ಹಗಲು ~ ಪರಮಾತ್ಮನೆ ||೪೬೭||


ಉಳಿವಿನಾ ಚಣಗಳೇ ಅತ್ಯಮೂಲ್ಯದ ಆಸ್ತಿ

ಕಳೆಯದಿರಿ ಅದ ನಿಮ್ಮ ಹೊಗಳುವವರೊಡನೆ |

ಕಳೆಯುತಿರಿ ನಿಮ್ಮ ಹಿತಬಯಸುವರ ಜೊತೆಯಲ್ಲಿ

ಕೊಳೆಯಿರದ ಬದುಕದುವೆ ~ ಪರಮಾತ್ಮನೆ ||೪೬೮||


ಬರುವಾಗ ಮಡಿಲಿನಾಸರೆಯನಿತ್ತವನು ಹರಿ

ಹರಿಕರುಣೆಗಾಗಿ ಚಿರಋಣಿಯಾಗಬೇಕು |

ಹೊರಟಾಗ ಹೊರುವ ಹೆಗಲುಗಳು ಸ್ವಯಾರ್ಜಿತವು

ಮರೆಯದಿರು ಆರ್ಜನವ ~ ಪರಮಾತ್ಮನೆ ||೪೬೯||

ಆರ್ಜನ = ಗಳಿಕೆ


ನಂಬಿದರೆ ನಂಬಿ ನಿಮದೇ ದಕ್ಷತೆಯ ಶಕ್ತಿ

ಹುಂಬರಾಗದಿರಿ ಮತ್ತೊಬ್ಬರನು ನಂಬಿ |

ಕಂಬವೆಂದೊರಗದಿರಿ ಅನ್ಯರಾ ಭುಜವನ್ನು

ಗೊಂಬೆಯಾಗದೆ ಬದುಕಿ ~ ಪರಮಾತ್ಮನೆ ||೪೭೦||

ಮುಕ್ತಕಗಳು - ೯೩

ಲೆಕ್ಕವಿದೆ ಬದುಕಿನಲಿ ತಪ್ಪಲಾಗದು ಅದನು

ಲೆಕ್ಕವೇ ಬದುಕಾಗೆ ತಪ್ಪೆಲ್ಲ ನಮದೆ |

ಲೆಕ್ಕವನು ಬೆರೆಸದಿರು ಮಮತೆ ಕರುಣೆಯ ಜೊತೆಗೆ

ಲೆಕ್ಕಬಿಡು ಆಪ್ತರಲಿ ~ ಪರಮಾತ್ಮನೆ ||೪೬೧||


ಸೌಂದರ್ಯವರ್ಧಕವ ಬಳಸುವರು ಅತಿಶಯದಿ

ಕುಂದುಗಳ ಮರೆಮಾಡೊ ಆಸೆಯಿದೆ ಬಹಳ! |

ಕುಂದುಗಳು ಕಾಣುವವು ಅಂದವಿರದಿರೆ ಮನವು

ಅಂದವಾಗಿಡು ಮನವ ~ ಪರಮಾತ್ಮನೆ ||೪೬೨||


ಹೊಲದಲ್ಲಿ ಕಳೆಯೆದ್ದು ಬೆಳೆ ಬೆಳೆಯಲಾಗದಿರೆ

ಹೊಲವನ್ನು ತೊರೆಯುವಾ ಮೂರ್ಖತನ ಬೇಡ |

ಕಳೆಯನ್ನು ಕಿತ್ತೆಸೆವ ದೃಢತೆಯನು ನೀತೋರು

ಬೆಳೆಯು ಹುಲುಸೇಳುವುದು ~ ಪರಮಾತ್ಮನೆ ||೪೬೩||


ನಮ್ಮಲಿಹ ಅವಗುಣಗಳನು ಸಿಟ್ಟು ಹೊರಗೆಳೆಯೆ

ನಮ್ಮವಗುಣಗಳ ಕರಗಿಸುವುದೆ ತಾಳ್ಮೆ |

ಹೊಮ್ಮಿಸಲು ಹೊರಗೆ ಸದ್ಗುಣಗಳಾ ಹೊಳಪನ್ನು

ಬಿಮ್ಮನಿರು ಸಿಟ್ಟುಬಿಡು ~ ಪರಮಾತ್ಮನೆ ||೪೬೪||


ಇಲ್ಲಿ ಇರುವುದೆ ಮೂರು ರತ್ನಗಳು ಬುವಿಯಲ್ಲಿ

ಬೆಲ್ಲದಂತಹ ನುಡಿಯು, ಅನ್ನ ನೀರುಗಳು! |

ಬಲ್ಲಿದರು ನುಡಿದಿಹರು, ಎಂದಿಗೂ ಮರೆಯದಿರು

ಕಲ್ಲುಗಳು ನವರತ್ನ! ~ ಪರಮಾತ್ಮನೆ ||೪೬೫||

ಮುಕ್ತಕಗಳು - ೯೨

ಗೆಳೆಯನಿರೆ ಸನಿಹದಲಿ ಬಿಳಿಯ ಹಾಳೆಯ ಹಾಗೆ

ಬಳಿದು ಬಣ್ಣಗಳ ಮನಕುಂಚವನು ಎಳೆದು |

ಮಳೆಸುರಿದ  ಮಣ್ಣಿನೊಲು ಇರೆ ಅದನು ಎಸೆಯದಿರು

ಹಳೆಯ ಕಾಗದವೆಂದು ~ ಪರಮಾತ್ಮನೆ ||೪೫೬||


ಸರಿಹೆಜ್ಜೆ ಹಾಕುತ್ತ ಬೆಟ್ಟವನೆ ಹತ್ತಿರಲು

ತಿರುಗಿ ನೋಡರು ಜನರು ಆಸಕ್ತಿಯಿರದು |

ಬರಿದೆ ಎಡವಲು ಒಮ್ಮೆ ಹಾಸ್ಯಮಾಡುತ ನಕ್ಕು

ಬರೆಹಾಕಿ ಹೋಗುವರು ~ ಪರಮಾತ್ಮನೆ ||೪೫೭||


ನೆಮ್ಮದಿಯು ಸಿಗದು ನಮಗಿಷ್ಟವಾದುದ ಪಡೆಯೆ

ಇಮ್ಮಡಿಯ ಆಸೆಗಳು ಹುಟ್ಟುವವು ಮುಂದೆ! |

ಸುಮ್ಮನೆಯೆ ಇಷ್ಟಪಡು ಪಡೆದಿರುವ ಎಲ್ಲವನು

ಮುಮ್ಮಡಿಯ ನೆಮ್ಮದಿಗೆ ~ ಪರಮಾತ್ಮನೆ ||೪೫೮||


ಅಕ್ಕರೆಯು ಇರಬೇಕು ನಡೆಯಲ್ಲಿ ನುಡಿಯಲ್ಲಿ

ಸಕ್ಕರೆಯ ಸವಿ ನಿಲ್ಲುವುದು ಬಂಧಗಳಲಿ |

ಮಿಕ್ಕರುಚಿಗಳು ಎಲ್ಲ ಮರೆಯಾಗುವವು ಹಿಂದೆ

ದಕ್ಕುವುದು ಆನಂದ ~ ಪರಮಾತ್ಮನೆ ||೪೫೯||


ವ್ಯರ್ಥವದು ಭೋಜನವು ಹಸಿವಿಲ್ಲದಿರುವಾಗ

ವ್ಯರ್ಥವದು ವಿನಯವನು ಕಲಿಸದಾ ವಿದ್ಯೆ |

ವ್ಯರ್ಥವದು ಉಪಯೋಗಕಾಗದಾ ಸಿರಿತನವು

ವ್ಯರ್ಥವದು ಆತ್ಮರತಿ ~ ಪರಮಾತ್ಮನೆ ||೪೬೦||

ಆತ್ಮರತಿ = ತನ್ನನ್ನು ತಾನೇ ಮೆಚ್ಚಿಕೊಳ್ಳುವುದು

ಮುಕ್ತಕಗಳು - ೯೧

ಫಲಭರಿತ ವೃಕ್ಷಗಳು ಬೆಳೆಸೆ ತಮ ಸಂತತಿಯ

ಬೆಲೆಯಾಗಿ ನೀಡುತಿವೆ ರಸಭರಿತ ಸವಿಯ |

ಸಲಿಸೆ ಕೋರಿಕೆ ಬೀಜಬಿತ್ತಿ ಹದುಳಿಸಿ ಸಸಿಯ

