ಬಂದಿತೋ ಬಂದಿತೋ ಬೆಳಕಿನ ಹಬ್ಬ,
ಸಾರಿತೋ ಸಾರಿತೋ ಸಡಗರದ ಕಬ್ಬ!
ಗರಗರಿಯ ಹೊಸವಸ್ತ್ರ, ಥಳಥಳಿಸುವ ಆಭರಣ,
ನವಶೋಭೆ ಬಂದಿದೆ ಹೆಂಗಳೆಯರ ವದನದಲಿ.
ಲಕುಮಿತಾಯಿ ಆಗಮಿಸು, ಸೇವೆಗಳ ಸ್ವೀಕರಿಸು,
ಸಿದ್ಧವಾಗಿ ಕಾಯುತಿಹೆವು ಎಮ್ಮ ಆಶೀರ್ವದಿಸು!
ಅಮಾವಾಸ್ಯೆ ಕತ್ತಲಲೂ ಆನಂದದ ಜ್ಯೋತಿಯಿದೆ,
ಸಡಗರದ ಬೆಳಕಿನಲಿ ಊರೆಲ್ಲ ತೊಯ್ದಿದೆ!
ಬಾದಾಮಿ, ಗೋಡಂಬಿ, ಮೆರವಣಿಗೆ ಸಾಗಿದೆ,
ಸಿಹಿತಿನಿಸಿನ ಸವಿರುಚಿಯು ನಾಲಿಗೆಯ ಗೆದ್ದಿದೆ!
ಅಜ್ಞಾನದ ಅಂಧಕಾರ ಹೊಸಬೆಳಕಲಿ ಮರೆಯಾಗಲಿ,
ದೀಪಗಳ ಮಾಲೆಯಲ್ಲಿ ಜ್ಞಾನಜ್ಯೋತಿ ಬೆಳಗಲಿ.
ಬೆಳಕಿನ ಹೊಳೆ ಹರಿದು ಕೊಳೆಯನ್ನು ತೊಳೆಯಲಿ,
ಸಡಗರವು ಘಮಘಮಿಸಿ ಊರೆಲ್ಲ ಹಬ್ಬಲಿ!
ಹೂಮತಾಪಿನ ಚಿಟಚಿಟಕೆ ಕಸಿವಿಸಿಗಳು ಮರೆಯಲಿ,
ಹೂಕುಂಡದ ಹೂಮಳೆಗೆ ತಳಮಳಗಳು ತೊರೆಯಲಿ,
ಬಡಿದೆಬ್ಬಿಸೊ ಸಿಡಿಮದ್ದಿಗೆ ದಶಕಂಠರು ಬೆದರಲಿ,
ಆನಂದದ ಕ್ಷಿಪಣಿಗಳು ಆಗಸದೆಡೆಗೆ ಹಾರಲಿ!
No comments:
Post a Comment