Friday, May 15, 2020

ಕೊರೋನಾ ಕಲ್ಯಾಣ


ಕೂಡಿದ ಹೃದಯಗಳೆರಡು,
ಹಡೆದಾ ಜೋಡಿಗಳೆರಡು,
ಹತ್ತಿರದವರೊಂದಿಪ್ಪತ್ತು,
ಬೇರೆ ಬೇಡ ಮದುವೆಯ ಹೊತ್ತು!

ಮೂರ್ಗಂಟಿಗೆ ಬೇಕೆ ಸಾವಿರ ಸಾಕ್ಷಿ?
ಹೂಂ ಎಂದರೆ ಸಾಕು ಮನಸಿನ ಪಕ್ಷಿ!
ನೂರಾರು ಅತಿಥಿಗಳು ಬೇಕಿಲ್ಲ,
ಸಹೃದಯರು ಹತ್ತೇ ಸಾಕಲ್ಲ!

ಕಾಣಿಕೆ ಬೇಡ, ತೋರಿಕೆ ಬೇಡ,
ದುಡಿದ ಗಂಟಿನ ಸೋರಿಕೆ ಬೇಡ!
ಊಟಕೆ ಇರಲಿ ಉಪ್ಪಿನಕಾಯಿ,
ಮದುವೆಲಿ ಇರಲಿ ಮನಸಿಗೆ ಹಾಯಿ!

ಕಳಿಸಲಿ ಎಲ್ಲರೂ ಶುಭಹಾರೈಕೆ,
ವೈಫೈ ಮಾಡಲಿ ಪೂರೈಕೆ.
ಹೀಗೇ ಆಗಲಿ ಮದುವೆಗಳು,
ನಗುತಾ ಇರಲಿ ಬದುಕುಗಳು.

ಸಮಾಜ ಸುಧಾರಕ ಕೊರೋನಾ,
ಹಿಡಿತಕೆ ತಂದಿದೆ ಖರ್ಚನ್ನ!
ಪಾಯಸ, ಹೋಳಿಗೆ, ಚಿತ್ರಾನ್ನ,
ಆಗೇ ಹೋಯಿತು ಕಲ್ಯಾಣ!

Thursday, May 14, 2020

ವಿಶ್ವ ದಾದಿಯರ ದಿನ

ಮಾತೆಯ ಮಮತೆ,
ಸೋದರಿ ಕ್ಷಮತೆ,
ಮಡದಿಯ ಕಾಳಜಿ,
ಎಲ್ಲವೂ ನಿಮ್ಮಲಿ ದಾದಿ!

ತಾ ಉರಿದು ಬೆಳಕನೀವ,
ಮೇಣದ ಬತ್ತಿಯ ತರಹ,
ರೋಗಿಯ ಬಳಲಿ ಬಂದ,
ಆರದ ಬೆಳಕಿನ ಬಂಧ!

ಮಮತೆಯ ಕರದಲಿ,
ಕರುಣೆಯ ಸ್ವರದಲಿ,
ಅಡಗಿದೆ ಅಮೂಲ್ಯ ಸೇವೆ,
ಅದೃಷ್ಟವಂತರು ನಾವೇ!

ಇಂದಿನ ದಿನವೇ ಸುದಿನವು,
ಕರುಣೆಯು ಹುಟ್ಟಿದ ದಿನವು!
ಸ್ವೀಕರಿಸಿ ಪ್ರೀತಿಯ ಸಲಾಮ್,
ಹಚ್ಚುತ್ತಿರಿ ನಗೆಯ ಮುಲಾಮ್!

Wednesday, May 13, 2020

ನನ್ನಮ್ಮ

ಬೇಡಿದ್ದನ್ನು ನೀಡುವವಳು,
ಏನನ್ನೂ ನಿರೀಕ್ಷಿಸದವಳು,
ಮಮತೆಯ ಮಡಿಲಿವಳು,
ಪ್ರೀತಿಯ ಕೊಡ ಇವಳು!

ಅನ್ನ ನೀಡಿ ಪೊರೆಯುವಳು,
ಜಲವನಿತ್ತು ಹರಸುವಳು,
ಅಕ್ಷಯ ಪಾತ್ರೆ ಇವಳು,
ಕಾಮಧೇನುವೇ ಇವಳು!

