Friday, March 6, 2020

ಕೃಷ್ಣ

ದೇವಕಿನಂದನ, ವಾಸುದೇವ,
ಮನುಕುಲ ತಿಲಕ, ಯಾದವ.
ಅಷ್ಟಮ ಸಂಜಾತ, ಅಷ್ಟಮಿ ಜನನ,
ಗುಢಾಕೇಶ, ಕೇಶವ.

ನಳಿನ ನಯನ, ಹಸಿತ ವದನ,
ಗೋಪೀಜನಪ್ರಿಯ, ಮೋಹನ.
ಕೋಮಲಾಂಗ, ಶ್ಯಾಮಸುಂದರ,
ನವನೀತಪ್ರಿಯ, ಮಾಧವ.

ಯಶೋದಾನಂದನ, ಮುರಳಿಮೋಹನ,
ಕಾಳಿಂಗಮರ್ದನ, ಗೋಪಾಲ.
ಬಲರಾಮಾನುಜ, ರಾಧಾ ಪ್ರಿಯಸಖ,
ಪೂತನಮರ್ದನ, ಅಚ್ಯುತ.

ಗೋವರ್ಧನಧಾರಿ, ಪ್ರಜಾರಕ್ಷಕ,
ಪಾಪನಾಶಕ, ಮಧುಸೂದನ.
ದುಷ್ಟನಿಗ್ರಹ, ಶಿಷ್ಟ ರಕ್ಷಣ,
ಮಿತ್ರರಂಜನ, ಸಂಕರ್ಷಣ.

ರುಕ್ಮಿಣೀನಾಥ, ಭಾಮಾಪ್ರಿಯಕರ,
ಬಹುಪತ್ನೀ ಪ್ರಿಯವಲ್ಲಭ.
ಚಿತ್ತಚೋರ, ಲಲನಾರಕ್ಷಕ,
ಸರ್ವಾಕರ್ಷಕ ಸುಂದರ.

ಪಾಂಡವಪ್ರಿಯ, ಪಾರ್ಥಸಾರಥಿ,
ದ್ರೌಪತಿ ಮಾನ ರಕ್ಷಕ,
ಕೌಶಲಮತಿ, ಯುದ್ಧಚತುರ,
ವಿಶ್ವರೂಪ ನಿರಂತರ.

ಪುಣ್ಯದಾಯಕ, ಪಾಪಹಾರಿ,
ಪರಮಾತ್ಮ ಚೇತನ, ತ್ರಿವಿಕ್ರಮ.
ಜಗನ್ನಾಥ, ಜಗದ್ರಕ್ಷಕ,
ಪರಮಪಾವನ ಪರುಷೋತ್ತಮ.

ಆದಿಪುರುಷ, ಪುಣ್ಯಪಾದ,
ಮೋಕ್ಷದಾಯಕ, ಚಿನ್ಮಯ.
ಜ್ಞಾನದೀಪಕ, ವಿಶ್ವಪೂಜಿತ,
ಸರ್ವವ್ಯಾಪೀ ಚೇತನ.



ನೆರೆ-ಹೊರೆ

ವರ್ಷಧಾರೆಯ ಬಿರುಸಿಗೆ,
ಹರ್ಷಧಾರೆಯೇ ಬೆದರಿದೆ!
ಕಂಗೆಟ್ಟು, ಬಸವಳಿದು,
ಪ್ರವಾಹದಲಿ ಕೊಚ್ಚಿ ಹೋಗಿದೆ!

ನೆರೆಹೊರೆಯೆಲ್ಲವೂ ನೆರೆಯಲ್ಲಿ
ಮರೆಯಾಗಿ, ಹೊರೆಯಾಗಿದೆ ಎದೆಯಲ್ಲಿ.
ಕಣ್ಣೀರಕೋಡಿ ಪ್ರವಾಹವಾಗಿದೆ,
ನೆತ್ತರು ಕೆಸರ ಕೆಂಪಾಗಿಸಿದೆ!

ಮೇಲೆ ಕರಿ ಮೋಡ,
ಕೆಳಗೆ ಕೆನ್ನೀರು,
ಮಾಯವಾಗಿದೆ ಹಸಿರು,
ನಿಂತಂತಾಗಿದೆ ಉಸಿರು!

