Friday, March 6, 2020

ಅಜರಾಮರ ಅನುರಾಗ

ಪ್ರತಿದಿನದ ಪ್ರೇಮವಿದು,
ಅಜರಾಮರ ಅನುರಾಗ.

ಮುಂಜಾನೆ ಮಂಜಿನಲಿ,
ಮಿಂದೆದ್ದ ಕುಸುಮಗಳ,
ರೇಷಿಮೆಯ ದಳಗಳ,
ತಲ್ಪದಲ್ಲಿ ಮುತ್ತುಗಳು.

ಅರೆದಿನದ ವಿರಹದಲಿ,
ಸೊರಗಿಹಳು ಭೂರಮೆಯು.
ಇನಿಯನಿಗೆ ಮುತ್ತನೀವ,
ಬಯಕೆಯಲಿ ಮೇದಿನಿಯು.

ಒಡಲಲ್ಲಿ ಜೀವವನು,
ತುಂಬಿದ ನೇಸರಗೆ,
ಭೂತಾಯ ಪ್ರೀತಿಯ,
ಸ್ವಾಗತದ ಕಾಣಿಕೆ.

ಮೇಘಗಳ ಸರಿಸುತ್ತ,
ಬಂದನಿಗೋ ರವಿರಾಜ!
ನಸುಗೆಂಪು ಅವಳ ಗಲ್ಲ,
ಚೈತನ್ಯವು ಜಗಕೆಲ್ಲ!


ಸಿರಿಗನ್ನಡದ ಸೊಬಗು

ಚಿಲಿಪಿಲಿಗಳ ಕಲರವದಲಿ,
ಕಾವೇರಿಯ ಜುಳುರವದಲಿ,
ಶೇಷಣ್ಣನ ವೀಣೆಯಲಿ,
ಕನ್ನಡದ ಇಂಪಿದೆ,
ಸವಿಗನ್ನಡದ ಇಂಪಿದೆ!

ಸಿರಿಗಂಧದ ಒಡಲಿನಲಿ,
ಮಲ್ಲಿಗೆಯ ಮಡಿಲಿನಲಿ,
ಕಸ್ತೂರಿಯ ಘಮಘಮದಲಿ,
ಕನ್ನಡದ ಕಂಪಿದೆ,
ನರುಗನ್ನಡದ ಕಂಪಿದೆ!

ಮಡಿಕೇರಿಯ ಮಂಜಿನಲಿ,
ಆಗುಂಬೆಯ ಸಂಜೆಯಲಿ,
ಅಕ್ಕರೆಯ ಗಂಜಿಯಲಿ,
ಕನ್ನಡ ತಂಪಿದೆ,
ತನಿಗನ್ನಡದ ತಂಪಿದೆ!

ಹಸಿರು ಗಿರಿಶ್ರೇಣಿಯಲಿ,
ಪಸರಿಸಿಹ ಕಾನಿನಲಿ,
ಮುಗಿಲೆತ್ತರ ತೆಂಗಿನಲಿ,
ಕನ್ನಡದ ಸೊಂಪಿದೆ,
ಚೆಲುಗನ್ನಡದ ಸೊಂಪಿದೆ!

ವರಕವಿಯ ಹಾಡಿನಲಿ,
ಗುಂಡಪ್ಪನ ಕಗ್ಗದಲಿ,
ಪುಟ್ಟಪ್ಪನ ಕಾವ್ಯದಲಿ,
ಕನ್ನಡವು ಅರಳಿದೆ,
ಸುಮಗನ್ನಡವು ಅರಳಿದೆ!

ಹಂಪೆಯ ಕೊಂಪೆಯಲಿ,
ಬೇಲೂರಿನ ಶಿಲೆಗಳಲಿ,
ಬಾದಾಮಿಯ ಗುಹೆಗಳಲಿ,
ಕನ್ನಡದ ಕಥೆಯಿದೆ,
ಸಿರಿ ಕರುನಾಡ ಕಥೆಯಿದೆ!