ಬೆಳೆಸುವಾ ಮರಗಳನು ~ ಪರಮಾತ್ಮನೆ ||೪೫೧||

ಹದುಳಿಸು = ತಣಿಸು / ತೃಪ್ತಿ ಪಡಿಸು


ಮನಸು ತುಟಿಗಳ ನಡುವೆ ಬೇಕೊಂದು ಸೋಸುತೆರೆ

ಅನಿಸಿದುದನೆಲ್ಲವನು ಆಡಬೇಕಿಲ್ಲ! |

ದನಿಗೊಡುವ ಹರುಷವನು ಹಂಚುವಾ ಯೋಚನಗೆ

ಕೊನೆಗೊಳಿಸಿ ದುರ್ಭಾವ ~ ಪರಮಾತ್ಮನೆ ||೪೫೨||


ಇರುವರೇ ಶತ್ರುಗಳು ಕಣ್ಣು ನಾಲಿಗೆಗಿಂತ?

ಸರಿದಾರಿ ತಪ್ಪಿಸುವ ಧೂರ್ತ ಪಂಡಿತರು! |

ಬರಸೆಳೆದು ಆಸೆಗಳ ಮನದಲ್ಲಿ ತುಂಬಿಸುತ

ಹರಿಯ ಹೊರಗಟ್ಟುವವು ~ ಪರಮಾತ್ಮನೆ ||೪೫೩||


ಆ ದೇವ ನಿರುವ ಮಾತೆಯ ಮಮತೆಯಲಿ, ಇರುವ

ಆ ದೇವ ತಂದೆಯಾ ಹೊಣೆಗಾರಿಕೆಯಲಿ |

ಮಾದೇವ ಅತಿಥಿ, ಗುರುಗಳ ವೇಷ, ಅರಿವಿನಲಿ

ವೇದಗಳು ನಾಲ್ಕಿವೇ ~ ಪರಮಾತ್ಮನೆ ||೪೫೪||


ಕಾಲಡಿಗೆ ಮುಳ್ಳು ಚುಚ್ಚಿರೆ ತಪ್ಪು ಯಾರದದು?

ಕಾಲಿನದೊ ಮಲಗಿದ್ದ ಮುಳ್ಳಿನದೊ ಹೇಳು? |

ಬಾಳಿನಲಿ ಎಚ್ಚರದ ಹೆಜ್ಜೆಯಿಡಲಾಗದಿರೆ

ಉಳಿವೆಲ್ಲ ರಕುತಮಯ ~ ಪರಮಾತ್ಮನೆ ||೪೫೫||

ಮುಕ್ತಕಗಳು - ೯೦

ಕಡಲಾಳದಲ್ಲಿರುವ ಸಂಪತ್ತು ದೊರೆಯುವುದೆ

ದಡದ ಮೇಗಡೆ ಕುಳಿತು ತಪವ ಮಾಡಿದರೆ? |

ಬಿಡಬೇಕು ಭಯವನ್ನು ತರಬೇಕು ಪರಿಕರವ

ನಡುನೀರ ಲಿಳಿಬೇಕು ~ ಪರಮಾತ್ಮನೆ ||೪೪೬||


ಜನುಮ ಯೌವನ ಮುಪ್ಪು ವಪುರೋಗ ಮರಣಗಳು

ತನುವಿಗೊದಗುವ ಪರಿಸ್ಥಿತಿಗಳಾಗಿರಲು |

ಮನವ ಸಜ್ಜುಗೊಳಿಸುವ ವೇಷಗಳ ಧಾರಣೆಗೆ 

ಅನುಗಾಲ ನೆಮ್ಮದಿಗೆ ~ ಪರಮಾತ್ಮನೆ ||೪೪೭||


ತುಟಿ ಪಿಟಕ್ಕೆನ್ನದಿರೆ ಬಿಕ್ಕಟ್ಟು ಹುಟ್ಟದದು,

ತುಟಿ ಬಿರಿಯೆ ಕರಗುವವು ಹಲವಾರು ತೊಡಕು |

ಹಟ ತೊರೆದು ನಸುನಗಲು ಗಂಟೇನು ಕರಗುವುದು?

