Friday, April 21, 2023

ನವ ವಸಂತ

ಬಂದ ಬಂದ ನವ ವಸಂತ

ತಂದ ತಂದ ಹೊಸ ಪ್ರಪಂಚ


ಹಸಿರಿನ ಸೀರೆಯ ಉಟ್ಟ ವಸುಂಧರೆ

ಉಸಿರಿನ ಸುಗಂಧ ಚುಂಬಕವಾಗಿರೆ

ಫಲಗಳ ಬುತ್ತಿಯ ಆರಿಸಿ ತಂದಿರೆ

ಒಲವಿನ ಉಡುಗೊರೆಯಾಗಿ ನಿಂದಿರೆ


ಮಲ್ಲಿಗೆ ಸಂಪಿಗೆ ಗುಲಾಬಿ ಕೇದಿಗೆ 

ಹುಲ್ಲಿನ ಹಸಿರಿನ ಮೆತ್ತನೆ ಹಾಸಿಗೆ

ಮಾಮರ ಕಿತ್ತಳೆ ಅಂಜೂರ ಹಲಸು

ಅಂದ ಸುಗಂಧ ಸವಿರುಚಿ ಸೊಗಸು


ಬಣ್ಣದ ದಿರುಸನು ಧರಿಸಿದ ಲಲನೆ

ಚಿನ್ನದ ಒಡವೆ ಮಿಂಚಿದೆ ಸುಮ್ಮನೆ

ನೊಸಲಿಗೆ ತಿಲಕ ಕಣ್ಣಲಿ ಹೊಳಪು

ನಸುನಗೆ ವದನ ಗುಲಾಬಿ ಕದಪು


ಅಂದದ ತೋರಣ ರಂಗಿನ ಚಿತ್ತಾರ

ಬಂಧುಗಳ ಮಿಲನಕೆ ಹರುಷದ ಸಾಕಾರ

ಎದೆಯಲಿ ಹರುಷ ಗುಡಿಯಲಿ ಚರಪು

ಯುಗಾದಿ ತಂದಿಹ ಹೊಸತನ ಹುರುಪು!



ಸಂಕ್ರಾಂತಿಯ ಸಂಭ್ರಮ

ಉದಯ ರವಿಯ ಪ್ರಥಮ ಕಿರಣಕೆ, 

ಬಡಗಣದಲ್ಲಿ ಬೆಳಕಾಗಿದೆ. 

ತೂಗಿ ತೊನೆಯುವ ತುಂಬು ತೆನೆಗಳು, 

ಬಕುತಿಯಲಿ ತಲೆಬಾಗಿವೆ. 


ರೈತಜನರ ಕನಸು ಇಂದು, 

ಕಣಜದಲಿ ನನಸಾಗಿದೆ. 

ತಮ್ಮ ಹಕ್ಕಿನ ಕಾಳುಕಡ್ಡಿಗೆ, 

ಹಕ್ಕಿಗಳು ಹಾರಾಡಿವೆ. 


ಬಣ್ಣ ಬಣ್ಣದ ಬಟ್ಟೆಗಳಲಿ, 

ಹೆಂಗೆಳೆಯರು ನಲಿದಾಡಿರೆ, 

ರಂಗು ರಂಗಿನ ರಂಗವಲ್ಲಿಯು, 

ಅಂಗಳದಲಿ ಕುಣಿದಾಡಿದೆ. 


ಎಳ್ಳು, ಬೆಲ್ಲ, ಕೊಬ್ಬರಿ, ಕಡಲೆಯ, 

ಹಾಗೆ ಮಂದಿಯು ಬೆರೆತಿರೆ, 

ಎಳ್ಳು ಬೀರುವ ಒಳ್ಳೆ ಕಾರ್ಯಕೆ, 

ಗೆಳೆತನಗಳು ದೃಢವಾಗಿವೆ. 


ಸುಗ್ಗಿಕಾಲದ ಹುಗ್ಗಿ ರುಚಿಯನು, 

ಹಿಗ್ಗಿ ಹೀರಿದೆ ನಾಲಿಗೆ. 

ಬಾಗಿ ನಮಿಸುವ ಭಾನುದೇವಗೆ, 

ಸುಗ್ಗಿ ತಂದಿಹ ಬಾಳಿಗೆ. 


ಗವಿಗಂಗಾಧರೇಶ್ವರ ಸ್ವಾಮಿಗೆ, 

ಸೂರ್ಯ ರಶ್ಮಿಯ ಅಭ್ಯಂಜನ.

ಬಕುತರೆಲ್ಲರ ಪಾಲಿಗಿಂದು,  

ಆನಂದಾತಿರೇಕದ ಮಜ್ಜನ! 



