Thursday, April 20, 2023

ಸಬಲೆ

ಭಲೇ ಭಲೇ ಓ ಸಬಲೇ,

ಏನೆಲ್ಲಾ ನೀ ಸಾಧಿಸಬಲ್ಲೆ!


ಕತ್ತಲ ಮನೆಯನು ಬೆಳಗಿಸಬಲ್ಲೆ,

ಚಿತ್ತದ ಗೊಂದಲ ನೀಗಿಸಬಲ್ಲೆ,

ತುತ್ತಲಿ ಪ್ರೀತಿಯ ತುಂಬಿಸಬಲ್ಲೆ,

ಬತ್ತದ ಒಲುಮೆಯ ನೀಡುವೆಯಲ್ಲೆ!


ಸಾಲುಮರಗಳ ನೆರಳನು ನೀಡುವೆ,

ಉದ್ಯಮಿಯಾಗಿ ಬದುಕನು ಕೊಡುವೆ,

ಬಾಹ್ಯಾಕಾಶಕೆ ಹಾರುತ ಹೋಗುವೆ,

ಚುಕ್ಕಿಯ ಮುಟ್ಟುವ ಸಾಹಸ ಮಾಡುವೆ!


ರೋಗಿಯ ಸಲಹುವ ಪ್ರೀತಿಯ ಸೋದರಿ,

ಕ್ಷಮೆಯಲಿ ನೀ ಭೂತಾಯಿಯ ಮಾದರಿ,

ಇನಿಯನು ಬಯಸುವ ಪ್ರೇಮದ ವಲ್ಲರಿ,

ಮಾತಿಗೆ ನಿಂತರೆ ನಿಲ್ಲದ ವಾಗ್ಝರಿ!


ದೇಶವ ಕಾಯಲು ಬಂದೂಕು ಹಿಡಿಯುವೆ,

ರೋಷವು ಬಂದರೆ ಇದಿರಾರಿಲ್ಲವೆ,

ಕೋಶವ ತುಂಬುತ ದೇಶವ ಸಲಹುವೆ,

ಎಲ್ಲರೂ ಮೆಚ್ಚುವ ರನ್ನದ ಒಡವೆ!



ಪಾವನ ಪುನೀತ

    (ಛಂದೋಬದ್ಧ *ಸಾಂಗತ್ಯ* ಪ್ರಕಾರದ ರಚನೆ)


ಪಾವನ ಪುನೀತ ಮನದವ ಗೆಳೆಯನೆ

ದೇವನ ಮನೆಗೆ ನಡೆದೆ

ಜೀವನ ಯಾನವ ಬೇಗನೆ ಮುಗಿಸುತ

ಸಾವಿನ ಬಾಗಿಲ ತೆರೆದೆ


ರಸಿಕರ ಮನದಲಿ ತಾರೆಯ ತೆರದಲಿ

ಹಸಿರಿನ ನೆನಪಲಿ ಉಳಿದೆ

ಹಸಿವನು ಅಳಿಸಿದೆ ವಿದ್ಯೆಯ ನೀಡಿದೆ

ಉಸಿರಿಗೆ ಜೀವವನಿತ್ತೆ


ಕಾಯಕ ಪ್ರೇಮದ ಕರುಣೆಯ ಹೃದಯದ

ತಾಯಿಯ ಕರುಳನು ಪಡೆದೆ

ನಾಯಕ ನಟನೆಯ ಚಿತ್ರದೆ ಮಾಡುತ

ನಾಯಕ ಜನರಿಗೆ ಆದೆ


ದಾನಕೆ ಸೇವೆಗೆ ಮಿತಿಯೇ ಇಲ್ಲದೆ

ದೀನರ ದಲಿತರ ಪೊರೆದೆ

ಜೇನಿನ ಮಾತಲಿ ಉತ್ತಮ ನಡೆಯಲಿ

ಗಾನವ ಪಾಡುತ ಮೆರೆದೆ


ಮುತ್ತಿನ ರಾಜನ ಮುದ್ದಿನ ಕುವರನೆ

ಮುತ್ತಿನ ಮಣಿಯೊಲು ಹೊಳೆವೆ

ಕತ್ತಲು ತುಂಬಿದ ಮನಗಳ ಬೆಳಗುತ

ಹತ್ತಿರ ಎದೆಯಲೆ ಇರುವೆ!



