ಯಶವ ಏನೆಂಬೆ? ಧನ, ವಿದ್ಯೆ, ಸಿರಿಸಂಪತ್ತೆ?
ಪಶು, ಭೂಮಿ, ಅಧಿಕಾರ, ಯೌವ್ವನದ ಬಲವೆ? |
ದಶಕಂಠ ಹೊಂದಿದ್ದೆಲ್ಲವೂ ಗೆಲಿಸಿದವೆ?!
ಯಶವ ಗುಣದಲಿ ನೋಡು ~ ಪರಮಾತ್ಮನೆ ||೧೧||
ಗುಡಿ ಸುತ್ತಿ ಗುಂಡಾರ ಸುತ್ತಿ ದೇವನೊಲಿಸಲು
ಬಿಡದೆ ತೀರ್ಥಗಳ ಸುತ್ತಿಹೆ ಗಾಣದೆತ್ತೆ! |
ಒಡೆಯನನು ಮರೆತಾಗ ಎದೆಯ ಗೂಡಿನಲಿರುವ
ಕೊಡುವನೇ ಪರಮಪದ ~ ಪರಮಾತ್ಮನೆ ||೧೨||
ನಗೆಯ ಮಲ್ಲಿಗೆಯನರಳಿಸು ಸುಗುಣವಂತನೇ
ಮಗುವಂತೆ ನಕ್ಕುಬಿಡು ನೋವುಗಳ ಮರೆಸೆ |
ಸಿಗುವಂತೆ ಸಿಹಿಬೆಲ್ಲ ಬೇವಿನೆಸಳಿನ ಜೊತೆಗೆ
ಸಿಗಲಿ ಬಾಳಲಿ ಸವಿಯು ಪರಮಾತ್ಮನೆ ||೧೩||
ಕಾವ್ಯಕನ್ನಿಕೆಯ ರಸಗಂಗೆ ಹರಿದಿದೆ ಸದಾ
ದಿವ್ಯತೆಯ ಬೆಳಗುತಿಹ ದಿವಿನಾದ ಗೊಂಬೆ |
ನವ್ಯತೆಯ ನಗನತ್ತ ಕಾಲವೇ ಕೊಟ್ಟಿಹುದು
ಭವ್ಯತೆಗೆ ಕುಂದಿಲ್ಲ ಪರಮಾತ್ಮನೆ ||೧೪||
ಎಲ್ಲ ಚಪಲಗಳಲ್ಲಿ ನಾಲಿಗೆಯ ಚಪಲವೇ
ಬಲ್ಲಿದರು ಪೇಳಿಹರು ಬಲು ಜಿಗುಟು ಚಪಲ |
ಗಲ್ಲು ಶಿಕ್ಷೆಗೆ ಹೆದರದಿಹ ದುಷ್ಟ ದುರುಳನೊಲು
ಜೊಲ್ಲು ಸುರಿಸುವ ನಾಲ್ಗೆ ಪರಮಾತ್ಮನೆ ||೧೫||