Showing posts with label ನಗು. Show all posts
Showing posts with label ನಗು. Show all posts

Tuesday, February 7, 2023

ನಿನ್ನ ನಗು

ನಿನ್ನ ನಗುವೆ ನನ್ನ ಉಸಿರು, 

ನಿನ್ನ ಕನಸೇ ಕಣ್ಣ ಹಸಿರು! 


ದೇವಲೋಕದ ಚೆಲುವು ನೀನು

ತಾರಾಲೋಕದ ಬೆಳಕು ನೀನು

ತಿಂಗಳ ರಾತ್ರಿಯ ತಂಪು ನೀನು

ನಿನ್ನ ಮಾತೇ ಮಧುರ ಜೇನು! 


ನನ್ನ ಸನಿಹಕೆ ವರವಾಗಿ ಬಂದೆ, 

ಕುರುಡು ಕಣ್ಣಿಗೆ ಬೆಳಕಾಗಿ ನಿಂದೆ,

ಬರಡು ಬಾಳಿಗೆ ಅಮೃತದಂತೆ, 

ಕೊರಡ ಕೊನರಿಸೊ ವರ್ಷದಂತೆ!


ನಮ್ಮ ಜೋಡಿ ಶುಕಪಿಕಗಳಂತೆ, 

ನಮ್ಮ ಬದುಕು ಹೂಬಿಸಿಲಿನಂತೆ, 

ಸಮಯ ನಿಂತೇ ಹೋಯಿತು, 

ಹೃದಯ ಕುಣಿಕುಣಿದಾಡಿತು! 


ಎಂದು ಬರುವೆ ನನ್ನ ಬಾಳಿಗೆ, 

ಎಂದು ತರುವೆ ಸಿಹಿಯ ಹೋಳಿಗೆ?

ಬಳಸಿ ಬಂದು ನನ್ನ ತೋಳಿಗೆ, 

ತುಂಬು ನನ್ನ ಪ್ರೀತಿ ಜೋಳಿಗೆ! 

Monday, August 22, 2022

ಮುಕ್ತಕಗಳು - ೬೦

ಆಸೆಗಳ ಕೊಳದಲ್ಲಿ ಈಸುವುದು ಏತಕ್ಕೆ

ಹಾಸಿ ಮಲಗಿರುವ ಮೃಗವನೆಬ್ಬಿಸಿದ ಹಾಗೆ |

ಬೀಸೊ ಬಿರುಗಾಳಿಯಲಿ ಗಾಳಿಪಟ ಉಳಿಯುವುದೆ

ಆಸೆಗಳ ನಿಗ್ರಹಿಸು ~ ಪರಮಾತ್ಮನೆ ||೨೯೬||


ನಟ್ಟಿರುಳ ಕತ್ತಲಲಿ ಮಿಂಚೊಂದು ಸುಳಿದಂತೆ

ಥಟ್ಟೆಂದು ಹೊಳೆದರಾವಿಷ್ಕಾರ ವೊಂದು |

ಬಿಟ್ಟಿ ದೊರಕಿದದೃಷ್ಟವಿತ್ತ ವರವಲ್ಲವದು

ಗಟ್ಟಿ ತಪಸಿನ ಫಲವು ~ ಪರಮಾತ್ಮನೆ ||೨೯೭||


ಒಳಿತು ಕೆಡಕುಗಳ ಯುದ್ಧವು ನಡೆಯುತಿದೆ ನಿತ್ಯ

ಕಲಿ-ಕಲ್ಕಿಯರ ಯುದ್ಧವಿದು ಅಲ್ಲವೇನು? |

ಬಲಿಯಾಗುತಿರಬಹುದು ಪುಟ್ಟ ಕಲ್ಕಿಗಳಿಂದು

ಬೆಳೆದು ಬರುವನು ಕಲ್ಕಿ ಪರಮಾತ್ಮನೆ ||೨೯೮||


ನರಜನ್ಮ ಸಿಕ್ಕಿಹುದು ಪುಣ್ಯದಾ ಶುಭಘಳಿಗೆ

ಅರಸನಾಗಿಹೆ ವಿವೇಚನೆ ಬುದ್ಧಿಗಳಿಗೆ

ವಿರಮಿಸದೆ ನಡೆ ಮುಂದೆ ಸತ್ಯದಾ ದಾರಿಯಲಿ

ಸಿರಿಪತಿಯ ಧ್ಯಾನಿಸುತ ~ ಪರಮಾತ್ಮನೆ ||೨೯೯||


ದಿನಮಣಿಯು ಚಂದಿರಗೆ ಕೊಟ್ಟಿರುವ ಸುಡುಬಿಸಿಲ

ತನಿಯಾಗಿಸುತ ಜೊನ್ನವನು ಸುರಿದ ನಗುತ |

ನಿನಗೆ ನೋವೇ ಆಗಿರಲಿ ನಗುವ ಹಂಚುತಿರು      

ಘನತೆಪಡೆವುದು ಜನುಮ ~ ಪರಮಾತ್ಮನೆ ||೩೦೦||

Thursday, August 18, 2022

ಮುಕ್ತಕಗಳು - ೫೪

ಪೊಂಗದಿರು ಸುರಿಯುತಿದೆ ಆಗಸದ ಮಡಿಲಿಂದ

ಚಂಗದಿರ ನಡೆಸುತಿರೆ ಸಪ್ತಾಶ್ವ ರಥವ |

ತಂಗದಿರ ಮರೆಯಾದ ನಾಚಿಕೆಯ ಮುಸುಕಿನಲಿ

ರಂಗು ಬಂದಿದೆ ಬುವಿಗೆ ~ ಪರಮಾತ್ಮನೆ ||೨೬೬||


ನಿಶೆಯ ನಶೆಯಲ್ಲಿ ಮುಳುಗಿಹ ಇಹದ ಜಗಕೆಲ್ಲ

ಉಷೆಯು ಕಳೆಯುವಳು ನಿದಿರೆಯ ಮಾದಕತೆಯ |

ಭಿಷಜ ಜಾಡ್ಯವ ಕಳೆಯೆ ಓಷಧಿಯ ನೀಡುವೊಲು

ಉಷೆಯು ಕೊಡುವಳು ರವಿಯ ~ ಪರಮಾತ್ಮನೆ ||೨೬೭||

ಭಿಷಜ = ವೈದ್ಯ


ಅಮ್ಮನೊಲು ಪೊರೆಯುವ ಪ್ರಕೃತಿಯೇ ಇತ್ತಿರುವ

ನಮ್ಮದೇ ಪರಿಸರವು ನಮ್ಮ ಮನೆಯಂತೆ |

ಸುಮ್ಮನೇ ಹಾಳ್ಗೆಡವಿ ತಿಪ್ಪೆಯನು ಮಾಡಿದರೆ

ಗುಮ್ಮನಂತಾಗುವುದು ~ ಪರಮಾತ್ಮನೆ || ೨೬೮||


ಮಗುವಿನಾ ನಗೆಗಿಂತ ಹಿರಿಮದ್ದು ಉಂಟೇನು

ದುಗುಡ ದುಮ್ಮಾನಗಳ ಕಳೆಯುವುದು ಚಣಕೆ |

ಜಗದ ಕೋಟಲೆಗಳೇ ಕಾಡಿರಲು ಎಡೆಬಿಡದೆ

ಮಗುವಂತೆ ನಕ್ಕುಬಿಡು ~ ಪರಮಾತ್ಮನೆ ||೨೬೯||


ಅನೃತ ರಾಗದ್ವೇಷ ಅತಿಕಾಮ ಮದಗಳೇ

ಅನವರತ ಮನುಜನನು ಬಗ್ಗುಬಡಿ ದಿಹವು |

ಮನಗಳಿಗೆ ಕಿಲುಬು ಹಿಡಿಸುವ ಆಮ್ಲಗಳಿವೆಲ್ಲ

ಮನವ ತೊಳೆ ಕಿಲುಬ ಕಳೆ ~ ಪರಮಾತ್ಮನೆ ||೨೭೦||