ನಿಟಿಲ ಗಂಟದು ಮಾತ್ರ! ~ ಪರಮಾತ್ಮನೆ ||೪೪೮||


ಸೂಸುವುದು ಪರಿಮಳವ ಚಂದನದ  ಹುಟ್ಟುಗುಣ,

ಈಸುವುದು ಮೀನು ನೀರಿನಲಿ ಮುಳುಗದೆಯೆ ||

ಆಸೆಗಳ ಪೂರೈಸೆ ಬದಲಿಸಿರೆ ಬಣ್ಣಗಳ

ಊಸರವಳ್ಳಿಯೆ ಅವನು ~ ಪರಮಾತ್ಮನೆ ||೪೪೯||


ಪಾಪಾಸುಕಳ್ಳಿಯೂ ತಣಿಸುವುದು ದಾಹವನು

ವಾಪಸ್ಸು ನೀಡುತಿದೆ ಸ್ವಾರ್ಥಿಯಲ್ಲವದು |

ನೀ ಪಡೆದ ವರದಲ್ಲಿ  ನೀಡು ತುಸು ಪರರಿಗೂ

ಪೀಪಾಸು ಆಗದಿರು ~ ಪರಮಾತ್ಮನೆ ||೪೫೦||

Monday, December 26, 2022

ಮುಕ್ತಕಗಳು - ೮೯

ನಿನ್ನ ದುರ್ಗುಣಗಳನು ಕಿತ್ತು ಎಸೆಯಲು ಬೇಕು

ಅನ್ನದಕ್ಕಿಯ ಕಲ್ಲು ಹೆಕ್ಕಿ ತೆಗೆದಂತೆ |

ಮುನ್ನಡೆವ ಹಾದಿಯಲಿ ಮುಳ್ಳುಗಳು ಹೆಚ್ಚಿರಲು

ಸನ್ನಡತೆ ರಕ್ಷಿಪುದು ~ ಪರಮಾತ್ಮನೆ ||೪೪೧||


ಕೊಟ್ಟುಕೊಳ್ಳುವ ಸಂತೆಯಲಿ ಸರಕು ವಿನಿಮಯವು

ಒಟ್ಟು ಕರಗದು ಇಲ್ಲಿ ಸರಕುಗಳ ಗಂಟು! |

ಬಿಟ್ಟು ಗಂಟುಗಳೆಲ್ಲ ನಡೆ ಹಟ್ಟಿಯಾ ಕಡೆಗೆ

ಬೆಟ್ಟದಾ ಹಾದಿಯಿದೆ ~ ಪರಮಾತ್ಮನೆ ||೪೪೨||


ಫಲಭರಿತ ಮರಕುಂಟು ವಂಶ ಬೆಳೆಸುವ ಆಸೆ

ಜಲಧಿ ಸೇರುವ ಆಸೆ ಹರಿಯುವಾ ನದಿಗೆ |

ಇಳೆಯ ಕಣಕಣಕೆ ಇರಲಾಸೆಗಳು ಧರ್ಮವದು

ಅಳತೆ ಮೀರದೆ ಇರಲು ~ ಪರಮಾತ್ಮನೆ ||೪೪೩||


ಕರಿಗೆ ಸಾಕಾಗುವುದೆ ಕುರಿಯು ಮೇಯುವ ಮೇವು

ಉರಿಬಿಸಿಲ ಸೆಕೆಗೆ ಸಿಕ್ಕಂತೆ ಹನಿ ನೀರು |

ಅರೆಮನದ ಕಾರ್ಯಗಳು ನೀಡುವವೆ ಪೂರ್ಣಫಲ?

