Friday, May 29, 2020

ಮುಂದಿದೆ ಮಾರಿಹಬ್ಬ!

ನೀ ಬಂದೆ, ವಾಮನನಂತೆ,
ಜಗವನಾಕ್ರಮಿಸಿದೆ.
ಭಯಭೀತರಾದರು,
ಪ್ರಜೆಗಳೂ, ರಾಜರೂ, ಎಲ್ಲರೂ!

ಅಸ್ತ್ರಗಳೆಲ್ಲ ನಿಷ್ಪ್ರಯೋಜಕ,
ನಿನ್ನ ಶಕ್ತಿಯ ಮುಂದೆ.
ನೀನೇತಕೆ ಇಲ್ಲಿಗೆ ಬಂದೆ?
ಜಗವಾಗಿದೆ ಕುರಿಗಳ ಮಂದೆ!

ಮುಟ್ಟಿದರೆ ನಿನ್ನ,
ಕತ್ತು ಹಿಸುಕುವೆಯಲ್ಲ!
ಉರುಳುತಿವೆ ತಲೆಗಳು,
ನಿನ್ನ ನೆರಳು ಬಿದ್ದಲ್ಲೆಲ್ಲ!

ಅಡಗುದಾಣಗಳಲ್ಲಿ ನಡೆಯುತಿದೆ,
ಹೊಸ ಅಸ್ತ್ರಗಳ ಶೋಧ,
ನಿನಗಾಗಿ ಬರಲಿದ್ದಾನೆ,
ಬಲಶಾಲಿ ಯೋಧ!

ಕೊರೋನಾ, ಮುಂದಿದೆ ನಿನಗೆ,
ಕಂಡರಿಯದ ಮಾರಿಹಬ್ಬ!
ಹೆದರದೆ ನಿನ್ನೆದುರು,
ಎದ್ದು ನಿಲ್ಲುವನು ಪ್ರತಿಯೊಬ್ಬ!

Thursday, May 28, 2020

ಮನೆಯಲ್ಲೇ ಮಜಾ (ಮಕ್ಕಳ ಕವನ)



ಆಗಿದೆ, ಆಗಿದೆ, ಬೆಳ್ಳಂಬೆಳಗು,
ಮುಗಿದಿದೆ ನಿದ್ದೆಯ ಸೊಬಗು!

ಏಳು ಸ್ಕೂಲಿಗೆ ಟೈಮಾಯ್ತು,
ಸ್ನಾನಕೆ ನೀರು ಬಿಸಿಯಾಯ್ತು,
ಡಬ್ಬಿಗೆ ತಿಂಡಿ ರೆಡಿಯಾಯ್ತು,
ಎನ್ನುವ ಸದ್ದಿಲ್ಲ ಏನಾಯ್ತು?

ಓಹೋ! ಶಾಲೆಗೆ ರಜಾ!
ನಮಗೆಲ್ಲ ಈ ದಿನ ಮಜಾ!
ಚೌಕಾಬಾರಾ, ಕೇರಮ್ಮು,
ಆಡಲು ಬಂದಿದೆ ಹೊಸ ದಮ್ಮು!

ಪಾನಿ ಪೂರಿ, ಖಾರ ಪಕೋಡ,
ಅಮ್ಮನೇ ಕೊಟ್ಟರೆ ಯಾರಿಗೆ ಬೇಡ!
ಅಪ್ಪ, ಅಮ್ಮ ಜೊತೆಯಲ್ಲಿ,
ಬೇರೇನೂ ಬೇಡ ನನಗಿಲ್ಲಿ!

ಓಹೋ! ಶಾಲೆಗೆ ರಜಾ!
ನಮಗೆಲ್ಲ ಈ ದಿನ ಮಜಾ!

Monday, May 25, 2020

ಬಾರೋ ಚಂದಿರ (ಮಕ್ಕಳ ಕವನ)

ಬಾ ಬಾ ಚಂದಿರ, ಬಾರೋ ಚಂದಿರ,
ನಮ್ಮಯ ಕಂದಗೆ ಮುಖ ತೋರೋ!

ಬೆಳ್ಳಿಯ ಚೆಂದುಳ್ಳಿ ಚೆಲುವ ನೀನು,
ಚುಕ್ಕಿಗಳೊಡನೆ ಆಡುವೆಯೇನು?
ಆಡಲು ಮುದ್ದು ಕಾಯುತಿಹ,
ನಮಗೂ  ನಾಲ್ಕು ಚುಕ್ಕಿಯ ತಾ!

ಆಡಲು ಬಾರೋ, ಹಾಡಲು ಬಾರೋ,
ಕಂದನ ಜೊತೆಗೆ ಉಣ್ಣಲು ಬಾ!
ಸೊರಗುವೆ ಏಕೆ ಉಣ್ಣದೆ ನೀನು,
ಹಾಲನ್ನವ ನಾ ನೀಡುವೆ ಬಾ!

