Sunday, June 7, 2020

ನಮ್ಮ ಲೋಕ

ನಮ್ಮಯ ಲೋಕ, ಹೆಮ್ಮಯ ಲೋಕ,
ಎಲ್ಲವ ಮೀರಿದ ಮಾಯಾಲೋಕ!

ಕೋಟಿ ಗ್ರಹಗಳಿಗೆ ಮಕುಟಪ್ರಾಯ,
ನಿತ್ಯನೂತನ ಹರಯದ ಪ್ರಾಯ!
ಜೀವವ ಧರಿಸಿ, ಪ್ರೀತಿಯ ಉಣಿಸುವ,
ಬಣ್ಣದುಡುಗೆಯ ಚೆಲುವರಸಿ!

ವಿಶಾಲ ನಭದಲಿ ಹರಡಿದೆ ಹತ್ತಿ,
ಬಿಸಿಲನು ತಡೆದು ತಣಿಸುವ ಭಿತ್ತಿ.
ದಣಿದ ಬುವಿಗೆ ಕರುಣೆಯ ತೋರಿ,
ದಾಹವ ನೀಗುವ ಅಂಬರ ಪೋರಿ!

ನೀಲಿಯ ಬಾನು, ಹಸುರಿನ ಕಾನು,
ಕಾಡಿನ ಮರದಲಿ ತುಂಬಿದೆ ಜೇನು!
ಕಿವಿಯಲಿ ಗುನುಗಿದೆ ಹಕ್ಕಿಯ ಹಾಡು,
ಹೂಗಳ ಪರಿಮಳ ಸೆಳೆದಿದೆ ನೋಡು!

ಬೆಳಗಿಗೆ ಒಂದು, ರಾತ್ರಿಗೆ ಒಂದು,
ಬಾನನು ಬೆಳಗಿದೆ ಜೋಡಿದೀಪ.
ಏಳು ಬಣ್ಣಗಳ ಬೆಡಗಿನ ರೂಪ,
ರಂಗೋಲಿ‌ ಇಲ್ಲಿ ಇಂದ್ರಛಾಪ!

ಏಳುವ ದಿನಕರ ನಸುಕಿನಲಿ,
ಕುಂಚವು ಸಾವಿರ  ಕರಗಳಲಿ,
ಕೋಟಿ ಚಿತ್ರಗಳ ಬಿಡಿಸುತಲಿ,
ನಿದ್ದೆಗೆ ಜಾರುವ ಸಂಜೆಯಲಿ!

ಬಂದ, ಬಂದ, ರಾತ್ರಿಯ ರಾಜ,
ಬುವಿಗೆ ತಂದ ಹೊಸ ತೇಜ!
ಹಾಲನು ಹೊಯ್ದು, ಎದೆಯನು ತೊಯ್ದು,
ಮರೆಯಾದನು ಮನವನು ಕದ್ದೊಯ್ದು!

ಬಳಕುವ ನದಿಗಳ ಮೈಮಾಟ,
ಸಾಗರದಲೆಗಳ ಜಿದ್ದಿನ ಓಟ!
ಗಿರಿ, ಮೋಡಗಳ ಪ್ರೇಮ ಸಂಘರ್ಷ,
ತಂದಿದೆ ಕೊನೆಗೆ ಹರ್ಷದ ವರ್ಷ!

ಎಲ್ಲಿದೆ ಇಂತಹ ಮಾಯಾಲೋಕ?
ಕಾಣದ ಸ್ವರ್ಗವು ಬೇಕೇಕ?
ಇದ್ದರೂ ಗ್ರಹಗಳು  ಕೋಟಿ, ಕೋಟಿ,
ಸುಂದರ ಬುವಿಗೆ ಯಾರು ಸಾಟಿ?!


