Saturday, December 17, 2022

ಮುಕ್ತಕಗಳು - ೭೪

ನುಡಿಯಲ್ಲಿ ವೇದಾಂತಸಾರದಾ ಪಲಕುಗಳು

ನಡೆಯಲ್ಲಿ ತೋರಿಕೆಯ ಹುಸಿಯ ಥಳಕುಗಳು |

ಬಡಿವಾರ ಬದುಕಿನಲಿ ಏಕಿಂಥ ಹುಳುಕುಗಳು?

ಸುಡುಗಾಡು ಸನಿಹವಿದೆ ~ ಪರಮಾತ್ಮನೆ ||೩೬೬||


ಕನಸಿರಲು ಸಾಧಿಸಲು ಕಾಣುವುದು ಕೃತಿಯಲ್ಲಿ

ಅನವರತ ಗುರಿಯಕಡೆ ಸಾಗುವುದು ಹೆಜ್ಜೆ |

ಕೊನೆಯ ಮುಟ್ಟುವ ಛಲವು ಕಾಣುವುದು ಕಂಗಳಲಿ

ಸನಿಹ ಸುಳಿಯದು ಜಡತೆ ~ ಪರಮಾತ್ಮನೆ ||೩೬೭||


ಸಂಕಲ್ಪ ಬಲವು ತಾನ್ ಎಲ್ಲ ಬಲಗಳ ರಾಜ‌

ಸಂಕಟದ ಸಮಯದಲಿ ಸರಿ ರಾಮಬಾಣ |

ಲಂಕೆಗೇ ಹಾರಿದ್ದ ಹನುಮನಾ ಬಲದಂತೆ

ಶಂಕೆಯೇ ಇರದ ಬಲ ~ ಪರಮಾತ್ಮನೆ ||೩೬೮||


ಮಸಣಕ್ಕೆ ಸನಿಹದಲಿ ತಲುಪಿ ನಿಂತಿದ್ದರೂ

ಹೊಸದೊಂದು ಮರದ ಸಸಿ ನೆಟ್ಟು ಮರೆಯಾಗು

ಹಸಿ ತಂಪು ನಿನಗಿತ್ತ ಮರವನ್ನು ನೆಟ್ಟವರ

ಹೆಸರ ಬಲ್ಲೆಯ ನೀನು ~ ಪರಮಾತ್ಮನೆ ||೩೬೯||


ಸಾಗರದ ನೀರಿನಲಿ ಬೆರೆತಿರುವ ಲವಣದೊಲು 

ಬೇಗುದಿಯು ಮನದಲ್ಲಿ ಬೆರೆತು ನಿಂತಿಹುದು |

ಪೋಗಾಡು ಲವಣವನು ನೀರನ್ನು ಸಂಸ್ಕರಿಸಿ

ರಾಗ ತೊಳೆ ಮನದಿಂದ ~ ಪರಮಾತ್ಮನೆ ||೩೭೦||

ಪೋಗಾಡು = ಹೋಗಲಾಡಿಸು

No comments: