Wednesday, January 12, 2022

ಅಂಧಕಾರ

ಕುರುಡು ಮನಸಿಗೆ ಅಂಧಕಾರವು,

ಬಾಯಾರಿದೆ ಜ್ಞಾನದ ಬೆಳಕಿಗೆ.

ಅಮಾವಾಸ್ಯೆಯ ಇರುಳಿನಲ್ಲಿ

ಕಾದಿದೆ ರವಿ ಚಂದ್ರರಿಗೆ!


ಇರುಳ ನಂಬಿದ ದುರುಳರೆಲ್ಲರ,

ಅಟ್ಟಹಾಸವು ಮಿತಿಮೀರಿದೆ.

ಹರಿಯಬೇಕಿದೆ ಕಾಲದ ಬೆಳಕು,

ಸರಿಸೆ ಮುಚ್ಚಿದ ಪರದೆಯ!


ಕಣ್ಣು ಮುಚ್ಚಲು ಕಾಣದೇನೂ,

ಕಣ್ತೆರೆ ಜಗದ ಕಟುಸತ್ಯಕೆ,

ಕತ್ತಲಾದ ಬದುಕುಗಳಿಗೆ

ಸುತ್ತ ದೀಪದ ಬೆಳಕಿದೆ!



ಹಸಿಹಸಿ ಅನುಭವ

ಕಣ್ಣು ಕಣ್ಣು ಕಲೆತಾಗ,

ಎದೆಎದೆಗಳು ಮಿಡಿದಾಗ,

ಗರಿಗರಿಯ ಹೊಸ ರಾಗ,

ಜುಳು ಜುಳು ಹರಿದಾಗ!


ಮುಸಿ ಮುಸಿ ನೀ ನಕ್ಕಾಗ,

ಖುಷಿ ಖುಷಿಯು ಎದೆಯಾಗ,

ಢವ ಢವದ ನಿನ್ನೆದೆಯು

ಭಲೆ ಭಲೆ ಎಂದಾಗ!


ತುಟಿ ತುಟಿಗಳು ಬೆಸೆದಾಗ

ಹಸಿ ಹಸಿಯ ಅನುಭಾವ

ಬಿಸಿ ಬಿಸಿಯ ಮೈಯಾಗ,

ಚಳಿ ಚಳಿಯು ಬಿಟ್ಟಾಗ!

ಸುಗ್ಗಿಯ ಹಿಗ್ಗು

ಸುಗಿಯ ಕಾಲದ ಹುಗ್ಗಿಯ ಸವಿಯುವೆ,

ಸಗ್ಗದ ಹಿಗ್ಗಿನ ಬುಗ್ಗೆಯ ಹೀರುವೆ!


ಮೊಗ್ಗಿನ ನಗುವನು ಹಿಗ್ಗಿಸಿಬಿಡುವೆ,

ಜಗ್ಗದ ದುಃಖವ ಬಗ್ಗಿಸಿಬಿಡುವೆ!

ನುಗ್ಗುತ ಓಡುತ ಲಗ್ಗೆಯ ಹಾಕುವೆ,

ಒಗ್ಗದ ಮನಗಳ ಒಗ್ಗಿಸಿಕೊಳ್ಳುವೆ!


ಗಲ್ಲದ ಪೆಟ್ಟಿಗೆ ಘಲ್ಲೆನುತಿರಲು,

ಹುಲ್ಲೆಗೆ ತುರುವೆ ಮಲ್ಲಿಗೆ ಹೂವ,

ನಲ್ಲೆಯ ಗಲ್ಲವ ಮೆಲ್ಲಗೆ ಗಿಲ್ಲುತ,

ಎಳ್ಳು ಬೆಲ್ಲವ ಮೆಲ್ಲನೆ ಮೆಲ್ಲುವೆ!


ಹುಬ್ಬಿನ ಬಾಣಕೆ ಎದೆಯನು ಉಬ್ಬಿಸಿ,

ನನ್ನಯ ಗುಬ್ಬಿಯ ತಬ್ಬುತ ಹಿಡಿಯುವೆ!

ಹಬ್ಬದ ದಿನವು ಅಬ್ಬೆಗೆ ನಮಿಸಿ,

ಕಬ್ಬನು ಸವಿದು, ಒಬ್ಬಟ್ಟುಣ್ಣುವೆ!