Saturday, June 6, 2020

ನಿಸರ್ಗ ಮಾತೆಯ ವ್ಯಥೆ

ನಿಸರ್ಗ ಮಾತೆಯ ಕಥೆಯ ಏನು ಹೇಳಲಿ?
ಕಣ್ಣೀರಿನ ವ್ಯಥೆಯೇ ಪ್ರತಿನಿತ್ಯ ಬಾಳಲಿ.
ಪರಿಸರಕೆ ಸಾಕೇ ಒಂದು ದಿನದ ಉತ್ಸವವು?
ಪ್ರಾಣವಾಯುವಿಲ್ಲದೆ ಹೇಗೆ ತಾನೆ ಬದುಕುವೆವು?

ನಿತ್ಯಪೂಜೆಗಿಲ್ಲಿ ಕೊಳಕುಗಳು, ಕಸಗಳು,
ಬುದ್ಧಿಮಾಂದ್ಯರಮ್ಮನಿಗೆ ಇನ್ನೆಂಥ ಬಾಳು!
ವಿಷದ ಧೂಪ ಹಾಕಿದರು ಧೂರ್ತರು, ಪಾಪಿಗಳು,
ಪ್ಲಾಸ್ಟಿಕ್ಕಿಂದ ಮುಚ್ಚಿವೆ ಶ್ವಾಸದ ನಳಿಕೆಗಳು!

ಕೊಡಲಿಯೇಟು ನಿತ್ಯವೂ ದೇಹದ ಮೇಲೆ,
ಇವರಿಗೆ ಕಲಿಸಲು ಎಲ್ಲೂ ಇಲ್ಲ ಶಾಲೆ!
ಔಷಧಿ ಆಗಿದೆ ಬಹುದೂರದ ನಂಟು,
ಗಾಯಕ್ಕೆ ಬಿದ್ದಿದೆ ಬರೆಯಂತೆ ಕಾಂಕ್ರೀಟು!

ಕಣ್ಣುತೆರೆಯಬೇಕಿದೆ ಎಲ್ಲ ಧೃತರಾಷ್ಟ್ರರು,
ಕಾಪಾಡಲು ಬರಲಿ ಪಾಂಡುವಿನ ಪುತ್ರರು!
ನಿಸರ್ಗ ಮಾತೆಗೆ ನಿತ್ಯವೂ ವೇದನೆ,
ನಿತ್ಯೋತ್ಸವವಾಗಬೇಕು ಪರಿಸರ ರಕ್ಷಣೆ!

ಬನ್ನಿ, ಎಲ್ಲ ಬನ್ನಿ, ಸೇರಿ ಮಾಡೋಣ ಶಪಥ,
ಭೂತಾಯ ರಕ್ಷಣೆಗೆ ಹುಡುಕೋಣ ಶತ ಪಥ!
ಆಗೋಣ ಬನ್ನಿ ಸ್ವಚ್ಛ ನಾಗರಿಕರು,
ನಿಸರ್ಗ ಮಾತೆಯ ಹೆಮ್ಮೆಯ ಪುತ್ರರು!

Tuesday, June 2, 2020

ತಾಯಿ-ತವರು

ತವರು ತಂಪು, ತಣ್ಗಂಪು, ತಣ್ಬನಿ,
ತಾಯಿ ತಂಬುಳಿ, ತಂಗಾಳಿ, ತಣ್ಗೊಳ.

ತಳಿರ ತಲ್ಪವು ತಾಯ ತೊಡೆಯು,
ತರುಣಾತಪವು ತಾಯ ತೆಕ್ಕೆಯು.
ತಾಯಿಲ್ಲದರೆಲ್ಲಿ ತವರು?
ತೋಂಟಿಗನಿಲ್ಲದೆಲ್ಲಿ ತೋಟವು?

ತಂತಿ ತಂಬೂರಿ, ತೊಗಲು ತಮಟೆ,
ತಳಿರು ತೋರಣ, ತುಹಿನ ತಂಪು,
ತಾವರೆ ತಟಾಕ, ತುಡುಪು ತೆಪ್ಪ,
ತಾಯಿ ತವರು, ತಾಯಿ ತವರು.

ತಂಗಳಿರಲಿ, ತುಪ್ಪವಿರಲಿ,
ತಿಮಿರವಿರಲಿ, ತಿಂಗಳಿರಲಿ,
ತಾಪವಿರಲಿ, ತಲ್ಪವಿರಲಿ,
ತುಡಿವ ತವರಿನ ತಂಪಿರಲಿ ತರಳೆಗೆ!

