Showing posts with label ಗೀತೆ. Show all posts
Showing posts with label ಗೀತೆ. Show all posts

Monday, August 15, 2022

ಮುಕ್ತಕ - ೩೮

ಅಡೆತಡೆಯ ಬಳಸುತ್ತ ಹರಿಯುವುದು ಕಿರುಝರಿಯು

ಒಡೆದು ನುಗ್ಗುವುದು ತಡೆಯುವುದನ್ನು ಜಲಧಿ |

ತಡೆವ  ಶಕ್ತಿಯನರಿತು ಹೆಜ್ಜೆಯಿಡು ಬದುಕಿನಲಿ

ನಡೆಯಲ್ಲಿ ಜಾಗ್ರತೆಯು ~ ಪರಮಾತ್ಮನೆ ||೧೮೬||


ಭೂ ರಂಗಮಂಚದಲಿ ದೊರೆತೊಂದು ಪಾತ್ರವಿದು

ಭಾರಿಯಾ ಸ್ವಾಗತಕೆ ಕಥೆಯನ್ನೆ ಮರೆತೆ |

ಓರಿಗೆಯ ಪಾತ್ರಗಳ ನಟನೆಗೆ ಸ್ಪಂದಿಸುತ

ಜೋರಿನಲಿ ನಟಿಸುತಿಹೆ ಪರಮಾತ್ಮನೆ ||೧೮೭||


ಅವಕಾಶ ದೊರೆಯುವುದು ನೀ ಶ್ರಮವ ಹಾಕಿರಲು

ನವನೀತ ತೇಲಿಬಂದಂತೆ ಅಳೆಯೊಳಗೆ |

ಎವೆತೆರೆದು ಕಾಯುತ್ತ ಶಾಖವನು ನೀಡಿದರೆ

ಹವಿಯಾಯ್ತು ನವನೀತ ~ ಪರಮಾತ್ಮನೆ ||೧೮೮||

ಅಳೆ = ಮಜ್ಜಿಗೆ ಹವಿ = ತುಪ್ಪ


ತಿನ್ನಲಿರದಿರೆ ಉದರ ಪೋಷಣೆಯ ಚಿಂತೆಗಳು

ಅನ್ನವಿರೆ ಬಟ್ಟೆಬರೆಗಳ ಚಿಂತೆ, ಮುಂದೆ |

ಹೊನ್ನು, ತಲೆಸೂರು, ಜಂಗಮವಾಣಿ...ಮತ್ತೆಷ್ಟೊ

ಬೆನ್ನುಬಿಡ ಬೇತಾಳ ಪರಮಾತ್ಮನೆ ||೧೮೯||


ಸುಲಭವದು ಎಲ್ಲರಿಗೆ ಭಕ್ತಿಯೋಗದ ಮಾರ್ಗ

ಕೆಲಸವೇ ಪೂಜೆಯೆನೆ ಕರ್ಮದಾ ಮಾರ್ಗ |

ಕಲಿತು ಮಥಿಸುವವರಿಗೆ ಜ್ಞಾನಯೋಗದ ಮಾರ್ಗ

ತಿಳಿಸಿರುವೆ ಗೀತೆಯಲಿ ಪರಮಾತ್ಮನೆ ||೧೯೦||

Sunday, July 10, 2022

ಮುಕ್ತಕಗಳು - ೪

ಶಿಶು ರಚ್ಚೆ ಹಿಡಿವಂತೆ ಪಾರಿತೋಷಕದಾಸೆ

ಪಶುಗಳೂ ಕೋರುತಿವೆ ಶಾಲು ಪೇಟಗಳ |

ಸಶರೀರವಾಗಿ ನಾಕಕ್ಕೆ ತೆರಳುವ ಆಸೆ

ನಶೆಯ ಇಳಿಸಯ್ಯ ನೀ ಪರಮಾತ್ಮನೆ ||೧೬||


ಇಂದು ಮಂಜಮ್ಮ ಜೋಗತಿಗೆ ಮುಕ್ತಕಸೇವೆ

ಮಂದ್ರದಲಿ ಉಳಿಯದೆಯೆ ಮೇಲಕ್ಕೆ ಎದ್ದೆ |

ಕಂದೀಲು ಬೆಳಕಿನಲಿ ಹೊಳೆಯುವಾ ವಜ್ರದೊಲು

ಬಂದಿಹುದು ಪದುಮಸಿರಿ ಪರಮಾತ್ಮನೆ ||೧೭||


ಗೀತೆಯಲಿ ನೀ ಕೊಟ್ಟೆ ಮೂರು ಮಾರ್ಗಗಳೆಮಗೆ

ಮಾತೆಯೊಲು ಮಮತೆಯಲಿ ಮೃಷ್ಟಾನ್ನದಂತೆ |

ಕೂತು ಕಳೆಯದೆ ಸಮಯ ಓಡುತ್ತ ಸಾಗುವೆನು

ಸೋತೆನೆಂದರೆ ಕೇಳು ಪರಮಾತ್ಮನೆ ||೧೮||


ದೇಶವನು ಆಳುವರ ಜನರಾರಿಸಿದ್ದರೂ

ಆಶಯಗಳೆಲ್ಲ ಪುಡಿಮಣ್ಣಾಗುತಿಹುದು |

ಪೋಷಿಸಿದ ಪಶುವನ್ನು ಕಟುಕನಿಗೆ ಒಪ್ಪಿಸಿರೆ

ದೂಷಿಪುದು ಯಾರನ್ನು ಪರಮಾತ್ಮನೆ ||೧೯||


ಸಂಪತ್ತು ಸಂಬಂಧ ನಂಟೇನು ಜಗದಲ್ಲಿ?

ಸಂಪತ್ತಿಗೋಸ್ಕರದ ಸಂಬಂಧ ಒಡಕು |

ಸಂಪತ್ತ ಕಡೆಗಣಿಸೊ ಸಂಬಂಧ ಕೊನೆತನಕ

ತಂಪಿನಾ ಸಂಬಂಧ ಪರಮಾತ್ಮನೆ ||೨೦||