ಅಮೃತದ ಧಾರೆ

ಮಾತೆಯೆ ನಿನ್ನಯ ಪ್ರೀತಿಯ ಸುಧೆಯು

ಹರಿಯುವ ಸಿಹಿನೀರ ನದಿಝರಿ ತೊರೆಯು

ಸವಿಯಲು ನೀಡಿದೆ ಮಧುಮಯ ಫಲವ

ತುಂಬಿಸಿ ತಂದಿಹೆ ನಿನ್ನೆದೆ ಒಲವ


ಕಾಲಕೆ ಸುರಿಸುವೆ ಅಮೃತದ ಧಾರೆ

ಕೀಲಕವಾಗಿದೆ ಫಸಲನು ಕೋರೆ

ನೀಡಿದೆ ಹಸುರಿನ ಮೆತ್ತನೆ ತಲ್ಪ

ಸುಮಗಳ ಸುಗಂಧ ಮತ್ತಿಗೆ ಸ್ವಲ್ಪ


ಬೀಸಿದೆ ತಂಗಾಳಿ ನಿನ್ನಯ ಸೆರಗು

ಗಾಳಿಗೆ ಹೋಯಿತು ಕಾಡುವ ಕೊರಗು

ತಿರುಕನೊ ಧನಿಕನೊ ಭೇದವೆ ಇಲ್ಲ

ಸರಿಸರಿ ಹಂಚಿಕೆ ಮಡಿಲಿನ ಬೆಲ್ಲ


ಮನುಜನ ಆಸೆಗೆ ಮಿತಿಯೇ ಇಲ್ಲ

ಬೇಲಿಯ ಹಾಕಿದ ತನಗೇ ಎಲ್ಲ

ಚಿನ್ನದ ಮೊಟ್ಟೆಯ ಇಡುವಾ ಒಡಲು

ಕನ್ನವ ಹಾಕಿದ ಒಮ್ಮೆಲೆ ಪಡೆಯಲು


ರಕುತವ ಕಾರಿದೆ ನಿನ್ನಯ ಒಡಲು

ಕಲುಷಿತಗೊಂಡಿದೆ ಪರಿಸರ ಕಡಲು

ಮಣಿಸುತ ನಮ್ಮಯ ತಪ್ಪನು ನೀಗು

ಕ್ಷಮಿಸುತ ನಮ್ಮನು ಒಯ್ಯುತ ಸಾಗು!



Thursday, April 20, 2023

ಕಾವ್ಯಝರಿ

ಆದಿಪೂಜಿತ ಏಕದಂತನೆ ಗಣನಾಯಕ,

ಪಾದ ಮುಟ್ಟುವೆ ಹರಸು ಎನ್ನ ವಿನಾಯಕ.

ವೇದವ್ಯಾಸರ ದಿವ್ಯ ನುಡಿಗೆ ಭವ್ಯ ಲೇಖಕ,

ಮೇಧಾವಿಗಳು ದಾಖಲಿಸಿದ ಶ್ರೇಷ್ಠ ಕಥಾನಕ!


ಚಾಮರಕರ್ಣ ಇದೆಯಲ್ಲ ಕಥೆಯ ಕೇಳಲು,

ಧೀಮಂತ ಮೆದುಳಿಹುದು ಮನನ ಮಾಡಲು,

ಪ್ರೇಮವಿದೆ ಮನದಲ್ಲಿ ಕೃತಿಯ ನೀಡಲು,

ದಾಮೋದರನ ನೀತಿಯನು ನಮಗೆ ಸಾರಲು!


ಝರಿಯಂತೆ ನುಡಿಯುತಿರೆ ವೇದವ್ಯಾಸರು,

ಬರೆಯುತಿಹರು ನದಿಯಂತೆ ಆದಿಪೂಜ್ಯರು.

ಸರಸ್ವತಿಯ ದಂಡೆಯಲಿ ಇವರೀರ್ವರು,

ಪರಮಾತ್ಮನ ನುಡಿಗಳನು ನಮಗೆ ಇತ್ತರು!


ಕದನಗಳ ಬಾಳಿನಲ್ಲಿ ಜೀವನವು ದುರ್ಭರ,

ಇದೆ ಇಲ್ಲಿ ಸಮಸ್ಯೆಗಳ ಸಂಪೂರ್ಣ ವಿವರ.

ಬದುಕಿನಲಿ ತಲುಪಲು ನೆಮ್ಮದಿಯ ಆಗರ,

ಕದವ ತೆರೆ ಭಾರತದ ಪಡೆಯೆ ಉತ್ತರ!



ನಮ್ಮ ಪ್ರೀತಿಯ ಭಾರತ

ಭಾರತ ನಮ್ಮಯ ಪ್ರೀತಿಯ ಮಾತೆ,

ತೆರೆಯವ ದೇಶಬಕುತಿಯ ಖಾತೆ!

ಹಾರಿಸು ಮೇಲೆ ತ್ರಿವರ್ಣ ಪತಾಕೆ,

ತೋರಿಸು ಪ್ರೀತಿಯ ಶಂಕೆಯು ಏಕೆ!


ಕೋರದೆ ಕೊಟ್ಟಿದೆ ಉತ್ತಮ ಸಂಸ್ಕಾರ,

ತೋರುತ ಬೆಳಕಿನ ಅಧ್ಯಾತ್ಮದಾಕರ!

