Showing posts with label ದೇಹ. Show all posts
Showing posts with label ದೇಹ. Show all posts

Thursday, August 18, 2022

ಮುಕ್ತಕಗಳು - ೪೯

ಗೆಳೆತನವೆ ಸಂಬಂಧಗಳಲಿ ಅತಿ ಉತ್ತಮವು

ಎಳೆಗಳಿರದಿರೆ ಆಸ್ತಿ ಅಂತಸ್ತುಗಳದು |    

ಸೆಳೆಯುವವು ಬುದ್ಧಿಮನಗಳು ಈರ್ವರನು ಸನಿಹ

ಪುಳಕಗೊಳಿಸುತ ಮನವ  ಪರಮಾತ್ಮನೆ ||೨೪೧||


ಮರೆವೊಂದು ವರದಾನ ಮರೆಯಲಿಕೆ ನೋವುಗಳ

ಹೊರೆಯೆಲ್ಲ ಇಳಿದಾಗ ನಸುನಗುವು ಮೂಡೆ |

ಕರಗಿಹೋಗಲಿ ಹೆಪ್ಪುಗಟ್ಟಿರುವ ಹಿಮಪಾತ

ಮರೆಯಾಗಿ ಮೋಡಗಳು ~ ಪರಮಾತ್ಮನೆ ||೨೪೨||


ದುಡುಕದಿರು ಆತುರದಿ ಕೋಪದಾ ತಾಪದಲಿ

ಎಡವದಿರು ಸುರಿಯುವುದು ನಿನ್ನದೇ ರಕುತ |

ಅಡಿಯಿಡುವ ಮುನ್ನ ಯೋಚಿಸು ಒಂದೆರಡು ಘಳಿಗೆ

ಕೊಡೆ ಮಾಡು ಬುದ್ಧಿಯನು ~ ಪರಮಾತ್ಮನೆ ||೨೪೩||


ದಣಿಸಿದರೆ ಮನವನ್ನು ಸೋಲುವುದು ದೇಹವದು

ಮಣಿಸಿದರೆ ದೇಹವನು ಹೊಮ್ಮುವುದು ಹುರುಪು |

ಗಣಿಯಂಥ ಕಾಯವಿದು ದೇವನದ್ಭುತ ಸೃಷ್ಟಿ

ಚಣ ಸಾಕೆ ಅದನರಿಯೆ ~ ಪರಮಾತ್ಮನೆ ||೨೪೪||


ಮರೆಯೋಣ ತಪ್ಪುಗಳ ಬಂಧುಮಿತ್ರರ ನಡುವೆ

ಬೆರೆಯೋಣ ಸಂತಸದಿ ಬದುಕಿನಲಿ ನಲಿಯೆ |

ಮೆರೆಯೋಣ ಗೆಳೆತನದ ಸವಿಫಲದ ರುಚಿಯನ್ನು

ಮೆರೆವಂತೆ ಕಾಗೆಗಳು ~ ಪರಮಾತ್ಮನೆ ||೨೪೫||

ಮುಕ್ತಕಗಳು - ೪೮

ಪ್ರೀತಿಯೆಂದರೆ ಅದುವೆ ವ್ಯವಹಾರ ಅಲ್ಲಣ್ಣ

ಪಾತಕವು ಬದಲಿಗೇನಾದರೂ ಬಯಸೆ |

ಏತದಂತಿರಬೇಕು ಅಕ್ಕರೆಯ ಹಂಚಲಿಕೆ

ಜೋತುಬೀಳದೆ ಫಲಕೆ ~ ಪರಮಾತ್ಮನೆ ||೨೩೬||


ಮರೆಯದಿರು ನೇಹಿಗರ ತೊರೆಯದಿರು ಹಿರಿಯರನು

ತೊರೆದೆಯಾದರೆ ತೊರೆದೆ ಜೀವನದ ಸಿರಿಯ |

ಕೊರೆಯುವುದು ಮನವ ಜೀವನದ ಕೊನೆಗಾಲದಲಿ

ಬರಿದೆ ಹಲುಬುವೆ ನೀನು ~ ಪರಮಾತ್ಮನೆ ||೨೩೭||


