Sunday, October 1, 2023

ದೀಪಾವಳಿ

ಕಾಣುತಿಹುದು ದೀಪ ಮಾಲೆ,

ಬೀದಿಯಲ್ಲಿ ಸಾಲು ಸಾಲೆ.

ಬೆಳಕ ಬೀರಿ ನಗುವ ಚಿಮ್ಮಿದೆ,

ದೀಪಾವಳಿಯ ಹುರುಪು ತಂದಿದೆ.


ಗಂಗಾ ಮಾತೆಯೆ ಶರಣು ಶರಣು

ನೀರ ತುಂಬುವೆ ಇಂದು ನಾನು

ಶುದ್ಧವಾಗಲಿ ಮಲಿನ ತನುವು

ಹಗುರವಾಗಲಿ ನೊಂದ ಮನವು


ಕೃಷ್ಣ ದೇವನೆ ನಿನಗೆ ನಮನ

ಆಗಲಿಂದೇ ಅಸುರ ದಮನ

ನರಕ ಚತುರ್ದಶಿಯ ಶುಭದಿನ

ನರಕಾಸುರರಿಗೆ ಕೊನೆ ದಿನ


ಕೇಳುತಿಹುದು ಗೆಜ್ಜ ನಾದ,

ನೋಡು ಅಲ್ಲಿ ದಿವ್ಯ ಪಾದ,

ಬಂದಳಗೋ ಲಕುಮಿ ತಾಯಿ,

ಸಲಹು ಎಮ್ಮನು ನೀನು ಮಾಯಿ.


ವಾಮನಮೂರ್ತಿ ನೀನು ಬಂದೆ

ಭೂಮ್ಯಾಕಾಶಗಳ ತುಳಿದು ನಿಂದೆ

ಬಲಿಗೆ ಮೋಕ್ಷವ ಬಳಿಗೆ ತಂದೆ

ಪಾಲಿಸು ಎಮ್ಮನು ನೀನೆ ತಂದೆ



ಬಕುತಿ ಭಾವಗಳು ಚಿಮ್ಮಿ ಓಕುಳಿ

ಹರುಷದಾ ದೀಪಾವಳಿ

ದೀಪಗಳ  ಸಿರಿ ಬೆಳಕಲಿ

ವಿಶ್ವ ಶಾಂತಿಯು ಹರಡಲಿ


ಬೆಳಕಿನ ಎರವಲು

ನೀಡಿ ಬೆಳಕಿನ ಎರವಲು

ದೀಪವಾಗಿಸು ಎನ್ನನು.

ದೀಪಾವಳಿಗಳ ಮಾಲೆಯಲ್ಲಿ,

ಚೆಂದ ಪೋಣಿಸು ಎನ್ನನು.


ಜಗಕೆ ಮಿಣುಕು ಬೆಳಕನಿತ್ತು

ಕುಣಿವೆ ನಿನ್ನ ಹೆಸರಲಿ.

ಕೆರೆಯ ನೀರನು ಕೆರೆಗೆ ಚೆಲ್ಲಿದ,

ಧನ್ಯ ಭಾವವು  ನನ್ನದಿರಲಿ.


ಮನದ ತಮವು ಕರಗಲಿ,

ಜಡತೆ ಮಾಯವಾಗಲಿ.

ಜಗದ ನೋವು ನೀಗಲಿ,

ಹೊಸ ಬೆಳಕಿನಾ ಬೆಳಕಲಿ.


ಆನಂದ

ಕುಡುಕನಿಗೆ ಮತ್ತಿನಲೇ ಆನಂದ

ಕಾಮುಕಗೆ ದೇಹಸುಖವೇ ಆನಂದ

ಬಕುತನಿಗೆ ಸನ್ನಿಧಿಯೇ ಆನಂದ

ಆನಂದವಿರುವಾಗ ಮತ್ತೇನು ಬೇಕೆಂದ!


ಕತ್ತೆಗೆ ಪಾಳುಗೋಡೆಯೇ ಚೆಂದ

ಅರಸನಿಗೆ ಅರೆಮನೆಯೇ ಅಂದ

ಬಡವಗೆ ಹಟ್ಟಿಯಲೇ ಆನಂದ

ಮೀನು ಅಟ್ಟುವವಗೆ ಇಲ್ಲ ದುರ್ಗಂಧ!


