Showing posts with label ಕನ್ನಡ. Show all posts
Showing posts with label ಕನ್ನಡ. Show all posts

Sunday, July 10, 2022

ಮುಕ್ತಕಗಳು - ೨

ಅನ್ಯ ಭಾಷೆಯು ಬೇಕೆ ಕನ್ನಡವನುಲಿವಾಗ?

ಕನ್ಯೆ ಬೇಕೆನುವಾಭರಣದಲಂಕಾರ |

ವನ್ಯಜೀವಿಗೆ ಕಾಡು, ಕನ್ನಡವನೆನಗಿತ್ತೆ

ಧನ್ಯನಾಗಿಸಿ ನನ್ನ ಪರಮಾತ್ಮನೆ ||೬||


ಮುಕ್ತಕದ ಸೊಗಸುಗಳ ಮೆಚ್ಚದವರುಂಟೇನು?

ಶಕ್ತ ಚೌಕಟ್ಟಿನಲ್ಲನುಭಾವ  ಹೊಂದಿ |

ರಕ್ತಮಾಂಸಗಳಿರುವ ಜೀವಂತ ಗೊಂಬೆಯದು

ಭಕ್ತನಾಗಿಹೆ ನಾನು ಪರಮಾತ್ಮನೆ ||೭||


ಅಂದು ಗುಂಡಪ್ಪ ಕೈ ಹಿಡಿದ ಮುಕ್ತಕವನೇ

ಚೆಂದದಲಿ ಹೆಚ್ಚಾಯ್ತು ಮುಕ್ತಕದ ಪದ್ಯ |

ಇಂದು ಆ  ಕಗ್ಗವೇ ದಿಕ್ಸೂಚಿ  ಬದುಕಲಿಕೆ

ಸಂದೇಹ ಎಲ್ಲಿಹುದು ಪರಮಾತ್ಮನೆ ||೮|| 


ಮುಕ್ತಕವ ರಚಿಸಿದೊಡೆ ಮುತ್ತುಕಟ್ಟಿದೊಲಿರಲಿ

ಮುಕ್ತಕವನೋದಿದರೆ ತಲೆ ತೂಗಬೇಕು |

ಮುಕ್ತಕವು ಅಂತರಂಗಕೆ ಈಯೆ ಬೆಳಕನ್ನು

ಮುಕ್ತಮನ ಶರಣೆನಲಿ ಪರಮಾತ್ಮನೆ ||೯||


ಆಸೆಯಿದ್ದರೆ ಸಾಕೆ ದೇಹ ದಣಿಸಲುಬೇಕು

ವಾಸುದೇವನ ಕೃಪೆಯು ಜೊತೆಯಾಗಬೇಕು |

ಏಸು ನೀರಿನಲಿ ಮುಳುಗೇಳಬೇಕಿದೆ ಜಸಕೆ

ಕಾಸು ಕೊಟ್ಟರೆ ಕಡಲೆ ಪರಮಾತ್ಮನೆ  ||೧೦||

Saturday, December 4, 2021

ಕನ್ನಡಿಗನ ಕಥೆ


ಕನ್ನಡ, ಕನ್ನಡ, ಕನ್ನಡವೆಂದರೂ ವೇದಿಕೆಯನೇರಿ,

“ಎನ್ನಡ”, “ಎಕ್ಕಡ”, “ವ್ಹಾಟ್ ಡ”, ಎನ್ನುವುದಾಯಿತು ದಿನಚರಿ.

ಏಕೆ ಹೀಗೆ? ಏಕೆ ಹೀಗೆ? ಎಂದು ಅಚ್ಚರಿ ಪಡದಿರಿ,

ಇದು “ಅತಿಥಿ ದೇವೋಭವ” ದ ವಿಪರೀತಾರ್ಥದ ಪರಿ!



ಊರ ಮಕ್ಕಳಿಗೆ ಕನ್ನಡ ಕಡ್ಡಾಯ ಮಾಡಿ ಎಂದರು.

ತಮ್ಮ ಮಕ್ಕಳನು ಇಂಗ್ಲೀಷ್ ಶಾಲೆಗೆ ಕಳಿಸಿದರು,

ಐ.ಟಿ., ಬಿ.ಟಿ., ಮಾಡಿಸಿ ವಿದೇಶಕೆ ರವಾನಿಸಿದರು,

ಕನ್ನಡದ ಮಾಣಿಯ ಕೈಯ್ಯಲ್ಲಿ ಮುಸುರೆ ತೊಳೆಸಿದರು!