ಶಿವನ ಹತ್ತಿ ನೀ ಕುಳಿತಿಹೆಯೆಂದು,
ಮಗುವೂ ಹತ್ತಿತು ತಲೆ ಮೇಲೆ!
ನಿನ್ನನು ನೋಡಿ ಕಲಿಯುವ ಆತುರ,
ತುಂಟಾಟವು ಬೇಡ ಓ ಚತುರ!

ಓಣಿಗೆ ಬಂದೆ, ಬೆಳಕನು ತಂದೆ,
ಕಂದಗೆ ಮುದವನು ನೀ ತಂದೆ,
ಹೋಗಲು ಏಕೆ ಆತುರ ನಿನಗೆ,
ನಿನ್ನ ಒಡನಾಟ ಇರಲಿ ನಮಗೆ.

ಆಟವ ಮುಗಿಸಿ, ಊಟವ ಮುಗಿಸಿ,
ಟಾ ಟಾ ಹೇಳು ನಮ್ಮ ಪುಟಾಣಿಗೆ,
ನಾಳೆ ಮತ್ತೆ ಸೇರುವ ರಾತ್ರಿಗೆ,
ಇರುಳ ದೀಪವು ಮೂಡುವ ಹೊತ್ತಿಗೆ!

(ಕರುನಾಡು ಸಾಹಿತ್ಯ ಪರಿಷತ್ತಿನ ಮೇ ೨೦೨೦ರ  ರಾಜ್ಯಮಟ್ಟದ ಅಂತರ್ಜಾಲ ಶಿಶುಗೀತೆ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕವನ)

Friday, May 22, 2020

ಮುಂಜಾನೆಯ ಮಳೆ

ಧರೆಗಿಳಿದಿದೆ ಸುರಲೋಕದ,
ಅಮೃತ ಬಿಂದು.
ನವಚೇತನ, ಉಲ್ಲಾಸದ,
ರಾಗವು ಇಂದು.

ಹಸಿರುಟ್ಟಿದೆ ಭೂತಾಯಿಯು,
ನಸುಬೆಳಕಲಿ ಮಿಂದು.
ನವಪಲ್ಲವ ಚಿಗುರೊಡೆದಿದೆ,
ಹೊಸಲೋಕಕೆ ಬಂದು.

ತಂಗಾಳಿಯ ಕುಳಿರಲ್ಲಿದೆ,
ಬಿಸಿಯೇರುವ ಮತ್ತು.
ಮಗದೊಮ್ಮೆ ಮೈಮರೆತರೆ,
ಕರ್ತವ್ಯಕೆ ಕುತ್ತು.

ಪಲ್ಲಂಗವ ತೊರೆದುಬಿಡಿ,
ಧನ್ಯವಾದ ಇತ್ತು.
ಮುಂಜಾನೆಯ ಹೊಂಗಿರಣವು,
ಪಲ್ಲವಿಸುವ ಹೊತ್ತು.

Thursday, May 21, 2020

ಬಣ್ಣದ ನವಿಲು (ಮಕ್ಕಳ ಕವನ)

ನವಿಲೇ ನವಿಲೇ ಬಣ್ಣದ ನವಿಲೇ,
ಕುಣಿಯುವ ಬಾರೇ ಓ ನವಿಲೇ!

ಹಸಿರು, ನೀಲಿ, ಹೊನ್ನಿನ ಬಣ್ಣ,
ನಿನಗಾರಿತ್ತರು ಹೇಳಣ್ಣ?
ಕಾಮನ ಬಿಲ್ಲನು ನಾಚಿಸಿದೆ,
ನಿನ್ನಯ ಬಣ್ಣ ರಂಜಿಸಿದೆ!

ತಲೆಯ ಮೇಲೆ ಕಿರೀಟ ನೋಡು,
ತಾಳಕ್ಕೆ ತಕ್ಕಂತೆ ಬಳುಕಾಡು.
ಸಾವಿರ ಕಣ್ಣಿನ ಸುಂದರ ನೀನು,
ಏನೆಲ್ಲ ಕಂಡೆ ಹೇಳೆಯ ನೀನು?

ಮಳೆಯನು ತರುವ ಮೋಡವ ಕಂಡರೆ,
ಕುಣಿಯುವೆ, ನಲಿಯುವೆ, ಮನಸಾರೆ!
ನಿನ್ನ ಕುಣಿತದ ಸಂಭ್ರಮ ಕಂಡು,
ಇಳಗೆ ಇಳಿದಿದೆ ಹನಿಗಳ ದಂಡು!