Monday, June 1, 2020

ಜೋಗ

ಜನಪ, ಜೋರುರವ, ಜವನ, ಜವ್ವನೆ,
ಜೊತೆಜೊತೆಯಲಿ ಜಿದ್ದಿನ ಜಲಕೇಳಿ!

ಜ್ಯೋತಿರ್ಲತೆಗಳ ಜಳಕವೋ,
ಜಾಜಿಮಲ್ಲೆಗಳ ಜಲಪಾತವೋ?
ಜುಮ್ಮೆನಿಸಿದೆ ಜೋಗದ ಜಂಪೆ,
ಜಂಬೂದ್ವೀಪದ ಜಲಜಿಂಕೆ!

ಜಟಾಜೂಟದಿಂ ಜಾರಿದ ಜಾಹ್ನವಿ,
ಜಿಗಿದಳು, ಜಿಗಿದಳು ಜುಮ್ಮನೆ.
ಜನಿಸಿದ ಜ್ಯೋತಿಯ ಜಗಮಗದಲಿ,
ಜಗದಲಿ ಜೀವನ ಜೋರಿನ ಜಲಸಾ!

ಜೀಮೂತಗಳು ಜಿನುಗಲಿ ಜಿನುಗಲಿ,
ಜಲವೃಷ್ಟಿಯು ಜೀಕಲಿ ಜೀಕಲಿ.
ಜನಿಸಲಿ ಜೀವಂತ ಜನಕರಾಗ,
ಜನುಮಕ್ಕಿರಲೊಮ್ಮೆ ಜೋಗದ ಜೋಗ!

Friday, May 29, 2020

ಮುಂದಿದೆ ಮಾರಿಹಬ್ಬ!

ನೀ ಬಂದೆ, ವಾಮನನಂತೆ,
ಜಗವನಾಕ್ರಮಿಸಿದೆ.
ಭಯಭೀತರಾದರು,
ಪ್ರಜೆಗಳೂ, ರಾಜರೂ, ಎಲ್ಲರೂ!

ಅಸ್ತ್ರಗಳೆಲ್ಲ ನಿಷ್ಪ್ರಯೋಜಕ,
ನಿನ್ನ ಶಕ್ತಿಯ ಮುಂದೆ.
ನೀನೇತಕೆ ಇಲ್ಲಿಗೆ ಬಂದೆ?
ಜಗವಾಗಿದೆ ಕುರಿಗಳ ಮಂದೆ!

ಮುಟ್ಟಿದರೆ ನಿನ್ನ,
ಕತ್ತು ಹಿಸುಕುವೆಯಲ್ಲ!
ಉರುಳುತಿವೆ ತಲೆಗಳು,
ನಿನ್ನ ನೆರಳು ಬಿದ್ದಲ್ಲೆಲ್ಲ!

ಅಡಗುದಾಣಗಳಲ್ಲಿ ನಡೆಯುತಿದೆ,
ಹೊಸ ಅಸ್ತ್ರಗಳ ಶೋಧ,
ನಿನಗಾಗಿ ಬರಲಿದ್ದಾನೆ,
ಬಲಶಾಲಿ ಯೋಧ!

ಕೊರೋನಾ, ಮುಂದಿದೆ ನಿನಗೆ,
ಕಂಡರಿಯದ ಮಾರಿಹಬ್ಬ!
ಹೆದರದೆ ನಿನ್ನೆದುರು,
ಎದ್ದು ನಿಲ್ಲುವನು ಪ್ರತಿಯೊಬ್ಬ!

Thursday, May 28, 2020

ಮನೆಯಲ್ಲೇ ಮಜಾ (ಮಕ್ಕಳ ಕವನ)



ಆಗಿದೆ, ಆಗಿದೆ, ಬೆಳ್ಳಂಬೆಳಗು,
ಮುಗಿದಿದೆ ನಿದ್ದೆಯ ಸೊಬಗು!

