Showing posts with label ಕನಸು. Show all posts
Showing posts with label ಕನಸು. Show all posts

Sunday, December 25, 2022

ಮುಕ್ತಕಗಳು - ೮೪

ನಿದ್ದೆಯಲಿ ಕಂಡ ಕನಸಿನ ಹಿಂದೆ ಬೀಳದಿರು

ನಿದ್ದೆ ಕೆಡಿಸುವ ಕನಸು ನನಸಾಗಬೇಕು |

ಒದ್ದೆಯಾಗಿಸು ಕಂಗಳನು ಕನಸ ಬೆನ್ನಟ್ಟೆ

ನಿದ್ದೆ ಬರದಿರುವಂತೆ ~ ಪರಮಾತ್ಮನೆ ||೪೧೬||


ನಾನು ಮಾಡಿದೆಯೆನ್ನದಿರು, ಹಮ್ಮು ತೋರದಿರು

ನೀನಿಲ್ಲಿ ಮಾಡಿದ್ದು ಏನಿಲ್ಲ ಮರುಳೆ! |

ಆನದೇ, ಅವ ನೀಡಿದೇನನೂ ಬಳಸದೆಯೆ

ಏನುಮಾ ಡಿಡಬಲ್ಲೆ ~ ಪರಮಾತ್ಮನೆ ||೪೧೭||


ಧುಮ್ಮಿಕ್ಕುತಿಹ ಕೋರಿಕೆಗಳ ಧಾರೆಗೆ ಬೆದರಿ

ನಮ್ಮಿಂದ ಮರೆಯಾಗಿ ಕಲ್ಲಿನಲಿ ಅಡಗಿ |

ನಮ್ಮ ನಾಟಕಗಳನು ಕದ್ದು ನೋಡುತ್ತಿರುವೆ

ಹೊಮ್ಮಿ ಬುರುತಿದೆಯೆ ನಗು ಪರಮಾತ್ಮನೆ ||೪೧೮||


ಯಾವ ಚಣದಲಿ ಬಹುದೊ ಯಾವ ರೂಪದಿ ಬಹುದೊ

ಯಾವ ಎಡೆಯಲಿ ಬಹುದೊ ತಿಳಿಯದೀ ಮೃತ್ಯು |

ನಾವೆಯನು ಮುಳುಗಿಸುವುದಾವ ಅಲೆಯೋ ಕಾಣೆ

ಜೀವ ಗಾಳಿಯ ಸೊಡರು ~ ಪರಮಾತ್ಮನೆ ||೪೧೯||


ಯಮಭಟರು ಬಂದಾಗ ಪೊರೆಯುವರು ಯಾರಿಹರು,

ನಮ ಮಡದಿ ಮಕ್ಕಳೇ ಗೆಳೆಯರೇ ಯಾರು? |

ಯಮಪಾಶ ಬೀಸಿರಲು ಧನವು ಕಾಯುವುದೇನು?

ಜಮೆಯು ಕೈಜಾರುವುದು  ~ ಪರಮಾತ್ಮನೆ ||೪೨೦||



Saturday, December 17, 2022

ಮುಕ್ತಕಗಳು - ೭೪

ನುಡಿಯಲ್ಲಿ ವೇದಾಂತಸಾರದಾ ಪಲಕುಗಳು

ನಡೆಯಲ್ಲಿ ತೋರಿಕೆಯ ಹುಸಿಯ ಥಳಕುಗಳು |

ಬಡಿವಾರ ಬದುಕಿನಲಿ ಏಕಿಂಥ ಹುಳುಕುಗಳು?