ಜೋಗದ ಬಿರು ಧಾರೆಯಲಿ,
ರಾಯಣ್ಣನ ಖಡ್ಗದಲಿ,
ಓಬವ್ವನ ಒನಕೆಯಲಿ,
ಕನ್ನಡದ ಸೊಲ್ಲಿದೆ,
ಕಲಿ ಕನ್ನಡಿಗನ ಸೊಲ್ಲಿದೆ!

ಜಯ ಕರ್ನಾಟಕ ಮಾತೆ!
ಜಯ ಕರ್ನಾಟಕ ಮಾತೆ!
ಜಯ ಕರ್ನಾಟಕ ಮಾತೆ!

ಧನ ಪುರಾಣ

ಇದ್ದರೆ ಚಿಂತೆ, ಇಲ್ಲದಿದ್ದರೆ ತೊಂದರೆ,
ಬಲ್ಲೆಯಾ ಧನದ ಈ ಮೂಲ ಮಂತ್ರ?
ಇದ್ದರೆ ಮತ್ತಷ್ಟು ಸೇರುವುದು ನೋಡು,
ಇಲ್ಲದಿರೆ ಗಳಿಸಲು ಪಡಬೇಕು ಪಾಡು!

ಬೆಟ್ಟದಲ್ಲೆಲ್ಲೋ ಹುಟ್ಟಿದಾ ನದಿಯು,
ಹರಿಹರಿದು ಸಾಗರವ ಸೇರುವಂತೆ,
ಬಡವರ ಕಿಸೆಯಿಂದ ಹಾರಿ ಬಂದು,
ದೊಡ್ಡ ಬೊಕ್ಕಸಗಳ ತುಂಬಿತಂತೆ.

ಹೊನ್ನು, ಮಣ್ಣು, ಅಧಿಕಾರಗಳ ಬಹುರೂಪಿ,
ಹಲವರಿಗೆ ಇದು ದೇವತಾ ಸ್ವರೂಪಿ.
ಅತಿಯಾದ ಆಸೆ ಮನುಜನ ಖಾಯಿಲೆ,
ಇದಕ್ಕೆ ಮದ್ದಿಲ್ಲ, ಅಳಿಯುವುದು ಸುಟ್ಟಾಗಲೇ!

ಧನಕ್ಕಿದೆ ಧನವನ್ನು ಸೃಷ್ಟಿಸುವ ಶಕ್ತಿ,
ಜೀವ ಜಂತುಗಳಂತೆ ಬೆಳೆಸುವುದು ಸಂತತಿ!
ಸಮಾಧಿ ಮಾಡಿದರೂ ಭೂಮಿ ಅಗೆದು,
ಎದ್ದುಬರುವುದು ನೋಡು ಮರುಜನ್ಮ ಪಡೆದು!

Wednesday, March 4, 2020

ಹೂದೋಟ

ಹೂವ ತೋಟದಿ ನಿಂತೆ ಮೂಕವಿಸ್ಮಿತನಾಗಿ,
ಏಸು ಬಗೆಯ ಹೂಗಳು! ಏನೆಲ್ಲ ಬಣ್ಣಗಳು!
ಚಂಚಲದ, ಸಡಗರದ ಚಿಟ್ಟೆ ದುಂಬಿಗಳಷ್ಟೋ!
ಚಿಟ್ಟೆಗಳ ಮೈಮೇಲಿನ ಚಿತ್ತಾರಗಳೆಷ್ಟೋ!

ಗುಲಾಬಿಯಂದಕೆ ಸರಿಸಾಟಿಯುಂಟೇ?
ಸಂಪಿಗೆಯ ಪರಿಮಳಕೆ ಮರುಳಾಗದುಂಟೇ?
ದಾಸವಾಳದ ರಂಗಿಗೆ ದಾಸ ನಾನಮ್ಮ,
ಮಲ್ಲಿಗೆಯು ಮಾಡಿದೆ ಮನಸನ್ನು ಘಮಘಮ!

