Saturday, December 26, 2020

ಪಕ್ಷಗಳು

 ಪೂರ್ವಜರು ನಿಪುಣರು ರಾಜಕೀಯದಲಿ,

ಕಟ್ಟಿದರು ಪಕ್ಷಗಳ ದೇವರ ಹೆಸರಿನಲಿ!

ಮೂಕ ದೇವರುಗಳು ಆದರು ಮುಖಂಡರು,

ಸೂತ್ರದ ಬೊಂಬೆಗಳ ಆಡಿಸಿದರು ಪ್ರಚಂಡರು!


ಪಕ್ಷದ ಚಿನ್ಹೆಗಳು ಹಣೆಹಣೆಗಳ ಮೇಲೆ,

ಆಚಾರ, ಸಂಪ್ರದಾಯಗಳು ಎಲ್ಲಕ್ಕಿಂತ ಮೇಲೆ!

ಉಡುಗೆತೊಡುಗೆಗಳಲ್ಲೂ ಪಕ್ಷದ್ದೇ ಪ್ರಭಾವ

ಚಿಂತನೆಯ ಮಂಥನಕ್ಕಷ್ಟೇ ಅಭಾವ!


ಪಕ್ಷ ಪಕ್ಷಗಳ ನಡುವೆ ದೊಡ್ಡ ಗೋಡೆಗಳು,

ಪಕ್ಷಾಂತರಿಸಲು ಬಿಡದ ಭದ್ರ ಕೋಟೆಗಳು!

ಹಣೆಯ ಮೇಲಿನ ಚಿನ್ಹೆ ಬದಲಿಸುವುದು ಕಷ್ಟ,

ದೇವರು ಮುನಿದರೆ ಆಗುವುದು ನಷ್ಟ!


ಕಾಲಕ್ರಮೇಣ ಚಿನ್ಹೆಗಳು ಇಳಿದರೂ ಹಣೆಯಿಂದ

ಮನೆಯ ಮಾಡಿವೆ ಮನಸಿನಲಿ ಸ್ವಚ್ಛಂದ!

ಅಂದಿನ ಪಕ್ಷಗಳೇ ಇಂದಿನ ಜಾತಿಧರ್ಮಗಳು,

ಅವುಗಳ ನೆರಳಲೇ ರಾಜಕೀಯ ಪಕ್ಷಗಳು!

ಗುರುದರ್ಶನ

ದರುಶನವ ನನಗೆಂದು ಕೊಡುವೆ?

ನಿನಗಾಗಿ ಕಾಯುತಿಹೆ ಗುರುವೆ

ನೀ ಬಂದೇ ಬರುವೆ ಎಂದು, ಬಂದು

ದಾರಿ ತೋರುವೆ ಎಂದು!


ಕಗ್ಗಂಟು ಬದುಕಿದು, ಕಾಡಂಥ ಜಗವಿದು,

ಕಣ್ಣಿಗೆ ಬಟ್ಟೆ ಕಟ್ಟಿದ ಪಾಡು ನನ್ನದು!

ದಾರಿ ಕಾಣದು, ಸಮಯ ನಿಲ್ಲದು,

ಕೈ ಇಡಿದು ನಡೆಸುವ ಭಾರ ನಿನ್ನದು. 


ಬಂದೆನೇಕೋ ನಾ ಈ ಬುವಿಗೆ,

ತಿಳಿಯಡಿಸು ಬಾ ಇಂದು ನನಗೆ,

ಅಂಧಕಾರದಿ ನಾ ಕಳೆಯುತಿಹೆ ವರುಷಗಳ,

ಮೂಡಿಸು ಚಿತ್ತದಲಿ ಬೆಳಕಿನ ಕಿರಣಗಳ!

 

ಕಣ್ಣು ತೆರೆಯುವೆ ಆಗ ಅರಿವಿನ ಬೆಳಕಿಗೆ,

ತಲೆ ಬಾಗುವೇ ನಾ ನಿನ್ನಯ ಕೊಡುಗೆಗೆ,

ಸಾರ್ಥಕವಾಗಲಿ ನಾ ಪಡೆದ ಜನ್ಮ,

ನಿರಂತರವಾಗಲಿ ಅರ್ಥಪೂರ್ಣ ಕರ್ಮ!


ತೊಲಗಾಚೆ ದೂರ 2020!