ಹೊಸ ನಕ್ಷತ್ರ

ಉದಯವಾಯಿತು ಮಿನುಗು ಚುಕ್ಕಿಯು

ಹೃದಯದಾಗಸ ಬೆಳಗಿತು

ಕದವ ತಟ್ಟುತ ಎಲ್ಲ ವೈಶ್ಯರ

ಮುದದೆ ಕೂಗಿ ಕರೆಯಿತು

 

ಆಧ್ಯಾತ್ಮವು ಬಳಿಗೆ ಸೆಳೆಯಿತು

ಎಳೆಯ ಚಿಗುರುವ ವಯಸಲೇ

ಶಾರದೆಯ ಪ್ರಿಯಪುತ್ರನಾದೆ

ಬೆಳೆದು ಹೆಮ್ಮರವಾಗುತ

 

ಬಂದೆ ಸಚ್ಚಿದಾನಂದ ಗುರುವೆ

ನಮಗೆ ದಾರಿ ತೋರಲು

ನಿನ್ನ ಹಿಂದೆ ನಾವು ನಡೆವೆವು

ನಮ್ಮ ಬಾಳನು ಬೆಳಗಲು

 

ಗಂಗಾ ನದಿಯ ತೀರದಲ್ಲಿ

ಹೊಸತು ಜನುಮವ ಪಡೆದೆ ನೀ

ನಮ್ಮ ಪೀಠವ ಬೆಳಗಲೆಂದೇ

ನಮ್ಮ ನಡುವಿಗೆ ಬಂದೆ ನೀ

 

ಜನರ ಬಾಳಲಿ ಪ್ರೀತಿ ಪ್ರೇಮದ

ಬೀಜ ಬಿತ್ತಲು ಬಂದೆ ನೀ

ದೀನ ದಲಿತರ ಬಾಳನಲ್ಲಿ

ಬೆಳಕ ಕಿರಣವ ತಂದೆ ನೀ

 

ವೀಣೆ ನಾದದ ಮಾಧುರ್ಯದಲ್ಲಿ

ತೇಲಿ ಮುಳುಗಿಸು ನಮ್ಮನು

ವೇದಜ್ಞಾನದ ವೇದಾಂತಿ ನೀನು

ಅರಿವ ನೀಡಿ ಹರಸೆಮ್ಮನು

 

ವೈಶ್ಯಕುಲದ ಪೀಠಾಧಿಪತಿಯಾಗುತ್ತಿರುವ ಶ್ರೀ ಸಚ್ಚಿದಾಂದ ಸ್ವಾಮಿ ಸರಸ್ವತಿಯವರ ಬಗ್ಗೆ ಕವನರೂಪದ ಭಕ್ತಿ ಸಮರ್ಪಣೆ!



ಹಳ್ಳಿಯ ಸೊಗಡು

ಕಣ್ಣನು ತಣಿಸುವ ನೋಟದ ಅಂದ,

ಹಸಿಮಣ್ಣಿನ ವಾಸನೆ ಮೂಗಿಗೆ ಚೆಂದ!

ದೂರದ ಬೆಟ್ಟ ಗುಡ್ಡದ ನೋಟಗಳ,

ನೀಡಬಲ್ಲವೇ ಕಾಗದದ ನೋಟುಗಳು!


ಹಳ್ಳಿಯ ಸ್ನೇಹ, ಹಳ್ಳಿಯ ಪ್ರೇಮ,

ಮರಬಳ್ಳಿಗಳ ಸ್ನೇಹದ ಧಾಮ!

ಪರಿಶುದ್ಧ ಗಾಳಿ, ಪರಿಶುದ್ಧ ಪ್ರೇಮ,

ಹಸಿರಿನ ಉಸಿರಿನ ಸ್ವರ್ಗದಾರಾಮ!


ಜುಳು ಜುಳು ಹರಿಯುವ ನೀರಿನ ತೊರೆಗಳು,

ಚಿಲಿಪಿಲಿಗುಟ್ಟುತ ಹಾರುವ ಹಕ್ಕಿಗಳು!

ಹುಲ್ಲನು ಮೇಯುವ ದನಕುರಿಮರಿಗಳು,

ಚೆಂದದ ಹೂಗಳಲಿ ಬಣ್ಣದ ಚಿಟ್ಟೆಗಳು!


ಇಂತಹ ಹಳ್ಳಿಯು ಬೇಡವೆ ಕಂದ?

ಯಾಂತ್ರಿಕ ಪಟ್ಟಣದಲ್ಲೇನಿದೆ ಚೆಂದ?

ಕೂಲಿಯ ಬದುಕಲಿ ಏನಿದೆ ನೆಮ್ಮದಿ?

ಮೇಟಿಯ ಆಟವ ಆಡುನೀ ಚೆಂದದಿ!


ಬೆವರನು ಸುರಿಸು, ಹಸಿರನು ಬೆಳೆಸು,

ಹಸಿವಿನ ಕೂಗನು ನೀ ಅಳಿಸು!

ಅನ್ನವ ನೀಡುವ ಯೋಗದ ಭಾಗ್ಯ,

ಕೈಬಿಡದಿರು ಇಂತಹ ಸೌಭಾಗ್ಯ!



ಜಗದೊಡೆಯನಿಗೆ ನಮನ

ವಿಶ್ವವ ವ್ಯಾಪಿಸಿರುವ ವಿಶ್ವೇಶ್ವರನೇ,

ಮೂಜಗವು ವಂದಿಸುವ ಮುಕ್ಕಣ್ಣನೇ,

ಜಗದಾತ್ಮ ನೀನು, ಜಗದೀಶ ನೀನು,

ನಮಿಸುವೆ ಪರಮಾತ್ಮ, ಪರಮೇಶ್ವರ!


ಜಟಾಜೂಟಧಾರಿ, ನಾಗಾಭರಣ,

ಶಿರದಲ್ಲಿ ಚಂದ್ರ, ಎದೆಯಲ್ಲಿ ಸೂರ್ಯ,

ಬುವಿಗೆಲ್ಲ ಬೆಳಕೀವ ಬಸವೇಶ್ವರನೇ,

ಜಗಜ್ಯೋತಿ ನೀನು, ವಿಷಕಂಠನೇ!


ಸ್ಥಿರಚಿತ್ತ ನೀನು, ಚಂಚಲನು ನಾನು,

ತಿಳಿಗೊಳಿಸು, ಸ್ಥಿರಗೊಳಿಸು,

ಮನವನ್ನು ಮುದಗೊಳಿಸು,

ಭಸ್ಮಾಂಗಧಾರಿ, ಫಣಿಭೂಷಣ!



ತತ್ವಜ್ಞಾನಿ ತಾತಯ್ಯ

ನಾರೇಯಣ ಗುರು, ನಾರೇಯಣ ಗುರು,

ಬಂದೆವು ನಿನ್ನಯ ಪಾದಕೆ ಶರಣು!


ಪಾವನ ಪುಣ್ಯದ ಜನ್ಮವ ಪಡೆದೆ,

ಆತ್ಮವು ತೋರಿದ ದಾರಿಯ ಹಿಡಿದೆ.

ಅಮರ ನಾರಾಯಣ ಪ್ರಸಾದನೇ,

ಕೈವರ ಪುರದ ಮಹಾತ್ಮನೇ!


ಎಂಜಲ ಕೂಳಿಗೆ ಪರಾಕು ಏಕೆ,

ಸಂಸಾರಿಗಳಿಗೇಕೆ  ವಾರಾಂಗನೆಯು?

ಮರಗಳ ಕಡಿದು ಹಾಳಾಗದಿರಿ,

ಹೇಳಿದೆ ಜೀವನ ತತ್ವಗಳ!


ಅರ್ಥವಿಲ್ಲದ ಓದದು ಏಕೆಂದೆ,

ಮತಕುಲಗಳಿಗೆ ಅರ್ಥವು ಇಲ್ಲೆಂದೆ.

ಸಾಮಾನ್ಯ ಜನರ ಸದ್ಗುರು ನೀನು,

ಬದುಕಿನ ಪಾಡನೇ ಹಾಡಾಗಿಸಿದೆ!