ಪ್ರಕೃತಿಯ ಮಡಿಲೆಲ್ಲ ವೈವಿಧ್ಯಪೂರ್ಣ,
ಜೀವನದ ಕನಸುಗಳು ಅರಳಿವೆ ಸಂಪೂರ್ಣ.
ಪ್ರತಿಯೊಂದು ಜೀವಕಿದೆ ಸ್ವಂತಿಕೆಯ ಗಾನ,
ಪ್ರಕೃತಿಯಲಿ  ಇಲ್ಲ ಎಲ್ಲೂ ಏಕತಾನ!

ಅಚ್ಚು ಅರಗಿನ ಗೊಂಬೆಗಳು ನಾವಲ್ಲ,
ತನ್ನತನವ ಯಾರೂ ಬಿಟ್ಟುಕೊಡಬೇಕಿಲ್ಲ.
ಒಂದೊಂದು ಹೃದಯಕಿದೆ ತನ್ನದೇ ಮಿಡಿತ,
ಒಂದೊಂದು ಮನಸಿಗಿದೆ ತನ್ನದೇ ತುಡಿತ.

ಬೆರೆಯೋಣ, ಅರಿಯೋಣ ಎಲ್ಲರ ಮನಸುಗಳ,
ಬೆನ್ನು ತಟ್ಟೋಣ ಸಾಧಿಸಲು ಕನಸುಗಳ.
ಲೋಕವಾಗಲಿ ಸುಂದರ ಹೂದೋಟದಂತೆ,
ಬೇಕಿಲ್ಲ ಇನ್ನು ಮಾಲಿ, ಬೇಲಿಗಳ ಚಿಂತೆ! 

Tuesday, February 25, 2020

ಮುನಿಸೇಕೆ ಮನದನ್ನೆ?






ಮುನಿಸೇಕೆ ಮನದನ್ನೆ, ಮನದರಸಿ
ಕಾತುರದಿ ಬಂದಿರುವೆ ನಿನ್ನನರಸಿ

ಕಲ್ಲಾಯಿತೇಕೆ ಕೋಮಲ ಹೃದಯ?
ಮರೆತೆಯಾ ಜೊತೆಯ ಮಧುರ ದಿನಗಳ?
ನಕ್ಷತ್ರಗಳ ನೋಡುತ ಕಳೆದ ಕ್ಷಣಗಳ?
ಮುಂಗಾರು ಮಳೆಯ ಕಚಗುಳಿಗಳ?

ನೀಲವೇಣಿಯೇ ನಿನ್ನ ಕೇಶದಲಿ ಬಂದಿ
ನಾನಾಗಿದ್ದೆ ನಿನ್ನೆದೆಯ ಪಂಜರದಲಿ,
ಸಂತಸದ ಆಗಸದಲಿ ಹಾರಾಡುತ
ಸಗ್ಗದ ಸೀಮೆಯಲಿ ತೇಲುತಲಿದ್ದೆ.

ತಿರುಗಿ ನೋಡೊಮ್ಮೆ ಕುಂಭನಿತಂಬೆ,
ಕಿರುಕಟಿಯ ಸಿರಿಮನದ ಚೆಲುವೆ,
ಬಿರುನುಡಿಯಾಡಿದ ತಪ್ಪು ನನ್ನದು
ಕ್ಷಮಿಸಲಾರೆಯ ನಿನ್ನೆದೆಯಲಿ ನನ್ನನೊರಗಿಸಿ?

Monday, February 24, 2020

ಮನದ ಅಂಗಳದಲ್ಲಿ

ನನ್ನ ಮನದ ಅಂಗಳದಲ್ಲಿ,
ದಿನಕೊಂದು ಹೊಸತು ರಂಗವಲ್ಲಿ.

ಕಹಿಯ ಕಸವನು ಗುಡಿಸಿ,
ನಗೆಯ ನೀರನು ಚೆಲ್ಲಿ, ನಲ್ಲೆ
ಬಿಡಿಸುವಳು ಚೆಲುವ ರಂಗವಲ್ಲಿ,
ದಿನವೂ ಬಣ್ಣದ ಕನಸು ಅಲ್ಲಿ.

