Showing posts with label ಬಯಕೆ. Show all posts
Showing posts with label ಬಯಕೆ. Show all posts

Saturday, December 17, 2022

ಮುಕ್ತಕಗಳು - ೭೮

ದುಶ್ಚಟವು ಬೆಳೆಯಲಿಕೆ ಕಾರಣವು ನೂರಿರಲಿ

ನಿಶ್ಚಯವ ಮಾಡಬೇಕಿದೆ ಅದನು ತೊರೆಯೆ |

ಪಶ್ಚಾದ್ವಿವೇಕಕೆಲ್ಲಿದೆ ಸಮಯ ಸರಿಪಡಿಸೆ

ಪಶ್ಚಿಮದ ರವಿ ಹೊರಟ ~ ಪರಮಾತ್ಮನೆ ||೩೮೬||

ಪಶ್ಚಾದ್ವಿವೇಕ = ಕೆಟ್ಟ ಮೇಲೆ ಬಂದ ಬುದ್ಧಿ 


ಕ್ಷಮಿಸಬೇಕಿದೆ ನಮ್ಮ ಎದೆಭಾರ ಹೋಗಿಸಲು

ಕ್ಷಮಿಸಬೇಕಿದೆ ಸುಡುವ ಬೆಂಕಿಯಾರಿಸಲು |

ಕ್ಷಮಿಸುತ್ತ ಉಳಿಸಬೇಕಿಹುದು ಸಂಬಂಧಗಳ

ಕ್ಷಮಿಸಿಬಿಡು ತಡವೇಕೆ ~ ಪರಮಾತ್ಮನೆ || ೩೮೭||


ಬಯಸದಿರು ಪದವಿಯನು ಯೋಗ್ಯತೆಗೆ ಮೀರಿದುದ

ಬಯಸದೇ ಬಂದಿರಲು ಮನವಿಟ್ಟು ಶ್ರಮಿಸು |

ಬಯಸಿದರೆ ಬಯಸು ಭಗವದನುಗ್ರಹವ ಮಾತ್ರ

ಬಯಸುತಿರು ಜನರೊಳಿತ ~ ಪರಮಾತ್ಮನೆ ||೩೮೮||


ಧರ್ಮವೆಂದರೆ ಪೂಜಿಸುವ ಪದ್ಧತಿಯು ಅಲ್ಲ

ಕರ್ತವ್ಯವದು ನಿನ್ನ ಪಾತ್ರಕನುಸಾರ |

ಧರ್ಮ ಮಾತೆಗೆ ಬೇರೆ ಪಿತೃವಿಗೇ ಬೇರೆಯಿರೆ

ಮರ್ಮವನರಿತು ಬಾಳು ~ ಪರಮಾತ್ಮನೆ ||೩೮೯||


ಮಕರಂದ ಹೂವಿನದು ಚಿಟ್ಟೆ ದುಂಬಿಯ ಪಾಲು

ಪಕಳೆಗಳು ಕಣ್ಮನಗಳನು ಮುದಗೊಳಿಸಲು |

ಸಕಲ ಗಂಧಗಳು ಆಸ್ವಾದಕರ ಸ್ವತ್ತಾಯ್ತು 

ವಿಕಲವಾಯಿತೆ ಪುಷ್ಪ? ~ ಪರಮಾತ್ಮನೆ ||೩೯೦||

Tuesday, August 16, 2022

ಮುಕ್ತಕಗಳು - ೪೨

ಬಯಕೆ ಸಾಮರ್ಥ್ಯದಾ ಪರಿಧಿಯಲ್ಲಿರಬೇಕು

ಬಯಸುವುದೆ ಆಗಸದ ಮಿನುಗುತಾರೆಯನು |

ಚಯನ ಸಾಲದು ಪುಟ್ಟ ಗುಡಿಸಲನು ಕಟ್ಟಲಿಕೆ

