Showing posts with label ಹೆಸರು. Show all posts
Showing posts with label ಹೆಸರು. Show all posts

Sunday, December 25, 2022

ಮುಕ್ತಕಗಳು - ೮೧

ಹೊಸದಿನವು ಅನುದಿನವು ಆರಂಭ ಪ್ರತಿದಿನವು

ಹೊಸತು ಅರುಣೋದಯದ ಹೊಸಕಿರಣ ಮೂಡಿ |

ಪಸರಿಸುವ ಬೆಳಕಲ್ಲಿ ಮಾಡು ಹೊಸ ಆರಂಭ

ಹೆಸರ ಜಪಿಸುತ ಅವನ ~ ಪರಮಾತ್ಮನೆ ||೪೦೧||


ದಾನವಿತ್ತೆಯೊ ಸಾಲವನು ತೀರಿಸಿದೆಯೊ ನೀ

ಕಾಣದಾ ವಿಧಿಯ ಲೆಕ್ಕವ ನೀನು ಅರಿಯೆ |

ಜೇನುಗಳು ಪಡೆಯವವೆ ಕೂಡಿಹಾಕಿದುದೆಲ್ಲ

ವೈನಾಗಿ ದುಡಿದರೂ ~ ಪರಮಾತ್ಮನೆ ||೪೦೨||


ಸೊಕ್ಕು ತೊರೆಯಲೆ ಇಲ್ಲ ಅರಿವು ಮೂಡಲೆ ಇಲ್ಲ

ಉಕ್ಕಿ ಬರುತಿಹ ಅಹಮಿಕೆಯ ತಡೆಯಲಿಲ್ಲ |

ಸಿಕ್ಕುವನು ವಿಂಧ್ಯವನೆ ಮಣಿಸಿದವನಂತೊಬ್ಬ

ಪಕ್ಕೆಯಲಿ ತಿವಿದಂತೆ ~ ಪರಮಾತ್ಮನೆ ||೪೦೩||


ಮರಳ ಮೇಗಡೆ ಬರೆದ ಅಕ್ಷರವು ಶಾಶ್ವತವೆ

ಶರಧಿಯಲೆಗಳ ಆಟ ದಡ ಮುಟ್ಟುವನಕ |

ಮರೆಯಾಗು ಮೊದಲು ನಿನ ಹೆಸರು ಕೆತ್ತಿದಮೇಲೆ

ಪುರಜನರ ಎದೆಮೇಲೆ ~ ಪರಮಾತ್ಮನೆ ||೪೦೪||


ಕರುಣೆಯಲಿ ನೆರಳಿತ್ತು ಕಾಪಾಡು ನೊಂದವರ

ಸರಿತಪ್ಪುಗಳ ಚಿಂತೆ ನಂತರದ ಕೆಲಸ |

ಕರುಣೆಯೇ ದೊಡ್ಡದದು ನ್ಯಾಯ ಧರ್ಮಕ್ಕಿಂತ

ಎರೆಕವೇ ನಿಜಧರ್ಮ ~ ಪರಮಾತ್ಮನೆ ||೪೦೫||

ಎರೆಕ = ಕರುಣೆ

Saturday, December 17, 2022

ಮುಕ್ತಕಗಳು - ೭೯

ಒಮ್ಮೆ ಮಾಡಿದ ತಪ್ಪ ಮತ್ತೊಮ್ಮೆ ಮಾಡದಿರು

ಸುಮ್ಮನೆಯೆ ಶ್ರಮ ಹಾಳು ಎಲ್ಲವೂ ಹಾಳು |

ಕಮ್ಮು ಹಿಡಿದರೆ ಒಮ್ಮೆ ಬಿಡದಲ್ಲ ಶ್ವಾನವದು

ಹಮ್ಮು ಬಿಡು ಅರಿತು ನಡೆ ~ ಪರಮಾತ್ಮನೆ ||೩೯೧||

ಕಮ್ಮು = ವಾಸನೆ, ಹಮ್ಮು = ಗರ್ವ


ಬಸಿರ ಆಸರೆ ಕೊಟ್ಟು ಬುವಿಗಿಳಿಸಿದಳು ಜನನಿ

ಉಸಿರ ಸಾಲವ ಕೊಟ್ಟು ಬದುಕಿತ್ತಳವನಿ |

ಬಸಿರ ಆಸರೆ ಉಸಿರ ಸಾಲಕ್ಕೆ ಪ್ರತಿಯಾಗಿ

ಮಸಿಯ ಬಳಿಯಲು ಬೇಡ ~ ಪರಮಾತ್ಮನೆ ||೩೯೨||


ಸಹಿಸೆ ಉಳಿಪೆಟ್ಟುಗಳ ಶಿಲೆ ಮೂರ್ತಿಯಾಗುವುದು

ಸಹಿಸದಿರೆ ಕಾಲಡಿಯ ದಾರಿಗಲ್ಲಾಯ್ತು |

ಸಹಿಸಿಕೋ ಕಷ್ಟಗಳ ದೃಢಮನದ ಅಂಕೆಯಲಿ

ಕಹಿ ಕಳೆದು ಸಿಹಿ ಬಹುದು ~ ಪರಮಾತ್ಮನೆ ||೩೯೩||


ಉಸಿರು ನಿಂತರೆ ಏನು ಹೆಸರು ನಿಂತರೆ ಸಾಕು

ಹಸಿರಾಗಿ ಉಳಿಯುವುದು ನೆನಪು ಮಾಸದೊಲು |

ಕಸಿವ ರೋಧನ ಕನಕಗಳನೆಲ್ಲ ಉಳಿದಿರುವ

ಹೆಸರೊಂದೆ ಶಾಶ್ವತವು ~ ಪರಮಾತ್ಮನೆ ||೩೯೪||


ಹುಟ್ಟುತಲೆ ಅತ್ತಾಗ ನಕ್ಕವರು ಬಂಧುಗಳು

ಕೆಟ್ಟು ಅತ್ತಾಗ ನಕ್ಕವರು ಬಂಧುಗಳೆ? |

ಮೆಟ್ಟಿ ಭೇದಗಳ ಕೈಜೋಡಿಸಿರೆ ಬಂಧುಗಳು

ಚಟ್ಟಕ್ಕೆ ಹೆಗಲೀಯೆ ~ ಪರಮಾತ್ಮನೆ ||೩೯೫||

ಮುಕ್ತಕಗಳು - ೭೫

ಅಲ್ಪನಿಗೆ ಐಶ್ವರ್ಯ ಬಂದಾಗ ಉಳಿಯದದು

ಸ್ವಲ್ಪ ಕಾಲವೆ ಮಾತ್ರ ಇಂದ್ರವೈ ಭೋಗ |

ಶಿಲ್ಪಕ್ಕೆ ಸಿಂಗಾರ ಜೀವ ತುಂಬದು ಅದಕೆ

ಕಲ್ಪನೆಯ ಕೂಸಹುದು ~ ಪರಮಾತ್ಮನೆ ||೩೭೧||

ಅಲ್ಪ = ದುರಭಿಮಾನಿ

 

ಹೆಸರು ಮಾಡಲು ತಂತ್ರಗಾರಿಕೆಗೆ ಶರಣೇಕೆ?

ಬಸಿ ಬೆವರ ನಿನ್ನ ಕಾರ್ಯಕ್ಷೇತ್ರದಲ್ಲಿ |

ಪಸರಿಸುತ ನಿನ ಕಾರ್ಯ ಜನರೆದೆಗೆ ಮುಟ್ಟಿದೊಡೆ

ಹಸಿರಾಗುವುದು ಹೆಸರು ~ ಪರಮಾತ್ಮನೆ ||೩೭೨||


ಗಗನವನು ನೋಡಲಿಕೆ ನೂಕಾಟ ಏತಕ್ಕೆ?

ಜಗಳವದು ಏಕೆ ಸಾಗರದಿ ಈಜಲಿಕೆ? |

ಜಗಪತಿಯ ಮಂದಿರದಿ ತಳ್ಳಾಟ ಬೇಕಿದೆಯೆ

ಭಗವಂತನಾ ಕೃಪೆಗೆ? ~ ಪರಮಾತ್ಮನೆ ||೩೭೩||


ಬೆಳಕು ಇರುವೆಡೆಯಲ್ಲೆ ಕರಿನೆರಳು ಮೂಡುವುದು

ಕಲಹ ಪತಿಪತ್ನಿಯರ ಸನಿಹ ಮಾಡುವುದು |

ಬೆಳೆಗಿಂತ ದಿವಿನಾಗಿ ಕಳೆಯು ತಲೆಯೆತ್ತುವುದು

ಇಳೆಯ ವೈರುಧ್ಯಗಳು ~ ಪರಮಾತ್ಮನೆ ||೩೭೪||


ಕೈಯಲ್ಲಿ ಜಪಮಾಲೆ ಮನದಲ್ಲಿ ಮಧುಬಾಲೆ

ಬಾಯಲ್ಲಿ ಮಂತ್ರಗಳು ತಲೆಯಲ್ಲಿ ತಂತ್ರ |

ನಾಯಕರು ಹೀರಿಹರು ಪ್ರಜೆಗಳಾ ರಕುತವನು

ಲಾಯಕ್ಕೆ ಬದುಕಲಿಕೆ? ~ ಪರಮಾತ್ಮನೆ ||೩೭೫||