ಹಾರುವ ಮೇಲೆ ಸುಂದರ ಅವಕಾಶ,

ಬೀರುವ ಶಾಂತಿ ಸ್ನೇಹದ ಸಂದೇಶ!


ಭಿನ್ನತೆ ತೊರೆದು ಹಾಕುವ ನಡಿಗೆ,

ಉನ್ನತ ಗುರಿಯನು ಮುಟ್ಟುವ ಕಡೆಗೆ!

ಅನ್ನದ ಕೊರತೆ ಇಲ್ಲದೆ ಹೋಗಲಿ,

ಚಿನ್ನದ ಆಸೆ ಮರತೇ ಹೋಗಲಿ!


ಬಲಿದಾನಗಳ ಮರೆಯದೆ ನಡೆಯಿರಿ,

ಕಲಿಗಳ ನೆನೆಯುತ ಸ್ಫೂರ್ತಿಯ ಪಡೆಯಿರಿ!

ಕಲೆಗಳ ಬೆಳೆಸುತ ಆನಂದ ಹೊಂದಿರಿ,

ಎಲೆಗಳ ಹಾಗೆ ಜೊತೆಯಲಿ ಬದುಕಿರಿ!


ಅಮೃತೋತ್ಸವದ ಸುಂದರ ಘಳಿಗೆ,

ಅಮಿತೋತ್ಸಾಹದ ಬಿರುನಡಿಗೆ!

ಗಮನದಿ ಹಾಕುವ ಪ್ರಗತಿಯ ನಡಿಗೆ,

ಕ್ಷಮತೆಯ ಸದೃಢ ಶಾಂತಿಯ ಕಡೆಗೆ!



ಅರಿಷಡ್ವರ್ಗ(ಹಾಯ್ಕುಗಳು)

*ಕಾಮ*

ಕಾಮಾತುರದಿ
ಸಿಗ್ಗಿಲ್ಲ ಭಯವಿಲ್ಲ
ಮನಕೆ ಮೌಢ್ಯ


*ಕ್ರೋಧ*

ಕ್ರೋಧ ಮೊದಲು
ಸುಡುವುದು ತನ್ನನ್ನು
ಪರಮ ಸತ್ಯ


*ಲೋಭ*

ದುರಾಸೆ ಇದು
ದೂರ ಮಾಡುವುದಲ್ಲ
ತನ್ನವರನೇ


*ಮೋಹ*

ಮೋಹ ರಾಜಸ
ನಿರ್ಮೋಹ ಸಾತ್ವಿಕವು
ಪ್ರೀತಿ ಶಾಶ್ವತ


*ಮದ*

ಮದವೇರಿದ
ಮದ್ದಾನೆಗೆ ಖಚಿತ
ಅಂತಿಮ ಕಾಲ


*ಮಾತ್ಸರ್ಯ*

ಒಳಗೊಳಗೇ
ಕೊರೆವ ಕೆಟ್ಟ ಕೀಟ
ನಾಶ ಖಂಡಿತ


ಸಬಲೆ

ಭಲೇ ಭಲೇ ಓ ಸಬಲೇ,

ಏನೆಲ್ಲಾ ನೀ ಸಾಧಿಸಬಲ್ಲೆ!


ಕತ್ತಲ ಮನೆಯನು ಬೆಳಗಿಸಬಲ್ಲೆ,

ಚಿತ್ತದ ಗೊಂದಲ ನೀಗಿಸಬಲ್ಲೆ,

ತುತ್ತಲಿ ಪ್ರೀತಿಯ ತುಂಬಿಸಬಲ್ಲೆ,

ಬತ್ತದ ಒಲುಮೆಯ ನೀಡುವೆಯಲ್ಲೆ!


ಸಾಲುಮರಗಳ ನೆರಳನು ನೀಡುವೆ,

ಉದ್ಯಮಿಯಾಗಿ ಬದುಕನು ಕೊಡುವೆ,

ಬಾಹ್ಯಾಕಾಶಕೆ ಹಾರುತ ಹೋಗುವೆ,

ಚುಕ್ಕಿಯ ಮುಟ್ಟುವ ಸಾಹಸ ಮಾಡುವೆ!


ರೋಗಿಯ ಸಲಹುವ ಪ್ರೀತಿಯ ಸೋದರಿ,

ಕ್ಷಮೆಯಲಿ ನೀ ಭೂತಾಯಿಯ ಮಾದರಿ,

ಇನಿಯನು ಬಯಸುವ ಪ್ರೇಮದ ವಲ್ಲರಿ,

ಮಾತಿಗೆ ನಿಂತರೆ ನಿಲ್ಲದ ವಾಗ್ಝರಿ!


ದೇಶವ ಕಾಯಲು ಬಂದೂಕು ಹಿಡಿಯುವೆ,

ರೋಷವು ಬಂದರೆ ಇದಿರಾರಿಲ್ಲವೆ,

ಕೋಶವ ತುಂಬುತ ದೇಶವ ಸಲಹುವೆ,

ಎಲ್ಲರೂ ಮೆಚ್ಚುವ ರನ್ನದ ಒಡವೆ!