Showing posts with label ದಯೆ. Show all posts
Showing posts with label ದಯೆ. Show all posts

Thursday, August 4, 2022

ಮುಕ್ತಕಗಳು - ೩೩

ಮರಣಗಳ ಸಾಲಾಗಿ ತಂದಿಹುದು ವೈರಾಣು

ಮರೆತಿದ್ದ ಪಾಠಗಳ ಮತ್ತೆ ನೆನಪಿಸುತ |

ಬೆರೆತಿಹವು ಋಣಧನಗಳಾ ಫಲವು, ಜೀವನವು

ಎರಡು ಮುಖಗಳ ನಾಣ್ಯ ~ ಪರಮಾತ್ಮನೆ ||೧೬೧||


ದಯೆಯಿಲ್ಲದಿರೆ ಧರ್ಮವೆಂಬುವರೆ ಬೋಧನೆಯ

ಲಯವಾಗಿಹೋಗುವುದು ಮಾನವತೆ ನಶಿಸಿ |

ಜಯವಿರಲಿ ದಯೆಯ ರಕ್ಷಿಸುವವಗೆ ಅನವರತ

ದಯೆಯಿಡುವ ಸಕಲರಲಿ ~ ಪರಮಾತ್ಮನೆ ||೧೬೨|| 


ಸಾಹಿತ್ಯ ಸಂಗೀತ ಲಲಿತಕಲೆಗಳು ಬೇಕು

ದೇಹಕ್ಕೆ ಮನಗಳಿಗೆ ಮುದ ನೀಡಲೆಂದು |

ದೇಹಿ ಎಂದರೆ ಮನಸುಗಳ ಕುಣಿಸಿ, ಸಾತ್ವಿಕದ

ದಾಹವನು ತಣಿಸುವವು ~ ಪರಮಾತ್ಮನೆ ||೧೬೩||


ಸಂಕಟವು ಬಂದಿರಲು ಸೊಂಟ ಬಗ್ಗಿಸಿ ನಾವು

ವೆಂಕಟರಮಣನ ಮೊರೆ ಹೋಗುವೆವು ಬಂಧು |

ಬಿಂಕದೀಯಾಟ ತೊರೆಯಲು ಸದಾ ನೆನೆ ಪಾದ

ಟಂಕಿಸುತ ಮನದಲ್ಲಿ ~ ಪರಮಾತ್ಮನೆ ||೧೬೪||


ದೇವ ದಾನವರ ಹೋರಾಟ ನಡೆದಿದೆ ಸತ್ಯ

ರಾವಣರು ತಲೆಯೆತ್ತಿ ನಿಲ್ಲುತಿರೆ ನಿತ್ಯ |

ಕಾವಲಿದೆ ಮನಕೆ ರಾವಣರ ಹುಟ್ಟಡಗಿಸಲು

ಕೋವಿಯೇ ಸನ್ಮತಿಯು ಪರಮಾತ್ಮನೆ ||೧೬೫||