Showing posts with label ಅಕ್ಕರೆ. Show all posts
Showing posts with label ಅಕ್ಕರೆ. Show all posts

Sunday, January 8, 2023

ಮುಕ್ತಕಗಳು - ೯೨

ಗೆಳೆಯನಿರೆ ಸನಿಹದಲಿ ಬಿಳಿಯ ಹಾಳೆಯ ಹಾಗೆ

ಬಳಿದು ಬಣ್ಣಗಳ ಮನಕುಂಚವನು ಎಳೆದು |

ಮಳೆಸುರಿದ  ಮಣ್ಣಿನೊಲು ಇರೆ ಅದನು ಎಸೆಯದಿರು

ಹಳೆಯ ಕಾಗದವೆಂದು ~ ಪರಮಾತ್ಮನೆ ||೪೫೬||


ಸರಿಹೆಜ್ಜೆ ಹಾಕುತ್ತ ಬೆಟ್ಟವನೆ ಹತ್ತಿರಲು

ತಿರುಗಿ ನೋಡರು ಜನರು ಆಸಕ್ತಿಯಿರದು |

ಬರಿದೆ ಎಡವಲು ಒಮ್ಮೆ ಹಾಸ್ಯಮಾಡುತ ನಕ್ಕು

ಬರೆಹಾಕಿ ಹೋಗುವರು ~ ಪರಮಾತ್ಮನೆ ||೪೫೭||


ನೆಮ್ಮದಿಯು ಸಿಗದು ನಮಗಿಷ್ಟವಾದುದ ಪಡೆಯೆ

ಇಮ್ಮಡಿಯ ಆಸೆಗಳು ಹುಟ್ಟುವವು ಮುಂದೆ! |

ಸುಮ್ಮನೆಯೆ ಇಷ್ಟಪಡು ಪಡೆದಿರುವ ಎಲ್ಲವನು

ಮುಮ್ಮಡಿಯ ನೆಮ್ಮದಿಗೆ ~ ಪರಮಾತ್ಮನೆ ||೪೫೮||


ಅಕ್ಕರೆಯು ಇರಬೇಕು ನಡೆಯಲ್ಲಿ ನುಡಿಯಲ್ಲಿ

ಸಕ್ಕರೆಯ ಸವಿ ನಿಲ್ಲುವುದು ಬಂಧಗಳಲಿ |

ಮಿಕ್ಕರುಚಿಗಳು ಎಲ್ಲ ಮರೆಯಾಗುವವು ಹಿಂದೆ

ದಕ್ಕುವುದು ಆನಂದ ~ ಪರಮಾತ್ಮನೆ ||೪೫೯||


ವ್ಯರ್ಥವದು ಭೋಜನವು ಹಸಿವಿಲ್ಲದಿರುವಾಗ

ವ್ಯರ್ಥವದು ವಿನಯವನು ಕಲಿಸದಾ ವಿದ್ಯೆ |

ವ್ಯರ್ಥವದು ಉಪಯೋಗಕಾಗದಾ ಸಿರಿತನವು

ವ್ಯರ್ಥವದು ಆತ್ಮರತಿ ~ ಪರಮಾತ್ಮನೆ ||೪೬೦||

ಆತ್ಮರತಿ = ತನ್ನನ್ನು ತಾನೇ ಮೆಚ್ಚಿಕೊಳ್ಳುವುದು

Monday, August 22, 2022

ಮುಕ್ತಕಗಳು - ೫೯

ಸಮಯವದು ಉಚಿತವೇ, ಬೆಲೆಕಟ್ಟಲಾಗದ್ದು

ನಮಗೆ ಒಡೆತನವಿಲ್ಲ, ಬಳಸೆ ಸಿಕ್ಕುವುದು |

ಜಮೆ ಮಾಡಲಾಗದ್ದು, ವ್ಯಯಿಸಬಹುದಷ್ಟೆಯದು

ಗಮನವಿಡು ಲಾಭಪಡೆ ~ ಪರಮಾತ್ಮನೆ ||೨೯೧||


ಗೃಹಿಣಿಗಿದೆಯೇ ನಿವೃ ತ್ತಿಯ ಪಾರಿತೋಷಕವು

ದಹಿಸುತಿಹ ದಿನಿದಿನದ ಕೋಟಲೆಗಳಿಂದ |

ಇಹುದೆ ಹೃದಯಕ್ಕೆ ರಜೆ ಮನುಜ ಬದುಕಿರುವನಕ

ಗೃಹದ ಹೃದಯವು ಆಕೆ ~ ಪರಮಾತ್ಮನೆ ||೨೯೨||


ಮನ ಶುದ್ಧವಿಲ್ಲದಿರೆ ಮಂತ್ರವೀಯದು ಶಕ್ತಿ

ತನು ಶುದ್ಧವಿಲ್ಲದಿರೆ ಫಲಕೊಡದು ತೀರ್ಥ |

ಧನವಧಿಕವಿರಲೇನು ಕೊಳ್ಳಲಾಗದು ಭಕ್ತಿ

ತನುಮನವ ಶುದ್ಧವಿಡು ~ ಪರಮಾತ್ಮನೆ ||೨೯೩||


ಕಾಗದದ ದೋಣಿಯಲಿ ಸಾಗರವ ದಾಟುವೆಯ

ಬಾಗಿದಾ ಮರವನ್ನು ನೇರ ಮಾಡುವೆಯ |

ಸಾಗು ಭೂಮಿಯ ಮೇಲೆ ಹೆಜ್ಜೆಗಳನೂರುತಲಿ

ಸೋಗೇಕೆ ಮಾತಿನಲಿ ~ ಪರಮಾತ್ಮನೆ ||೨೯೪||


ಅಕ್ಕರೆಯು ದೊರೆತರದು ಬಾಯಾರಿದವಗೆ ಜಲ

ಸಕ್ಕರೆಯ ಸವಿನುಡೆಯು ಎದೆಯ ತುಂಬುವುದು |

ಅಕ್ಕಪಕ್ಕದಲಿ ಹಂಚುತ ಅಕ್ಕರೆಯ ಉಚಿತ

ಚೊಕ್ಕವಾಗಿಸು ಧರೆಯ ~ ಪರಮಾತ್ಮನೆ ||೨೯೫||