ಉಚಿತದಲಿ ಸಿಕ್ಕಿರಲು ದೇಹವದು ನಮಗೆಲ್ಲ

ಉಚಿತವೇ ದೇಹವನು ಕಡೆಗಣಿಸೆ ನಾವು |

ರಚನೆಯಾಗಿದೆ ದೇಹ ಸೂಕ್ತದಲಿ ಸಾಧನೆಗೆ

ಶಚಿಪತಿಗೆ ಸುರಕರಿಯು ~ ಪರಮಾತ್ಮನೆ ||೨೩೮||


ಜಾಲತಾಣಗಳು ಜನಗಳ ದಾರಿ ತಪ್ಪಿಸಿವೆ

ಹೊಲಸನ್ನು ತುಂಬಿಸುತ ತಲೆಯ ತುಂಬೆಲ್ಲ |

ಕಲಿಸುತಿವೆ ಕೆಲವೊಮ್ಮೆ ಸುಜ್ಞಾನ ಪಾಠಗಳ

ಅಲಗು ಎರಡಿರೊ ಖಡ್ಗ ~ ಪರಮಾತ್ಮನೆ ||೨೩೯||


ಕಪಟ ನಾಟಕವನಾಡುವ ಚತುರರೇ ಕೇಳಿ

ಉಪದೇಶ ಠೀವಿಯಲಿ ನಾಟಕದ ವೇಷ |

ಜಪಮಾಲೆ ಹಿಡಿದವರು ಎಲ್ಲ ಸಾತ್ವಿಕರಲ್ಲ

ಅಪಜಯವು ನಿಮಗಿರಲಿ ~ ಪರಮಾತ್ಮನೆ  ||೨೪೦||

Tuesday, August 16, 2022

ಮುಕ್ತಕಗಳು - ೪೪

ಶರಣು ಶರಣೆಂದವರು ಶರಣರೇನೆಲ್ಲರೂ

ಪರಮೇಶ್ವರನೆ ಶರಣು ಬಾರದಿರೆ ನಿನಗೆ |

ಭರಣಿಯಲಿ ಕಲ್ಲುಗಳು ಮಾಡಿದರೆ ಸಪ್ಪಳವ

ಅರಿಯಲಾಗದು ಅರ್ಥ ಪರಮಾತ್ಮನೆ ||೨೧೬||


ಚಕ್ರಗಳ ಹೊಂದಿರುವ ವಾಹನವು ಈ ದೇಹ

ವಕ್ರಪಥದಲಿ ಚಲಿಸಿ ದಾರಿ ತಪ್ಪಿಹುದು |

ಸಕ್ರಿಯದಿ ಆಧ್ಯಾತ್ಮ ದಿಕ್ಸೂಚಿ ನೋಡಿ ನಡೆ

ಚಕ್ರಿ ತಾ ಮೆಚ್ಚುವನು ~ ಪರಮಾತ್ಮನೆ ||೨೧೭||


ಮೌನ ಮಾತಾಡಿದರೆ ಹಲವಾರು ಅರ್ಥಗಳು

ಜೇನಿನಾ ಮಧುರತೆಯು, ಕೋಪದಾ ತಾಪ |

ಬೋನದಾ ತೃಪ್ತಿ, ಕ್ಷಮೆಯ ತಂಪು ನಲ್ನುಡಿಯು

ಮೌನಕ್ಕೆ ಭಾಷೆಯಿದೆ ~ ಪರಮಾತ್ಮನೆ ||೨೧೮||


ಕಂಡಂಥ ಕನಸುಗಳ ಧರೆಗಿಳಿಸಬಹುದಲ್ಲ

ಗಂಡೆದಯ ಕಲಿಗಳೊಲು ಬೆನ್ನು ಹತ್ತಿದರೆ |

ದಂಡವಾಗದೆ ಇರಲಿ ಕನಸುಗಳ ಬೇಟೆಗಳು

ಉಂಡು ಮಲಗುವುದೇಕೆ ~ ಪರಮಾತ್ಮನೆ ||೨೧೯||


ಬರಿದಾಗದಿರಲಿ ಸಿರಿ ಕರೆದು ದಾನವನೀಯೆ

ಕರಗಳೆಂಟಾಗೆ ಸರಿ ಸೇವೆ ಮಾಡುವಗೆ |

ಮರಿಮಕ್ಕಳಿರಬೇಕು ಪರಹಿತವ ಕೋರುವಗೆ

ಹರಸೆನ್ನ ಕೋರಿಕೆಯ ಪರಮಾತ್ಮನೆ ||೨೨೦||