Friday, May 1, 2020

ಎರಡು ನೂಲು

ಋಣಧನಗಳ, ಪಾಪಪುಣ್ಯಗಳ,
ನೂಲೆರಡು ಹೆಣಿಕೆಯ ಲೋಕವಿದು!

ಹೊಳೆವ ಚಿನ್ನವೋ?
ಮಸಣದ ಬೂದಿಯೋ?
ಋಣಧನಗಳ ಜೋಡಣೆಯ,
ಕಥೆಯಲ್ಲವೇನು?

ಲಕ್ಷ್ಮೀಕಾಂತನೋ?
ದರಿದ್ರನಾರಾಯಣನೋ?
ಪಾಪಪುಣ್ಯಗಳು,
ತಂದ ವ್ಯತ್ಯಾಸವೇನೋ?!

ನೂಲೆರಡಾದರೂ,
ಹೆಣಿಕೆಯ ಕ್ಲಿಷ್ಟತೆ,
ಬಿಡಿಸಲಾಗದ ಗಂಟು,
ನಮಗಿಲ್ಲ ಸ್ಪಷ್ಟತೆ.

ಅರಿಯಹೋದಂತೆಲ್ಲ,
ಹೆಚ್ಚುವುದು ಗೋಜಲು,
ಅರಿತಿದ್ದು ಕೇವಲ,
ಅಷ್ಟೋ, ಇಷ್ಟೋ!

ಈ ಹೆಣಿಕೆಯಲ್ಲಡಗಿದೆ,
ನಾವರಿಯದ ರಹಸ್ಯ,
ಸಮಯಾಕಾಶಗಳ ರಂಗದಲಿ,
ಆಡುತಿದೆ ಲಾಸ್ಯ!

ಸಮಯದ ಗೊಂಬೆಗಳು,
ನಾವೇನು ಬಲ್ಲೆವು?
ಸೃಷ್ಟಿರಹಸ್ಯದ ಕಗ್ಗಂಟಲಿ,
ಸಿಕ್ಕಿಬಿದ್ದಿಹೆವು!

No comments: