Friday, May 22, 2020

ಮುಂಜಾನೆಯ ಮಳೆ

ಧರೆಗಿಳಿದಿದೆ ಸುರಲೋಕದ,
ಅಮೃತ ಬಿಂದು.
ನವಚೇತನ, ಉಲ್ಲಾಸದ,
ರಾಗವು ಇಂದು.

ಹಸಿರುಟ್ಟಿದೆ ಭೂತಾಯಿಯು,
ನಸುಬೆಳಕಲಿ ಮಿಂದು.
ನವಪಲ್ಲವ ಚಿಗುರೊಡೆದಿದೆ,
ಹೊಸಲೋಕಕೆ ಬಂದು.

ತಂಗಾಳಿಯ ಕುಳಿರಲ್ಲಿದೆ,
ಬಿಸಿಯೇರುವ ಮತ್ತು.
ಮಗದೊಮ್ಮೆ ಮೈಮರೆತರೆ,
ಕರ್ತವ್ಯಕೆ ಕುತ್ತು.

ಪಲ್ಲಂಗವ ತೊರೆದುಬಿಡಿ,
ಧನ್ಯವಾದ ಇತ್ತು.
ಮುಂಜಾನೆಯ ಹೊಂಗಿರಣವು,
ಪಲ್ಲವಿಸುವ ಹೊತ್ತು.

Thursday, May 21, 2020

ಬಣ್ಣದ ನವಿಲು (ಮಕ್ಕಳ ಕವನ)

ನವಿಲೇ ನವಿಲೇ ಬಣ್ಣದ ನವಿಲೇ,
ಕುಣಿಯುವ ಬಾರೇ ಓ ನವಿಲೇ!

ಹಸಿರು, ನೀಲಿ, ಹೊನ್ನಿನ ಬಣ್ಣ,
ನಿನಗಾರಿತ್ತರು ಹೇಳಣ್ಣ?
ಕಾಮನ ಬಿಲ್ಲನು ನಾಚಿಸಿದೆ,
ನಿನ್ನಯ ಬಣ್ಣ ರಂಜಿಸಿದೆ!

ತಲೆಯ ಮೇಲೆ ಕಿರೀಟ ನೋಡು,
ತಾಳಕ್ಕೆ ತಕ್ಕಂತೆ ಬಳುಕಾಡು.
ಸಾವಿರ ಕಣ್ಣಿನ ಸುಂದರ ನೀನು,
ಏನೆಲ್ಲ ಕಂಡೆ ಹೇಳೆಯ ನೀನು?

ಮಳೆಯನು ತರುವ ಮೋಡವ ಕಂಡರೆ,
ಕುಣಿಯುವೆ, ನಲಿಯುವೆ, ಮನಸಾರೆ!
ನಿನ್ನ ಕುಣಿತದ ಸಂಭ್ರಮ ಕಂಡು,
ಇಳಗೆ ಇಳಿದಿದೆ ಹನಿಗಳ ದಂಡು!

ಚಾಮರವಾಗಿದೆ ನಿನ್ನಯ ಗರಿಗಳು,
ದೇವನ ಸೇವೆಗೆ ತಂಪಿನ ಅಲೆಗಳು!
ಕೃಷ್ಣನ ಕಿರೀಟ ಏರಿದೆ ನೀನು,
ಮನಸಿನ ಕೋರಿಕೆ ತೀರಿದೆಯೇನು?

ನಮ್ಮಯ ದೇಶದ ರಾಷ್ಟ್ರಪಕ್ಷಿ,
ನಮ್ಮೆಲ್ಲರ ಹೆಮ್ಮೆಗೆ ನೀ ಸಾಕ್ಷಿ!
ದೇಶದ ಜನರಿಗೆ ಸಂತಸ ತಂದೆ,
ಹರುಷವ ಹರಡಲು ನೀ ಬಂದೆ!


Wednesday, May 20, 2020

ಮನದನ್ನ




















ಮಾತಿಲ್ಲದ ಮೌನಿ ಮಾಂತ್ರಿಕನೀತ,
ಮುಟ್ಟಿದ ಮಾತ್ರಕೆ ಮೈನವಿರೇಳಿಸಿದ!

ಮುಂಗುರುಳ ಮುಟ್ಟಿ ಮುದಗೊಳಿಸಿ,
ಮುಗುಳ್ನಗೆಯ ಮೂಡಿಸಿದನಲ್ಲ!
ಮೈಸವರಿ ಮುತ್ತಿಟ್ಟ ಮೋಡಿಯಲಿ,
ಮೊಗವೆಂಬ ಮೊಗ್ಗನರಳಿಸಿದನಲ್ಲ!

ಮಲ್ಲೆ, ಮಂದಾರಗಳ ಮೇಲುರುಳಾಡಿ,
ಮಧುರ ಮಕರಂದಗಳ ಮೂಸಿ,
ಮಾಗಿದ ಮಾವುಗಳ ಮೈದಡವಿ,
ಮೇರೆಯಿಲ್ಲದೆ ಮೆರೆಯುತಿಹನಲ್ಲ!

ಮನೆಯಲ್ಲಿ ಮರೆಮಾಡಿ ಮುಚ್ಚಿಡಲಾರಳು,
ಮಿಕ್ಕವರ ಮೈಮನವ ಮೀಟದಿರಲೆಂದು.          .
ಮುಗ್ಧ ಮಂಗಳೆಯರ ಮನದನ್ನನೀತ,
ಮುಂಜಾನೆಯ ಮಧುರ ಮಂದಮಾರುತ!

(ಎಲ್ಲ ಪದಗಳೂ ʻಮʼ ದಿಂದ ʻಮಂʼ ವೆರೆಗಿನ ಗುಣಿತಾಕ್ಷರಗಳಿಂದ ಪ್ರಾರಂಭ)

Friday, May 15, 2020

ಕೊರೋನಾ ಕಲ್ಯಾಣ


ಕೂಡಿದ ಹೃದಯಗಳೆರಡು,
ಹಡೆದಾ ಜೋಡಿಗಳೆರಡು,
ಹತ್ತಿರದವರೊಂದಿಪ್ಪತ್ತು,
ಬೇರೆ ಬೇಡ ಮದುವೆಯ ಹೊತ್ತು!

ಮೂರ್ಗಂಟಿಗೆ ಬೇಕೆ ಸಾವಿರ ಸಾಕ್ಷಿ?
ಹೂಂ ಎಂದರೆ ಸಾಕು ಮನಸಿನ ಪಕ್ಷಿ!
ನೂರಾರು ಅತಿಥಿಗಳು ಬೇಕಿಲ್ಲ,
ಸಹೃದಯರು ಹತ್ತೇ ಸಾಕಲ್ಲ!

ಕಾಣಿಕೆ ಬೇಡ, ತೋರಿಕೆ ಬೇಡ,
ದುಡಿದ ಗಂಟಿನ ಸೋರಿಕೆ ಬೇಡ!
ಊಟಕೆ ಇರಲಿ ಉಪ್ಪಿನಕಾಯಿ,
ಮದುವೆಲಿ ಇರಲಿ ಮನಸಿಗೆ ಹಾಯಿ!

ಕಳಿಸಲಿ ಎಲ್ಲರೂ ಶುಭಹಾರೈಕೆ,
ವೈಫೈ ಮಾಡಲಿ ಪೂರೈಕೆ.
ಹೀಗೇ ಆಗಲಿ ಮದುವೆಗಳು,
ನಗುತಾ ಇರಲಿ ಬದುಕುಗಳು.

ಸಮಾಜ ಸುಧಾರಕ ಕೊರೋನಾ,
ಹಿಡಿತಕೆ ತಂದಿದೆ ಖರ್ಚನ್ನ!
ಪಾಯಸ, ಹೋಳಿಗೆ, ಚಿತ್ರಾನ್ನ,
ಆಗೇ ಹೋಯಿತು ಕಲ್ಯಾಣ!

Thursday, May 14, 2020

ವಿಶ್ವ ದಾದಿಯರ ದಿನ

ಮಾತೆಯ ಮಮತೆ,
ಸೋದರಿ ಕ್ಷಮತೆ,
ಮಡದಿಯ ಕಾಳಜಿ,
ಎಲ್ಲವೂ ನಿಮ್ಮಲಿ ದಾದಿ!

ತಾ ಉರಿದು ಬೆಳಕನೀವ,
ಮೇಣದ ಬತ್ತಿಯ ತರಹ,
ರೋಗಿಯ ಬಳಲಿ ಬಂದ,
ಆರದ ಬೆಳಕಿನ ಬಂಧ!

ಮಮತೆಯ ಕರದಲಿ,
ಕರುಣೆಯ ಸ್ವರದಲಿ,
ಅಡಗಿದೆ ಅಮೂಲ್ಯ ಸೇವೆ,
ಅದೃಷ್ಟವಂತರು ನಾವೇ!

ಇಂದಿನ ದಿನವೇ ಸುದಿನವು,
ಕರುಣೆಯು ಹುಟ್ಟಿದ ದಿನವು!
ಸ್ವೀಕರಿಸಿ ಪ್ರೀತಿಯ ಸಲಾಮ್,
ಹಚ್ಚುತ್ತಿರಿ ನಗೆಯ ಮುಲಾಮ್!

Wednesday, May 13, 2020

ನನ್ನಮ್ಮ

ಬೇಡಿದ್ದನ್ನು ನೀಡುವವಳು,
ಏನನ್ನೂ ನಿರೀಕ್ಷಿಸದವಳು,
ಮಮತೆಯ ಮಡಿಲಿವಳು,
ಪ್ರೀತಿಯ ಕೊಡ ಇವಳು!

ಅನ್ನ ನೀಡಿ ಪೊರೆಯುವಳು,
ಜಲವನಿತ್ತು ಹರಸುವಳು,
ಅಕ್ಷಯ ಪಾತ್ರೆ ಇವಳು,
ಕಾಮಧೇನುವೇ ಇವಳು!

ನಮ್ಮೆಲ್ಲ ಕೋಪಗಳ,
ನಗುತ ನುಂಗಿಬಿಡುವಳು.
ನಮ್ಮ ತಪ್ಪು ಕ್ಷಮಿಸುವಳು,
ಮೂಕಳಾಗಿ ಮರಗುವಳು,

ಹಸಿರು ಸೀರೆ ಉಟ್ಟವಳು,
ಬಣ್ಣದ ನಗ ತೊಟ್ಟವಳು,
ಕ್ಷಮಯಾಧರಿತ್ರಿ ನನ್ನಮ್ಮ,
ಭೂಮಿತಾಯಿ ಇವಳಮ್ಮ.

Monday, May 11, 2020

ಅಮ್ಮ

ನನ್ನ ಮೊದಲ ಸ್ಪರ್ಶ ನೀನಮ್ಮ,
ನನ್ನ ಮೊದಲ ಪರಿಚಯ ನೀನಮ್ಮ,
ನಿನ್ನೆದೆಯ ಬಡಿತ ಜೋಗುಳವಮ್ಮ,
ನನ್ನ ಮೊದಲ ತೊದಲು "ಅಮ್ಮ"!

ನನ್ನ ಮೊದಲ ಆಟ ನಿನ್ನೊಟ್ಟಿಗೆ,
ನನ್ನ ಮೊದಲ ಪಾಠ ನಿನ್ನ ನಡಿಗೆ,
ನನ್ನ ಮೊದಲ ತುತ್ತು ನೀನಿಟ್ಟೆ,
ನನ್ನ ಮೊದಲ ಮುತ್ತು ನೀ ಕೊಟ್ಟೆ!

ನನ್ನ ಗೆಲುವೇ ನಿನ್ನ ಗೆಲುವೆಂದೆ,
ನಾನೇ ನಿನ್ನ ಜಗವೆಂದೆ.
ಜಗಕೆ ನನ್ನ ಪರಿಚಯಿಸಿದೆ,
ನನ್ನ ಜಗವ ನೀ ಸೃಷ್ಟಿಸಿದೆ!

ನಾ ಬಿದ್ದಾಗಲೆಲ್ಲ ನೀನತ್ತಿದ್ದೆ,
ನಾ ನಕ್ಕಾಗಲೆಲ್ಲ ನೀ ನಕ್ಕಿದ್ದೆ,
ನನ್ನ ಮೊದಲ ಏಟು ನೀ ತಿಂದೆ,
ನಿನಗಾಗಿ ನಾನೇನು ತಂದೆ?