 ತುಂಬಿದ ಕಂಗಳ ವಿದಾಯ ನಿನಗೆ, 

ಮತ್ತೆ ಕಾಣದಿರು, ಕಾಡದಿರು ಓ 2020!


ದುಡಿವ ಕೈಗಳ ಕನಸಿನ ಕೆಲಸ ಕಸಿದೆ,

ದಿನದುಡಿಮೆಯವರ ಹೊಟ್ಟೆಗೆ ಹೊಡೆದೆ,

ಬದುಕನು ಭರಿಸಲಾಗದ ಬವಣೆಯಾಗಿಸಿದೆ,

ಮಿನಗುವ ಕಂಗಳಲಿ ಕಂಬನಿಯ ತುಂಬಿದೆ,

ತೊಲಗಾಚೆ ಪಾಪಿ ಓ 2020!


ಹಿರಿಯ ಜೀವಗಳು ಬೆಂದು ಬವಳಿ,

ನೋಡು ನೋಡುತಲೇ ಅಂತರ್ಧಾನರಾದರು,

ಮಿಡಿವ ಮನದಲಿ ಕಂಬನಿ ಮಡುಗಟ್ಟಿತು,

ತುಡಿವ ಎದೆಯಲಿ ನೋವು ತುಂಬಿತು,

ತೊಲಗಾಚೆ ಪಾಪಿ ಓ 2020!


ನೆನ್ನೆ ಮೊನ್ನೆ ಕಂಡ ಗೆಳೆಯರು, 

ಮನಬಿಚ್ಚಿ ಬೆರೆತು ನಕ್ಕವರು,

ತಿರುಗಿ ನೋಡುವಷ್ಟರಲಿ ಮರೆಯಾದರು,

ನಿನ್ನ ಕ್ರೂರನೋಟಕೆ ಬಲಿಯಾದರು,

ತೊಲಗಾಚೆ ಪಾಪಿ ಓ 2020!


ಕಂದಮ್ಮಗಳ ಕಲಿವ ಶಾಲೆ ಮುಚ್ಚಿಸಿದೆ,

ಹೊರಗೆ ಕಾಲಿಡುವ ಧೈರ್ಯ ಕಸಿದೆ,

ಗೆಳೆಯರೊಡನೆ ಬೆರೆಯದಂತೆ ಬಂಧಿಯಾಗಿಸಿದೆ,

ಮೃದುಮನಗಳ ಮೇಲೆ ಮಾಯದ ಬರೆಯೆಳೆದೆ, 

ತೊಲಗಾಚೆ ಪಾಪಿ ಓ 2020!


ವ್ಯಾಪಾರಗಳ ದೀವಾಳಿ ತೆಗೆದೆ,

ವ್ಯಾಪಾರಿಗಳ ಬೆನ್ನಿಗೆ ಚೂರಿ ಇಟ್ಟೆ,

ಹೊಟ್ಟೆಗೆ ಉರಿವ ಕಿಚ್ಚನ್ನಿಟ್ಟೆ,

ಉಳಿದದ್ದು ಕೇವಲ ತಣ್ಣೀರ ಬಟ್ಟೆ,

ತೊಲಗಾಚೆ ಪಾಪಿ ಓ 2020!


ಹುಚ್ಚಾದೆವು, ಪೆಚ್ಚಾದೆವು, ಬೆಚ್ಚಿದೆವು, 

ಎಲ್ಲ ಮು‌ಚ್ಚುವ ಮುಂಗೋಟಿಯ ಮರೆಯಲ್ಲಿ,

ನೋವು, ನಿರಾಸೆಗಳ ಅಡಗಿಸಿಕೊಂಡೆವು,

ತಲೆತಗ್ಗಿಸಿ ಅಸಹಾಯಕರಾಗಿ ನಿಂತೆವು,

ತೊಲಗಾಚೆ ಪಾಪಿ ಓ 2020!


ಈಗ ಹೇಳುತಿರುವೆವು ನಿನಗೆ ವಿದಾಯ,

ನೀ ಮರೆಯಾಗುತಿರುವುದು ಅಭಯಪ್ರದಾಯ,

ಶೋಕದ ಕಣ್ಣಿರು ಆವಿಯಾಗುತಿದೆ,

ಆನಂದಭಾಷ್ಪ ಮೂಡುತಿದೆ ನಿನ್ನ ಬೆನ್ನ ಕಂಡು,

ತೊಲಗು, ಇನ್ನು ನೀ ಬರಬೇಡ 2020!

Tuesday, December 1, 2020

ಲೇಖನಿ (ಹಾಯ್ಕು)

ಇತಿಹಾಸದ
ಆಗುಹೋಗುಗಳಿಗೆ
ಸಾಕ್ಷಿಪ್ರಜ್ಞೆ ನೀ

ನಿನ್ನ ಒಡಲ
ವರ್ಣಜಲವು ಎಲ್ಲ
ದಾಖಲಿಸಿದೆ!

ಆ ಖಡ್ಗಕಿಂತ
ಬಹಳ ಹರಿತ ಈ
ನಿನ್ನ ನಾಲಿಗೆ

ನನಸಾದ ಕನಸು

ಭೂಮಿಯಿಂದ ಚಿಮ್ಮಿ ಹಾರುವ,
ಚಂದ್ರ, ತಾರಾಲೋಕ ಸೇರುವ!

ನಮ್ಮ ಪ್ರೀತಿ ಗೆಲುವು ಕಂಡಿದೆ,
ಸ್ವರ್ಗಕಿನ್ನು ಮೂರೇ ಗೇಣಿದೆ!
ಕನಸುಗಳಿಗೆ ರೆಕ್ಕೆ ಮೂಡಿದೆ,
ಮನದ ಹಕ್ಕಿ ಗರಿ ಗೆದರಿದೆ!

ಕಣ್ಣಿನಲ್ಲಿ ಕಣ್ಣನಿಟ್ಟು,
ಎದೆಯ ಭಾಷೆ ನೀಡುವೆ,
ಕಣ್ಣ ಬಿಂದು ಜಾರದಂತೆ,
ರೆಪ್ಪೆಯಾಗಿ ಕಾಯುವೆ!

ತಡವು ಏಕೆ ಇನ್ನು ಗೆಳತಿ,
ಬಂದಿಹಿದು ನಮ್ಮ ಸರತಿ,
ಪ್ರೇಮಲೋಕ ಸೃಷ್ಟಿಸಲು,
ಹೊಸ ಸ್ವರ್ಗ ನಿರ್ಮಿಸಲು!

ಬಾನನೆಲ್ಲ ತೋಟ ಮಾಡುವ,
ಪ್ರೀತಿಯೆಲ್ಲ ಧಾರೆ ಎರೆಯವ,
ಬಿರಿದ ಕೆಂಪು ಗುಲಾಬಿಗಳ,
ಪ್ರೇಮಿಗಳಿಗೆ ಹಂಚಿ ಬಿಡುವ!

ಪರಮಾಪ್ತ ಹೇ ಸುಬ್ರಮಣ್ಯ

ಶ್ರೀ ಬಾಲಸುಬ್ರಮಣ್ಯಂ ಅವರಿಗೆ ಮತ್ತೊಂದು ಗೀತನಮನ.
ಅವರೇ ಹಾಡಿರುವ ಇನ್ನೊಂದು ಹಾಡಿನ ಮೂಲಕ ಅವರಿಗೆ
ಮತ್ತೊಮ್ಮೆ ನನ್ನ ನುಡಿನಮನ



ಮಲಗು ನೀ ಪರಮಾಪ್ತ ಹೇ ಸುಬ್ರಮಣ್ಯ
ಹಾಡೆಂಬ ಗಾಂಧರ್ವ ದಿವ್ಯ ತಲ್ಪದ ಮೇಲೆ
ಮಲಗು ನೀ ಪರಮಾಪ್ತ ಬಾಲ ಸುಬ್ರಮಣ್ಯ - ಆಪ್ತರೆದೆರಾಜ