ಹಕ್ಕಿಗೆ ನೀರಿನಲಿ ಗೂಡಿಲ್ಲ

ಮೀನಿಗೆ ಬಾನಿನಲಿ ಎಡೆಯಿಲ್ಲ

ಚತುಷ್ಪಾದಕೆ ನೆಲವೇ ಎಲ್ಲ

ಮನುಜ ಮಾತ್ರ ಎಲ್ಲಿಯೂ ಸಲ್ಲ!


ಮತ್ತು ಬೇಕೆನುವವಗೆ ಮದ್ದೇ ಹಾಸ,

ಹಿತವಚನ ಕಿವಿಗೆ ಕಾದ ಸೀಸ

ಕಾಣಿಸದೇ ಇಲ್ಲಿ ಮತ್ತಿನ ಮೋಸ?

ಕಾಪಾಡಬೇಕಿದೆ ನಮ್ಮೆಲ್ಲರ ಕೂಸ!

Tuesday, September 26, 2023

ಜೋಡಿ ಜೀವ

ಜೋಡಿ ಜೀವದ ದೂರದ ಪಯಣ

ವಿರಮಿಸಲಿಲ್ಲ ಒಂದು ಕ್ಷಣ

ಭಾರವ ಹೊತ್ತು ಬಾಗಿದೆ ಬೆನ್ನು 

ಪ್ರೀತಿಯ ಪೊರೆಗೆ ಮಂಜಾಗಿದೆ ಕಣ್ಣು


ಸೂತ್ರವು ಹರಿದಿದೆ ಗಾಳಿಪಟಕೆ, 

ಏಳುತ ಬೀಳುತ ಸೇರುವುದೆಲ್ಲಿಗೆ? 

ಹಗಲಲೇ ಕಾಡಿದೆ ಇರುಳಿನ ಕುರುಡು

ಮಕ್ಕಳು ಇದ್ದರೂ ಬಾಳೇ ಬರಡು. 


ನಿಮ್ಮಯ ನೆರಳಲಿ ಬೆಳೆದ ಸಸಿಗಳು

ಆದವು ಬೇಗನೆ ನೆರಳಿನ ಮರಗಳು 

ದೂಡಿವೆ ನಿಮ್ಮನೇ ಬಿಸಿಲಿನ ಝಳಕೆ

ಕರುಣೆಯೇ ಇಲ್ಲವೇ ಇಂದಿನ ಜನಕೆ

ಮುಕ್ತಕಗಳು - ೧೦೧

ಸಂತೆಯಲಿ ಸರಕಿರಲು ಕಿಸೆಯಲ್ಲಿ ಹಣವಿರಲು

ಕಂತೆಕಟ್ಟುತ ಸರಕು ಕೊಳ್ಳುವೆವು ದರಕೆ |

ಚಿಂತನೆಗೆ ವಿಷಯವಿರೆ ಆಸಕ್ತ ಮನಗಳಿರೆ

ಅಂತಗೊಳಿಸುವ ಶಂಕೆ ~ ಪರಮಾತ್ಮನೆ ||೫೦೧||


ಹುಟ್ಟುವೆವು ಅಳುತಲೇ ಎಲ್ಲರೂ ಜಗದಲ್ಲಿ

ಕಟ್ಟುವೆವು ಅನವರತ ನಗುವ ಕನಸುಗಳ |

ಕೊಟ್ಟರೇ ಇತರರಿಗೆ ನಗೆಯ ಕಾಣಿಕೆಗಳನು

ಒಟ್ಟುವೆವು ನಗೆಗಂಟು ~ ಪರಮಾತ್ಮನೆ ||೫೦೨||

ಒಟ್ಟು = ಕೂಡಿಸು


ಕರೆದುತಂದರೆ ಧನವು ಗೆಳೆಯರನು ಹೊಸದಾಗಿ

ಒರೆಹಚ್ಚಿ ಅವರ ಪರಿಶೀಲಿಸಿತು ಕಷ್ಟ |

ತೊರೆಯದೇ ಕಷ್ಟಕ್ಕೆ ಆದವನೆ ನಿಜಗೆಳೆಯ

ಅರಿ ನಂಬುವಾ ಮುನ್ನ ~ ಪರಮಾತ್ಮನೆ ||೫೦೩||

ಸಮರ್ಪಣೆ

ಮಾಧವಾ ಕೃಷ್ಣಾ ಮಧುಸೂದನ!