ಸುಡುಗಾಡು ಸನಿಹವಿದೆ ~ ಪರಮಾತ್ಮನೆ ||೩೬೬||


ಕನಸಿರಲು ಸಾಧಿಸಲು ಕಾಣುವುದು ಕೃತಿಯಲ್ಲಿ

ಅನವರತ ಗುರಿಯಕಡೆ ಸಾಗುವುದು ಹೆಜ್ಜೆ |

ಕೊನೆಯ ಮುಟ್ಟುವ ಛಲವು ಕಾಣುವುದು ಕಂಗಳಲಿ

ಸನಿಹ ಸುಳಿಯದು ಜಡತೆ ~ ಪರಮಾತ್ಮನೆ ||೩೬೭||


ಸಂಕಲ್ಪ ಬಲವು ತಾನ್ ಎಲ್ಲ ಬಲಗಳ ರಾಜ‌

ಸಂಕಟದ ಸಮಯದಲಿ ಸರಿ ರಾಮಬಾಣ |

ಲಂಕೆಗೇ ಹಾರಿದ್ದ ಹನುಮನಾ ಬಲದಂತೆ

ಶಂಕೆಯೇ ಇರದ ಬಲ ~ ಪರಮಾತ್ಮನೆ ||೩೬೮||


ಮಸಣಕ್ಕೆ ಸನಿಹದಲಿ ತಲುಪಿ ನಿಂತಿದ್ದರೂ

ಹೊಸದೊಂದು ಮರದ ಸಸಿ ನೆಟ್ಟು ಮರೆಯಾಗು

ಹಸಿ ತಂಪು ನಿನಗಿತ್ತ ಮರವನ್ನು ನೆಟ್ಟವರ

ಹೆಸರ ಬಲ್ಲೆಯ ನೀನು ~ ಪರಮಾತ್ಮನೆ ||೩೬೯||


ಸಾಗರದ ನೀರಿನಲಿ ಬೆರೆತಿರುವ ಲವಣದೊಲು 

ಬೇಗುದಿಯು ಮನದಲ್ಲಿ ಬೆರೆತು ನಿಂತಿಹುದು |

ಪೋಗಾಡು ಲವಣವನು ನೀರನ್ನು ಸಂಸ್ಕರಿಸಿ

ರಾಗ ತೊಳೆ ಮನದಿಂದ ~ ಪರಮಾತ್ಮನೆ ||೩೭೦||

ಪೋಗಾಡು = ಹೋಗಲಾಡಿಸು

Tuesday, August 16, 2022

ಮುಕ್ತಕಗಳು - ೪೪

ಶರಣು ಶರಣೆಂದವರು ಶರಣರೇನೆಲ್ಲರೂ

ಪರಮೇಶ್ವರನೆ ಶರಣು ಬಾರದಿರೆ ನಿನಗೆ |

ಭರಣಿಯಲಿ ಕಲ್ಲುಗಳು ಮಾಡಿದರೆ ಸಪ್ಪಳವ

ಅರಿಯಲಾಗದು ಅರ್ಥ ಪರಮಾತ್ಮನೆ ||೨೧೬||


ಚಕ್ರಗಳ ಹೊಂದಿರುವ ವಾಹನವು ಈ ದೇಹ

ವಕ್ರಪಥದಲಿ ಚಲಿಸಿ ದಾರಿ ತಪ್ಪಿಹುದು |

ಸಕ್ರಿಯದಿ ಆಧ್ಯಾತ್ಮ ದಿಕ್ಸೂಚಿ ನೋಡಿ ನಡೆ

ಚಕ್ರಿ ತಾ ಮೆಚ್ಚುವನು ~ ಪರಮಾತ್ಮನೆ ||೨೧೭||


ಮೌನ ಮಾತಾಡಿದರೆ ಹಲವಾರು ಅರ್ಥಗಳು

ಜೇನಿನಾ ಮಧುರತೆಯು, ಕೋಪದಾ ತಾಪ |

ಬೋನದಾ ತೃಪ್ತಿ, ಕ್ಷಮೆಯ ತಂಪು ನಲ್ನುಡಿಯು

ಮೌನಕ್ಕೆ ಭಾಷೆಯಿದೆ ~ ಪರಮಾತ್ಮನೆ ||೨೧೮||


ಕಂಡಂಥ ಕನಸುಗಳ ಧರೆಗಿಳಿಸಬಹುದಲ್ಲ

ಗಂಡೆದಯ ಕಲಿಗಳೊಲು ಬೆನ್ನು ಹತ್ತಿದರೆ |

ದಂಡವಾಗದೆ ಇರಲಿ ಕನಸುಗಳ ಬೇಟೆಗಳು

ಉಂಡು ಮಲಗುವುದೇಕೆ ~ ಪರಮಾತ್ಮನೆ ||೨೧೯||


ಬರಿದಾಗದಿರಲಿ ಸಿರಿ ಕರೆದು ದಾನವನೀಯೆ

ಕರಗಳೆಂಟಾಗೆ ಸರಿ ಸೇವೆ ಮಾಡುವಗೆ |

ಮರಿಮಕ್ಕಳಿರಬೇಕು ಪರಹಿತವ ಕೋರುವಗೆ

ಹರಸೆನ್ನ ಕೋರಿಕೆಯ ಪರಮಾತ್ಮನೆ ||೨೨೦||

Monday, August 15, 2022

ಮುಕ್ತಕಗಳು - ೩೬

ಕೂಡುವರು ಕಳೆಯುವರು ಲಾಭಗಳ ನಷ್ಟಗಳ

