Showing posts with label ರಾಜಕುಮಾರ್‌. Show all posts
Showing posts with label ರಾಜಕುಮಾರ್‌. Show all posts

Monday, July 11, 2022

ಮುಕ್ತಕಗಳು - ೧೭

ಮದವೇರಿ ನಿಂತಾಗ ಮದ್ಯದಮಲೇರಿದೊಲು

ಬೆದರಿಹೋಗ್ವುದು ವಿವೇಚನೆಯ ದೃಢಶಕ್ತಿ |

ಇದಿರಾಗೊ ತಡೆಗಳೆಲ್ಲವು ಸರ್ವನಾಶವೇ

ನದಿಯು ಹುಚ್ಚೆದ್ದಂತೆ ಪರಮಾತ್ಮನೆ ||೮೧||


ಚಂದನದ ವನದಲ್ಲಿ ಮೇರುಪರ್ವತವಾದೆ

ಗಂಧದಾ ಗುಡಿಯ ಗರ್ಭದಲಿ ನೆಲೆಯಾದೆ |

ಮಂದಿಯಾ ಮನದಲ್ಲಿ ರಾರಾಜಿಸಿದ ತಾರೆ

ಬಂಧುವೇ ನಮಗೆಲ್ಲ ಪರಮಾತ್ಮನೆ ||೮೨||


ನಿನ್ನವರ ಬದಲಾಗೆನುವ ಮುನ್ನ ನಡತೆಯಲಿ

ತನ್ನತನ ಬದಲಿಸುವ ಬವಣೆಯನು ಕಾಣು |

ಭಿನ್ನತೆಯ ಮೇಳದಲಿ ನವರಾಗ ಮೂಡಿಸುತ 

ಮನ್ನಿಸೈ ನಿನ್ನವರ ಪರಮಾತ್ಮನೆ ||೮೩||


ರಾಜನನು ಅನುಸರಿಪ ಪ್ರಜೆಗಳೆಲ್ಲಿಹರೀಗ 

ರಾಜನಾರಿಸುವ ಹಕ್ಕೀಗ ತಮದೇನೆ |

ರಾಜನ ಕ್ಷಮತೆ ಆರಿಸಿದವರ ಮತಿಯಷ್ಟೆ

ರಾಜನನು ತೆಗಳುವುದೆ ಪರಮಾತ್ಮನೆ ||೮೪||


ದಿನದಿನದ ಬವಣೆಯಲಿ ಬದುಕ ಜಂಜಾಟದಲಿ

ನೆನಪಿರವು ನೀತಿವಾಕ್ಯ ಹಿತವಚನಗಳು |

ದಿನದ ಕೊನೆಗಿರಬೇಕು ನಾಕುಚಣದೇಕಾಂತ

ಮನನಮಾಡಲು ತಿಳಿವ ಪರಮಾತ್ಮನೆ ||೮೫||


Sunday, April 26, 2020

ಬಂಗಾರದ ಮನುಷ್ಯ


ಮುತ್ತಿನಂಥ ಮಾತ ನೀ ಬಲ್ಲೆ,
ತಾಳಕ್ಕೆ ತಕ್ಕಂತೆ  ನೀ ಕುಣಿದೆ ,
ನಮ್ಮ ಅದೃಷ್ಟವೋ ಏನೋ,
ಕಾಲಕ್ಕೆ ತಕ್ಕಂತೆ ಬದಲಾಗಲಿಲ್ಲ!

ಹಾಲಿನಂಥ ಕನ್ನಡವನ್ನು,
ಜೇನಿನಂಥ ಕಂಠದಲ್ಲಿ ಬೆರೆಸಿ,
ಸಿಹಿಯ ಕನ್ನಡದ ಸವಿನುಡಿಯ,
ಸುಧೆಯನ್ನು ಉಣಬಡಿಸಿದೆ!

ಒತ್ತಡಗಳಿಗೆ ಮಣಿಯಲಿಲ್ಲ,
ರಾಜಕಾರಣಕೆ ಇಳಿಯಲಿಲ್ಲ,
ಕನ್ನಡವೊಂದೇ ಸಾಕೆಂದೆ,
ನೆಚ್ಚಿನ ರಾಜಕುಮಾರನಾದೆ!


ಕನ್ನಡಕ್ಕೋಸ್ಕರ ಹೋರಾಡಿದ,
ರಣಧೀರ ಕಂಠೀರವ ನೀನು!
ಸಂಪತ್ತಿಗೆ ಸವಾಲೆಸೆದ,
ಬಹದ್ದೂರ್‌ ಗಂಡು ನೀನು!

ಬೀದಿ ಬಸವಣ್ಣನೆಂದರು,
ಚೂರಿ ಚಿಕ್ಕಣ್ಣನೆಂದರು,
ತಲೆ ಕೆಡಸಿಕೊಳ್ಳದೆ ಆದೆ,
ನೀ ದೇವತಾ ಮನುಷ್ಯ!

ನಮ್ಮ ಕನ್ನಡ ನಾಡಿನಲ್ಲಿ,
ಮತ್ತೊಮ್ಮೆ ಹುಟ್ಟಿ ಬಾ,
ಬಂಗಾರದ ಮನುಷ್ಯನೇ,
ಕಾಯುತಿದೆ ಗಂಧದಗುಡಿ!