ನಮ್ಮೆಲ್ಲ ಕೋಪಗಳ,
ನಗುತ ನುಂಗಿಬಿಡುವಳು.
ನಮ್ಮ ತಪ್ಪು ಕ್ಷಮಿಸುವಳು,
ಮೂಕಳಾಗಿ ಮರಗುವಳು,

ಹಸಿರು ಸೀರೆ ಉಟ್ಟವಳು,
ಬಣ್ಣದ ನಗ ತೊಟ್ಟವಳು,
ಕ್ಷಮಯಾಧರಿತ್ರಿ ನನ್ನಮ್ಮ,
ಭೂಮಿತಾಯಿ ಇವಳಮ್ಮ.

Monday, May 11, 2020

ಅಮ್ಮ

ನನ್ನ ಮೊದಲ ಸ್ಪರ್ಶ ನೀನಮ್ಮ,
ನನ್ನ ಮೊದಲ ಪರಿಚಯ ನೀನಮ್ಮ,
ನಿನ್ನೆದೆಯ ಬಡಿತ ಜೋಗುಳವಮ್ಮ,
ನನ್ನ ಮೊದಲ ತೊದಲು "ಅಮ್ಮ"!

ನನ್ನ ಮೊದಲ ಆಟ ನಿನ್ನೊಟ್ಟಿಗೆ,
ನನ್ನ ಮೊದಲ ಪಾಠ ನಿನ್ನ ನಡಿಗೆ,
ನನ್ನ ಮೊದಲ ತುತ್ತು ನೀನಿಟ್ಟೆ,
ನನ್ನ ಮೊದಲ ಮುತ್ತು ನೀ ಕೊಟ್ಟೆ!

ನನ್ನ ಗೆಲುವೇ ನಿನ್ನ ಗೆಲುವೆಂದೆ,
ನಾನೇ ನಿನ್ನ ಜಗವೆಂದೆ.
ಜಗಕೆ ನನ್ನ ಪರಿಚಯಿಸಿದೆ,
ನನ್ನ ಜಗವ ನೀ ಸೃಷ್ಟಿಸಿದೆ!

ನಾ ಬಿದ್ದಾಗಲೆಲ್ಲ ನೀನತ್ತಿದ್ದೆ,
ನಾ ನಕ್ಕಾಗಲೆಲ್ಲ ನೀ ನಕ್ಕಿದ್ದೆ,
ನನ್ನ ಮೊದಲ ಏಟು ನೀ ತಿಂದೆ,
ನಿನಗಾಗಿ ನಾನೇನು ತಂದೆ?


Sunday, May 10, 2020

ಸದವಕಾಶ

ಅವಕಾಶವಿದು, ಅವಕಾಶವಿದು,
ನಮಗೆಲ್ಲ ಸದವಕಾಶವಿದು!

ತೊರೆದ ಬಂಧುಗಳ ಆಲಂಗಿಸಲು,
ಮುರಿದ ಸಂಬಂಧಗಳ ಬೆಸೆಯಲು,
ಸವಿಕುಟುಂಬದಲ್ಲಿ ಕಲೆಯಲು,
ಹಾಲು, ಜೇನಿನಂತೆ ಬೆರೆಯಲು!

ಮನೆಯ ಆಹಾರ ಮೆಚ್ಚಲು,
ಶಾಖಾಹಾರವ ಒಪ್ಪಲು,
ವಿಷಾಹಾರವ ತೊರೆಯಲು,
ಹಂಸಕ್ಷೀರ ನ್ಯಾಯದೊಲು!

ಧಾರಾವಾಹಿಗಳ ಮರೆಯಲು,
ಮುಚ್ಚಿಟ್ಟ ಪುಸ್ತಕ ತೆರೆಯಲು,
ಸದಭಿರುಚಿಗಳ ಬೆಸಿಕೊಳ್ಳಲು,
ಚಾತಕಪಕ್ಷಿಯ ಆಯ್ಕೆಯೊಲು!

ಹಸಿದ ಹೊಟ್ಟೆಗಳ ತುಂಬಲು,
ನತದೃಷ್ಟರಿಗೆ ಸಹಾಯ ಮಾಡಲು,
ಕರುಣೆ, ಮಮತೆ, ಬೆಳಸಿಕೊಳ್ಳಲು,
ಮಾತೆಯ ಪ್ರೀತಿಯ ಹೃದಯದೊಲು!

ಪರದೇಶದ ಮೋಹವ ಬಿಡಲು,
ಚೀನಿಯ ವಸ್ತು ತ್ಯಜಿಸಲು,
ಭಾರತದಲ್ಲೇ ಸೃಜಿಸಲು,
ಸ್ವಾವಲಂಬನೆಯ ಕೃಷಿ ಮಾಡಲು!

ಕೊರೋನಾ ಕೊಟ್ಟಿದೆ ಅವಕಾಶ,
ಮಾಡೋಣ ರಂಗಕೆ ಪ್ರವೇಶ,
ಹರಸುತಿಹ  ನಮ್ಮ ಪರಮೇಶ,
ಈಗ, ಎಲ್ಲೆಯೇ ಅಲ್ಲ ಆಕಾಶ!







Wednesday, May 6, 2020

ಪುಂಡ ಮಕ್ಕಳು























ನಿಸರ್ಗ ತಾಯ ಮಕ್ಕಳಿವರು
ತುಂಟರು, ತುಡುಗರು,
ಪುಂಡಾಟದಲಿ ಮಗ್ನರು,
ಮೊಂಡಾಟದಲಿ ಶ್ರೇಷ್ಠರು!

ಮಾತೆ ಇತ್ತ ಊಟದಲ್ಲಿ,
ವಿಷವ ಬೆರೆಸಿಕೊಂಡರು.
ದಾಹ ನೀಗೋ ನೀರಿನಲ್ಲಿ,
ಕಸವ ಕಲೆಸಿಕೊಂಡರು.

ಮನಬಂದಂತೆ ಆಡುವರು,
ಪರಿಣಾಮಗಳ ನೋಡರು.
ಆಟ ಆಡುತಲೇ ತಾಯ,
ಎದೆಗೆ ಲಗ್ಗೆಯಿಟ್ಟರು!

ತಾವೇ ಒಡೆಯರೆಂದು ಭ್ರಮಿಸಿ,
ಎಲ್ಲೆ ಮೀರಿ ಕುಣಿದರು,
ಮಾತೆ ಇತ್ತ ಸೂಚನೆಗಳ,
ಧಿಕ್ಕರಿಸಿ ನಡೆದರು.

ಅಗೋ ಗುಮ್ಮ ಎಂದಳು,
ಹೆದರಲಿಲ್ಲ ಮಕ್ಕಳು.
ಕೆಂಗಣ್ಣ ಬಿಟ್ಟಳು,
ಬೆದರಲಿಲ್ಲ ಮಕ್ಕಳು!

ಎನೂ ತೋಚದಾಗಿ ಅವಳು,
ಪಾಠ ಕಲಿಸೆ ಬಯಸಿದಳು.
ಕೊರೋನಾ ಗುಮ್ಮನವಳು,
ಛೂ ಎಂದು ಬಿಟ್ಟಳು!

Sunday, May 3, 2020

ನಗುವ ನೀರಾಜನ

ನಿನ್ನ ನಯನದಿ ನೋವೇಕೆ ನಲ್ಲೆ?
ನನ್ನ ನಗುವೇ ನಗಬಾರದೇ?

ನನ್ನ ನಗುವಲಿ ನಿನ್ನ ನಗುವು,
ನಂಬಿಕೆಯಿಟ್ಟು ನಕ್ಕು ನಗಲಿ,
ನಂಜು ನಶಿಸಿ, ನೋವನಳಿಸಿ,
ನಸುನಗಲಿ ನಗುವಿನ ನಸುಕಿಗೆ.

ನವವಧುವಿನೊಲು ನಗುವು ನಾಚಿದೆ,
ನಲ್ನುಡಿಗೆ ನಳಿನ, ನಗುತ ನಕ್ಕಿದೆ.
ನಳನಳಿಸುವ ನಯನದ್ವಯಗಳು,
ನಗೆಯ ನಾದವ ನುಡಿಸಿವೆ.

ನಗೆಯ ನಗವ ನನಗಿತ್ತು ನಲ್ಲೆ,
ನನ್ನ ನಗುವನು ನಗಿಸು ನೀ!
ನನ್ನ ನಗುವಿನ ನರ್ತನವಿಲ್ಲಿ,
ನಿನ್ನ ನಗುವಿನ ನೆರಳಲಿ!

ನನ್ನ ನಗುವಿಗೆ, ನಿನ್ನ ನಗುವಿಗೆ,
ನಕ್ಕು ನಲಿಯಲಿ ನಿಕೇತನ.
ನಮ್ಮ ನಗುವಿಗೆ ನಿಷ್ಪತ್ತಿಯಾಗಲಿ,
ನೂರು ನಗೆಗಳ ನೀರಾಜನ!