Wednesday, July 1, 2020

ಕನ್ನಡಾಂಬೆ




















ಅಮ್ಮ ಅಮ್ಮ ಕನ್ನಡದಮ್ಮ,
ಮುದ್ದು ಭಾಷೆಯ ಕೊಟ್ಟಿಹೆಯಮ್ಮ,
ನಮ್ಮಯ ನಾಲಿಗೆ ಪಾವನವಮ್ಮ,
ಕೋಟಿ ನಮನವು ನಿನಗೆ ಅಮ್ಮ.

ಮುತ್ತಿನ ಮಣಿಗಳ ಲಿಪಿಯನು ಇತ್ತೆ,
ಸವಿ ಸವಿ ಜೇನಿನ ಪದಗಳ ಕೊಟ್ಟೆ,
ಕತ್ತುರಿಯಂತಹ ಕಂಪನು ತುಂಬಿದೆ,
ಕುತ್ತಿಗೆಯಾಣೆ ನಿನ್ನನೇ ನಂಬಿದೆ!

ರನ್ನ, ಜನ್ನ, ಪಂಪರು ಎಲ್ಲರೂ,
ಹೊನ್ನಿನ ಸಿಂಹಾಸನವನೇ ಇತ್ತರು,
ಮಹಾದೇವಿ ಅಕ್ಕ, ಬಸವೇಶ್ವರರು,
ವಚನದ ಕುಸುಮವ ಪೂಜೆಗೆ ತಂದರು!

ಕುವೆಂಪು, ಬೇಂದ್ರೆ, ಮಾಸ್ತಿಯವರು,
ರೇಶಿಮೆ ಕನ್ನಡ ಸೀರೆಯ ನೇಯ್ದರು,
ನರಸಿಂಹ ಸ್ವಾಮಿ ನಗುತ  ಬಂದರು,
ಮುಡಿಗೆ ಮೈಸೂರು ಮಲ್ಲಿಗೆ ತಂದರು!

ಬಂದರು ಬಂದರು ಸೂಟಲಿ ನಿಸ್ಸಾರು,
ನಿತ್ಯೋತ್ಸವಕೆ ಚಾಲನೆ ಕೊಟ್ಟರು!
ಅರಿಶಿನ, ಕುಂಕುಮ ಬಾವುಟ ಹಿಡಿದೆವು,
ನಿನ್ನಯ ಪೂಜಿಸೊ ಭಕ್ತರು ನಾವು!

Friday, March 6, 2020

ಸಿರಿಗನ್ನಡದ ಸೊಬಗು

ಚಿಲಿಪಿಲಿಗಳ ಕಲರವದಲಿ,
ಕಾವೇರಿಯ ಜುಳುರವದಲಿ,
ಶೇಷಣ್ಣನ ವೀಣೆಯಲಿ,
ಕನ್ನಡದ ಇಂಪಿದೆ,
ಸವಿಗನ್ನಡದ ಇಂಪಿದೆ!

ಸಿರಿಗಂಧದ ಒಡಲಿನಲಿ,
ಮಲ್ಲಿಗೆಯ ಮಡಿಲಿನಲಿ,
ಕಸ್ತೂರಿಯ ಘಮಘಮದಲಿ,
ಕನ್ನಡದ ಕಂಪಿದೆ,
ನರುಗನ್ನಡದ ಕಂಪಿದೆ!

ಮಡಿಕೇರಿಯ ಮಂಜಿನಲಿ,
ಆಗುಂಬೆಯ ಸಂಜೆಯಲಿ,
ಅಕ್ಕರೆಯ ಗಂಜಿಯಲಿ,
ಕನ್ನಡ ತಂಪಿದೆ,
ತನಿಗನ್ನಡದ ತಂಪಿದೆ!

ಹಸಿರು ಗಿರಿಶ್ರೇಣಿಯಲಿ,
ಪಸರಿಸಿಹ ಕಾನಿನಲಿ,
ಮುಗಿಲೆತ್ತರ ತೆಂಗಿನಲಿ,
ಕನ್ನಡದ ಸೊಂಪಿದೆ,
ಚೆಲುಗನ್ನಡದ ಸೊಂಪಿದೆ!