ತುದಿಮೊದಲರಿಯದ ಪಾಮರರಿಗೆ,

ಒಳಗಿನ ಆತ್ಮದ ಬೆಳಕನು ನೀಡಿದೆ.

ಬಳೆಗಾರ ನೀನು ಬಾಳನು ಬೆಳಗಿದೆ,

ನಾರೇಯಣ ಗುರು ತಾತಯ್ಯನಾದೆ.


ಕಲ್ಲನು ಬಾಯಲೇ ಸಕ್ಕರೆ ಮಾಡಿದೆ,

ನಮ್ಮಯ ಬದುಕಿಗೆ ಸಿಹಿಯನು ನೀಡು.

ಮಣ್ಣಿನ ಹಕ್ಕಿಗೆ ಜೀವವ ತುಂಬಿದೆ,

ಭಕ್ತಿಯ ದೀಪಕೆ ಪ್ರಾಣವ ನೀಡು!


ಹಾವಿನ ಬಾಯಲೇ ನೀರನು ತರಿಸಿದೆ,

ಬತ್ತಿದ ಬದುಕಿಗೆ ಜಲವನು ನೀಡು.

ಒಕ್ಕಣ್ಣನಿಗೆ ನೀ ನೀಡಿದೆ ಕಣ್ಣನು,

ನೀಡು ನಮಗೆ ಜ್ಞಾನದ ನೇತ್ರವ!


ಅಂತಃಚಕ್ಷುವು ತೆರಯಿತು ನಿನಗೆ,

ಕಾಲದ ಜ್ಙಾನವ ನೀಡಿದೆ ನಮಗೆ.

ನಾರೇಯಣನ ಆತ್ಮದ ಬಂಧುವೆ,

ಅಮರನಾದೆ ಸಜೀವ ಸಮಾಧಿಯಲಿ!


*ಕೈವಾರ ತಾತಯ್ಯ ರಾಷ್ಟ್ರಮಟ್ಟದ ಕವನ ಸ್ಪರ್ಧೆ* ಯಲ್ಲಿ

ದ್ವಿತೀಯ ಬಹುಮಾನ ಪಡೆದ ಕವನ



ಅಕ್ಕ-ತಂಗಿ

ಅಕ್ಕತಂಗಿಯರ ಬಂಧ,

ಒಂದು ಭದ್ರಕೋಟೆ.

ಬಾಳ ಮುದವಾಗಿಸುವ, 

ಸಿಹಿಯ ಮೂಟೆ.


ಜೊತೆಗಾತಿ, ಪ್ರಾಣಸಖಿ,

ತಾಯಿಮಕ್ಕಳ ರೀತಿ,

ಹಲವು ಮುಖಗಳ,

ಸಂಬಂಧ ಇವರ ಪ್ರೀತಿ.


ಒಂದು ಕ್ಷಣ ಪೈಪೋಟಿ,

ಮರುಕ್ಷಣ ಸಂಪ್ರೀತಿ.

ಆದರ್ಶ ಮೇಲ್ಪಂಕ್ತಿಯ,

ಸುವರ್ಣ ಸ್ನೇಹಸೇತು.


ಚಿಕ್ಕಂದಿನ ಜಗಳಗಳು,

ಪುಟ್ಟ ಕದನಗಳು,

ಬಂಧವ ಬೆಸೆಯುವ,

ಗಟ್ಟಿ ಹಗ್ಗಗಳು!


ಈ ಪಯಣ ಸಾಗುವುದು,

ಕವಲು ದಾರಿಯವರೆಗೆ,

ಬದುಕಿನ ದಾರಿಗಳು,

ಬೇರೆಯಾಗುವವರೆಗೆ.


ನೆನಪುಗಳು ಸುಳಿಯುವವು,

ಬಾಳ ಕೊನೆಯವರೆಗೆ,

ಸುಡುವ ಬಿರು ಬಿಸಿಲಲಿ,

ಹಾಯಿ ತಂಬೆಲರ ಹಾಗೆ!


ಹಳೆಯ ನೆನಪುಗಳು,

ಸುಳಿದಾಡುವ ಸಮಯ,

ಹಂಬಲವು  ಎದೆಗಪ್ಪಲು,

ತನ್ನ ತವರಿನಾ ಸಖಿಯ!