Tuesday, October 13, 2009

ಎಲೆಯ ಮರೆಯ ಕಾಯಿ

ಇರುವನರುಹಲು ಸ್ವರವು ಎಲ್ಲಿದೆ, 
ಎಲೆಯ ಮರೆಯ ಕಾಯಿಗೆ?

 ಮೈಯ ತುಂಬಾ ರೆಕ್ಕೆಯಿದ್ದರೂ, 
ಹಾರಲಾರದು ವನದ ಕುಸುಮವು! 
ಸೇರಲಾರದು ದಿವ್ಯ ಸನ್ನಿಧಿ, 
ಏರಲಾರದು ಚೆಲುವ ಮುಡಿಯನು. 

 ರವಿಯೆ ಆಗಲಿ, ಶಶಿಯೆ ಆಗಲಿ, 
ಮಿಣುಕಿ ಮಿನುಗುವ ತಾರೆಯಾಗಲಿ, 
ನೀಡಬಲ್ಲರು ಬೆಳಕ ಕಿರಣವ, 
ತೂರಬಲ್ಲರೆ ತಡೆವ ಮೋಡವ? 

 ತುಂಬಿಕೊಂಡ ಮನಸಿಗೆ, 
ಒಲವ ಸೂಸುವ ಎದೆಯ ಗೂಡಿಗೆ, 
ಉಕ್ಕಿ ಬರುವ ಪ್ರೀತಿ ಹಾಡಿಗೆ, 
ಇಲ್ಲವೇಕೋ ಗುಂಡಿಗೆ, ಆಡಲಿಲ್ಲ ನಾಲಿಗೆ!

Tuesday, September 8, 2009

ಬದರೀನಾಥ ಸ್ತುತಿ

 ಪರ್ವತೇಶನ ನಾಡಿನಲ್ಲಿ, 
ಹಿಮಾಲಯದ ತಂಪಿನಲ್ಲಿ, 
ಭಕ್ತಿಭಾವದಿ ಮಿಂದು ಎದ್ದು, 
ಬದರಿನಾಥನ ಕಂಡೆನು. 

 ನೀಲಕಂಠನು ನೋಡುತಿರಲು, 
ಅಲಕನಂದೆಯು ಪಾದ ತೊಳೆಯಲು, 
ಪುಣ್ಯಪಾದದ ಅಡಿಗೆ ನಿಂತು, 
ಬದರಿನಾಥನ ಕಂಡೆನು. 

 ಗರುಡವಾಹನ ಬಾಗಿಲಲ್ಲಿ, 
ಕುಬೇರ ಲಕ್ಷ್ಮಿಯು ಸನಿಹದಲ್ಲಿ, 
ಕುಚೇಲನಂತೆ ನಮಿಸಿ ನಾನು, 
ಬದರಿನಾಥನ ಕಂಡೆನು. 

 ಬಿಸಿಯ ನೀರ ಚಿಲುಮೆಯಲ್ಲಿ, 
ಮಿಂದ ಭಕ್ತರು ಭಜಿಸುತಿರಲು, 
ಮನದೆ ದೇವನ ಸ್ತುತಿಸಿಕೊಂಡು, 
ಬದರಿನಾಥನ ಕಂಡೆನು. 

 ಉದಯರವಿಯು ಮೂಡಿಬಂದು, 
ಸ್ವರ್ಣ ಮುಕುಟವ ನೀಡುತಿರಲು, 
ಬಣ್ಣಿಸಲಾಗದ ಭಾವದಲ್ಲಿ, 
ಬದರಿನಾಥನ ಕಂಡೆನು. 

 ದಾರಿ ತೋರಿದೆ ಪಾಂಡವರಿಗೆ, 
ಮುಕ್ತಿ ನೀಡಿದೆ ಭಕ್ತ ಜನರಿಗೆ, 
ನಮಿಸಿದೆನೆಗೆ ಕರುಣೆ ತೋರಿದೆ, 
ಧನ್ಯನಾ ಬದರಿನಾಥನೆ!