ವರಕವಿಯ ಹಾಡಿನಲಿ,
ಗುಂಡಪ್ಪನ ಕಗ್ಗದಲಿ,
ಪುಟ್ಟಪ್ಪನ ಕಾವ್ಯದಲಿ,
ಕನ್ನಡವು ಅರಳಿದೆ,
ಸುಮಗನ್ನಡವು ಅರಳಿದೆ!

ಹಂಪೆಯ ಕೊಂಪೆಯಲಿ,
ಬೇಲೂರಿನ ಶಿಲೆಗಳಲಿ,
ಬಾದಾಮಿಯ ಗುಹೆಗಳಲಿ,
ಕನ್ನಡದ ಕಥೆಯಿದೆ,
ಸಿರಿ ಕರುನಾಡ ಕಥೆಯಿದೆ!

ಜೋಗದ ಬಿರು ಧಾರೆಯಲಿ,
ರಾಯಣ್ಣನ ಖಡ್ಗದಲಿ,
ಓಬವ್ವನ ಒನಕೆಯಲಿ,
ಕನ್ನಡದ ಸೊಲ್ಲಿದೆ,
ಕಲಿ ಕನ್ನಡಿಗನ ಸೊಲ್ಲಿದೆ!

ಜಯ ಕರ್ನಾಟಕ ಮಾತೆ!
ಜಯ ಕರ್ನಾಟಕ ಮಾತೆ!
ಜಯ ಕರ್ನಾಟಕ ಮಾತೆ!

Sunday, April 5, 2009

ಗಾಳಿಪಟ

ನಿನ್ನ ನೆನಪಿನ ಸೂತ್ರ ಹಿಡಿದ, 
ಗಾಳಿಪಟದ ಪಯಣ ನನ್ನದು. 

 ಎದೆಯ ಗೂಡಲಿ ಹುರುಪು ಮೂಡಿ, 
ಮೇಲೆ ಹಾರುವ ಆಸೆ ಚಿಮ್ಮಿತು, 
ಮಂದ ಮಾರುತ ಕೈಯ ಬೀಸಿತು, 
ನಿನ್ನ ನೆನಪಿನ ಅಲೆಯು ಎದ್ದಿತು. 

 ಹಿಗ್ಗಿನಲ್ಲಿ ಎದೆಯು ತುಂಬಿ, 
ಗಾಳಿಯಲ್ಲಿ ಹಾರಿ ತೇಲಿ, 
ಸ್ವರ್ಗದಲ್ಲಿ ಜೋಲಿ ಹೊಡೆದೆ, 
ನಿನ್ನ ಸಂಗದ ಕನಸಲಿ. 

 ನೀನಿಲ್ಲದ ಸ್ವರ್ಗವು ನರಕವೆನೆಗೆ, 
ರಂಭೆ ಕೊಂಬೆಗಳ ಸಂಗವೇಕೆ? 
ನಿನ್ನ ನೆನಪಿನ ಸೆಳೆತವೊಂದು, 
ಎಳೆದು ತಂದಿತು ಭೂಮಿಗೆ!

Thursday, April 2, 2009

ವಿರೋಧಿ ನಾಮ ಸಂವತ್ಸರ

ನಾಮ ‘ವಿರೋಧಿ’ ಎಂದು, 
ಮಾನ ಕಳೆಯದಿರಿ ಎನಗೆ. 
ನಾಮ ಹಾಕುವವರು, 
ಮಾನಗೇಡಿಗಳು, 
ಇವರಿಗಷ್ಟೇ ವಿರೋಧಿ ನಾನು. 

 ನಿಮ್ಮ ವಿರೋಧಿಗಳಿಗೆ ವಿರೋಧಿ ನಾನು, 
ಮುನ್ನಡೆಯೋಣ ಅವಿರೋಧದಿಂದ ನಾವು. 
ನಾಮ ಮಾತ್ರಕೆ ವಿರೋಧಿಸಿದರೆ ಸಾಲದು, 
ನಿರ್ನಾಮವಾಗಿಸಬೇಕು ವಿರೋಧಗಳನ್ನು. 

 ಬೇಯುತಿವೆ ಚುನಾವಣೆಯ ಕಾವಿನಲ್ಲಿ, 
ಆಳುವ, ವಿರೋಧ ಪಕ್ಷಗಳು. 
ನಾಮಾವಶೇಷವಾಗಿಸೋಣ ಜನ ವಿರೋಧಿಗಳನ್ನು, 
ಈ ವಿರೋಧಿ ನಾಮ ಸಂವತ್ಸರದಲ್ಲಿ!