Showing posts with label ಮಕ್ಕಳು. Show all posts
Showing posts with label ಮಕ್ಕಳು. Show all posts

Sunday, January 8, 2023

ಮುಕ್ತಕಗಳು - ೯೬

ಮಕ್ಕಳಾ ಮಾತುಗಳು ಚಿಲಿಪಿಲಿಯ ಇಂಪಂತೆ

ಪಕ್ಕದಲೆ ಅರಳುತಿಹ ಚೆಲುವ ಹೂವಂತೆ |

ಚಿಕ್ಕದಾದರು ಕೂಡ ದೊಡ್ಡ ಹರುಷವನೀವ

ಸಕ್ಕರೆಯ ಗೊಂಬೆಗಳು ~ ಪರಮಾತ್ಮನೆ ||೪೭೬||


ಉತ್ತಮರು ಆಗೋಣ ಇಂದಿಗಿಂತಲು ನಾಳೆ

ಉತ್ತಮರು ಆಗೋಣ ನಮಗಿಂತ ನಾವು |

ಇತ್ತ ಎದುರಾಳಿಗಳು ಬೇರೆ ಯಾರೂ ಅಲ್ಲ

ಕುತ್ತಿರದ ದಾರಿಯಿದು ~ ಪರಮಾತ್ಮನೆ ||೪೭೭||


ಶಿಶುವಾಗುವರು ಜನರು ಆನಂದ ಹೆಚ್ಚಿರಲು

ಪಶುವಾಗುವರು ಅವರೆ ಕ್ರೋಧ ಉಕ್ಕಿರಲು! |

ವಶವಾಗದಿರಬೇಕು ವಿಷಯಗಳ ಹಿಡಿತಕ್ಕೆ

ನಶೆಯು ಮನ ಕೆಡಿಸುವುದು ~ ಪರಮಾತ್ಮನೆ ||೪೭೮||


ವೇಗ ಹೆಚ್ಚಾದಂತೆ ಮಾನವನ ಬದುಕಿನಲಿ

ಸೋಗು ಹೆಚ್ಚಾಗುತಿದೆ ನೀತಿ ಕೊರೆಯಾಗಿ |

ಜೌಗಿನಲಿ ಜಾರುತಿರೆ ಮುನ್ನೆಡವ ಕಾಲುಗಳು

ಜಾಗರೂಕತೆ ಇರಲಿ ~ ಪರಮಾತ್ಮನೆ ||೪೭೯||


ತೇಲದಿರು ಕನಸಿನಲಿ ಸಾಲ ದೊರೆತಿದೆಯೆಂದು

ಸಾಲವೆಂಬುದು ಎರಡು ಮೊನಚಿನಾ ಖಡ್ಗ! |

ಬೇಲಿಯಿಲ್ಲದ ಹೊಲಕೆ ಆನೆ ನುಗ್ಗಿದ ಹಾಗೆ

ಸಾಲ ಮಿತಿಮೀರಿದರೆ ~ ಪರಮಾತ್ಮನೆ ||೪೮೦||

Monday, July 11, 2022

ಮುಕ್ತಕಗಳು - ೭

ಉಸಿರು ತುಂಬಿದೆ ವೇಣುವಿಗೆ ನುಡಿಸೆ ಸವಿರಾಗ

ಉಸಿರು ತುಂಬಿದೆಯೆಮಗೆ ನುಡಿಯೆ ಸವಿಮಾತು |

ಉಸಿರು ಉಸಿರಲಿ ನಿನ್ನ ಉಸಿರಿರಲು ಜನರೇಕೆ

ಪಸರಿಸರು ಸವಿನುಡಿಯ ಪರಮಾತ್ಮನೆ ||೩೧||


ನಮಗಿರ್ಪ ಸತಿಸುತರು ಮಾತೆಪಿತರೆಲ್ಲರೂ

ನಮದೇನೆ ಪೂರ್ವಕರ್ಮದ ಫಲಿತವಂತೆ |

ನಮದಾದ ಕರ್ಮಗಳ ತೀರಿಸುವ ಪರಿಕರವು

ನಮಗಿರುವ ನಮ್ಮವರು ಪರಮಾತ್ಮನೆ ||೩೨||


ಯಾರು ಬಂದರು ಜನಿಸಿದಾಗ ಜೊತೆ ಜೊತೆಯಾಗಿ

ಯಾರು ಬರುವರು ಹೋಗುತಿರಲು ಜೊತೆಯಾಗಿ |

ಮೂರು ದಿನಗಳ ಪಯಣದಲಿ ಕಳಚಿದರೆ ಕೊಂಡಿ 

ಕೂರೆ ದುಃಖದಿ ಸರಿಯೆ ಪರಮಾತ್ಮನೆ ||೩೩||


ಒಲವಿರಲಿ ಮಕ್ಕಳಲಿ ನಲ್ಮೆ ಮಾಸದಹಾಗೆ

ಛಲವೇಕೆ ಬಹುಧನದ ಬಳುವಳಿಯ ಕೊಡಲು |

ಬಲಿಯಾಗುವರು ದುಂದು ದುಶ್ಚಟದ ಮೋಹಕ್ಕೆ

ಕಲಿಗಾಲ ತರವಲ್ಲ ಪರಮಾತ್ಮನೆ ||೩೪||


ಮರೆತು ವಾನಪ್ರಸ್ಥವನು ಬದುಕುತಿಹೆವಿಂದು

ಹೊರೆಯಾಗಿ ಜನಮನದ ಸೌಖ್ಯಕ್ಕೆ ಬಂಧು |

ಕರೆಯೆ ವೃದ್ಧಾಶ್ರಮವು ಯಾರು ಕಾರಣ ಪೇಳು

ಜರೆಯದಿರು ಪುತ್ರರನು ಪರಮಾತ್ಮನೆ ||೩೫||