ಉರಿಸು ಇರುಳಿನ ದೀಪ ~ ಪರಮಾತ್ಮನೆ ||೪೪೪||


ಕಲರವದ ಹಾಡಿರಲು ತಂಗಾಳಿ ಬೀಸಿರಲು 

ಬಳಿಯಲ್ಲೆ ನದಿಯಿರಲು ಹಸಿರು ನಗುತಿರಲು |

ಎಳೆಯ ತುಸು ಬಿಸಿಲಿರಲು ಚುಮುಗುಡುವ ಚಳಿಯಿರಲು

ಗೆಳತಿ ಜೊತೆಗಿರಬೇಕು ~ ಪರಮಾತ್ಮನೆ ||೪೪೫||

ಮುಕ್ತಕಗಳು - ೮೮

ಜಾತಿಧರ್ಮಗಳೀಗ ರಾಜಕೀಯದೆ ಮುಳುಗಿ

ಕೋತಿಗಳ ರೀತಿಯಲಿ ಕುಣಿಸುತಿವೆ ಜನರ |

ಭೀತಿಯನು ಬಿತ್ತುತ್ತ ಮನಗಳನು ಕದಡುತ್ತ

ನೀತಿಯನು ಮರೆತಿಹವು ~ ಪರಮಾತ್ಮನೆ ||೪೩೬||


ಉಪಕಾರ ಮಾಡುತಿರು ಪ್ರತಿಫಲವ ಬಯಸದೆಯೆ

ತಪವ ಗೈಯುವ ರೀತಿ ಎಡೆಬಿಡದೆ ಸತತ |

ಉಪಕಾರ ದೊರೆಯುವುದು ಸಮಯಕ್ಕೆ ಸರಿಯಾಗಿ

ಹಪಹಪಿಸದೆಯೆ ನಿನಗೆ ~ ಪರಮಾತ್ಮನೆ ||೪೩೭||


ಗೋಜಲನು ತುಂಬದಿರಿ ಕಲಿಯುವಾ ಮನಗಳಲಿ

ರಾಜಿಯಾಗಿರಿ ವಿದ್ಯೆ ಕಲಿಸುವಾ ಗುರಿಗೆ |

ಸೋಜಿಗದ ಮನಗಳಿಗೆ ಶುದ್ಧ ಅರಿವನು ನೀಡಿ

ಭೋಜನವು ಸ್ವಾಸ್ಥ್ಯಕ್ಕೆ ~ ಪರಮಾತ್ಮನೆ ||೪೩೮||


ಶಿಸ್ತಿರದ ಬದುಕುನಾ ವಿಕನಿರದ ದೋಣಿ, ಕಥೆ

ಪುಸ್ತಕದ ಪುಟಗಳೇ ಅದಲುಬದಲಂತೆ! |

ಮಸ್ತಕದ ಮಾರ್ಗದರ್ಶನಿವಿರದ ಮನಸಿರಲು

ಬೇಸ್ತು ಬೀಳುವೆ ಬಂಧು ~ ಪರಮಾತ್ಮನೆ ||೪೩೯||


ದೇವರಿಗೆ ಕಾಣುತಿರೆ ಮಾಡುತಿಹ ಪೂಜೆಗಳು

ದೈವಕ್ಕೆ ಕಾಣದೇ ನೀ ಮಾಡೊ ತಪ್ಪು? |

ದೇವನಾ ಕ್ಯಾಮೆರವು ನಮ ಕಣ್ಣೆ ಮರೆಯದಿರು

ನಾವು ನಮಗೇ ಸಾಕ್ಷಿ ~ ಪರಮಾತ್ಮನೆ ||೪೪೦||


ಮುಕ್ತಕಗಳು - ೮೭

ಬಾಳಬಂಡಿಯು ಆಗಬೇಕಿಹುದು ತೇರೊಂದು

ಏಳಿಗೆಯು ದೊರೆಯುವುದು ಶಂಕೆ ಬೇಕಿಲ್ಲ |

ಕೇಳು, ಕೂರಿಸಬೇಕು ಸತ್ಯ ದಯೆ ಧರ್ಮಗಳ

ಈಳುತಿಹ ತೇರಿನಲಿ ~ ಪರಮಾತ್ಮನೆ ||೪೩೧||

ಈಳುತಿಹ = ಎಳೆಯುತಿಹ


ಪದವಿಗಳು ಕಲಿಸುವವೆ ಬದುಕಿನಾ ಪಾಠವನು?

