ತಿರುಮಲೆಯ ಗೋವಿಂದ ಸಿಹಿರುಚಿಯ ಮಕರಂದ
ಮರಳಿ ದುಂಬಿಗಳು ಸವಿಯುತಿವೆ ಆನಂದ |
ಹರಿದು ಬಕುತಿಯ ಜೇನು ನಲಿದಿಹವು ಮುದದಿಂದ
ಮರೆತು ಕೋಟಲೆಗಳನು ~ ಪರಮಾತ್ಮನೆ ||೪೮೬||
ಅರಿತು ನಡೆಯಲುಬೇಕು ಕೆಲವನ್ನು ಬದುಕಿನಲಿ
ಮರೆತು ನಡೆಯಲುಬೇಕು ಮತ್ತೆ ಕೆಲವನ್ನು |
ಬೆರೆತು ಬಾಳಲುಬೇಕು ಪ್ರೀತಿಯಿಂ ಎಲ್ಲರಲಿ
ಮರೆತು ಸೇಡಿನ ದಾರಿ ~ ಪರಮಾತ್ಮನೆ ||೩೮೭||
ಗಳಿಸದಿದ್ದರೆ ಏನು ಕೋಟಿ ಸಕ್ರಮವಾಗಿ
ಬೆಳೆಯುವವು ಶಾಂತಿ ನೆಮ್ಮದಿ ಸಂತಸಗಳು |
ಮೊಳಕೆಯೊಡೆಯುವವು ನಿಸ್ವಾರ್ಥದಾ ಬೀಜಗಳು
ಹುಳುಕಿಲ್ಲದಿಹ ಫಲವು ~ ಪರಮಾತ್ಮನೆ ||೪೮೮||
ಬದಲಿಸುವ ಬಟ್ಟೆಗಳ ಬಗ್ಗೆ ಚಿಂತಿಸಬೇಡ
ಬದಲಿಸಿದೆ ಲಕ್ಷ್ಯವನು ಎಡೆಬಿಡದೆ ಸಾಗು |
ಮುದದಿ ಮಾಧವ ತಾನು ಬಟ್ಟೆಯನು ತೋರುವನು
ಕದವ ತೆರೆಯುತ ಮನೆಯ ~ ಪರಮಾತ್ಮನೆ ||೪೮೯||
ಬಲ್ಲಿದರು ಪೇಳಿಹರು ಕಿವಿಮಾತು ನೆನಪಿಡಲು
ಕಲ್ಲೆಸೆಯೆ ಕೆಸರಿನಲಿ ಮುಖವೆಲ್ಲ ಮಣ್ಣು |
ನಲ್ಲವರು ಚೇಷ್ಟೆಯನು ಮಾಡದಿರುವರು, ತಮ್ಮ
ಗಲ್ಲಿಯಲಿ ಕೆಸರಿರಲು ~ ಪರಮಾತ್ಮನೆ ||೪೯೦||
ನಲ್ಲವರು = ಉತ್ತಮರು