ನಡೆಯುತಿದೆ ಪರಿಪಾಠ ದಿನದಿನವೂ ಪ್ರತಿದಿನವೂ,
ತಪ್ಪಿಲ್ಲ, ತಡೆಯಿಲ್ಲ, ಮರೆವಂತು ಇಲ್ಲವೇ ಇಲ್ಲ,
ಬೆಟ್ಟದ ಮೇಲೆ ಬೀಸುವ ಗಾಳಿಯಂತೆ,
ಮುಂಜಾನೆಯ ಮೂಡಣದ ಸೂರ್ಯನಂತೆ.

ಅಂದೊಂದು ದಿನ, ಗುಡುಗಿತ್ತು, ಸಿಡಿಲಿತ್ತು,
ಧೋ ಎಂದು ಸುರಿದಿತ್ತು ದಿನವೆಲ್ಲ.
ಚದುರಿಹೋಗಿತ್ತು ಮುಂಜಾನೆಯ ರಂಗವಲ್ಲಿ,
ಕರಿಗಿಹೋಗಿತ್ತು ಕನಸು, ಮಳೆಯ ನೀರಿನಲ್ಲಿ.

ಮಳೆ ನಿಂತಾಯಿತು, ದಿನ ಹತ್ತಾಯಿತು,
ಬರಲಿಲ್ಲ ಅವಳು ಹಾಕಲು ನಗುವ ರಂಗವಲ್ಲಿ.
ನಗುವಿಲ್ಲ, ನಲಿವಿಲ್ಲ, ತಂಪಿನ ಇಂಪಿಲ್ಲ,
ಬರಡು ಬರಡಾಯಿತು, ಇನ್ನು ಮನಕೆ ಮುದವೆಲ್ಲಿ?

ಹೀಗೇಕೆ ಮಾಡಿದಳು? ಬರಲಿಲ್ಲವೇಕವಳು?
ತಲೆಯೆತ್ತಿ ನೋಡಿದರೆ ಕಾಣಿಸಿತು,
ಮುಚ್ಚಿದ್ದ ಅಂಗಳದ ಬಾಗಿಲು,
ಅದಕೆ ನಾನೇ ಜಡಿದಿದ್ದ ಬೀಗಗಳು!

ಹೊಸಬೆಳಕು

ಉದಯಿಸಿದೆ ಹೊಸಬೆಳಕು,
ಹಳೆಯ ಕತ್ತಲೆಯ ಸೀಳಿ ಬಂದು.
ಮೂಡುತಿವೆ ಕನಸುಗಳು,
ಹೊಸ ಬೆಳಕಿನಲಿ ಮಿಂದು ಇಂದು.

ಮನಮನಗಳ ನಡುವೆ ಗೋಡೆ ಏಕೆ?
ಕೂಪಮಂಡೂಕಗಳ ಗೊಡವೆ ಬೇಕೆ?
ಬರಲಿ, ಹಿತದ ತಂಪನೆಯ ತಂಗಾಳಿ.
ಇರಲಿ, ಜ್ಞಾನದಾಹದ ಬೆಂಕಿಬಿರುಗಾಳಿ.

ಒಡೆದ ವಿಶ್ವದ ಬಿರುಕುಗಳ,
ಮುಚ್ಚಿ ಮರೆಸಲಿ ಸ್ನೇಹದಂಟು.
ಕದಡಿ ಮುದುಡಿದ ಮನಗಳು,
ಚಿಗುರಲಿ, ಸುಖವು ಮುಂದೆ ಉಂಟು.

ಕಾಡದಿರಲಿ ಹಳೆಯ ನೋವುಗಳು,
ಮಧುರ ನೆನಪುಗಳು ಮಾಸದಿರಲಿ.
ತಳಿರು ತೋರಣಗಳು ಇರಲಿ ನಿತ್ಯ,
ಸಾಗುತಿರಲಿ ಕಾಯಕ, ಅದುವೆ ಸತ್ಯ!