Showing posts with label ಕರ್ಮಫಲ. Show all posts
Showing posts with label ಕರ್ಮಫಲ. Show all posts

Sunday, December 25, 2022

ಮುಕ್ತಕಗಳು - ೮೬

ಸುಟ್ಟಿರಲು ಮರವೊಂದ ಮತ್ತೆ ಫಲವೀಯುವುದೆ

ನೆಟ್ಟು ಸಸಿಯನು ಪೋಷಿಸುತ ಕಾಯಬೇಕು |

ಕೆಟ್ಟಕರ್ಮಫಲದಾ ಪರಿಣಾಮ ತಗ್ಗಿಸುವ 

ಗಟ್ಟಿ ದಾರಿಯಿದುವೇ ~ ಪರಮಾತ್ಮನೆ ||೪೨೬||


ಈಯುವುದು ಸಂತಸವ ಬಡವನಿಗೆ ತುತ್ತನ್ನ

ಈಯುವುದೆ ಧನಿಕನಿಗೆ ತೃಪ್ತಿ ಮೃಷ್ಟಾನ್ನ? |

ಬೇಯುವುದು ಮನವಧಿಕ ತೀರದಾಸೆಗಳಿರಲು

ಸಾಯುವುದು ಸಂತಸವು ~ ಪರಮಾತ್ಮನೆ ||೪೨೭||


ಸರ್ವಗುಣ ಸಂಪನ್ನರಾರುಂಟು ಪೃಥುವಿಯಲಿ

ಗರ್ವಪಡದಿರು ನೀನು ಕೊರೆಯುಂಟು ನಿನಗೆ | 

ಕರ್ಮ ತಂದಿಹ ಕೊರತೆ ಮರೆಯಾಗ ಬೇಕೆ? ಹಿಡಿ,

ಪರ್ವಕಾಲದ ಮಾರ್ಗ ~ ಪರಮಾತ್ಮನೆ ||೪೨೮||

ಪರ್ವಕಾಲ = ಪರಿವರ್ತನೆ / ಬದಲಾವಣೆ


ಬಾಗುವುದು ಮರವು ಫಲಭರಿತವಾಗಿರುವಾಗ

ಬಾಗುವುದು ತಲೆಯು ಪಾಂಡಿತ್ಯ ತುಂಬಿರಲು |

ಬೀಗುವರು ಸುಮ್ಮನೆಯೆ ಸೋಗಿನಾ ಪಂಡಿತರು

ಮಾಗಿರದ ಎಳಸುಗಳು ~ ಪರಮಾತ್ಮನೆ ||೪೨೯||


ಅರಳುತಿಹ ಕುಸುಮವರಿಯದು ಪಯಣವೆಲ್ಲಿಗೋ

ಅರಳಿ ದೇವನ ಗುಡಿಗೊ ಮಸಣಕೋ ಕೊನೆಗೆ? |

ಇರುವುದೇ ಕುಸುಮಕ್ಕೆ ನಿರ್ಧರಿಸೊ ಅವಕಾಶ?

ಹರಿ ನಮಗೆ ಕೊಟ್ಟಿಹನು ~ ಪರಮಾತ್ಮನೆ ||೪೩೦||

ಮುಕ್ತಕಗಳು - ೮೫

ರಕ್ತದಲಿ ಏನಿದೆಯೊ ಬಂಧವದು ಬಲುಗಟ್ಟಿ

ಶಕ್ತವದು ಮನುಜನ ಸ್ವಾರ್ಥಿಯಾಗಿಸಲು |

ಮುಕ್ತವಾಗದೆ ಸೆಳೆತ ಮುಕ್ತವಾಗದು ಜಗವು

ಉಕ್ತಿಯಲುಳಿಯೆ ಸಾಕೆ? ~ ಪರಮಾತ್ಮನೆ ||೪೨೧||


ಅನ್ನ ವಿದ್ಯೆಗಳು ಸರಕುಗಳು ಆಗಿರದಾಗ

ಚೆನ್ನಿತ್ತು ಜಗವು ನೆಮ್ಮದಿಯ ಕಾಲವದು |

ಇನ್ನವೇ ಸರಕುಗಳು ಆಗಿರಲು ಪೇಟೆಯಲಿ

ಭಿನ್ನವಾಯಿತು ಶಾಂತಿ ~ ಪರಮಾತ್ಮನೆ ||೪೨೨||


ಆಗಸದ ಮೇಘಗಳ ಎತ್ತರದ ಗುರಿಗಳಿರೆ

ಆಗಿರಿಯ ಘನದಷ್ಟು ಯತ್ನವಿರಬೇಕು |

ಸಾಗುತಿರು ನಿಲ್ಲದೆಯೆ ಎಲ್ಲ ಅಡೆತಡೆಗಳಿಗೆ

ಮೇಘ ಸುರಿಸುವುದು ಮಳೆ ~ ಪರಮಾತ್ಮನೆ ||೪೨೩||


ಬುವಿಯಿಂದ ಏಳುತಿವೆ ಹಸಿರಿನಾ ಬುಗ್ಗೆಗಳು

ಅವನಿಯೇ ನೀಡುತಿರೆ ಒಡಲಿನಾ ಸವಿಯ |

ಸವಿಯನೇ ಉಂಡವನು ಹಂಚಿದರೆ ಕಹಿಯನ್ನು

ಇವನ ವಿಷವೆಲ್ಲಿಯದು?! ಪರಮಾತ್ಮನೆ ||೪೨೪||


ಪ್ರತ್ಯೇಕ ಫಲವಿಹುದು ಪ್ರತಿಯೊಂದು ಕರ್ಮಕ್ಕೆ

ಸ್ತುತ್ಯಕರ್ಮವಳಿಸದು ದುಷ್ಟಕರ್ಮಫಲ |

ನಿತ್ಯ ಸುರಿದರೆ ನೀರ ಸುಟ್ಟ ಮರದಾ ಬುಡಕೆ

ಸತ್ಯ, ಫಲವೀಯದದು ~ ಪರಮಾತ್ಮನೆ ||೪೨೫||

Monday, July 11, 2022

ಮುಕ್ತಕಗಳು - ೧೬

ಪರರು ಬರಿಯಂಚೆಯವರಾಗಿಹರು ತಲುಪಿಸಲು

ಪರಿಪರಿಯ ನಿನ್ನ ಕರ್ಮಫಲದಾ ಫಸಲು |

ಜರೆಯದಿರು ಪರರನ್ನು ನಿನ್ನ ಸಂಕಟಗಳಿಗೆ

ಪರರಲ್ಲಿ ದಯೆಯಿರಲಿ ಪರಮಾತ್ಮನೆ ||೭೬||


ಕಾಮದಲಿ ಕುರುಡಾಗೆ ಭಯವಿಲ್ಲ ಸಿಗ್ಗಿಲ್ಲ

ರೋಮರೋಮದಿ ದಹಿಸೆ ಕಾಮದಾಹಾಗ್ನಿ |

ಕಾಮದಾಹಕ್ಕೆ ಬಂಧುಗಳೆ ಬಲಿಯಾಗುತಿರೆ

ಪಾಮರತೆ ಸಂಹರಿಸು ಪರಮಾತ್ಮನೆ ||೭೭||


ವೈರಾಣು ಬಂದಿಹುದು ವೈರಿಯಾ ರೂಪದಲಿ

ಹೋರಾಟ ನಡೆಯುತಿದೆ ಮನೆಮನಗಳಲ್ಲಿ |

ಜೋರಿನಾ ಮಾನವನು ರೆಕ್ಕೆತರಿದಿದ್ದರೂ

ಹಾರಾಟ ಬಿಡಲೊಲ್ಲ ಪರಮಾತ್ಮನೆ ||೭೮||


ಮೋಹವಾಗುವುದಲ್ಲ ಚೆಂದದ್ದು ಕಂಡಾಗ

ಮೋಹ ಚಿಗುರೊಡೆಯಲಿಕೆ ಸ್ವಾರ್ಥವೇ ಮೂಲ

ಮೋಹ ಪಾಶಗಳು ಜೀವನದ ಕಗ್ಗಂಟುಗಳು

ಮೋಹ ಭಯವೀಯುವುದು ಪರಮಾತ್ಮನೆ ||೭೯|| 


ಕದಡುವುದು ತಿಳಿಗೊಳದ ನೀರನ್ನು ಮತ್ಸರವು

ಹದವಿರುವ ಮನದಲ್ಲಿ ಕಸವ ತುಂಬುವುದು |

ಎದೆಯಿಂದ ಮತ್ಸರದ ಬೇರು ಕೀಳದೆ ಬಿಡಲು

ಬದುಕು ಹಸನಾಗದದು ಪರಮಾತ್ಮನೆ ||೮೦||