Thursday, August 4, 2022

ಮುಕ್ತಕಗಳು - ೩೧

ದುರುಳರನು ದೂರವಿಡು ಮರುಳರಲಿ ಮರುಕವಿಡು

ಕರುಳಬಳ್ಳಿಗಳ ನೀರುಣಿಸಿ ಬೆಳೆಸುತಿರು |

ಪರರಲ್ಲಿ ನೇಹವಿಡು ಜಂತುಗಳ ಕಾಪಾಡು

ಪರಭಾರೆ ಮಾಡದೆಲೆ ~ ಪರಮಾತ್ಮನೆ ||೧೫೧||


ಹಸಿದು ಬಂದವಗೆ ತುತ್ತನ್ನವನು ನೀಡುವುದು

ಕುಸಿದು ಕುಳಿತವಗೆ ಹೆಗಲಿನ ಆಸರೆಯನು |

ತುಸು ನೀರು ಬಾಯಾರಿ ಬಂದವಗೆ ತಪ್ಪದೆಲೆ

ಜಸದಾದ ಸಂಸ್ಕೃತಿಯು ಪರಮಾತ್ಮನೆ ||೧೫೨||


ಜೊತೆಯಲ್ಲಿ ನೆರಳಂತೆ ಕಷ್ಟದಲಿ ಹೆಗಲಂತೆ

ಕಥೆಯಲ್ಲಿ ನಾಯಕಿಯು ಈ ನನ್ನ ಕಾಂತೆ |

ಚತುರಮತಿ ಸಂಸಾರ ಜಂಜಾಟ ಬಿಡಿಸುವಲಿ

ಸತಿಯೀಕೆ ಸರಸತಿಯು ಪರಮಾತ್ಮನೆ ||೧೫೩||


ರಾಜಕೀಯದ ಮುಸುಕಿನಲಿ ಕಳ್ಳಕಾಕರಿಗೆ

ಮೋಜಿನಲಿ ರಾಜನೊಲು ಬದುಕುವಾ ಆಸೆ |

ರಾಜಧರ್ಮವನರಿತವರು ಅಲ್ಲ, ದೇಶವನು

ಬಾಜಿಯಲಿ ಕಳೆಯುವರು ಪರಮಾತ್ಮನೆ ||೧೫೪||


ಮಗುವೆಂಬ ಮಲ್ಲಿಗೆಯ ಮುಗ್ಧನಗು ಘಮಘಮವು

ನಗುವಳಿಯದಿರಲಿ ಮಗು ಬೆಳೆದಂತೆ ನಿತ್ಯ |

ಜಗದ ಕಲ್ಮಶಗಳೇ ಅಳಿಸುವವು ನಗುವನ್ನು

ನಗದಂತೆ ನಗುವ ಪೊರೆ ~ ಪರಮಾತ್ಮನೆ ||೧೫೫||

Monday, July 11, 2022

ಮುಕ್ತಕಗಳು - ೨೧

ಮಾರಾಟವಾಗುತಿವೆ ಶಾಲುಪೇಟಗಳಿಂದು

ಕೋರಿದವರಿಗೆ ಮಕುಟವಾಗುತಿದೆ ಪೇಟ

ಮಾರಾಟವಾಗುತಿವೆ ವೇದಿಕೆಯ ಮಧ್ಯದಲಿ

ಜೋರಿನಾ ವ್ಯಾಪಾರ ಪರಮಾತ್ಮನೆ ||೧೦೧||


ನಗುನಗುತಲಿರಬೇಕು ನವಸುಮವು ಅರಳುವೊಲು 

ಮಗುವಿನಾ ನಗುವಂತೆ ಪರಿಶುದ್ಧವಾಗಿ |

ಬಿಗಿದ ಮೊಗಗಳ ಸಡಿಲಗೊಳಿಸಿ ನೋವ ಮರೆಸಲು

ನಗುವೆ ನೋವಿಗೆ ಮದ್ದು ಪರಮಾತ್ಮನೆ ||೧೦೨||


ತಪ್ಪು ಮಾಡದವರಾರುಂಟು ಜಗದಲಿ ತಮ್ಮ

ತಪ್ಪನೊಪ್ಪಿಕೊಳುವವರತಿವಿರಳವಿಹರು |

ತಪ್ಪನಿತರರ ಮುಡಿಗೆ ಮುಡಿಸುವರು ಬಲುಬೇಗ

ತಪ್ಪ ನುಡಿದಿರೆ ತಾಳು ಪರಮಾತ್ಮನೆ ||೧೦೩||

ತಾಳು = ಸಹಿಸಿಕೋ


ರೋಗಿಗಳ ನೋವಿನಲಿ ನೋಟು ಕಂಡರು ಕಂತೆ

ಯೋಗವೋ ಅತಿಧನದ ಮೋಹವೋ ಕಾಣೆ |

ಜೋಗುಳವ ಹಾಡುವರೆ ಚಾಟಿ ಹಿಡಿದಂತಾಯ್ತು

ಹೋಗುತಿವೆ ಜೀವಗಳು ಪರಮಾತ್ಮನೆ ||೧೦೪||


ಹಿಂದಿನದ ನೆನೆಯುತಿರೆ ನೋವು ಮರುಕಳಿಸುವುದು

ಮುಂದಿನದ ಯೋಚಿಸಲು ಮೂಡುವುದು ಭಯವು |

ಇಂದು ನಮ್ಮೊಂದಿಗಿರೆ ತಪ್ಪು ಮಾಡದಿರೋಣ

ಎಂದಿಗೂ ಸರಿದಾರಿ ಪರಮಾತ್ಮನೆ ||೧೦೫||

Sunday, July 10, 2022

ಮುಕ್ತಕಗಳು - ೩

ಯಶವ ಏನೆಂಬೆ? ಧನ, ವಿದ್ಯೆ, ಸಿರಿಸಂಪತ್ತೆ?

