ವಸಂತ
ಬಂದಾಗ, ಕೈಹಿಡಿದು ನಕ್ಕಾಗ,
ಎದೆತುಂಬಿ
ಚಿಮ್ಮಿತು ನಿನಗೆ ಸಂತಸದ ಹಸಿರು.
ಗ್ರೀಷ್ಮನೋಡಿ ಬಂದು, ವಸಂತನನಟ್ಟಿದಾಗ,
ಬೆಂದೆ
ವಿರಹದುರಿಯ ಬೇಗೆಯಲ್ಲಿ.
ಗೆಳತಿ
ವರ್ಷಳು ಸುರಿಸಿದಳು ಕಣ್ಣೀರ ಧಾರೆ,
ನಿನ್ನೊಡಲ
ತಾಪಕೆ ನೊಂದು, ಬೆಂದು.
ಶರತನ
ಸಾಂತ್ವನದ ನುಡಿ ಹನಿಗಳು,
ತಂದಿತಾದರೂ ತುಸು ಸಮಾಧಾನ,
ಹೇಮಂತನಾಗಮಿಸಿ, ವಸಂತನ ಮರೆ ಎಂದಾಗ,
ಮರಗಟ್ಟಿದೆ
ನೀನು, ಮೈ ಕೊರೆವ ಮಂಜಿನಂತೆ!
ಶಿಶಿರನು
ತಂದ ಸಂತಸದ ಸುಗ್ಗಿ,
ವಸಂತನು
ಮತ್ತೆ ಬರುವ ಸುದ್ದಿ!
ಸಸುನಗೆಯು
ಚಿಗುರಿ, ಮೈಯೆಲ್ಲ ಅರಳಿ,
ಕಾದಿರುವೆ
ಕಾತುರದಿ, ಮತ್ತೆ ಬರುವ ವಸಂತನಿಗಾಗಿ!