ನೀರು ನೀರೆಂದು ಕೂಗಿದ ಜೀವವು,
ಕೊಚ್ಚಿ ಹೋಗುತಿದೆ ಇಂದು ನೀರಲಿ.
ಸಾಕೆಂದು ಹೇಳಲು ಸಮಯವಿಲ್ಲದೆ,
ಜೀವಗಳು ಮರೆಯಾಗುತ್ತಿವೆ ನಿಲ್ಲದೆ!

ದಿಕ್ಕು ತೋಚದಾಗಿದೆ ಇಂದು,
ಎಲ್ಲ ದಿಕ್ಕುಗಳೂ ನೀರಲಿ!
ಇನ್ನೇನು ಕಾದಿದೆಯೋ,
ಕಾಣದ ಕಾಲದ ಗರ್ಭದಲಿ.

ಕೈಹಿಡಿದೆತ್ತುವ ಕೆಲಸಕೆ,
ಹಸ್ತಗಳು ಚಾಚಿ ಬರಲಿ.
ಕಣ್ಣೊರೆಸುವ ಕೈಗಳು,
ಹೊಸ ಹರುಷವ ತರಲಿ.


ಅಜರಾಮರ ಅನುರಾಗ

ಪ್ರತಿದಿನದ ಪ್ರೇಮವಿದು,
ಅಜರಾಮರ ಅನುರಾಗ.

ಮುಂಜಾನೆ ಮಂಜಿನಲಿ,
ಮಿಂದೆದ್ದ ಕುಸುಮಗಳ,
ರೇಷಿಮೆಯ ದಳಗಳ,
ತಲ್ಪದಲ್ಲಿ ಮುತ್ತುಗಳು.

ಅರೆದಿನದ ವಿರಹದಲಿ,
ಸೊರಗಿಹಳು ಭೂರಮೆಯು.
ಇನಿಯನಿಗೆ ಮುತ್ತನೀವ,
ಬಯಕೆಯಲಿ ಮೇದಿನಿಯು.

ಒಡಲಲ್ಲಿ ಜೀವವನು,
ತುಂಬಿದ ನೇಸರಗೆ,
ಭೂತಾಯ ಪ್ರೀತಿಯ,
ಸ್ವಾಗತದ ಕಾಣಿಕೆ.

ಮೇಘಗಳ ಸರಿಸುತ್ತ,
ಬಂದನಿಗೋ ರವಿರಾಜ!
ನಸುಗೆಂಪು ಅವಳ ಗಲ್ಲ,
ಚೈತನ್ಯವು ಜಗಕೆಲ್ಲ!


ಸಿರಿಗನ್ನಡದ ಸೊಬಗು

ಚಿಲಿಪಿಲಿಗಳ ಕಲರವದಲಿ,
ಕಾವೇರಿಯ ಜುಳುರವದಲಿ,
ಶೇಷಣ್ಣನ ವೀಣೆಯಲಿ,
ಕನ್ನಡದ ಇಂಪಿದೆ,
ಸವಿಗನ್ನಡದ ಇಂಪಿದೆ!

ಸಿರಿಗಂಧದ ಒಡಲಿನಲಿ,
ಮಲ್ಲಿಗೆಯ ಮಡಿಲಿನಲಿ,
ಕಸ್ತೂರಿಯ ಘಮಘಮದಲಿ,
ಕನ್ನಡದ ಕಂಪಿದೆ,
ನರುಗನ್ನಡದ ಕಂಪಿದೆ!

ಮಡಿಕೇರಿಯ ಮಂಜಿನಲಿ,
ಆಗುಂಬೆಯ ಸಂಜೆಯಲಿ,
ಅಕ್ಕರೆಯ ಗಂಜಿಯಲಿ,
ಕನ್ನಡ ತಂಪಿದೆ,
ತನಿಗನ್ನಡದ ತಂಪಿದೆ!

ಹಸಿರು ಗಿರಿಶ್ರೇಣಿಯಲಿ,
ಪಸರಿಸಿಹ ಕಾನಿನಲಿ,
ಮುಗಿಲೆತ್ತರ ತೆಂಗಿನಲಿ,
ಕನ್ನಡದ ಸೊಂಪಿದೆ,
ಚೆಲುಗನ್ನಡದ ಸೊಂಪಿದೆ!

ವರಕವಿಯ ಹಾಡಿನಲಿ,
ಗುಂಡಪ್ಪನ ಕಗ್ಗದಲಿ,
ಪುಟ್ಟಪ್ಪನ ಕಾವ್ಯದಲಿ,
ಕನ್ನಡವು ಅರಳಿದೆ,
ಸುಮಗನ್ನಡವು ಅರಳಿದೆ!

ಹಂಪೆಯ ಕೊಂಪೆಯಲಿ,
ಬೇಲೂರಿನ ಶಿಲೆಗಳಲಿ,
ಬಾದಾಮಿಯ ಗುಹೆಗಳಲಿ,
ಕನ್ನಡದ ಕಥೆಯಿದೆ,
ಸಿರಿ ಕರುನಾಡ ಕಥೆಯಿದೆ!

ಜೋಗದ ಬಿರು ಧಾರೆಯಲಿ,
ರಾಯಣ್ಣನ ಖಡ್ಗದಲಿ,
ಓಬವ್ವನ ಒನಕೆಯಲಿ,
ಕನ್ನಡದ ಸೊಲ್ಲಿದೆ,
ಕಲಿ ಕನ್ನಡಿಗನ ಸೊಲ್ಲಿದೆ!

ಜಯ ಕರ್ನಾಟಕ ಮಾತೆ!
ಜಯ ಕರ್ನಾಟಕ ಮಾತೆ!
ಜಯ ಕರ್ನಾಟಕ ಮಾತೆ!

ಧನ ಪುರಾಣ

ಇದ್ದರೆ ಚಿಂತೆ, ಇಲ್ಲದಿದ್ದರೆ ತೊಂದರೆ,
ಬಲ್ಲೆಯಾ ಧನದ ಈ ಮೂಲ ಮಂತ್ರ?
ಇದ್ದರೆ ಮತ್ತಷ್ಟು ಸೇರುವುದು ನೋಡು,
ಇಲ್ಲದಿರೆ ಗಳಿಸಲು ಪಡಬೇಕು ಪಾಡು!

ಬೆಟ್ಟದಲ್ಲೆಲ್ಲೋ ಹುಟ್ಟಿದಾ ನದಿಯು,
ಹರಿಹರಿದು ಸಾಗರವ ಸೇರುವಂತೆ,
ಬಡವರ ಕಿಸೆಯಿಂದ ಹಾರಿ ಬಂದು,
ದೊಡ್ಡ ಬೊಕ್ಕಸಗಳ ತುಂಬಿತಂತೆ.

ಹೊನ್ನು, ಮಣ್ಣು, ಅಧಿಕಾರಗಳ ಬಹುರೂಪಿ,
ಹಲವರಿಗೆ ಇದು ದೇವತಾ ಸ್ವರೂಪಿ.
ಅತಿಯಾದ ಆಸೆ ಮನುಜನ ಖಾಯಿಲೆ,
ಇದಕ್ಕೆ ಮದ್ದಿಲ್ಲ, ಅಳಿಯುವುದು ಸುಟ್ಟಾಗಲೇ!

ಧನಕ್ಕಿದೆ ಧನವನ್ನು ಸೃಷ್ಟಿಸುವ ಶಕ್ತಿ,
ಜೀವ ಜಂತುಗಳಂತೆ ಬೆಳೆಸುವುದು ಸಂತತಿ!
ಸಮಾಧಿ ಮಾಡಿದರೂ ಭೂಮಿ ಅಗೆದು,
ಎದ್ದುಬರುವುದು ನೋಡು ಮರುಜನ್ಮ ಪಡೆದು!

Wednesday, March 4, 2020

ಹೂದೋಟ

ಹೂವ ತೋಟದಿ ನಿಂತೆ ಮೂಕವಿಸ್ಮಿತನಾಗಿ,
ಏಸು ಬಗೆಯ ಹೂಗಳು! ಏನೆಲ್ಲ ಬಣ್ಣಗಳು!
ಚಂಚಲದ, ಸಡಗರದ ಚಿಟ್ಟೆ ದುಂಬಿಗಳಷ್ಟೋ!
ಚಿಟ್ಟೆಗಳ ಮೈಮೇಲಿನ ಚಿತ್ತಾರಗಳೆಷ್ಟೋ!

ಗುಲಾಬಿಯಂದಕೆ ಸರಿಸಾಟಿಯುಂಟೇ?
ಸಂಪಿಗೆಯ ಪರಿಮಳಕೆ ಮರುಳಾಗದುಂಟೇ?
ದಾಸವಾಳದ ರಂಗಿಗೆ ದಾಸ ನಾನಮ್ಮ,
ಮಲ್ಲಿಗೆಯು ಮಾಡಿದೆ ಮನಸನ್ನು ಘಮಘಮ!

ಪ್ರಕೃತಿಯ ಮಡಿಲೆಲ್ಲ ವೈವಿಧ್ಯಪೂರ್ಣ,
ಜೀವನದ ಕನಸುಗಳು ಅರಳಿವೆ ಸಂಪೂರ್ಣ.
ಪ್ರತಿಯೊಂದು ಜೀವಕಿದೆ ಸ್ವಂತಿಕೆಯ ಗಾನ,
ಪ್ರಕೃತಿಯಲಿ  ಇಲ್ಲ ಎಲ್ಲೂ ಏಕತಾನ!

ಅಚ್ಚು ಅರಗಿನ ಗೊಂಬೆಗಳು ನಾವಲ್ಲ,
ತನ್ನತನವ ಯಾರೂ ಬಿಟ್ಟುಕೊಡಬೇಕಿಲ್ಲ.
ಒಂದೊಂದು ಹೃದಯಕಿದೆ ತನ್ನದೇ ಮಿಡಿತ,
ಒಂದೊಂದು ಮನಸಿಗಿದೆ ತನ್ನದೇ ತುಡಿತ.

ಬೆರೆಯೋಣ, ಅರಿಯೋಣ ಎಲ್ಲರ ಮನಸುಗಳ,
ಬೆನ್ನು ತಟ್ಟೋಣ ಸಾಧಿಸಲು ಕನಸುಗಳ.
ಲೋಕವಾಗಲಿ ಸುಂದರ ಹೂದೋಟದಂತೆ,
ಬೇಕಿಲ್ಲ ಇನ್ನು ಮಾಲಿ, ಬೇಲಿಗಳ ಚಿಂತೆ! 

Tuesday, February 25, 2020

ಮುನಿಸೇಕೆ ಮನದನ್ನೆ?






ಮುನಿಸೇಕೆ ಮನದನ್ನೆ, ಮನದರಸಿ
ಕಾತುರದಿ ಬಂದಿರುವೆ ನಿನ್ನನರಸಿ

ಕಲ್ಲಾಯಿತೇಕೆ ಕೋಮಲ ಹೃದಯ?
ಮರೆತೆಯಾ ಜೊತೆಯ ಮಧುರ ದಿನಗಳ?
ನಕ್ಷತ್ರಗಳ ನೋಡುತ ಕಳೆದ ಕ್ಷಣಗಳ?
ಮುಂಗಾರು ಮಳೆಯ ಕಚಗುಳಿಗಳ?

ನೀಲವೇಣಿಯೇ ನಿನ್ನ ಕೇಶದಲಿ ಬಂದಿ
ನಾನಾಗಿದ್ದೆ ನಿನ್ನೆದೆಯ ಪಂಜರದಲಿ,
ಸಂತಸದ ಆಗಸದಲಿ ಹಾರಾಡುತ
ಸಗ್ಗದ ಸೀಮೆಯಲಿ ತೇಲುತಲಿದ್ದೆ.

ತಿರುಗಿ ನೋಡೊಮ್ಮೆ ಕುಂಭನಿತಂಬೆ,
ಕಿರುಕಟಿಯ ಸಿರಿಮನದ ಚೆಲುವೆ,
ಬಿರುನುಡಿಯಾಡಿದ ತಪ್ಪು ನನ್ನದು
ಕ್ಷಮಿಸಲಾರೆಯ ನಿನ್ನೆದೆಯಲಿ ನನ್ನನೊರಗಿಸಿ?