Showing posts with label ಕರ್ಮ. Show all posts
Showing posts with label ಕರ್ಮ. Show all posts

Thursday, August 18, 2022

ಮುಕ್ತಕಗಳು - ೫೩

ಅಕ್ಕರೆಯ ಭಾವಕ್ಕೆ ಪದಗಳೇ ಬೇಕೇನು

ಹಕ್ಕಿಗಳ ಚಿಲಿಪಿಲಿಯು ಮುದ ನೀಡದೇನು

ಉಕ್ಕಿ ಬಂದರೆ ಭಾವ ಎದೆಯ ತಾಕುವುದಲ್ಲ

ಅಕ್ಕರವು ಏಕಯ್ಯ ಪರಮಾತ್ಮನೆ ||೨೬೧||


ಪಂಚಭೂತಗಳಿಂದ ಹುಟ್ಟಿದಾ ದ್ರವ್ಯಕಣ

ಪಂಚಕೋಶಗಳಿರುವ ಬಂಡಿ ಈ ದೇಹ |

ಪಂಚೇಂದ್ರಿಯಗಳೆಂಬ ಪಂಚಾರಗಳಳೆದಿವೆ

ಪಂಚಿ ಆತ್ಮವಿರದಿರೆ ಪರಮಾತ್ಮನೆ ||೨೬೨||

ಪಂಚಾರ = ಕುದುರೆ, ಪಂಚಿ = ವ್ಯರ್ಥ


ಕಡ ಪಡೆಯಲಾಗುವುದೆ ಪರರ ಸತ್ಕರ್ಮಗಳ

ದುಡಿದು ಪಡೆಯುವುದೊಂದೆ ಅದಕಿರುವ ಮಾರ್ಗ |

ಕುಡಿಯೇಳುವುದೆ ಮಾವಿನದು ಬೇವು ಬಿತ್ತಿದರೆ

ತಡವೇಕೆ ಬಿತ್ತನೆಗೆ ~ ಪರಮಾತ್ಮನೆ ||೨೬೩||


ಎರಚಿದರು ಕಸದಂತೆ ಧನವನ್ನು ಬುವಿಯಲ್ಲಿ

ಪರಿಣಯವು ಪರಿಷೆಯನು ನಾಚಿಸುವ ರೀತಿ |

ಮುರಿಯುತ್ತ ಮದವನ್ನು ವೈರಾಣು ಬಂದಿಹುದು

ವರವಿತ್ತು ಜನಕರಿಗೆ ~ ಪರಮಾತ್ಮನೆ ||೨೬೪||


ಕಷ್ಟಕಾರ್ಪಣ್ಯಗಳು ಇರದವರು ಯಾರುಂಟು

ತುಷ್ಟಿ ಹುಡುಕಲುಬೇಕು ಕಷ್ಟಗಳ ನಡುವೆ |

ದುಷ್ಟ ಕಷ್ಟಗಳ ಪ್ರಭಾವ ಕುಂದಿಸೆ ನಿತ್ಯ

ಇಷ್ಟದೇವರನು ನೆನೆ ~ ಪರಮಾತ್ಮನೆ ||೨೬೫||

Monday, August 15, 2022

ಮುಕ್ತಕಗಳು - ೩೭

ಕರಗುವುದು ಕರಿಮೋಡ ಮೂಡುವುದು ಹೊಸ ಕಿರಣ

ಗುರುವಿನಾ ಕೃಪೆಯಿರಲು ಬದುಕಿನಲಿ ಬೆಳಕು |

ಕರುಗಳಿಗೆ ಗೋವಂತೆ ಗುರುವು ತಾನಿರಬೇಕು

ಅರಿವಿನಾ ಹಾಲುಣಿಸೆ ~ ಪರಮಾತ್ಮನೆ ||೧೮೧||


ಭಕ್ತಿಮಾರ್ಗವು ಸುಲಭ ಸಾಧನವು ಜಗದಲ್ಲಿ

ಮುಕ್ತಿಯನು ಪಡೆಯಲಿಕೆ ನರಜನುಮದಲ್ಲಿ |

ವ್ಯಕ್ತಿ ಮಾಡಿದ ಕರ್ಮ ಸುಟ್ಟು ಬೂದಿಯ ಮಾಡೊ

