Monday, August 22, 2022

ಮುಕ್ತಕಗಳು - ೫೮

ಎದೆಯಲ್ಲಿ ಹಲವಾರು ಭಾವಗಳು ತುಂಬಿರಲು

ನದಿಯನ್ನು ತಡೆಹಿಡಿದ ಅಣೆಕಟ್ಟಿನಂತೆ |

ಕದಗಳವು ಬೇಕಿರಲು ಒತ್ತಡವ ಹೊರ ಹಾಕೆ

ಬಳಿಯಲ್ಲಿ ಸಖನಿರಲಿ ಪರಮಾತ್ಮನೆ ||೨೮೬||


ಇರಲೇನು ಬದುಕಲ್ಲಿ ನವರಸದ ಸಮ್ಮಿಲನ

ಇರಬೇಕು ಸಮರಸವು ಬಹುಮುಖ್ಯವಾಗಿ |

ಕೊರತೆಯಾದರೆ ನೋಡು ಸಮರಸವು ನಮ್ಮಲ್ಲಿ

ಮರೆವೆ ಕೆಲ ರಸಗಳನು ~ ಪರಮಾತ್ಮನೆ ||೨೮೭||


ಮಣ್ಣಿನಿಂದಲೆ ಊಟ ಮಣ್ಣಿನಿಂದಲೆ ಬಟ್ಟೆ

ಮಣ್ಣಿನಿಂದಲೆ ಮಹಲು ತಲೆಮೇಲೆ ಸೂರು |

ಮಣ್ಣಿನಿಂದಲೆ ಕಾಯ ಮಣ್ಣ ಸೇರುವೆ ಕೊನೆಗೆ

ಕಣ್ಣಿಗೊತ್ತಿಕೊ ಮಣ್ಣ ~ ಪರಮಾತ್ಮನೆ ||೨೮೮||


ಮಿತ್ರರಲಿ ಇರಬೇಕು ಮುಚ್ಚುಮರೆ ಇಲ್ಲದೊಲು

ಪುತ್ರರಲಿ ಭೇದವನು ಮಾಡದಿರಬೇಕು |

ಶತ್ರುಗಳ ಕ್ಷಮಿಸುತ್ತ ಸ್ನೇಹಹಸ್ತವ ಚಾಚು

ಅತ್ರಾಸ ಬದುಕೆಲ್ಲ ~ ಪರಮಾತ್ಮನೆ ||೨೮೯||

ಅತ್ರಾಸ = ಕಜ್ಜಾಯ (ಅತಿರಸ)


ಕಳೆದುಕೊಂಡರೆ ಮಾನ ಪ್ರಾಣವೇ ಹೋದಂತೆ

ಕಳೆಯು ಬೆಳೆದೆತ್ತರಕೆ ನುಂಗಿದೊಲು ಪೈರ |

ಇಳೆಯ ಜೀವನ ನರಕವೆನಿಸುವುದು, ಹಣೆಪಟ್ಟಿ

ಉಳಿಯುವುದು ಕೊನೆತನಕ ~ ಪರಮಾತ್ಮನೆ ||೨೯೦||

No comments: