Showing posts with label ಶತ್ರು. Show all posts
Showing posts with label ಶತ್ರು. Show all posts

Sunday, January 8, 2023

ಮುಕ್ತಕಗಳು - ೯೧

ಫಲಭರಿತ ವೃಕ್ಷಗಳು ಬೆಳೆಸೆ ತಮ ಸಂತತಿಯ

ಬೆಲೆಯಾಗಿ ನೀಡುತಿವೆ ರಸಭರಿತ ಸವಿಯ |

ಸಲಿಸೆ ಕೋರಿಕೆ ಬೀಜಬಿತ್ತಿ ಹದುಳಿಸಿ ಸಸಿಯ

ಬೆಳೆಸುವಾ ಮರಗಳನು ~ ಪರಮಾತ್ಮನೆ ||೪೫೧||

ಹದುಳಿಸು = ತಣಿಸು / ತೃಪ್ತಿ ಪಡಿಸು


ಮನಸು ತುಟಿಗಳ ನಡುವೆ ಬೇಕೊಂದು ಸೋಸುತೆರೆ

ಅನಿಸಿದುದನೆಲ್ಲವನು ಆಡಬೇಕಿಲ್ಲ! |

ದನಿಗೊಡುವ ಹರುಷವನು ಹಂಚುವಾ ಯೋಚನಗೆ

ಕೊನೆಗೊಳಿಸಿ ದುರ್ಭಾವ ~ ಪರಮಾತ್ಮನೆ ||೪೫೨||


ಇರುವರೇ ಶತ್ರುಗಳು ಕಣ್ಣು ನಾಲಿಗೆಗಿಂತ?

ಸರಿದಾರಿ ತಪ್ಪಿಸುವ ಧೂರ್ತ ಪಂಡಿತರು! |

ಬರಸೆಳೆದು ಆಸೆಗಳ ಮನದಲ್ಲಿ ತುಂಬಿಸುತ

ಹರಿಯ ಹೊರಗಟ್ಟುವವು ~ ಪರಮಾತ್ಮನೆ ||೪೫೩||


ಆ ದೇವ ನಿರುವ ಮಾತೆಯ ಮಮತೆಯಲಿ, ಇರುವ

ಆ ದೇವ ತಂದೆಯಾ ಹೊಣೆಗಾರಿಕೆಯಲಿ |

ಮಾದೇವ ಅತಿಥಿ, ಗುರುಗಳ ವೇಷ, ಅರಿವಿನಲಿ

ವೇದಗಳು ನಾಲ್ಕಿವೇ ~ ಪರಮಾತ್ಮನೆ ||೪೫೪||


ಕಾಲಡಿಗೆ ಮುಳ್ಳು ಚುಚ್ಚಿರೆ ತಪ್ಪು ಯಾರದದು?

ಕಾಲಿನದೊ ಮಲಗಿದ್ದ ಮುಳ್ಳಿನದೊ ಹೇಳು? |

ಬಾಳಿನಲಿ ಎಚ್ಚರದ ಹೆಜ್ಜೆಯಿಡಲಾಗದಿರೆ

ಉಳಿವೆಲ್ಲ ರಕುತಮಯ ~ ಪರಮಾತ್ಮನೆ ||೪೫೫||

Monday, August 22, 2022

ಮುಕ್ತಕಗಳು - ೫೮

ಎದೆಯಲ್ಲಿ ಹಲವಾರು ಭಾವಗಳು ತುಂಬಿರಲು

ನದಿಯನ್ನು ತಡೆಹಿಡಿದ ಅಣೆಕಟ್ಟಿನಂತೆ |

ಕದಗಳವು ಬೇಕಿರಲು ಒತ್ತಡವ ಹೊರ ಹಾಕೆ

ಬಳಿಯಲ್ಲಿ ಸಖನಿರಲಿ ಪರಮಾತ್ಮನೆ ||೨೮೬||


ಇರಲೇನು ಬದುಕಲ್ಲಿ ನವರಸದ ಸಮ್ಮಿಲನ

ಇರಬೇಕು ಸಮರಸವು ಬಹುಮುಖ್ಯವಾಗಿ |

ಕೊರತೆಯಾದರೆ ನೋಡು ಸಮರಸವು ನಮ್ಮಲ್ಲಿ

ಮರೆವೆ ಕೆಲ ರಸಗಳನು ~ ಪರಮಾತ್ಮನೆ ||೨೮೭||


ಮಣ್ಣಿನಿಂದಲೆ ಊಟ ಮಣ್ಣಿನಿಂದಲೆ ಬಟ್ಟೆ

ಮಣ್ಣಿನಿಂದಲೆ ಮಹಲು ತಲೆಮೇಲೆ ಸೂರು |

ಮಣ್ಣಿನಿಂದಲೆ ಕಾಯ ಮಣ್ಣ ಸೇರುವೆ ಕೊನೆಗೆ

ಕಣ್ಣಿಗೊತ್ತಿಕೊ ಮಣ್ಣ ~ ಪರಮಾತ್ಮನೆ ||೨೮೮||


ಮಿತ್ರರಲಿ ಇರಬೇಕು ಮುಚ್ಚುಮರೆ ಇಲ್ಲದೊಲು

ಪುತ್ರರಲಿ ಭೇದವನು ಮಾಡದಿರಬೇಕು |

ಶತ್ರುಗಳ ಕ್ಷಮಿಸುತ್ತ ಸ್ನೇಹಹಸ್ತವ ಚಾಚು

ಅತ್ರಾಸ ಬದುಕೆಲ್ಲ ~ ಪರಮಾತ್ಮನೆ ||೨೮೯||

ಅತ್ರಾಸ = ಕಜ್ಜಾಯ (ಅತಿರಸ)


ಕಳೆದುಕೊಂಡರೆ ಮಾನ ಪ್ರಾಣವೇ ಹೋದಂತೆ

ಕಳೆಯು ಬೆಳೆದೆತ್ತರಕೆ ನುಂಗಿದೊಲು ಪೈರ |

ಇಳೆಯ ಜೀವನ ನರಕವೆನಿಸುವುದು, ಹಣೆಪಟ್ಟಿ

ಉಳಿಯುವುದು ಕೊನೆತನಕ ~ ಪರಮಾತ್ಮನೆ ||೨೯೦||