ನಿನಗಾಗಿ ಅರ್ಪಣೆ ಈ ನನ್ನ ಗಾನ.

ಮಿಡಿದಿದೆ ಎದೆಯು ಪ್ರೀತಿಯ ತಾನ,

ಮಾಡಿಹೆ ನಿನದೇ ಮುಗಿಯದ ಧ್ಯಾನ!


ಮುರುಳಿಯ ನಾದವ ಕೇಳಿಸು ನೀನು,

ಮನದಲಿ ಅದನೇ ತುಂಬುವೆ ನಾನು!

ಮತ್ತೆಮತ್ತೆ ನಿನ್ನನು ಕಾಡುವೆನೇನು?

ಮನದಲೆ ತುಂಬಿರೆ ಸವಿಸಿಹಿ ಜೇನು!


ಕಾದಿವೆ ಕಂಗಳು ನಿನ್ನಯ ದರ್ಶನಕೆ,

ಬೆಳಕನು ತೋರಿಸು ಈ ನನ್ನ ಮನಕೆ.

ಉತ್ತರ ದೊರೆಯಲಿ ಕಾಡುವ ಜಗಕೆ,

ಪಾವಿತ್ರ್ಯ ಸಿಗಲಿ ನನ್ನಯ ಜನುಮಕೆ.


ನಿನಗಾಗಿ ನಾನು ಹಾತೊರೆದಿರಲು,

ತೆರೆಯೋ ಬೇಗ ನಿನ್ನೆದೆ ಬಾಗಿಲು.

ನದಿಗಳು ಹರಿದು ಸೇರಿವೆ ಕಡಲು,

ಮೀರೆಯು ಬಂದಳು ನಿನ್ನನು ಸೇರಲು!

Monday, August 28, 2023

ಭಾರತೀಯರು ನಾವು

ಭಾರತೀಯರು ನಾವು ಎನ್ನುವುದೆ ಹಿರಿಮೆ,

ಮೇರು ಗಿರಿಯೆತ್ತರವು ನಮ್ಮಯಾ ಗರಿಮೆ!


ಬಹು ಸನಾತನ ನಮ್ಮ ವಿಧಿ ವಿಚಾರಗಳು,

ನವನೂತನವು ನಮ್ಮ ಆವಿಷ್ಕಾರಗಳು!

ಆಚಾರ ಸುವಿಚಾರ ಸಂಸ್ಕಾರವಂತರು,

ಹೃದಯ ವೈಶಾಲ್ಯತೆಯ ಭಾವ ಮೆರೆದವರು.


ವೈರಿಪಡೆಗಳೆದೆಗಳ ಮೆಟ್ಟಿನಿಂತವರು,

ಸ್ನೇಹವನು ಬಯಸಿರಲು ಅಪ್ಪಿಕೊಂಡವರು!

ಹಿಮಪರ್ವತಗಳೆತ್ತರದ ಗುರಿಯು ಉಂಟು,

ಗಂಗೆಯಾ ಜಲದಂತೆ ಶುದ್ಧಮನವುಂಟು.


ಕಣ್ಣೆದುರೆ ಉಂಟು ಸಾಧಕರ ಸಾಧನೆಯು,

ಮಣ್ಣಿನಲೆ ಉಂಟು ಅವರೆಲ್ಲರಾ ದನಿಯು!

ವಿಂಧ್ಯಾಚಲದಂತೆ ವಿಶ್ವಾಸವದು ಅಚಲ,

ಆಕಾಶದಂತೆ ಅವಕಾಶಗಳು ವಿಪುಲ!


ನಮಗಿತ್ತಿಹಳು ತಾಯಿ ಏಸೊಂದು ಮಮತೆ!

ನಾವೇನು ಕೊಟ್ಟಿಹೆವು ಹಚ್ಚಲಿಕೆ ಹಣತೆ?

ಬನ್ನಿರೀ ಬರೆಯೋಣ ಹೊಸದೊಂದು ಚರಿತೆ,

ಭಾರತಿಯ ಕಥೆಯಾಗೆ ಇನಿದಾದ ಕವಿತೆ!