Friday, May 29, 2009

ಚುನಾವಣೆ 2009

ಅಂತೂ ಇಂತೂ ಮುಗಿಯಿತು ಎಣಿಕೆ,
ಓಡದ ಕುದುರೆಯ ಕತ್ತಲಿ ಕುಣಿಕೆ.

ತಕ್ಕಡಿಯ ಕಪ್ಪೆಗಳಿಗೆ ಆಯಿತು ದಿಗ್ಭ್ರಮೆ,
ನೆಗೆಯಲು ಬಿದ್ದರು ನೀರಿಲ್ಲದೆ ಭಾವಿಗೆ.
ಆರು ದೋಸೆ, ಮೂರೂ ದೋಸೆ, ಬಯಸಿ ಬಂದವರು,
ಭವತಿ ಭಿಕ್ಷಾಂದೇಹಿ ಎನ್ನುವಂತಾಯಿತು.

ತುಂಡು ವೀರರು, ಬಂಡುಕೋರರು,
ಸುಳಿಗಾಳಿಗೆ ಸಿಕ್ಕ ತರೆಗೆಲೆಗಳಾದರು.
ರಾಣಿಜೇನುಗಳು ಪರಿತಪಿಸಿದರು,
'ಜೀ ಹುಜೂರ್' ಎನ್ನುವರಿಲ್ಲದೆ.

ಕೊನೆಗೂ ಸರಿಯಿತು ಕತ್ತಲ ಪರದೆ,
ಮೂಡಿತು ದೇಶಕೆ ಉದಯದ ಹಣತೆ.
ಗೊಂದಲ ಕಳೆಯಿತು, ನೆಮ್ಮದಿ ಮೂಡಿತು,
ಸ್ಥಿರ ಸರಕಾರಕೆ ಬುನಾದಿ ದೊರಕಿತು!

Tuesday, April 28, 2009

ಎಲ್ಲಾ ಬೇಕು!

ನನಗೂ ಬೇಕು, 
ನನ್ನ ಮಗನಿಗೂ ಬೇಕು, 
ಕೇಳಿದರು ಸೀಟು... 

ನನಗೂ ಬೇಕು, 
ನಮ್ಮಮ್ಮನಿಗೂ ಬೇಕು, 
ಕೋರಿದರು ಓಟು... 

ನಮಗೂ ಬೇಕು, 
ಮರಿಮಕ್ಕಳಿಗೂ ಬೇಕು, 
ಕೂಡಿಟ್ಟರು ನೋಟು...

Tuesday, April 14, 2009

ಮತ್ತೆ ಬರುವನು ವಸಂತ

ವಸಂತ ಬಂದಾಗ, ಕೈಹಿಡಿದು ನಕ್ಕಾಗ,
ಎದೆತುಂಬಿ ಚಿಮ್ಮಿತು ನಿನಗೆ ಸಂತಸದ ಹಸಿರು.

ಗ್ರೀಷ್ಮನೋಡಿ ಬಂದು, ವಸಂತನಟ್ಟಿದಾಗ,
ಬೆಂದೆ ವಿರಹದುರಿಯ ಬೇಗೆಯಲ್ಲಿ.
ಗೆಳತಿ ವರ್ಷಳು ಸುರಿಸಿದಳು ಕಣ್ಣೀರ ಧಾರೆ,
ನಿನ್ನೊಡಲ ತಾಪಕೆ ನೊಂದು, ಬೆಂದು.

ಶರತನ ಸಾಂತ್ವನದ ನುಡಿ ಹನಿಗಳು,
ತಂದಿತಾದರೂ ತುಸು ಸಮಾಧಾನ,
ಹೇಮಂತನಾಗಮಿಸಿ, ವಸಂತನ ಮರೆ ಎಂದಾಗ,
ಮರಗಟ್ಟಿದೆ ನೀನು, ಮೈ ಕೊರೆವ ಮಂಜಿನಂತೆ!