ಕೃಷ್ಣನಿಗೆ ಯಶೋದೆ ಲಾಲಿ ಹಾಡಿದ ರೀತಿ
ಮಹಾತಾಯಿ ಜೋಗುಳವ ಹಾಡಿ ನಲಿದಾ ರೀತಿ
ನಿನ್ನ ಹಾಡನೆ ಹಾಡಿ ... ಗಾನ ಸೇವೆಯ ನೀಡಿ ...
ನಿನ್ನ ಹಾಡನೆ ಹಾಡಿ ... ಗಾನ ಸೇವೆಯ ನೀಡಿ ...
ಧನ್ಯನಾಗುವೆ ಇಂದು ಕೇಳು ನೀ ದಯಮಾಡಿ
ಮಲಗು ನೀ ಪರಮಾಪ್ತ ಹೇ ಸುಬ್ರಮಣ್ಯ
ಹಾಡೆಂಬ ಗಾಂಧರ್ವ ದಿವ್ಯ ತಲ್ಪದ ಮೇಲೆ
ಮಲಗು ನೀ ಪರಮಾಪ್ತ ಬಾಲ ಸುಬ್ರಮಣ್ಯ - ಆಪ್ತರೆದೆರಾಜ

ಕಥೆಯು ಮುಗಿಯದೆ ಇರಲಿ, ವೈಥೆಯು ಮೂಡದೆ ಇರಲಿ...
ಅನುಗಾಲ ಈ ಸೇವೆ ಸಾಗುತಲೇ ಇರಲಿ
ಗಾನ ಅರಿತವನಲ್ಲ...ಮೆಚ್ಚುಗೆ ಬೇಕಿಲ್ಲ
ಗಾನ ಅರಿತವನಲ್ಲ...ಮೆಚ್ಚುಗೆ ಬೇಕಿಲ್ಲ
ದನಿಯ ಕೇಳದೆ ಜೀವ ಕ್ಷಣ ಕಾಲ ನಿಲ್ಲದಯ್ಯ
ಮಲಗು ನೀ ಪರಮಾಪ್ತ ಹೇ ಸುಬ್ರಮಣ್ಯ
ಹಾಡೆಂಬ ಗಾಂಧರ್ವ ದಿವ್ಯ ತಲ್ಪದ ಮೇಲೆ
ಮಲಗು ನೀ ಪರಮಾಪ್ತ ಬಾಲ ಸುಬ್ರಮಣ್ಯ - ಆಪ್ತರೆದೆರಾಜ
ಬಾಲ ಸುಬ್ರಮಣ್ಯ - ಆಪ್ತರೆದೆರಾಜ

ಈ ಕಂಠ

ಆರ್ಧಶತಮಾನಕ್ಕೂ ಹೆಚ್ಚುಕಾಲ ನಾವೆಲ್ಲ 
ಗಂಧರ್ವಲೋಕದಲ್ಲಿ ತೇಲಾಡುವಂತೆ ಮಾಡಿದ 
ಗಾನಮಾಂತ್ರಿಕ ಎಸ್ಪಿಬಿ ಅವರಿಗೆ
ನನ್ನ ಹೃದಯಾಳದ ನಮನಗಳು. ಅವರು ಮತ್ತೊಮ್ಮೆ 
ಹುಟ್ಟಿಬಂದು ಮುಂದಿನ ಪೀಳಿಗೆಗಳನ್ನೂ ಹೀಗೆಯೇ 
ರಂಜಿಸಲಿ ಎಂದು ಹಾರೈಸಿ, ಅವರಿಗೆ ನನ್ನ ಭಕ್ತಿಪೂರ್ವಕ 
ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇನೆ.

ಅವರೇ ಹಾಡಿರುವ ಶ್ರೀಗಂಧದ ಚಿತ್ರದ ಹಾಡನ್ನು
ಅವರಿಗಾಗಿ ಬದಲಿಸಿ ಬರೆದಿದ್ದೇನೆ. ಇದು ನಾನು ಅವರಿಗೆ
ಅರ್ಪಿಸುತ್ತಿರುವ ಒಂದು ಪುಟ್ಟ ಕಾಣಿಕೆ.

ಹಾಡಲು ಮನಸ್ಸಿದ್ದವರು ಅದೇ ರಾಗದಲ್ಲಿ ಹಾಡಿದರೆ
ಅವರಿಗೆ ನನ್ನ ಈ ಅರ್ಪಣೆ ಸಾರ್ಥಕವಾಯಿತೆಂದು ಭಾವಿಸುತ್ತೇನೆ.



ಒಂದು ಅಪರೂಪದ ಕಾವ್ಯ ಈ ಕಂಠ,
ಕಂಠದಾ ಮೈಯ ತುಂಬೆಲ್ಲ ಶ್ರೀಗಂಧ!
ಒಂದು ಅಭಿಮಾನದ ಗಣಿಯು ಈ ಬಂಧ
ಗಣಿಯಾಳದ ತುಂಬೆಲ್ಲ ಶ್ರೀಗಂಧ!

