Showing posts with label ಬದಲಾವಣೆ. Show all posts
Showing posts with label ಬದಲಾವಣೆ. Show all posts

Monday, March 4, 2024

ಚುಟುಕುಗಳು

ಚುಟುಕು: ನಾಲ್ಕು ಸಾಲುಗಳ ಕವನ. ಅಂತ್ಯಪ್ರಾಸ ಕಡ್ಡಾಯ


ದತ್ತಪದ : ಬದಲಾವಣೆ

ಇರಬೇಕು ಸಹನೆ ತಪ್ಪಿಸಲು ಬಲು ಬವಣೆ
ಕರಗಿಸುತ ಕೋಪವನು ಸಹನೆಗೆ ಹಾಕು ಮಣೆ
ಸುರಿಯುವುದು ಎದೆಯಲ್ಲಿ ದಯೆ ಮತ್ತು ಕರುಣೆ
ತರುವುದು ಬದುಕಿನಲಿ ಸುಂದರ ಬದಲಾವಣೆ

ದತ್ತಪದ : ಧಾರಾಕಾರ

ಧಾರಾಕಾರ ಮಳೆಗೆ ರಸ್ತೆಗಳು ನದಿಯ ಧಾರ,
ವಾಹನ ಸಂಚಾರವಾಯಿತು ಬಹಳ ದುಸ್ತರ!
ಜನತೆ ಕೇಳಿತು ಸರ್ಕಾರವ ಏಕೀ ಅವಾಂತರ?
ಹಿಂದಿನ ಸರ್ಕಾರವ ದೂರಿತು ಈಗಿನ ಸರ್ಕಾರ!

ದತ್ತಪದ : ಅಮ್ಮ

ನನ್ನ ಮೊದಲ ಸ್ಪರ್ಶ ನೀನಮ್ಮ,
ನನ್ನ ಮೊದಲ ಪರಿಚಯ ನೀನಮ್ಮ,
ನಿನ್ನೆದೆಯ ಬಡಿತ ಜೋಗುಳವಮ್ಮ,
ನನ್ನ ಮೊದಲ ತೊದಲೇ "ಅಮ್ಮ"!

ದತ್ತಪದ: ಮನೆ

ಮನೆಯಿರಬೇಕು ಮಕ್ಕಳಿಗೆ ತೆನೆಯಂತೆ ಕಾಳಿಗೆ
ಬೆಳೆಯಬೇಕು ಸಂತಸದಲಿ ಬರವಿರದಂತೆ ಕೂಳಿಗೆ
ಹೂವರಳುವಂತೆ ಮನ ವಿಕಸಿಸಬೇಕು ಬೆಳೆಯುತ
ಸಮಾಜಕೆ ಉಪಕಾರಿಯಾಗಬೇಕು ಬಾಳು ಬಾಳುತ

ದತ್ತಪದ : ನಗು-ಹ್ಯಾಪಿ

ನಗುತಿರಲು ಹ್ಯಾಪಿ, ನಗದಿರುವ ಪಾಪಿ,
ಅವನು ಕೋಪಿ, ಬರುವುದವಗೆ ಬೀಪಿ.
ಮಾಡಿದರೂ ಕಾಪಿ, ಊದುತಿರು ಪೀಪಿ,
ಹಾಕಿದರೂ ಟೋಪಿ, ಆಗದಿರು ಪಾಪಿ.

ದತ್ತಪದ : ಶ್ರಾವಣ

ಬಂತದೋ ಶ್ರಾವಣ ತಂದಿತೋ ತೋರಣ,
ಸಡಗರಕ್ಕೆ ಹೂರಣ ಹಬ್ಬಗಳೇ ಕಾರಣ,
ಭಕ್ತಿಯಲಿ ಪೂಜನ, ಮಂತ್ರಗಳ ಪಠಣ,
ತನುಮನಕೆ ರಸನಕ್ಕೆ ದಿನದಿನವೂ ಔತಣ!

ದತ್ತಪದ : ದಸರಾ

ದಸರೆಯು ತಂದಿಹುದು ಸಂಭ್ರಮಾನಂದ
ನವದುರ್ಗೆಯರ ಆರಾಧನೆಯ ಭಕ್ತಿಬಂಧ
ಜಂಬೂ ಸವಾರಿಯ ವೈಭವದ ಚೆಂದ
ನವೀಕರಿಸುತ ಎಲ್ಲರಲಿ ಸ್ನೇಹ ಸಂಬಂಧ



Sunday, January 8, 2023

ಮುಕ್ತಕಗಳು - ೯೪

ಬದಲಾಗಬೇಕಿದೆಯೆ ನೀನು ಉತ್ತಮನಾಗಿ?