ಶಿಶಿರನು ತಂದ ಸಂತಸದ ಸುಗ್ಗಿ,
ವಸಂತನು ಮತ್ತೆ ಬರುವ ಸುದ್ದಿ!
ಸಸುನಗೆಯು ಚಿಗುರಿ, ಮೈಯೆಲ್ಲ ಅರಳಿ,
ಕಾದಿರುವೆ ಕಾತುರದಿ,  ಮತ್ತೆ ಬರುವ ವಸಂತನಿಗಾಗಿ!

Sunday, April 5, 2009

ಗಾಳಿಪಟ

ನಿನ್ನ ಪ್ರೀತಿಯ ಸೂತ್ರ ಪಿಡಿಪು, 
ಗಾಳಿಪಟವಾಯ್ತು ನನ್ನೆದೆ. 
ಬಾಲಂಗೋಚಿಯಂಥ ನೆನಪು,
ಜೋಲಿ ಹೊಡೆವುದ ತಡೆದಿದೆ!

ಎದೆಯ ಗೂಡಲಿ ಹುರುಪು ಮೂಡಿ, 
ಮೇಲೆ ಹಾರುವ ಎನಿಸಿತು.
ಮಂದ ಮಾರುತ ಕೈಯ ನೀಡಿ, 
ಹಾರು ಬಾ ಎಂತೆಂದಿತು. 

ಹರುಷದಿಂದ ಮೇಲೆ ಸಾಗುತ,
ಸಗ್ಗ ತಲುಪಿ ನಿಂತೆನು.
ನಿನ್ನ ಕಾಣುವ ತವಕ ಕಾಡುತ,
ನಿನ್ನೆ ಹುಡುಕಲು ಹೊರಟೆನು.

ರಂಭೆ ರೂಪಸಿ ಕಂಡೆ ಅಲ್ಲಿ,
ಹಾದಿ ತಪ್ಪಿಸೊ ಗೊಂಬೆಯು.
ನಿನ್ನ ತಲುಪುವ ದಾರಿಯಲ್ಲಿ,
ಅಡ್ಡ ಬರುತಿಹ ಕೊಂಬೆಯು.

ನಿನ್ನ ಕಾಣದೆ ಮನವು ಬೆಂದು,
ಎದೆಗೆ ಯಾತನೆ ನೀಡಿತು.
ನಿನ್ನ ನೆನಪಿನ ಸೆಳೆತವೊಂದು, 
ಎಳೆದು ಭೂಮಿಗೆ ತಂದಿತು!

Thursday, April 2, 2009

ವಿರೋಧಿ ನಾಮ ಸಂವತ್ಸರ

ನಾಮ ‘ವಿರೋಧಿ’ ಎಂದು, 
ಮಾನ ಕಳೆಯದಿರಿ ಎನಗೆ. 
ನಾಮ ಹಾಕುವವರು, 
ಮಾನಗೇಡಿಗಳು, 
ಇವರಿಗಷ್ಟೇ ವಿರೋಧಿ ನಾನು. 

 ನಿಮ್ಮ ವಿರೋಧಿಗಳಿಗೆ ವಿರೋಧಿ ನಾನು, 
ಮುನ್ನಡೆಯೋಣ ಅವಿರೋಧದಿಂದ ನಾವು. 
ನಾಮ ಮಾತ್ರಕೆ ವಿರೋಧಿಸಿದರೆ ಸಾಲದು, 
ನಿರ್ನಾಮವಾಗಿಸಬೇಕು ವಿರೋಧಗಳನ್ನು. 

 ಬೇಯುತಿವೆ ಚುನಾವಣೆಯ ಕಾವಿನಲ್ಲಿ, 
ಆಳುವ, ವಿರೋಧ ಪಕ್ಷಗಳು. 
ನಾಮಾವಶೇಷವಾಗಿಸೋಣ ಜನ ವಿರೋಧಿಗಳನ್ನು, 
ಈ ವಿರೋಧಿ ನಾಮ ಸಂವತ್ಸರದಲ್ಲಿ!