ಶ್ರೀಗಂಧ, ಶ್ರೀಗಂಧ, ಶ್ರೀಗಂಧ,
ಈ ಬಂಧ, ಈ ಅಂದ ಶ್ರೀಗಂಧ!
ಶ್ರೀಗಂಧ, ಶ್ರೀಗಂಧ, ಶ್ರೀಗಂಧ,
ಈ ಬಂಧ, ಈ ಅಂದ ಶ್ರೀಗಂಧ!

ಒಂದು ಅಪರೂಪದ ಕಾವ್ಯ ಈ ಕಂಠ,
ಕಂಠದಾ ಮೈಯ ತುಂಬೆಲ್ಲ ಶ್ರೀಗಂಧ!

ಸರಳವಾಗಿ ಹಾಡುವ,
ಹೃದಯ ತುಂಬಿ ಅರಳುವ,
ಪರಮ ಪೂಜ್ಯ ಭಾವುಕ!
ಒಂದು ಚಿಕ್ಕ ಶಬ್ದದೆ,
ಕೋಟಿ ಭಾವ ನೀಡುವ,
ಚತುರ ನಮ್ಮ ಗಾಯಕ!

ಹಾಡಿದರೆ ಹಾರೈಸುವ,
ಕೇಳಿದರೆ ಪೂರೈಸುವ,
ಮೆಚ್ಚಿದರೆ ಮಗುವಾಗುವ,
ಚುಚ್ಚಿದರೆ ಮನ್ನಿಸುವ,
ದೈವ ಕೊಟ್ಟ ಕಾಣಿಕೆ!

ಶ್ರೀಗಂಧ, ಶ್ರೀಗಂಧ, ಶ್ರೀಗಂಧ,
ಈ ಬಂಧ, ಈ ಅಂದ ಶ್ರೀಗಂಧ!
ಶ್ರೀಗಂಧ, ಶ್ರೀಗಂಧ, ಶ್ರೀಗಂಧ,
ಈ ಬಂಧ, ಈ ಅಂದ ಶ್ರೀಗಂಧ!

ಒಂದು ಅಪರೂಪದ ಕಾವ್ಯ ಈ ಕಂಠ,
ಕಂಠದಾ ಮೈ ಮನವೆಲ್ಲ ಶ್ರೀಗಂಧ!

ಕುಸುಮದಲ್ಲಿ ಕಂಪಿದೆ,
ತಾಯಿಯಲ್ಲಿ ತಂಪಿದೆ,
ಎರಡು ನಿನ್ನಲಡಗಿದೆ!
ಹಣ್ಣಿಗೊಂದು ಸೊಗಸಿದೆ,
ಮಣ್ಣಿಗೊಂದು ಸೊಗಡಿದೆ,
ಎರಡು ನಿನಗೆ ಒಲಿದಿದೆ!

ಕೋಗಿಲೆಯ ಕಂಠವಿದೆ,
ಕಸ್ತೂರಿಯ ಕಂಪು ಇದೆ,
ತಂಗಾಳಿಯ ತಂಪು ಇದೆ,
ಹಸುರಿನಾ ಸೊಂಪು ಇದೆ,
ಈ ಭಾಗ್ಯ ನಮ್ಮದೇ!

ಶ್ರೀಗಂಧ, ಶ್ರೀಗಂಧ, ಶ್ರೀಗಂಧ,
ಈ ಬಂಧ, ಈ ಅಂದ ಶ್ರೀಗಂಧ,
ಶ್ರೀಗಂಧ, ಶ್ರೀಗಂಧ, ಶ್ರೀಗಂಧ,
ಈ ಬಂಧ, ಈ ಅಂದ ಶ್ರೀಗಂಧ!

ಒಂದು ಅಪರೂಪದ ಕಾವ್ಯ ಈ ಕಂಠ,
ಕಂಠದಾ ಮೈಯ ತುಂಬೆಲ್ಲ ಶ್ರೀಗಂಧ!
ಒಂದು ಆಭಿಮಾನದ ಗಣಿಯ ಸಂಬಂಧ,
ಗಣಿಯಾಳದ ತುಂಬೆಲ್ಲ ಶ್ರೀಗಂಧ!