ಬದುವಿನಲ್ಲಿರುವ ಕಳೆ ಕೀಳಬೇಕಿದೆಯೆ? |

ಬದಲಾಯಿಸಲು ನಿನ್ನ ಕಣ್ಣು ಕಿವಿಗಳ ಊಟ

ಬದಲಾಗುವುದು ಬದುಕು ~ ಪರಮಾತ್ಮನೆ ||೪೬೬||


ಹೇಳದಿರಿ ಜಾತಿಯಿಂ ನಾನು ಉತ್ತಮನೆಂದು

ಕೇಳದಿರಿ ಜಾತಿಯದು ನಿನದಾವುದೆಂದು |

ಆಳು ಉತ್ತಮನು ಕೇವಲ ನಡತೆಯಿಂದಷ್ಟೆ

ಕೋಳಿ ಕೂಗದೆ ಹಗಲು ~ ಪರಮಾತ್ಮನೆ ||೪೬೭||


ಉಳಿವಿನಾ ಚಣಗಳೇ ಅತ್ಯಮೂಲ್ಯದ ಆಸ್ತಿ

ಕಳೆಯದಿರಿ ಅದ ನಿಮ್ಮ ಹೊಗಳುವವರೊಡನೆ |

ಕಳೆಯುತಿರಿ ನಿಮ್ಮ ಹಿತಬಯಸುವರ ಜೊತೆಯಲ್ಲಿ

ಕೊಳೆಯಿರದ ಬದುಕದುವೆ ~ ಪರಮಾತ್ಮನೆ ||೪೬೮||


ಬರುವಾಗ ಮಡಿಲಿನಾಸರೆಯನಿತ್ತವನು ಹರಿ

ಹರಿಕರುಣೆಗಾಗಿ ಚಿರಋಣಿಯಾಗಬೇಕು |

ಹೊರಟಾಗ ಹೊರುವ ಹೆಗಲುಗಳು ಸ್ವಯಾರ್ಜಿತವು

ಮರೆಯದಿರು ಆರ್ಜನವ ~ ಪರಮಾತ್ಮನೆ ||೪೬೯||

ಆರ್ಜನ = ಗಳಿಕೆ


ನಂಬಿದರೆ ನಂಬಿ ನಿಮದೇ ದಕ್ಷತೆಯ ಶಕ್ತಿ

ಹುಂಬರಾಗದಿರಿ ಮತ್ತೊಬ್ಬರನು ನಂಬಿ |

ಕಂಬವೆಂದೊರಗದಿರಿ ಅನ್ಯರಾ ಭುಜವನ್ನು

ಗೊಂಬೆಯಾಗದೆ ಬದುಕಿ ~ ಪರಮಾತ್ಮನೆ ||೪೭೦||

Monday, July 11, 2022

ಮುಕ್ತಕಗಳು - ೧೭

ಮದವೇರಿ ನಿಂತಾಗ ಮದ್ಯದಮಲೇರಿದೊಲು

ಬೆದರಿಹೋಗ್ವುದು ವಿವೇಚನೆಯ ದೃಢಶಕ್ತಿ |

ಇದಿರಾಗೊ ತಡೆಗಳೆಲ್ಲವು ಸರ್ವನಾಶವೇ

ನದಿಯು ಹುಚ್ಚೆದ್ದಂತೆ ಪರಮಾತ್ಮನೆ ||೮೧||


ಚಂದನದ ವನದಲ್ಲಿ ಮೇರುಪರ್ವತವಾದೆ

ಗಂಧದಾ ಗುಡಿಯ ಗರ್ಭದಲಿ ನೆಲೆಯಾದೆ |

ಮಂದಿಯಾ ಮನದಲ್ಲಿ ರಾರಾಜಿಸಿದ ತಾರೆ

ಬಂಧುವೇ ನಮಗೆಲ್ಲ ಪರಮಾತ್ಮನೆ ||೮೨||


ನಿನ್ನವರ ಬದಲಾಗೆನುವ ಮುನ್ನ ನಡತೆಯಲಿ

ತನ್ನತನ ಬದಲಿಸುವ ಬವಣೆಯನು ಕಾಣು |

ಭಿನ್ನತೆಯ ಮೇಳದಲಿ ನವರಾಗ ಮೂಡಿಸುತ 

ಮನ್ನಿಸೈ ನಿನ್ನವರ ಪರಮಾತ್ಮನೆ ||೮೩||


ರಾಜನನು ಅನುಸರಿಪ ಪ್ರಜೆಗಳೆಲ್ಲಿಹರೀಗ 

ರಾಜನಾರಿಸುವ ಹಕ್ಕೀಗ ತಮದೇನೆ |

ರಾಜನ ಕ್ಷಮತೆ ಆರಿಸಿದವರ ಮತಿಯಷ್ಟೆ

ರಾಜನನು ತೆಗಳುವುದೆ ಪರಮಾತ್ಮನೆ ||೮೪||


ದಿನದಿನದ ಬವಣೆಯಲಿ ಬದುಕ ಜಂಜಾಟದಲಿ

ನೆನಪಿರವು ನೀತಿವಾಕ್ಯ ಹಿತವಚನಗಳು |

ದಿನದ ಕೊನೆಗಿರಬೇಕು ನಾಕುಚಣದೇಕಾಂತ

ಮನನಮಾಡಲು ತಿಳಿವ ಪರಮಾತ್ಮನೆ ||೮೫||