ಶಕ್ತಿಯಿದೆ ಭಕ್ತಿಯಲಿ ~ ಪರಮಾತ್ಮನೆ ||೧೮೨||


ನಾಕವಿದೆ ನರಕವಿದೆ ಕತ್ತಲೆಯ ಕೂಪವಿದೆ

ಬೇಕು ಎಂದರೆ ಸಿಗುವ ಲೋಕಗಳು ಇಲ್ಲಿ |

ಜೋಕೆಯಲಿ ಆರಿಸಿಕೊಳಲುಬೇಕು ಲೋಕವನು

ಭೀಕರವು ತಪ್ಪಿದರೆ ಪರಮಾತ್ಮನೆ ||೧೮೩||


ಕಾಡುಗಳ ಕಡಿಯುತ್ತ ನಾಡನ್ನು ಕಟ್ಟಿಹೆವು

ನೋಡುನೋಡುತ ಹಸಿರು ಕಾಡುಗಳೆ ಮಾಯ |

ಬೇಡುವುದು ಯಾರಲ್ಲಿ ಬರಡಾಗೆ ಭೂತಾಯಿ

ತೋಡಿಹೆವು ಗೋರಿಗಳ ಪರಮಾತ್ಮನೆ ||೧೮೪||


ಬದುಕೊಂದು ಉತ್ಸವದ ಪಂಕ್ತಿಭೋಜನವಲ್ಲ

ಉದರಕ್ಕೆ ಸಿಗದು ಎಲ್ಲರಿಗು ಭಕ್ಷ್ಯಗಳು |

ಬೆದರಿಸುತ ಪಡೆಯಲಾಗದು ಪರರ ಹಣೆಬರಹ

ಕದಿಯಲಾಗದು ಕರ್ಮ ಪರಮಾತ್ಮನೆ ||೧೮೫||

Monday, July 11, 2022

ಮುಕ್ತಕಗಳು - ೭

ಉಸಿರು ತುಂಬಿದೆ ವೇಣುವಿಗೆ ನುಡಿಸೆ ಸವಿರಾಗ

ಉಸಿರು ತುಂಬಿದೆಯೆಮಗೆ ನುಡಿಯೆ ಸವಿಮಾತು |

ಉಸಿರು ಉಸಿರಲಿ ನಿನ್ನ ಉಸಿರಿರಲು ಜನರೇಕೆ

ಪಸರಿಸರು ಸವಿನುಡಿಯ ಪರಮಾತ್ಮನೆ ||೩೧||


ನಮಗಿರ್ಪ ಸತಿಸುತರು ಮಾತೆಪಿತರೆಲ್ಲರೂ

ನಮದೇನೆ ಪೂರ್ವಕರ್ಮದ ಫಲಿತವಂತೆ |

ನಮದಾದ ಕರ್ಮಗಳ ತೀರಿಸುವ ಪರಿಕರವು

ನಮಗಿರುವ ನಮ್ಮವರು ಪರಮಾತ್ಮನೆ ||೩೨||


ಯಾರು ಬಂದರು ಜನಿಸಿದಾಗ ಜೊತೆ ಜೊತೆಯಾಗಿ

ಯಾರು ಬರುವರು ಹೋಗುತಿರಲು ಜೊತೆಯಾಗಿ |

ಮೂರು ದಿನಗಳ ಪಯಣದಲಿ ಕಳಚಿದರೆ ಕೊಂಡಿ 

ಕೂರೆ ದುಃಖದಿ ಸರಿಯೆ ಪರಮಾತ್ಮನೆ ||೩೩||


ಒಲವಿರಲಿ ಮಕ್ಕಳಲಿ ನಲ್ಮೆ ಮಾಸದಹಾಗೆ

ಛಲವೇಕೆ ಬಹುಧನದ ಬಳುವಳಿಯ ಕೊಡಲು |

ಬಲಿಯಾಗುವರು ದುಂದು ದುಶ್ಚಟದ ಮೋಹಕ್ಕೆ

ಕಲಿಗಾಲ ತರವಲ್ಲ ಪರಮಾತ್ಮನೆ ||೩೪||


ಮರೆತು ವಾನಪ್ರಸ್ಥವನು ಬದುಕುತಿಹೆವಿಂದು

ಹೊರೆಯಾಗಿ ಜನಮನದ ಸೌಖ್ಯಕ್ಕೆ ಬಂಧು |

ಕರೆಯೆ ವೃದ್ಧಾಶ್ರಮವು ಯಾರು ಕಾರಣ ಪೇಳು

ಜರೆಯದಿರು ಪುತ್ರರನು ಪರಮಾತ್ಮನೆ ||೩೫||