ಚಾಮರವಾಗಿದೆ ನಿನ್ನಯ ಗರಿಗಳು,
ದೇವನ ಸೇವೆಗೆ ತಂಪಿನ ಅಲೆಗಳು!
ಕೃಷ್ಣನ ಕಿರೀಟ ಏರಿದೆ ನೀನು,
ಮನಸಿನ ಕೋರಿಕೆ ತೀರಿದೆಯೇನು?

ನಮ್ಮಯ ದೇಶದ ರಾಷ್ಟ್ರಪಕ್ಷಿ,
ನಮ್ಮೆಲ್ಲರ ಹೆಮ್ಮೆಗೆ ನೀ ಸಾಕ್ಷಿ!
ದೇಶದ ಜನರಿಗೆ ಸಂತಸ ತಂದೆ,
ಹರುಷವ ಹರಡಲು ನೀ ಬಂದೆ!


Wednesday, May 20, 2020

ಮನದನ್ನ




















ಮಾತಿಲ್ಲದ ಮೌನಿ ಮಾಂತ್ರಿಕನೀತ,
ಮುಟ್ಟಿದ ಮಾತ್ರಕೆ ಮೈನವಿರೇಳಿಸಿದ!

ಮುಂಗುರುಳ ಮುಟ್ಟಿ ಮುದಗೊಳಿಸಿ,
ಮುಗುಳ್ನಗೆಯ ಮೂಡಿಸಿದನಲ್ಲ!
ಮೈಸವರಿ ಮುತ್ತಿಟ್ಟ ಮೋಡಿಯಲಿ,
ಮೊಗವೆಂಬ ಮೊಗ್ಗನರಳಿಸಿದನಲ್ಲ!

ಮಲ್ಲೆ, ಮಂದಾರಗಳ ಮೇಲುರುಳಾಡಿ,
ಮಧುರ ಮಕರಂದಗಳ ಮೂಸಿ,
ಮಾಗಿದ ಮಾವುಗಳ ಮೈದಡವಿ,
ಮೇರೆಯಿಲ್ಲದೆ ಮೆರೆಯುತಿಹನಲ್ಲ!

ಮನೆಯಲ್ಲಿ ಮರೆಮಾಡಿ ಮುಚ್ಚಿಡಲಾರಳು,
ಮಿಕ್ಕವರ ಮೈಮನವ ಮೀಟದಿರಲೆಂದು.          .
ಮುಗ್ಧ ಮಂಗಳೆಯರ ಮನದನ್ನನೀತ,
ಮುಂಜಾನೆಯ ಮಧುರ ಮಂದಮಾರುತ!

(ಎಲ್ಲ ಪದಗಳೂ ʻಮʼ ದಿಂದ ʻಮಂʼ ವೆರೆಗಿನ ಗುಣಿತಾಕ್ಷರಗಳಿಂದ ಪ್ರಾರಂಭ)

Friday, May 15, 2020

ಕೊರೋನಾ ಕಲ್ಯಾಣ


ಕೂಡಿದ ಹೃದಯಗಳೆರಡು,
ಹಡೆದಾ ಜೋಡಿಗಳೆರಡು,
ಹತ್ತಿರದವರೊಂದಿಪ್ಪತ್ತು,
ಬೇರೆ ಬೇಡ ಮದುವೆಯ ಹೊತ್ತು!

ಮೂರ್ಗಂಟಿಗೆ ಬೇಕೆ ಸಾವಿರ ಸಾಕ್ಷಿ?
ಹೂಂ ಎಂದರೆ ಸಾಕು ಮನಸಿನ ಪಕ್ಷಿ!
ನೂರಾರು ಅತಿಥಿಗಳು ಬೇಕಿಲ್ಲ,
ಸಹೃದಯರು ಹತ್ತೇ ಸಾಕಲ್ಲ!

ಕಾಣಿಕೆ ಬೇಡ, ತೋರಿಕೆ ಬೇಡ,
ದುಡಿದ ಗಂಟಿನ ಸೋರಿಕೆ ಬೇಡ!
ಊಟಕೆ ಇರಲಿ ಉಪ್ಪಿನಕಾಯಿ,
ಮದುವೆಲಿ ಇರಲಿ ಮನಸಿಗೆ ಹಾಯಿ!

ಕಳಿಸಲಿ ಎಲ್ಲರೂ ಶುಭಹಾರೈಕೆ,
ವೈಫೈ ಮಾಡಲಿ ಪೂರೈಕೆ.
ಹೀಗೇ ಆಗಲಿ ಮದುವೆಗಳು,
ನಗುತಾ ಇರಲಿ ಬದುಕುಗಳು.

ಸಮಾಜ ಸುಧಾರಕ ಕೊರೋನಾ,
ಹಿಡಿತಕೆ ತಂದಿದೆ ಖರ್ಚನ್ನ!
ಪಾಯಸ, ಹೋಳಿಗೆ, ಚಿತ್ರಾನ್ನ,
ಆಗೇ ಹೋಯಿತು ಕಲ್ಯಾಣ!