ಮಯಸಭೆಗೆ ಆಸೆಯೇ ~ ಪರಮಾತ್ಮನೆ ||೨೦೬||


ಕಾಮಾಲೆ ಕಂಗಳಿಗೆ ಕಾಣುವುದು ಸರಿಯಲ್ಲ

ಹೂಮಾಲೆ ಕಾಣುವುದು ಹಾವಿನೊಲು ಮರುಳೆ |

ಧಾಮನಿಧಿಯೊಬ್ಬನೇ ಕಳಚುವನು ಪೊರೆಯನ್ನು

ಭೂಮಾತೆ ಬಲ್ಲಳಿದ ಪರಮಾತ್ಮನೆ ||೨೦೭||


ನಲುಗಿಹನು ಮನುಜ ರಾಗದ್ವೇಷಗಳ ನಡುವೆ

ಕಲಿಯಬೇಕಿದೆ ಅಂಟಿಕೊಳದ ಚತುರತೆಯ |

ಇಳೆಯೊಳಗೆ ಸಾತ್ವಿಕದ ದಾರಿಯಿದೆ ಇದಕಾಗಿ

ಮಳೆಯೊಳಗೆ ಕೊಡೆಯಂತೆ ಪರಮಾತ್ಮನೆ ||೨೦೮||


ರಾಗವಿಲ್ಲದರವನು ವೈರಾಗ್ಯ ಪಡೆದವನು

ಭಗವಂತ ನೀಡಿದುದ ಅನುಭವಿಸಿ ತೃಪ್ತ |

ಸಿಗದಿದನು ಬೇಕೆಂದು ಆಸೆಪಡದಾ ವ್ಯಕ್ತಿ

ಜಗವ ಗೆದ್ದಿಹ ಯೋಗಿ ಪರಮಾತ್ಮನೆ ||೨೦೯||


ಒಲವಿರಲಿ ಬಾಳಿನಲಿ ನೋವುಗಳ ಮರೆಸಲಿಕೆ

ಜಲವಿರುವ ಬಾವಿಯದು ಸನಿಹವಿರೆ ಚೆಂದ

ಕಲಿಯುವಾ ಶಿಷ್ಯನಿಗೆ ಗುರುವಿರಲಿ ಸನಿಹದಲಿ

ಕಳೆತೆಗೆದು ಬೆಳಸಲಿಕೆ ಪರಮಾತ್ಮನೆ ||೨೧೦||

Monday, June 22, 2020

ಕವಿಯ ಬಯಕೆ

ಕುಣಿಯಲಿ ನಾಲಿಗೆ ಪದಗಳ ಮೋಡಿಗೆ,
ತೂಗಲಿ ತಲೆಯು ಪ್ರಾಸದ ಸೊಂಪಿಗೆ,
ನಿಮಿರಲಿ ಕಿವಿಯು ರಾಗದ ಇಂಪಿಗೆ,
ಅರಳಲಿ ಮನವು ಸಾರದ ಬೆಳಕಿಗೆ.

ಓದಲು ಕವಿತೆ ಹಾಡದು ಹೊಮ್ಮಲಿ,
ಹಾಡಲು ಕವಿತೆ ನಾದವು ಚಿಮ್ಮಲಿ,
ಸಂಗೀತ ಬೆರೆತು ಗಾಂಧರ್ವವಾಗಲಿ,
ಎದೆಯನು ತಾಕಿ ಚೈತನ್ಯ ತುಂಬಲಿ.

ಕವಿಯ ಆಶಯ ಬೆಳಕನು ಕಾಣಲಿ,
ಓದುವ ಮನಕೆ ಮುದವನು ನೀಡಲಿ,
ಕತ್ತಲ ಕನಸಿಗೆ ಬೆಳಕನು ತುಂಬಲಿ,
ಬೆಳಕಿನ ಪಯಣಕೆ ಮುನ್ನುಡಿ ಬರೆಯಲಿ.

ಬರೆಯಲು ಆಸೆ ಇಂತಹ ಕವಿತೆ,
ನೀಡೆಯ ಶಾರದೆ ಜ್ಞಾನದ ಹಣತೆ?
ಹಚ್ಚಲು ಬೆಳಗುವ ದೀಪವನು,
ಸರಿಸಲು ಕತ್ತಲ ಪರದೆಯನು!