Showing posts with label ಮೋಸ. Show all posts
Showing posts with label ಮೋಸ. Show all posts

Sunday, January 8, 2023

ಮುಕ್ತಕಗಳು - ೧೦೦

ನಮ್ಮ ಭಾಗ್ಯವು ಕರ್ಮ ಶ್ರಮಗಳ ಮಿಶ್ರಣವು

ಎಮ್ಮೆಯಂತಿರಬೇಕೆ ಕರ್ಮಕ್ಕೆ ಬಾಗಿ |

ಹೊಮ್ಮಿಸುವ ಶ್ರಮದಿಂದ ಹೊಸತು ಸತ್ಫಲಗಳನು

ಚಿಮ್ಮಿಸುವ ಆನಂದ ~ ಪರಮಾತ್ಮನೆ ||೪೯೬||


ಹೇರಿದರೆ ನಿಮ್ಮಾಸೆಗಳನು ಮಕ್ಕಳಮೇಲೆ

ದೂರದಿರಿ ತೀರದಿರೆ ನಿಮ್ಮ ಬಯಕೆಗಳು |

ಯಾರ ತಪ್ಪದು ಎಣ್ಣೆ ನೀರಿನಲಿ ಕರಗದಿರೆ

ನೀರಿನದೊ? ಎಣ್ಣೆಯದೊ? ~ ಪರಮಾತ್ಮನೆ ||೪೯೭||


ಪರಿಪರಿಯ ಪಾಠಗಳ ಕಲಿಯುವೆವು ಎಲ್ಲರಲಿ

ಅರಿವ ನೀಡಲು ಪಟ್ಟಗುರು ಮಾತ್ರ ಬೇಕೆ? |

ಬರಲಿ ಒಳಿತಾದುದೆಲ್ಲವು ನಮ್ಮೆಡೆಗೆ ನಿರತ

ತೆರೆ ಎಲ್ಲ ಕಿಟಕಿಗಳ ~ ಪರಮಾತ್ಮನೆ ||೪೯೮||


ಅನೃತವನು ನುಡಿಯುತ್ತ ಪಡೆದ ಉತ್ತಮ ಪದವಿ

ಜನರ ಹಿಂಸಿಸಿ ಪಡೆದ ಗೌರವಾದರವು |

ಧನವ ಗಳಿಸಿಟ್ಟಿರಲು ಮೋಸದಾ ಹಾದಿಯಲಿ

ಇನನ ಎದುರಿನ ಹಿಮವು ~ ಪರಮಾತ್ಮನೆ ||೪೯೯||


ಎಲ್ಲವನ್ನೂ ನಮಗೆ ಕೊಟ್ಟಿರುವ ಲೋಕಕ್ಕೆ

ಎಳ್ಳಿನಷ್ಟಾದರೂ ಕೊಡಬೇಕು ನಾವು |

ಕಳ್ಳರಾಗುವೆವು ಕೊಡದೆಲೆ ಲೋಕ ತೊರೆದಲ್ಲಿ

ಜೊಳ್ಳು ಜೀವನವೇಕೆ? ~ ಪರಮಾತ್ಮನೆ ||೫೦೦||

ಮುಕ್ತಕಗಳು - ೯೦

ಕಡಲಾಳದಲ್ಲಿರುವ ಸಂಪತ್ತು ದೊರೆಯುವುದೆ

ದಡದ ಮೇಗಡೆ ಕುಳಿತು ತಪವ ಮಾಡಿದರೆ? |

ಬಿಡಬೇಕು ಭಯವನ್ನು ತರಬೇಕು ಪರಿಕರವ

ನಡುನೀರ ಲಿಳಿಬೇಕು ~ ಪರಮಾತ್ಮನೆ ||೪೪೬||


ಜನುಮ ಯೌವನ ಮುಪ್ಪು ವಪುರೋಗ ಮರಣಗಳು

ತನುವಿಗೊದಗುವ ಪರಿಸ್ಥಿತಿಗಳಾಗಿರಲು |

ಮನವ ಸಜ್ಜುಗೊಳಿಸುವ ವೇಷಗಳ ಧಾರಣೆಗೆ 

ಅನುಗಾಲ ನೆಮ್ಮದಿಗೆ ~ ಪರಮಾತ್ಮನೆ ||೪೪೭||


ತುಟಿ ಪಿಟಕ್ಕೆನ್ನದಿರೆ ಬಿಕ್ಕಟ್ಟು ಹುಟ್ಟದದು,

ತುಟಿ ಬಿರಿಯೆ ಕರಗುವವು ಹಲವಾರು ತೊಡಕು |

ಹಟ ತೊರೆದು ನಸುನಗಲು ಗಂಟೇನು ಕರಗುವುದು?

ನಿಟಿಲ ಗಂಟದು ಮಾತ್ರ! ~ ಪರಮಾತ್ಮನೆ ||೪೪೮||


ಸೂಸುವುದು ಪರಿಮಳವ ಚಂದನದ  ಹುಟ್ಟುಗುಣ,

ಈಸುವುದು ಮೀನು ನೀರಿನಲಿ ಮುಳುಗದೆಯೆ ||

ಆಸೆಗಳ ಪೂರೈಸೆ ಬದಲಿಸಿರೆ ಬಣ್ಣಗಳ

ಊಸರವಳ್ಳಿಯೆ ಅವನು ~ ಪರಮಾತ್ಮನೆ ||೪೪೯||


ಪಾಪಾಸುಕಳ್ಳಿಯೂ ತಣಿಸುವುದು ದಾಹವನು

ವಾಪಸ್ಸು ನೀಡುತಿದೆ ಸ್ವಾರ್ಥಿಯಲ್ಲವದು |

ನೀ ಪಡೆದ ವರದಲ್ಲಿ  ನೀಡು ತುಸು ಪರರಿಗೂ

ಪೀಪಾಸು ಆಗದಿರು ~ ಪರಮಾತ್ಮನೆ ||೪೫೦||