ಪಶು, ಭೂಮಿ, ಅಧಿಕಾರ, ಯೌವ್ವನದ ಬಲವೆ? |

ದಶಕಂಠ ಹೊಂದಿದ್ದೆಲ್ಲವೂ ಗೆಲಿಸಿದವೆ?!

ಯಶವ ಗುಣದಲಿ ನೋಡು ~ ಪರಮಾತ್ಮನೆ  ||೧೧||


ಗುಡಿ ಸುತ್ತಿ ಗುಂಡಾರ ಸುತ್ತಿ ದೇವನೊಲಿಸಲು

ಬಿಡದೆ ತೀರ್ಥಗಳ ಸುತ್ತಿಹೆ ಗಾಣದೆತ್ತೆ! |

ಒಡೆಯನನು ಮರೆತಾಗ ಎದೆಯ ಗೂಡಿನಲಿರುವ

ಕೊಡುವನೇ ಪರಮಪದ ~ ಪರಮಾತ್ಮನೆ ||೧೨||


ನಗೆಯ ಮಲ್ಲಿಗೆಯನರಳಿಸು ಸುಗುಣವಂತನೇ

ಮಗುವಂತೆ ನಕ್ಕುಬಿಡು ನೋವುಗಳ ಮರೆಸೆ |

ಸಿಗುವಂತೆ ಸಿಹಿಬೆಲ್ಲ ಬೇವಿನೆಸಳಿನ ಜೊತೆಗೆ

ಸಿಗಲಿ ಬಾಳಲಿ ಸವಿಯು ಪರಮಾತ್ಮನೆ  ||೧೩||


ಕಾವ್ಯಕನ್ನಿಕೆಯ ರಸಗಂಗೆ ಹರಿದಿದೆ ಸದಾ 

ದಿವ್ಯತೆಯ ಬೆಳಗುತಿಹ ದಿವಿನಾದ ಗೊಂಬೆ |

ನವ್ಯತೆಯ ನಗನತ್ತ ಕಾಲವೇ ಕೊಟ್ಟಿಹುದು

ಭವ್ಯತೆಗೆ ಕುಂದಿಲ್ಲ ಪರಮಾತ್ಮನೆ ||೧೪||


ಎಲ್ಲ ಚಪಲಗಳಲ್ಲಿ ನಾಲಿಗೆಯ ಚಪಲವೇ

ಬಲ್ಲಿದರು ಪೇಳಿಹರು ಬಲು ಜಿಗುಟು ಚಪಲ |

ಗಲ್ಲು ಶಿಕ್ಷೆಗೆ ಹೆದರದಿಹ ದುಷ್ಟ ದುರುಳನೊಲು

ಜೊಲ್ಲು ಸುರಿಸುವ ನಾಲ್ಗೆ ಪರಮಾತ್ಮನೆ ||೧೫||

Sunday, May 3, 2020

ನಗುವ ನೀರಾಜನ

ನಿನ್ನ ನಯನದಿ ನೋವೇಕೆ ನಲ್ಲೆ?
ನನ್ನ ನಗುವೇ ನಗಬಾರದೇ?

ನನ್ನ ನಗುವಲಿ ನಿನ್ನ ನಗುವು,
ನಂಬಿಕೆಯಿಟ್ಟು ನಕ್ಕು ನಗಲಿ,
ನಂಜು ನಶಿಸಿ, ನೋವನಳಿಸಿ,
ನಸುನಗಲಿ ನಗುವಿನ ನಸುಕಿಗೆ.

ನವವಧುವಿನೊಲು ನಗುವು ನಾಚಿದೆ,
ನಲ್ನುಡಿಗೆ ನಳಿನ, ನಗುತ ನಕ್ಕಿದೆ.
ನಳನಳಿಸುವ ನಯನದ್ವಯಗಳು,
ನಗೆಯ ನಾದವ ನುಡಿಸಿವೆ.

ನಗೆಯ ನಗವ ನನಗಿತ್ತು ನಲ್ಲೆ,
ನನ್ನ ನಗುವನು ನಗಿಸು ನೀ!
ನನ್ನ ನಗುವಿನ ನರ್ತನವಿಲ್ಲಿ,
ನಿನ್ನ ನಗುವಿನ ನೆರಳಲಿ!

ನನ್ನ ನಗುವಿಗೆ, ನಿನ್ನ ನಗುವಿಗೆ,
ನಕ್ಕು ನಲಿಯಲಿ ನಿಕೇತನ.
ನಮ್ಮ ನಗುವಿಗೆ ನಿಷ್ಪತ್ತಿಯಾಗಲಿ,
ನೂರು ನಗೆಗಳ ನೀರಾಜನ!