Showing posts with label ಕರೆಂಟು. Show all posts
Showing posts with label ಕರೆಂಟು. Show all posts

Friday, October 13, 2023

ಹನಿಗವನಗಳು



೧. ಸರ್ವಸ್ವ

ಮಗುವಿಗೆ ಮಾತೆಯ ಮಡಿಲೇ ಸರ್ವಸ್ವ

ಪ್ರಿಯತಮೆಗೆ ಪ್ರಿಯನ ಒಲವೇ ಸರ್ವಸ್ವ

ಬುವಿಗೆ ರವಿಚಂದ್ರರ ಬೆಳಕೇ ಸರ್ವಸ್ವ

ಹರಿವ ನದಿಗೆ ಕರೆವ ಕಡಲೇ ಸರ್ವಸ್ವ

ಭಕ್ತನಿಗೆ ಪರಮಾತ್ಮನ ಪಾದವೇ ಸರ್ವಸ್ವ

ಇಂದಿನ ಜನಕೆ ಚತುರವಾಣೀಯೇ ಸರ್ವಸ್ವ!




೨. ಹೊಸ ಹರ್ಷ

ಹೊಸಯುಗದ ಹೊಸ ಹರ್ಷವು

ಚಿಗುರಿದೆ ಹಸಿರಿನ ನವಪಲ್ಲವವು

ಅರಳುತಿದೆ ನಗುತ ನವಸುಮವು

ಕೋಗಿಲೆಯ ಕರೆಯುತಿದೆ ಮಾವು

ಬೆಲ್ಲದಾ ಜೊತೆಯಿದ್ದರೂ ಬೇವು

ನಲಿವಿನಲಿ ಮರೆಯಾಯ್ತು ನೋವು




೩. ಹೆಣ್ಣು

ಹೆಣ್ಣಲ್ಲ ಅಬಲೆ

ತಾಯಾಕೆ ವಿಮಲೆ

ಜಗಕೆ ಮಡಿಲಿತ್ತ ಸಬಲೆ

ಸಂಕೀರ್ಣ ಈ ಹೆಣ್ಣು

ಅರ್ಥವಾಗದ ಹಣ್ಣು

ಸುಖ ಸಂಸಾರದ ಕಣ್ಣು




೪. ಕನಸು


ಬಣ್ಣಬಣ್ಣದ ಕನಸು
ಕಾಣಲೇನೂ ಶ್ರಮವಿಲ್ಲ
ನನಸಾಗಿಸಲು ಬಾಗುವುದು ಬೆನ್ನು
ಬಣ್ಣಬಣ್ಣದ ಕನಸು
ಕಾಣಲೇನೂ ಖರ್ಚಿಲ್ಲ
ನನಸಾಗಿಸಲು ಕಳೆಯುವುದು ಹೊನ್ನು


೫. ಅಪ್ಪ

ಮೊದಮೊದಲು
ನೀನೆನಗೆ
ಅರ್ಥವಾಗಿರಲಿಲ್ಲ ಅಪ್ಪ
ನಿನ್ನ ಕಾಳಜಿ, ಶಿಸ್ತು
ನಾ ಅಪ್ಪನಾದಾಗ
ಸರಿಯಾಗಿ ಅರ್ಥವಾಯಿತಪ್ಪ!

೬. ವಿಷಯ : ಯುದ್ಧ /ಸಮರ

ಚುಚ್ಚಿದರು
ಕೆಣಕಿದರು
ಹಲವು ವರ್ಷಗಳ ಕಾಲ
ಉಂಡಿಹರು
ಸಮರದಲಿ
ನಾವು ತೀರಿಸುವ ಸಾಲ


೭. ವಿಷಯ : ಮಳೆ, ಗಾಳಿ, ಕರೆಂಟು

ಮಳೆ ಗಾಳಿಗೂ
ಕರೆಂಟಿಗೂ
ಇದೆ ವೈರತ್ವದ ನಂಟು
ಬಂದಿತೆಂದರೆ
ಮಳೆ ಗಾಳಿ
ಓಡಿ ಹೋಗುವುದು ಕರೆಂಟು


೮. ವಿಷಯ : ಮೌನ

ಬಡಬಡಿಸುವ ಮಾತೇಕೆ,
ಪಿಸುಗುಟ್ಟೊ ನುಡಿಯೇಕೆ,
ನೀರವ ಮೌನದಲಿ ಮಾತಿಲ್ಲವೇನು?
ಕಣ್ಣಿನಾ ಮಿಂಚುಗಳು,
ತುಟಿಗಳಾ ಕೊಂಕುಗಳು,
ಸೆಳೆದು ಮನಕೆ ಮಾತನುಸಿರಿಲ್ಲವೇನು?