Showing posts with label ಸಮಯ. Show all posts
Showing posts with label ಸಮಯ. Show all posts

Saturday, September 17, 2022

ಮುಕ್ತಕಗಳು - ೬೬

ಫಲವತ್ತು ಭೂಮಿಯದು ಮನುಜನಾ ಹೃದಯವೇ

ಬೆಳೆಯುವುದು ಸೊಂಪಾಗಿ ಬಿತ್ತು ನೀ ಸುಗುಣ |

ಕಳೆ ಕೀಟಗಳ ಕಾಟವನು ಕೊನೆಗೊಳಿಸು ನಿತ್ಯ

ಕಲಿಗೆ ಊಟದ ಕೊರತೆ ~ ಪರಮಾತ್ಮನೆ ||೩೨೬||


ಸಮಯಕ್ಕೆ ರಜೆಯಿಲ್ಲ ಜಮೆಮಾಡಲಾಗದದ

ವಿಮೆಯ ಮಾಡಿಸಲಾರೆ ದೊರೆತ ಸಮಯಕ್ಕೆ |        

ಗಮನವಿಡಬೇಕು ಚಣಚಣವ ಉಪಯೋಗಿಸಲು

ನಮಗಮೂಲ್ಯಸಿರಿಯದು ~ ಪರಮಾತ್ಮನೆ ||೩೨೭||


ಪರಿಹಾರ ಹುಟ್ಟುವುದು ತೊಂದರೆಯ ಜೊತೆಯಲ್ಲೆ

ಅರಿವ ಬೆಳೆಸಲುಬೇಕು ಪರಿಹಾರ ಹುಡುಕೆ |

ಗಿರಿಶಿಖರ ತಲಪುವಾ ಸೋಪಾನ ಕಟ್ಟಲಿಕೆ

ಗಿರಿಯ ಬಂಡೆಗಳಿಹವು ~ ಪರಮಾತ್ಮನೆ ||೩೨೮||


ಜನನಿಬಿಡ ಪಟ್ಟಣದೆ ಅತ್ತರಿಗೆ ಬೆಲೆಹೆಚ್ಚು

ಬನದ ಕುಸುಮದ ಗಂಧ ಮೂಸುವವರಿಲ್ಲ |

ಜನವ ಮುಟ್ಟುವ ವಸ್ತು ಬೇಡಿಕೆಯಲಿರಲೇನು

ಗುಣವ ಕಡೆಗಣಿಸದಿರು ಪರಮಾತ್ಮನೆ ||೩೨೯||


ಯಾರದೋ ಮೆಚ್ಚುಗೆಗೆ ವಸ್ತುಗಳ ಕೊಳ್ಳುವೆವು

ತೋರಲಿಕೆ ನಮ್ಮ ಸಂಪತ್ತಿನಾ ಘನತೆ  |

ತೀರದಾ ದಾಹವದು ಸುಡುತಿಹುದು ನೆಮ್ಮದಿಯ

ಹೀರು ಆಧ್ಯಾತ್ಮ ಜಲ ~ ಪರಮಾತ್ಮನೆ ||೩೩೦||

Monday, August 22, 2022

ಮುಕ್ತಕಗಳು - ೫೯

ಸಮಯವದು ಉಚಿತವೇ, ಬೆಲೆಕಟ್ಟಲಾಗದ್ದು

ನಮಗೆ ಒಡೆತನವಿಲ್ಲ, ಬಳಸೆ ಸಿಕ್ಕುವುದು |

ಜಮೆ ಮಾಡಲಾಗದ್ದು, ವ್ಯಯಿಸಬಹುದಷ್ಟೆಯದು

ಗಮನವಿಡು ಲಾಭಪಡೆ ~ ಪರಮಾತ್ಮನೆ ||೨೯೧||


ಗೃಹಿಣಿಗಿದೆಯೇ ನಿವೃ ತ್ತಿಯ ಪಾರಿತೋಷಕವು

ದಹಿಸುತಿಹ ದಿನಿದಿನದ ಕೋಟಲೆಗಳಿಂದ |

ಇಹುದೆ ಹೃದಯಕ್ಕೆ ರಜೆ ಮನುಜ ಬದುಕಿರುವನಕ

ಗೃಹದ ಹೃದಯವು ಆಕೆ ~ ಪರಮಾತ್ಮನೆ ||೨೯೨||


ಮನ ಶುದ್ಧವಿಲ್ಲದಿರೆ ಮಂತ್ರವೀಯದು ಶಕ್ತಿ

ತನು ಶುದ್ಧವಿಲ್ಲದಿರೆ ಫಲಕೊಡದು ತೀರ್ಥ |

ಧನವಧಿಕವಿರಲೇನು ಕೊಳ್ಳಲಾಗದು ಭಕ್ತಿ

ತನುಮನವ ಶುದ್ಧವಿಡು ~ ಪರಮಾತ್ಮನೆ ||೨೯೩||


ಕಾಗದದ ದೋಣಿಯಲಿ ಸಾಗರವ ದಾಟುವೆಯ

ಬಾಗಿದಾ ಮರವನ್ನು ನೇರ ಮಾಡುವೆಯ |

ಸಾಗು ಭೂಮಿಯ ಮೇಲೆ ಹೆಜ್ಜೆಗಳನೂರುತಲಿ

ಸೋಗೇಕೆ ಮಾತಿನಲಿ ~ ಪರಮಾತ್ಮನೆ ||೨೯೪||


ಅಕ್ಕರೆಯು ದೊರೆತರದು ಬಾಯಾರಿದವಗೆ ಜಲ

ಸಕ್ಕರೆಯ ಸವಿನುಡೆಯು ಎದೆಯ ತುಂಬುವುದು |

ಅಕ್ಕಪಕ್ಕದಲಿ ಹಂಚುತ ಅಕ್ಕರೆಯ ಉಚಿತ

ಚೊಕ್ಕವಾಗಿಸು ಧರೆಯ ~ ಪರಮಾತ್ಮನೆ ||೨೯೫||