ಏಳು ಸ್ಕೂಲಿಗೆ ಟೈಮಾಯ್ತು,
ಸ್ನಾನಕೆ ನೀರು ಬಿಸಿಯಾಯ್ತು,
ಡಬ್ಬಿಗೆ ತಿಂಡಿ ರೆಡಿಯಾಯ್ತು,
ಎನ್ನುವ ಸದ್ದಿಲ್ಲ ಏನಾಯ್ತು?

ಓಹೋ! ಶಾಲೆಗೆ ರಜಾ!
ನಮಗೆಲ್ಲ ಈ ದಿನ ಮಜಾ!
ಚೌಕಾಬಾರಾ, ಕೇರಮ್ಮು,
ಆಡಲು ಬಂದಿದೆ ಹೊಸ ದಮ್ಮು!

ಪಾನಿ ಪೂರಿ, ಖಾರ ಪಕೋಡ,
ಅಮ್ಮನೇ ಕೊಟ್ಟರೆ ಯಾರಿಗೆ ಬೇಡ!
ಅಪ್ಪ, ಅಮ್ಮ ಜೊತೆಯಲ್ಲಿ,
ಬೇರೇನೂ ಬೇಡ ನನಗಿಲ್ಲಿ!

ಓಹೋ! ಶಾಲೆಗೆ ರಜಾ!
ನಮಗೆಲ್ಲ ಈ ದಿನ ಮಜಾ!

Monday, May 25, 2020

ಬಾರೋ ಚಂದಿರ (ಮಕ್ಕಳ ಕವನ)

ಬಾ ಬಾ ಚಂದಿರ, ಬಾರೋ ಚಂದಿರ,
ನಮ್ಮಯ ಕಂದಗೆ ಮುಖ ತೋರೋ!

ಬೆಳ್ಳಿಯ ಚೆಂದುಳ್ಳಿ ಚೆಲುವ ನೀನು,
ಚುಕ್ಕಿಗಳೊಡನೆ ಆಡುವೆಯೇನು?
ಆಡಲು ಮುದ್ದು ಕಾಯುತಿಹ,
ನಮಗೂ  ನಾಲ್ಕು ಚುಕ್ಕಿಯ ತಾ!

ಆಡಲು ಬಾರೋ, ಹಾಡಲು ಬಾರೋ,
ಕಂದನ ಜೊತೆಗೆ ಉಣ್ಣಲು ಬಾ!
ಸೊರಗುವೆ ಏಕೆ ಉಣ್ಣದೆ ನೀನು,
ಹಾಲನ್ನವ ನಾ ನೀಡುವೆ ಬಾ!

ಶಿವನ ಹತ್ತಿ ನೀ ಕುಳಿತಿಹೆಯೆಂದು,
ಮಗುವೂ ಹತ್ತಿತು ತಲೆ ಮೇಲೆ!
ನಿನ್ನನು ನೋಡಿ ಕಲಿಯುವ ಆತುರ,
ತುಂಟಾಟವು ಬೇಡ ಓ ಚತುರ!

ಓಣಿಗೆ ಬಂದೆ, ಬೆಳಕನು ತಂದೆ,
ಕಂದಗೆ ಮುದವನು ನೀ ತಂದೆ,
ಹೋಗಲು ಏಕೆ ಆತುರ ನಿನಗೆ,
ನಿನ್ನ ಒಡನಾಟ ಇರಲಿ ನಮಗೆ.

ಆಟವ ಮುಗಿಸಿ, ಊಟವ ಮುಗಿಸಿ,
ಟಾ ಟಾ ಹೇಳು ನಮ್ಮ ಪುಟಾಣಿಗೆ,
ನಾಳೆ ಮತ್ತೆ ಸೇರುವ ರಾತ್ರಿಗೆ,
ಇರುಳ ದೀಪವು ಮೂಡುವ ಹೊತ್ತಿಗೆ!

(ಕರುನಾಡು ಸಾಹಿತ್ಯ ಪರಿಷತ್ತಿನ ಮೇ ೨೦೨೦ರ  ರಾಜ್ಯಮಟ್ಟದ ಅಂತರ್ಜಾಲ ಶಿಶುಗೀತೆ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕವನ)