Showing posts with label ವಿಷ. Show all posts
Showing posts with label ವಿಷ. Show all posts

Sunday, December 25, 2022

ಮುಕ್ತಕಗಳು - ೮೫

ರಕ್ತದಲಿ ಏನಿದೆಯೊ ಬಂಧವದು ಬಲುಗಟ್ಟಿ

ಶಕ್ತವದು ಮನುಜನ ಸ್ವಾರ್ಥಿಯಾಗಿಸಲು |

ಮುಕ್ತವಾಗದೆ ಸೆಳೆತ ಮುಕ್ತವಾಗದು ಜಗವು

ಉಕ್ತಿಯಲುಳಿಯೆ ಸಾಕೆ? ~ ಪರಮಾತ್ಮನೆ ||೪೨೧||


ಅನ್ನ ವಿದ್ಯೆಗಳು ಸರಕುಗಳು ಆಗಿರದಾಗ

ಚೆನ್ನಿತ್ತು ಜಗವು ನೆಮ್ಮದಿಯ ಕಾಲವದು |

ಇನ್ನವೇ ಸರಕುಗಳು ಆಗಿರಲು ಪೇಟೆಯಲಿ

ಭಿನ್ನವಾಯಿತು ಶಾಂತಿ ~ ಪರಮಾತ್ಮನೆ ||೪೨೨||


ಆಗಸದ ಮೇಘಗಳ ಎತ್ತರದ ಗುರಿಗಳಿರೆ

ಆಗಿರಿಯ ಘನದಷ್ಟು ಯತ್ನವಿರಬೇಕು |

ಸಾಗುತಿರು ನಿಲ್ಲದೆಯೆ ಎಲ್ಲ ಅಡೆತಡೆಗಳಿಗೆ

ಮೇಘ ಸುರಿಸುವುದು ಮಳೆ ~ ಪರಮಾತ್ಮನೆ ||೪೨೩||


ಬುವಿಯಿಂದ ಏಳುತಿವೆ ಹಸಿರಿನಾ ಬುಗ್ಗೆಗಳು

ಅವನಿಯೇ ನೀಡುತಿರೆ ಒಡಲಿನಾ ಸವಿಯ |

ಸವಿಯನೇ ಉಂಡವನು ಹಂಚಿದರೆ ಕಹಿಯನ್ನು

ಇವನ ವಿಷವೆಲ್ಲಿಯದು?! ಪರಮಾತ್ಮನೆ ||೪೨೪||


ಪ್ರತ್ಯೇಕ ಫಲವಿಹುದು ಪ್ರತಿಯೊಂದು ಕರ್ಮಕ್ಕೆ

ಸ್ತುತ್ಯಕರ್ಮವಳಿಸದು ದುಷ್ಟಕರ್ಮಫಲ |

ನಿತ್ಯ ಸುರಿದರೆ ನೀರ ಸುಟ್ಟ ಮರದಾ ಬುಡಕೆ

ಸತ್ಯ, ಫಲವೀಯದದು ~ ಪರಮಾತ್ಮನೆ ||೪೨೫||

Monday, July 11, 2022

ಮುಕ್ತಕಗಳು - ೨೦

ವಿಷವಿಹುದು ನೀರಿನಲಿ ವಿಷವಿಹುದು ಗಾಳಿಯಲಿ

ವಿಷವಿಹುದು ಹಸುಗೂಸಿನಾಹಾರದಲ್ಲಿ |

ವಿಷಮಸಮಯವಿದು ಸಾವಮೊದಲೇ ನೀ ಮನದ

ವಿಷವ ತೊರೆ ಮನುಜ ಪೇಳ್ ಪರಮಾತ್ಮನೆ ||೯೬||


ಧನವೆಂಬ ಸಿರಿಯುಂಟು  ವಸ್ತುಗಳ   ಕೊಳ್ಳಲಿಕೆ

ಗುಣವೆಂಬ ನಿಧಿಯುಂಟು ಪಡೆಯೆ ನೆಮ್ಮದಿಯ |

ಗುಣಧನಗಳೆರಡನ್ನು ಪಡೆಯುವುದು ವಿರಳವಿರೆ

ಧನದಾಸೆ ಬಿಡಿಸಯ್ಯ ಪರಮಾತ್ಮನೆ ||೯೭||


ಸಾರಥಿಯು ನೀನಾದೆ ಪಾರ್ಥನಿಗೆ ಯುದ್ಧದಲಿ

ಕೌರವರ ಸೆದೆಬಡಿಯೆ ನೆರವಾದೆ ನೀನು |

ಪಾರುಗಾಣಿಸಲು ಜೀವನ ಕದನದಲಿ ಎನಗೆ

ಸಾರಥಿಯು ನೀನಾಗು ಪರಮಾತ್ಮನೆ ||೯೮||


ಹಸೆಮಣೆಯನೇರಿ ಜೊತೆ ಸಪ್ತಪದಿ ತುಳಿದಿಹಳು

ಹೊಸಬದುಕ ಕೊಡಲೆನಗೆ ತನ್ನವರ ತೊರೆದು |

ನಸುನಗೆಯ ಮುಖವಾಡದಲಿ ನೋವ ನುಂಗಿಹಳು

ಹೊಸಜೀವವಿಳೆಗಿಳಿಸಿ ಪರಮಾತ್ಮನೆ ||೯೯|| 


ಮುಕ್ತಕದ ಮಾಲೆಯಲಿ ಶತಸಂಖ್ಯೆ ಪುಷ್ಪಗಳು

ಭಕ್ತನಾ ಕಾಣಿಕೆಯ ಸ್ವೀಕರಿಸು ಗುರುವೆ |

ಪಕ್ವವಿಹ ತಿಳಿವನ್ನು ನೀಡಿರಲು ವಂದನೆಯು

ದಕ್ಷಿಣಾಮೂರ್ತಿಯೇ ಪರಮಾತ್ಮನೆ ||೧೦೦||