Showing posts with label ಚಿಂತೆ. Show all posts
Showing posts with label ಚಿಂತೆ. Show all posts

Monday, August 15, 2022

ಮುಕ್ತಕ - ೩೮

ಅಡೆತಡೆಯ ಬಳಸುತ್ತ ಹರಿಯುವುದು ಕಿರುಝರಿಯು

ಒಡೆದು ನುಗ್ಗುವುದು ತಡೆಯುವುದನ್ನು ಜಲಧಿ |

ತಡೆವ  ಶಕ್ತಿಯನರಿತು ಹೆಜ್ಜೆಯಿಡು ಬದುಕಿನಲಿ

ನಡೆಯಲ್ಲಿ ಜಾಗ್ರತೆಯು ~ ಪರಮಾತ್ಮನೆ ||೧೮೬||


ಭೂ ರಂಗಮಂಚದಲಿ ದೊರೆತೊಂದು ಪಾತ್ರವಿದು

ಭಾರಿಯಾ ಸ್ವಾಗತಕೆ ಕಥೆಯನ್ನೆ ಮರೆತೆ |

ಓರಿಗೆಯ ಪಾತ್ರಗಳ ನಟನೆಗೆ ಸ್ಪಂದಿಸುತ

ಜೋರಿನಲಿ ನಟಿಸುತಿಹೆ ಪರಮಾತ್ಮನೆ ||೧೮೭||


ಅವಕಾಶ ದೊರೆಯುವುದು ನೀ ಶ್ರಮವ ಹಾಕಿರಲು

ನವನೀತ ತೇಲಿಬಂದಂತೆ ಅಳೆಯೊಳಗೆ |

ಎವೆತೆರೆದು ಕಾಯುತ್ತ ಶಾಖವನು ನೀಡಿದರೆ

ಹವಿಯಾಯ್ತು ನವನೀತ ~ ಪರಮಾತ್ಮನೆ ||೧೮೮||

ಅಳೆ = ಮಜ್ಜಿಗೆ ಹವಿ = ತುಪ್ಪ


ತಿನ್ನಲಿರದಿರೆ ಉದರ ಪೋಷಣೆಯ ಚಿಂತೆಗಳು

ಅನ್ನವಿರೆ ಬಟ್ಟೆಬರೆಗಳ ಚಿಂತೆ, ಮುಂದೆ |

ಹೊನ್ನು, ತಲೆಸೂರು, ಜಂಗಮವಾಣಿ...ಮತ್ತೆಷ್ಟೊ

ಬೆನ್ನುಬಿಡ ಬೇತಾಳ ಪರಮಾತ್ಮನೆ ||೧೮೯||


ಸುಲಭವದು ಎಲ್ಲರಿಗೆ ಭಕ್ತಿಯೋಗದ ಮಾರ್ಗ

ಕೆಲಸವೇ ಪೂಜೆಯೆನೆ ಕರ್ಮದಾ ಮಾರ್ಗ |

ಕಲಿತು ಮಥಿಸುವವರಿಗೆ ಜ್ಞಾನಯೋಗದ ಮಾರ್ಗ

ತಿಳಿಸಿರುವೆ ಗೀತೆಯಲಿ ಪರಮಾತ್ಮನೆ ||೧೯೦||

Monday, July 11, 2022

ಮುಕ್ತಕಗಳು - ೨೪

ಚಿಂತೆಯೊಂದಿರೆ ಮನದಿ ನಿಶ್ಚಿಂತ ಮಾನವನು

ಚಿಂತೆಯಿಲ್ಲದಿರವನು ಜಲತೊರೆದ ಮೀನು |

ಸಂತೆಯಾಗುವುದು ಮನ ಚಿಂತೆಯಿಲ್ಲದರಂತು

ಚಿಂತೆ ಚಿಂತನೆ ತರಲಿ ಪರಮಾತ್ಮನೆ ||೧೧೬||


ಅಮ್ಮನೆನ್ನುವ ನುಡಿಯ ಒಮ್ಮೆ ನುಡಿದರೆಸಾಕು

ಒಮ್ಮೆಲೇ ಮೈಯೆಲ್ಲ ಪುಳಕಿತದ ಭಾವ

ಕಮ್ಮಿಯಾಗದು ಹೆತ್ತೊಡಲ ಮಮತೆ ಮುದ್ದಿಸುವ

ಅಮ್ಮ ನಿನಗಿರುವಳೇ ಪರಮಾತ್ಮನೆ ||೧೧೭||


ನಾವು ಸೂತ್ರದ ಗೊಂಬೆಗಳು ಸಂಶಯವೆ ಇಲ್ಲ

ಜೀವವಿಲ್ಲದ ತೊಗಲು ಗೊಂಬೆಗಳು ಅಲ್ಲ |

ದೇವನರುಹಿಹ ವಿಧಿಯ ಸೂತ್ರ ಹರಿಯುವ ವಿದ್ಯೆ

ಜೀವನಕೆ ಸೂತ್ರವಿದು ಪರಮಾತ್ಮನೆ ||೧೧೮||


ನಮ್ಮ ತಪ್ಪೆಲ್ಲವಕೆ ಬೆನ್ನೊಡ್ಡಿ ಕುಳಿತಾಗ

ಸುಮ್ಮನವು ಜಗದಿಂದ ಮರೆಯಾಗುವವೇ |

ನಮ್ಮ ಜಗ ಕುರುಡಲ್ಲ ಎಣಿಸುವುದು ತಪ್ಪುಗಳ

ಸುಮ್ಮನೇಕೀ ನಟನೆ ಪರಮಾತ್ಮನೆ ||೧೧೯||


ಇರುಳು ಕಳೆದಾ ಮೇಲೆ ಹಗಲು ಬರಲೇಬೇಕು

ಸುರಿಯುತಿಹ ಮಳೆಯೊಮ್ಮೆ ನಿಲ್ಲಲೇ ಬೇಕು |

ಧರಣಿಯೊಳು ಇದು ಸತ್ಯ ಕಾಲಮಹಿಮೆಯ ಸೂತ್ರ

ಕೊರಗದೆಲೆ ಕಾಯುವೆನು ಪರಮಾತ್ಮನೆ ||೧೨೦||


Sunday, July 10, 2022

ಮುಕ್ತಕಗಳು - ೬

ಏಕೆ ರಕ್ಷಿಸಿ ವರಾಹನೆ ಕರಪಿಡಿದೆಯೆನ್ನ  

ಸಾಕಾಯ್ತು ಬವಣೆ ಮನುಜನಿಗೆ ಮನೆಯಾಗಿ |

ಬೇಕು ಬೇಡಗಳು ಬರೆ ಹಾಕುತಿವೆ ದಿನನಿತ್ಯ

ನೂಕಿಬಿಡು ಸಾಗರಕೆ ಪರಮಾತ್ಮನೆ ||೨೬||


ಇಂದು ರಮೆ ಒಲಿದಿರಲು ನಿಶಿತಮತಿಯಾಗಿರಲು

ಹೊಂದುವೆನು ಎಲ್ಲವನು ಎನಬೇಡ  ಬಂಧು |

ಮುಂದೆ ಸುಖ ಪಡೆಯಲಿಕೆ ದಾನವನು ಮಾಡಿದವ

ಮಂದಮತಿ ತಾನಲ್ಲ ಪರಮಾತ್ಮನೆ  ||೨೭||


ಚಿಂತೆಯೇ ಚಿಗುರುವುದು ಬೆಳೆದು ಮರವಾಗುವುದು

ಕುಂತಿರಲು ಸುಮ್ಮನೇ ಸೋಮಾರಿ ಗಂಡು |

ಬಂತು ಮಂಡೆಯಲಿ ಬರೆ ದೆವ್ವಗಳ ಕಾರ್ಖಾನೆ

ಕಂತೆ ಕೆಲಸವ ನೀಡು ಪರಮಾತ್ಮನೆ ||೨೮||


ದೇಹದಣುಗಳ ಹಿಂಪಡೆವೆ ಬದಲಿಸುತ ನಿತ್ಯ 

ಮೋಹಗಳ ಹಿಂಪಡೆದು ಮೋಕ್ಷವನು ನೀಡು |

ದಾಹಗಳ ಹಿಂಪಡೆದು ನಿನ್ನ ದಾಸನ ಮಾಡು

ದೇಹಿ ಎನ್ನುವೆ ತಂದೆ ಪರಮಾತ್ಮನೆ ||೨೯||


ಕೋಪವೇ ಬಂದಿರಲಿ ಮನಸುಗಳು ಬೆಂದಿರಲಿ

ತಾಪದಾ ನುಡಿ ಬೇಡ ಆತುರವು ಬೇಡ

ಜೋಪಡಿಗೆ ಬೆಂಕಿ ಹಚ್ಚುವುದಾವ ಲಾಭಕ್ಕೆ

ಆಪತ್ತು ಬೇಡೆಮಗೆ ಪರಮಾತ್ಮನೆ ||೩೦||