ನೋಡುವರು ತೂಗಿ ಮುಂಬರುವ ಗಳಿಕೆಗಳ |

ಜೋಡಿಯಾಗುವರು ಲಾಭವೆನಿಸಲು ಸಂಬಂಧ

ಬೇಡ ಬೀಸಿದ ಬಲೆಯು ~ ಪರಮಾತ್ಮನೆ ||೧೭೬||


ವಿನಯ ಕಲಿಸದ ವಿದ್ಯೆ ಸಮಯಕ್ಕೆ ಸಿಗದ ಹಣ

ಮೊನಚಿರದ ಆಯುಧವು ಹೂಬಿಡದ ಬಳ್ಳಿ |

ಗುಣವಿಲ್ಲದಿಹ ರೂಪ ಆದರಿಸದಿಹ ಪುತ್ರ

ತೃಣಕಿಂತ ತೃಣದಂತೆ ~ ಪರಮಾತ್ಮನೆ ||೧೭೭||


ಜುಟ್ಟು ಹಿಡಿದಲುಗಿಸಿದೆ ಕೋರೋನ ಜಗವನ್ನು

ಪಟ್ಟುಬಿಡದೆಲೆ ಮತ್ತೆ ದಂಡೆತ್ತಿ ಬಂದು |

ಕಟ್ಟುನಿಟ್ಟಾದ ಅಭ್ಯಾಸಗಳ ಕಲಿಬೇಕು 

ಮೆಟ್ಟಿ ನಿಲ್ಲಲದನ್ನು ಪರಮಾತ್ಮನೆ ||೧೭೮||


ಕನಸು ಕಾಣುವುದೆಲ್ಲ ನನಸಾಗುವುದು ಕಠಿಣ

ಕನವರಿಕೆ ಬಿಟ್ಟು ಶ್ರಮವ ಹಾಕಬೇಕು |

ಇನಿತು ಸಸಿ ಬೆಳೆಯುತ್ತ ಮರವಾಗಬೇಕಿರಲು

ದಿನನಿತ್ಯ ನೀರುಣಿಸು ~ ಪರಮಾತ್ಮನೆ ||೧೭೯||


ತೀರಿಹೋಗುತಿರೆ ಅನಿಲಗಳು ಬುವಿ ಗರ್ಭದಲಿ

ಸೌರಶಕ್ತಿಯು ಮಾನವರಿಗೆ ವರದಾನ |

ಆ ರಾಜ ರವಿಕಿರಣ ಸೋರಿಹೋಗುತಲಿರಲು

ಹೀರಿ ಹಿಡಿಯುವ ರವಿಯ ~ ಪರಮಾತ್ಮನೆ ||೧೮೦||

Tuesday, December 1, 2020

ನನಸಾದ ಕನಸು

ಭೂಮಿಯಿಂದ ಚಿಮ್ಮಿ ಹಾರುವ,
ಚಂದ್ರ, ತಾರಾಲೋಕ ಸೇರುವ!

ನಮ್ಮ ಪ್ರೀತಿ ಗೆಲುವು ಕಂಡಿದೆ,
ಸ್ವರ್ಗಕಿನ್ನು ಮೂರೇ ಗೇಣಿದೆ!
ಕನಸುಗಳಿಗೆ ರೆಕ್ಕೆ ಮೂಡಿದೆ,
ಮನದ ಹಕ್ಕಿ ಗರಿ ಗೆದರಿದೆ!

ಕಣ್ಣಿನಲ್ಲಿ ಕಣ್ಣನಿಟ್ಟು,
ಎದೆಯ ಭಾಷೆ ನೀಡುವೆ,
ಕಣ್ಣ ಬಿಂದು ಜಾರದಂತೆ,
ರೆಪ್ಪೆಯಾಗಿ ಕಾಯುವೆ!

ತಡವು ಏಕೆ ಇನ್ನು ಗೆಳತಿ,
ಬಂದಿಹಿದು ನಮ್ಮ ಸರತಿ,
ಪ್ರೇಮಲೋಕ ಸೃಷ್ಟಿಸಲು,
ಹೊಸ ಸ್ವರ್ಗ ನಿರ್ಮಿಸಲು!

ಬಾನನೆಲ್ಲ ತೋಟ ಮಾಡುವ,
ಪ್ರೀತಿಯೆಲ್ಲ ಧಾರೆ ಎರೆಯವ,
ಬಿರಿದ ಕೆಂಪು ಗುಲಾಬಿಗಳ,
ಪ್ರೇಮಿಗಳಿಗೆ ಹಂಚಿ ಬಿಡುವ!

Friday, August 31, 2012

ಕನಸಿನ ಆಸೆ

ನಿನ್ನ ನೆನಪಿನ ಲೋಕದಲ್ಲಿ,
ಹೂವು, ಹಣ್ಣುಗಳ ತೋಟದಲ್ಲಿ,

ಕಣ್ಣು ಮುಚ್ಚಿ, ಮೈಯ ಮರೆತೆ,
ಕನಸಿಗಿಲ್ಲ ಏನೂ ಕೊರತೆ,

ಕಣ್ಣು ಬಿಟ್ಟರೆ ಸುತ್ತ ಕಾನು,
ದಟ್ಟ ಅಡವಿಯಲಿ ಒಂಟಿ ನಾನು,

ಹುಲಿ, ಕರಡಿಗಳ ಕಾಟವಿಲ್ಲಿ,
ಕಲ್ಲು ಮುಳ್ಳಿನ ದಾರಿಯಿಲ್ಲಿ,

ಕಣ್ಣು ಮುಚ್ಚಿದೆ ನೋವಿನಿಂದ,
ಮತ್ತೆ ಕನಸಿನ ಆಸೆಯಿಂದ!