ಪದವಿ ಪಡೆದಿದೆಯೇನು ಜೇನಿನಾ ನೊಣವು? |

ಮುದದಿಂದ ಕಲಿಸದದು ಕೂಡಿ ಬಾಳುವ ರೀತಿ

ಮದವೇಕೆ ಪದವಿಯಿರೆ? ~ ಪರಮಾತ್ಮನೆ ||೪೩೨||


ಮೇಲೆ ಹಾರಲು ಬೇಕು ಖಗಗಳಿಗೆ ರೆಕ್ಕೆಗಳು

ಮೇಲೇರೆ ಮನುಜನಿಗೆ ನಮ್ರತೆಯೆ ರೆಕ್ಕೆ |

ಕಾಲೂರಬೇಕು ಭೂಮಿಯ ಮೇಲೆ ಸೊಕ್ಕಿರದೆ

ಗಾಳಿಗೋ ಪುರಮಿಥ್ಯ ~ ಪರಮಾತ್ಮನೆ ||೪೩೩||


ನೇಹಿಗರ ಸಂಗವದು ಹೆಜ್ಜೇನು ಸವಿದಂತೆ

ದಾಹ ತಣಿಪುದು ಮನಕೆ ಸವಿ ತಂಪನೆರೆದು |

ಬಾಹಿರದ ಬದುಕಿನಲಿ ನೆರಳಂತೆ ನಿಂತವರು

ಜಾಹೀರು ಮಾಡುತಿಹೆ ~ ಪರಮಾತ್ಮನೆ ||೪೩೪||

ಬಾಹಿರ = ಹೊರಗೆ, ಜಾಹೀರು = ಘೋಷಣೆ


ದೇವನೊಬ್ಬನು ಮಾತ್ರ ಎನ್ನುವರೆ ಎಲ್ಲರೂ

ಯಾವುದೇ ಸಂಶಯಗಳಿರದ ನಂಬಿಕೆಯು! |

ಕಾವನೊಬ್ಬನಿರೆ ಕಲಹಿಗಳಾದರೇಕೆ ಜನ?                

ದೇವನನು ಹೆಸರಿಸಲು! ~ ಪರಮಾತ್ಮನೆ ||೪೩೫||

Sunday, December 25, 2022

ಮುಕ್ತಕಗಳು - ೮೬

ಸುಟ್ಟಿರಲು ಮರವೊಂದ ಮತ್ತೆ ಫಲವೀಯುವುದೆ

ನೆಟ್ಟು ಸಸಿಯನು ಪೋಷಿಸುತ ಕಾಯಬೇಕು |

ಕೆಟ್ಟಕರ್ಮಫಲದಾ ಪರಿಣಾಮ ತಗ್ಗಿಸುವ 

ಗಟ್ಟಿ ದಾರಿಯಿದುವೇ ~ ಪರಮಾತ್ಮನೆ ||೪೨೬||


ಈಯುವುದು ಸಂತಸವ ಬಡವನಿಗೆ ತುತ್ತನ್ನ

ಈಯುವುದೆ ಧನಿಕನಿಗೆ ತೃಪ್ತಿ ಮೃಷ್ಟಾನ್ನ? |

ಬೇಯುವುದು ಮನವಧಿಕ ತೀರದಾಸೆಗಳಿರಲು

ಸಾಯುವುದು ಸಂತಸವು ~ ಪರಮಾತ್ಮನೆ ||೪೨೭||


ಸರ್ವಗುಣ ಸಂಪನ್ನರಾರುಂಟು ಪೃಥುವಿಯಲಿ

ಗರ್ವಪಡದಿರು ನೀನು ಕೊರೆಯುಂಟು ನಿನಗೆ | 

ಕರ್ಮ ತಂದಿಹ ಕೊರತೆ ಮರೆಯಾಗ ಬೇಕೆ? ಹಿಡಿ,

ಪರ್ವಕಾಲದ ಮಾರ್ಗ ~ ಪರಮಾತ್ಮನೆ ||೪೨೮||

ಪರ್ವಕಾಲ = ಪರಿವರ್ತನೆ / ಬದಲಾವಣೆ


ಬಾಗುವುದು ಮರವು ಫಲಭರಿತವಾಗಿರುವಾಗ

ಬಾಗುವುದು ತಲೆಯು ಪಾಂಡಿತ್ಯ ತುಂಬಿರಲು |

ಬೀಗುವರು ಸುಮ್ಮನೆಯೆ ಸೋಗಿನಾ ಪಂಡಿತರು

ಮಾಗಿರದ ಎಳಸುಗಳು ~ ಪರಮಾತ್ಮನೆ ||೪೨೯||


ಅರಳುತಿಹ ಕುಸುಮವರಿಯದು ಪಯಣವೆಲ್ಲಿಗೋ

ಅರಳಿ ದೇವನ ಗುಡಿಗೊ ಮಸಣಕೋ ಕೊನೆಗೆ? |

ಇರುವುದೇ ಕುಸುಮಕ್ಕೆ ನಿರ್ಧರಿಸೊ ಅವಕಾಶ?

ಹರಿ ನಮಗೆ ಕೊಟ್ಟಿಹನು ~ ಪರಮಾತ್ಮನೆ ||೪೩೦||